ಮೂಡಿಗೆರೆ: ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಚಿಕ್ಕಮಗಳೂರು ಜಿಲ್ಲೆ ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಜು.1ರಿಂದ ಭಕ್ತರಿಗೆ ದರ್ಶನಾವಕಾಶ ಕಲ್ಪಿಸಲಾಗಿದೆ. ರಾಜ್ಯದ ಹಲವೆಡೆ ದೇವಾಲಯ ಓಪನ್ ಆಗಿದ್ದರೂ ಹೊರನಾಡಲ್ಲಿ ಭಕ್ತರ ಭೇಟಿಗೆ ನಿರ್ಬಂಧ ವಿಧಿಸಲಾಗಿತ್ತು. ಈಗ ಹಲವು ಮುಂಜಾಗ್ರತಾ ಕ್ರಮಗಳೊಂದಿಗೆ ಭಕ್ತರಿಗೆ ಅವಕಾಶ ನೀಡಲು
ನಿರ್ಧರಿಸಲಾಗಿದೆ.
ಈ ಕುರಿತು ದೇವಾಲಯದ ಧರ್ಮದರ್ಶಿಗಳಾದ ಭೀಮೇಶ್ವರ ಜೋಶಿ ಅವರು “ಉದಯವಾಣಿ’ ಯೊಂದಿಗೆ ಮಾತನಾಡಿ ಜುಲೈ 1ರಿಂದ¨ ದೇವಸ್ಥಾನದಲ್ಲಿ ದೇವರ ದರ್ಶನ,
ಪೂಜೆ ಮತ್ತು ವಾಸ್ತವ್ಯಕ್ಕೆ ಅವಕಾಶ ನೀಡಲಾಗುತ್ತಿದೆ. ಆನ್‌ಲೈನ್‌ನಲ್ಲಿ ದರ್ಶನದ ಟಿಕೆಟ್ ಪಡೆದುಕೊಂಡು ಬಂದವರಿಗೆ ಮಾತ್ರ ಅವಕಾಶ ಕಲ್ಪಿಸಲಾಗುತ್ತದೆ. ದೇವಸ್ಥಾನದ ನಿಬಂಧನೆಗಳಿಗೆ ಒಳಪಟ್ಟು ದರ್ಶನ, ಪೂಜೆ, ಪ್ರಸಾದ ಪಡೆಯಲು ಅವಕಾಶ ಇರಲಿದೆ. ಬೆಳಗ್ಗೆ 7ರಿಂದ ಸಂಜೆ 7ಗಂಟೆ ವರೆಗೆ ಮಾತ್ರ ದರ್ಶನಕ್ಕೆ ಅನುಮತಿ ಕಲ್ಪಿಸಲಾಗುವುದು ಎಂದು ತಿಳಿಸಿದರು.
ದೇವಾಲಯಕ್ಕೆ ಭೇಟಿ ನೀಡುವ ಎಲ್ಲ ಭಕ್ತರು ಮಾಸ್ಕ್, ಸ್ಯಾನಿಟೈಸರ್ ಬಳಸುವುದರ ಜೊತೆಗೆ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ತಮ್ಮ ಆರೋಗ್ಯದ ಜೊತೆಗೆ ಸಾರ್ವಜನಿಕರ ಆರೋಗ್ಯದ ಕಾಳಜಿ ಇಟ್ಟುಕೊಂಡು ಶುದ್ಧ ಮನಸ್ಥಿತಿಯಿಂದ ದೇವಸ್ಥಾನಕ್ಕೆ ಬರಬೇಕು. ಟಿಕೆಟ್ ಬುಕ್ ಮಾಡುವ ಮುನ್ನ ವೆಬ್‌ಸೈಟ್‌ನಲ್ಲಿ ಇರುವ ನಿಬಂಧನೆಗಳನ್ನು ಅರಿತುಕೊಳ್ಳಬೇಕು. ಅಲ್ಲದೆ ನಿಯಮಗಳನ್ನು ಪಾಲಿಸಿ ದೇವರ ದರ್ಶನ ಮಾಡಬೇಕು ಎಂದು ಕೋರಿದ್ದಾರೆ.