ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಮುಂದುವರಿದಿದ್ದು, ರಾಜಸ್ಥಾನ್ ಮೂಲದ ಬ್ಯಾಂಕ್ ಮ್ಯಾನೇಜರ್ ಅನ್ನು ಉಗ್ರರು ಗುಂಡಿಟ್ಟು ಹತ್ಯೆಗೈದಿರುವ ಘಟನೆ ಗುರುವಾರ (ಜೂನ್ 02) ಕುಲ್ವಾಮ್ ನಲ್ಲಿ ನಡೆದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ತಲೆನೋವು ಎಂದು ಹೇಳಿದ್ದಕ್ಕೆ 6ನೇ ತರಗತಿ ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹಲ್ಲೆ!
ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಮೋಹನ್ ಪೋರಾದಲ್ಲಿನ ಎಲ್ಲಾಕ್ವೈ ದೆಹಾತಿ ಬ್ಯಾಂಕ್ ನಲ್ಲಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿರುವ ವಿಜಯ್ ಕುಮಾರ್ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿ ಹತ್ಯೆಗೈದಿರುವುದಾಗಿ ವರದಿ ವಿವರಿಸಿದೆ.
ವಿಜಯ್ ಕುಮಾರ್ ಅವರು ರಾಜಸ್ಥಾನದ ಹನುಮಾನ್ ಗಢ್ ನಿವಾಸಿ. ಗುಂಡಿನ ದಾಳಿಗೆ ಒಳಗಾಗಿದ್ದ ವಿಜಯ್ ಕುಮಾರ್ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿಲಾಯಿತಾದರೂ, ಅವರು ಮಾರ್ಗದ ಮಧ್ಯೆಯೇ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿರುವುದಾಗಿ ವರದಿ ಹೇಳಿದೆ.
ಗುರುವಾರ ಬೆಳಗ್ಗೆ ಯೋಧರ ವಾಹನ ಸ್ಫೋಟಗೊಂಡು ಮೂವರು ಗಾಯಗೊಂಡಿರುವ ಘಟನೆ ನಡೆದ ಶೋಪಿಯಾನ್ ಪ್ರದೇಶದಿಂದ 13 ಕಿಲೋ ಮೀಟರ್ ದೂರದಲ್ಲಿ ಬ್ಯಾಂಕ್ ಮ್ಯಾನೇಜರ್ ಹತ್ಯೆ ಘಟನೆ ನಡೆದಿದೆ.
ದಕ್ಷಿಣ ಕಾಶ್ಮಿರದ ಕುಲ್ಗಾಮ್ ಜಿಲ್ಲೆಯ ಗೋಪಾಲ್ ಪೋರಾ ಪ್ರದೇಶದಲ್ಲಿ ಹಿಂದೂ ಮಹಿಳೆಯನ್ನು ಉಗ್ರರು ಗುಂಡಿಟ್ಟು ಹತ್ಯೆಗೈದ ಘಟನೆ ನಡೆದ ಎರಡು ದಿನಗಳ ನಂತರ ಬ್ಯಾಂಕ್ ಮ್ಯಾನೇಜರ್ ಹತ್ಯೆ ನಡೆದಿದ್ದು, ಇದರೊಂದಿಗೆ ಕಣಿವೆ ಪ್ರದೇಶದಲ್ಲಿ ಹಿಂದೂಗಳನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸುತ್ತಿರುವ ಪ್ರಕರಣ ಮುಂದುವರಿದಂತಾಗಿದೆ ಎಂದು ವರದಿ ತಿಳಿಸಿದೆ.