Advertisement

ವಿಶ್ವ ಆ್ಯತ್ಲೆಟಿಕ್ಸ್‌ ಸಂಸ್ಥೆಯಿಂದ ಗೌರವ: ಅಂಜು ವರ್ಷದ ವನಿತಾ ಆ್ಯತ್ಲೀಟ್‌

11:23 PM Dec 02, 2021 | Team Udayavani |

ಮೊನಾಕೊ: ಭಾರತದ ಖ್ಯಾತ ಲಾಂಗ್‌ಜಂಪ್‌ಪಟು ಅಂಜು ಬಾಬ್ಬಿ ಜಾರ್ಜ್‌ ಅವರಿಗೆ ವಿಶ್ವ ಆ್ಯತ್ಲೆಟಿಕ್ಸ್‌ ಸಂಸ್ಥೆಯ ಪ್ರತಿಷ್ಠಿತ “ವರ್ಷದ ವನಿತಾ ಆ್ಯತ್ಲೀಟ್‌’ ಪ್ರಶಸ್ತಿ ಒಲಿದು ಬಂದಿದೆ. ಅಂಜು ಈ ಗೌರವಕ್ಕೆ ಪಾತ್ರರಾದ ಭಾರತದ ಪ್ರಪ್ರಥಮ ಕ್ರೀಡಾಪಟು ಎಂಬುದೊಂದು ಹೆಗ್ಗಳಿಕೆ.

Advertisement

44 ವರ್ಷದ ಅಂಜು ವರ್ಲ್ಡ್  ಚಾಂಪಿಯನ್‌ಶಿಪ್‌ನಲ್ಲಿ ಪದಕ ಜಯಿಸಿದ ಭಾರತದ ಏಕೈಕ ಆ್ಯತ್ಲೀಟ್‌ ಎಂಬ ಹಿರಿಮೆ ಹೊಂದಿದ್ದಾರೆ. 2003ರ ಆವೃತ್ತಿಯ ಲಾಂಗ್‌ಜಂಪ್‌ ಸ್ಪರ್ಧೆಯಲ್ಲಿ ಅವರು ಕಂಚಿನ ಪದಕ ಜಯಿಸಿದ್ದರು.
ಬುಧವಾರ ರಾತ್ರಿ ನಡೆದ ವರ್ಚುವಲ್‌ ಸಮಾರಂಭದಲ್ಲಿ ಅಂಜು ಬಾಬ್ಬಿ ಜಾರ್ಜ್‌ ಈ ಪ್ರಶಸ್ತಿ ಯನ್ನು ತಮ್ಮದಾಗಿಸಿಕೊಂಡರು. ತಮ್ಮ ಬದುಕನ್ನು ಕ್ರೀಡೆ ಹಾಗೂ ಆ್ಯತ್ಲೆಟಿಕ್ಸ್‌ಗೆ ಸಮರ್ಪಿಸಿ ಉನ್ನತ ಸಾಧನೆಗೈದವರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ. 2019ರಲ್ಲಷ್ಟೇ ಈ ಪ್ರಶಸ್ತಿಯನ್ನು ಆರಂಭಿಸಲಾಗಿತ್ತು. ಅಂದು ಇಥಿಯೋಪಿಯಾದ ಡಬಲ್‌ ಒಲಿಂಪಿಕ್ಸ್‌ ಚಾಂಪಿಯನ್‌ ಡೆರಾರ್ಟು ಟುಲು ಈ ಗೌರವಕ್ಕೆ ಪಾತ್ರರಾಗಿದ್ದರು.

ಈಗಲೂ ಅಂಜು ಸಕ್ರಿಯ
“ಅಂತಾರಾಷ್ಟ್ರೀಯ ಖ್ಯಾತಿಯ ಭಾರತದ ಮಾಜಿ ಲಾಂಗ್‌ಜಂಪ್‌ ಸ್ಟಾರ್‌ ಅಂಜು ಬಾಬ್ಬಿ ಜಾರ್ಜ್‌ ಅವರನ್ನು ಈ ಬಾರಿಯ ವರ್ಷದ ವನಿತಾ ಆ್ಯತ್ಲೀಟ್‌ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಅವರು ಈಗಲೂ ಕ್ರೀಡೆಯಲ್ಲಿ ಸಕ್ರಿಯರಾಗಿದ್ದಾರೆ. 2016ರಿಂದ ತರಬೇತಿ ಅಕಾಡೆಮಿ ಯೊಂದನ್ನು ಆರಂಭಿಸಿ ಯುವ ವನಿತಾ ಕ್ರೀಡಾಪಟುಗಳನ್ನು ತರ ಬೇತುಗೊಳಿಸುತ್ತಿದ್ದಾರೆ. ಇಲ್ಲಿನ ಕ್ರೀಡಾಪಟುಗಳು ಈಗಾಗಲೇ ವಿಶ್ವ ಮಟ್ಟದ ಅಂಡರ್‌20 ಪದಕಗಳನ್ನೂ ಜಯಿಸುವ ಮಟ್ಟಕ್ಕೆ ಬೆಳೆದಿದ್ದಾರೆ’ ಎಂಬುದಾಗಿ ವರ್ಲ್ಡ್ ಆ್ಯತ್ಲೆಟಿಕ್ಸ್‌ ತಿಳಿಸಿದೆ.

ಇದನ್ನೂ ಓದಿ:ಭಾರತದ ದಕ್ಷಿಣ ಆಫ್ರಿಕಾ ಪ್ರವಾಸ ಮುಂದೂಡಿಕೆ?

2014ರಿಂದ 2018ರ ವರೆಗಿನ ಅವಧಿಯಲ್ಲಿ ಇದೇ ಪ್ರಶಸ್ತಿಯನ್ನು “ವುಮೆನ್‌ ಇನ್‌ ಆ್ಯತ್ಲೆಟಿಕ್ಸ್‌ ಅವಾರ್ಡ್‌’ ಎಂಬ ಹೆಸರಲ್ಲಿ ನೀಡಲಾಗುತ್ತಿತ್ತು. ಕ್ರೀಡಾ ಪ್ರಗತಿ, ಬೆಳವಣಿಗೆ, ಸ್ಫೂರ್ತಿ ಹಾಗೂ ವನಿತೆಯರನ್ನು ಕ್ರೀಡೆಯಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸುವವರನ್ನು ಗುರುತಿಸಿ ಗೌರವಿಸಲಾಗುತ್ತಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next