Advertisement

ನಮ್ಮ ಅಂಜನಾದ್ರಿಯೇ ಆಂಜನೇಯನ ಜನ್ಮಸ್ಥಳ : ಸಚಿವ ಕೋಟ ಶ್ರೀನಿವಾಸ ಪೂಜಾರಿ

12:15 AM Apr 13, 2021 | Team Udayavani |

ಬೆಂಗಳೂರು: “ಕರ್ನಾಟಕದ ಅಂಜನಾದ್ರಿ ಬೆಟ್ಟದ ಪ್ರದೇಶವೇ ಆಂಜನೇಯನ ಜನ್ಮ ಸ್ಥಳ. ಇದರಲ್ಲಿ ಎರಡು ಮಾತಿಲ್ಲ’ – ಇದು ಆಂಜನೇಯನ ಜನ್ಮಸ್ಥಳದ ಕುರಿತು ಎದ್ದಿರುವ ವಿವಾದಕ್ಕೆ ಸಂಬಂಧಿಸಿ ರಾಜ್ಯ ಸರಕಾರದ ಸ್ಪಷ್ಟ ಪ್ರತಿಪಾದನೆ.

Advertisement

ರಾಮಾಯಣದಲ್ಲಿ ಉಲ್ಲೇಖವಾಗಿರುವ ಕಿಷ್ಕಿಂಧೆಯು ಕೊಪ್ಪಳದ ಆನೆಗೊಂದಿ ವ್ಯಾಪ್ತಿಯ ಅಂಜನಾದ್ರಿ ಬೆಟ್ಟವೇ. ಇದೇ ಕಾರಣಕ್ಕೆ ಉತ್ತರ ಭಾರತ ಸಹಿತ ದೇಶಾದ್ಯಂತದಿಂದ ಹನುಮ ಭಕ್ತರು ಇಲ್ಲಿಗೆ ಭೇಟಿ ನೀಡಿ ಪೂಜೆ ನೆರವೇರಿಸುತ್ತಿದ್ದಾರೆ ಎಂದೂ ಸರಕಾರ ಹೇಳಿದೆ.

ಹನುಮ ಹುಟ್ಟಿದ್ದು ಅಂಜನಾದ್ರಿ ಬೆಟ್ಟದಲ್ಲಲ್ಲ, ಬದ ಲಿಗೆ ಆಂಧ್ರದ ತಿರುಪತಿಯಲ್ಲಿ ಎಂಬ ವಾದವೊಂದು ಎದ್ದಿರುವ ಹಿನ್ನೆಲೆಯಲ್ಲಿ “ಉದಯವಾಣಿ’ ಜತೆ ಮಾತನಾಡಿದ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ನಾವು ಯಾವುದಕ್ಕೂ ಉತ್ತರ ಕೊಡಲು ಹೋಗುವುದಿಲ್ಲ. ಆದರೆ, ಆಂಜನೇಯನ ಜನ್ಮ ಸ್ಥಳ ಕರ್ನಾಟಕದ ಅಂಜನಾದ್ರಿ ಬೆಟ್ಟದ ಪ್ರದೇಶವೇ ಎಂಬುದು ನಮ್ಮ ಭಾವನಾತ್ಮಕ, ಐತಿಹಾಸಿಕ ಪರಂಪರೆ ಹಾಗೂ ನಂಬಿಕೆಯಾಗಿದೆ. ಅಲ್ಲಿಗೆ ಬರುವ ಭಕ್ತರಿಗೆ ಅಗತ್ಯ ಸೌಕರ್ಯ ಕಲ್ಪಿಸಲು ಸರಕಾರ ಸಿದ್ಧತೆ ಮಾಡಿ ಕೊಳ್ಳುತ್ತಿದೆ ಎಂದು ಹೇಳಿದ್ದಾರೆ.

ಈಗಿನ ಮಾಹಿತಿ ಪ್ರಕಾರ ಅಂಜನಾದ್ರಿಯೇ ಹನುಮನ ಜನ್ಮ ಸ್ಥಳ. ಅದಕ್ಕೆ ಐತಿಹಾಸಿಕ ದಾಖಲೆ, ಶಾಸನಗಳಿವೆ. ಹನುಮ ಎಲ್ಲಿ ಹುಟ್ಟಿದ ಎಂಬು ಚರ್ಚೆ ಅನಗತ್ಯ. ನಮ್ಮ ನಂಬಿಕೆ, ಪರಂಪರೆ ಪ್ರಕಾರ ಆ ಸ್ಥಳವನ್ನು ಅಭಿವೃದ್ಧಿ ಮಾಡಿ ಭಕ್ತರಿಗೆ ಕೊಡುವುದಷ್ಟೇ ನಮ್ಮ ಆದ್ಯತೆ ಎಂದೂ ತಿಳಿಸಿದ್ದಾರೆ.

ಅಭಿವೃದ್ಧಿಗೆ ಮಾಸ್ಟರ್‌ ಪ್ಲ್ರಾನ್‌
ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ ಸರಕಾರ ಈಗಾಗಲೇ ಮಾಸ್ಟರ್‌ ಪ್ಲ್ರಾನ್‌ ರೂಪಿಸಿದ್ದು, ಮೊದಲ ಹಂತದಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿಗೆ 50 ಕೋ. ರೂ. ವೆಚ್ಚದಲ್ಲಿ ಯೋಜನೆ ರೂಪಿಸಿ ಸಂಪುಟದ ಮುಂದೆ ಪ್ರಸ್ತಾವನೆ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದೆ. ಎರಡನೇ ಹಂತದಲ್ಲಿ ರೋಪ್‌ ವೇ, ಯಾತ್ರಿ ನಿವಾಸ, ವಾಟರ್‌ ನ್ಪೋರ್ಟ್ಸ್ ಸೇರಿ ಬೆಟ್ಟಕ್ಕೆ ಹೊಸ ರೂಪ ಕೊಡಲು ಮಹತ್ವದ ತೀರ್ಮಾನ ಕೈಗೊಂಡಿದೆ. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ ಅಧ್ಯಕ್ಷತೆಯಲ್ಲಿ ಸಚಿವರಾದ ಸಿ.ಪಿ.ಯೋಗೇಶ್ವರ್‌, ಬಿ.ಸಿ.ಪಾಟೀಲ್‌, ಕೋಟ ಶ್ರೀನಿವಾಸ ಪೂಜಾರಿ ಅವರ ಸಮಿತಿ ಸಹ ರಚಿಸಲಾಗಿದೆ.

Advertisement

ಕಿಷ್ಕಿಂದೆ ಅಂಜನಾದ್ರಿ ಬೆಟ್ಟ ವಿಜಯನಗರ ಸಾಮಾಜ್ಯದ ವ್ಯಾಪ್ತಿಗೆ ಒಳಪಟ್ಟಿದ್ದು, ಅದರ ಸಮಗ್ರ ಅಭಿವೃದ್ಧಿಯೇ ನಮ್ಮ ಗುರಿ. ಆಂಧ್ರಪ್ರದೇಶದ ಟಿಟಿಡಿ ಏನು ಹೇಳುತ್ತಿದೆ ಎಂಬ ಬಗ್ಗೆ ನಾವು ತಲೆಕೆಡಿಸಿಕೊಳ್ಳಲ್ಲ. ನಮ್ಮ ರಾಜ್ಯದಲ್ಲಿರುವ ಐತಿಹಾಸಿಕ ಪುಣ್ಯಸ್ಥಳ ಅಭಿವೃದ್ಧಿಪಡಿಸಿ ಪ್ರವಾಸಿ ತಾಣವನ್ನಾಗಿ ಮಾಡುವುದು ನಮ್ಮ ಉದ್ದೇಶ.
– ಬಿ.ಸಿ.ಪಾಟೀಲ್‌, ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next