Advertisement

ಮತ್ತೊಂದು “ಬೋಲ್ಡ್‌ ಲುಕ್‌’ನಲ್ಲಿ ಅನಿತಾ ಭಟ್‌

09:43 AM Nov 06, 2019 | Lakshmi GovindaRaju |

ಸ್ಯಾಂಡಲ್‌ವುಡ್‌ನ‌ಲ್ಲಿ ತನ್ನ ಬೋಲ್ಡ್‌ ಮತ್ತು ಗ್ಲಾಮರಸ್‌ ಲುಕ್‌ನಿಂದ ಗಮನ ಸೆಳೆದಿರುವ ನಟಿ ಅನಿತಾ ಭಟ್‌ ಶೀಘ್ರದಲ್ಲಿಯೇ ಅಂಥದ್ದೇ ಮತ್ತೊಂದು ಲುಕ್‌ನಲ್ಲಿ ಪ್ರೇಕ್ಷಕರ ಮುಂದೆ ಬರೋದಕ್ಕೆ ರೆಡಿಯಾಗಿದ್ದಾರೆ. “ಬೆಂಗಳೂರು-69′ ಚಿತ್ರದಲ್ಲಿ ಅನಿತಾ ಭಟ್‌ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇತ್ತೀಚೆಗೆ ಹೊರಬಂದಿರುವ ಈ ಚಿತ್ರದ ಲುಕ್‌ ಗಮನ ಸೆಳೆಯುತ್ತಿವೆ. ಇನ್ನು ತಮ್ಮ ಹೊಸಚಿತ್ರ “ಬೆಂಗಳೂರು-69′ ಬಗ್ಗೆ ಮಾತನಾಡುವ ಅನಿತಾ ಭಟ್‌, “ಇದೊಂದು ಸಸ್ಪೆನ್ಸ್‌, ಸೋಶಿಯಲ್‌ ಥ್ರಿಲ್ಲರ್‌ ಸಿನಿಮಾ.

Advertisement

ಇಬ್ಬರು ಹುಡುಗರು ಸೇರಿ ಒಬ್ಬ ಶ್ರೀಮಂತ ಹುಡುಗಿಯನ್ನು ಕಿಡ್ನಾಪ್‌ ಮಾಡುತ್ತಾರೆ. ಯಾಕೆ ಆ ಕಿಡ್ನಾಪ್‌ ಮಾಡುತ್ತಾರೆ. ಹೇಗೆ ಮಾಡುತ್ತಾರೆ, ಆಮೇಲೆ ಏನಾಗುತ್ತದೆ ಅನ್ನೋದು ಚಿತ್ರದ ಒನ್‌ಲೈನ್‌ ಸ್ಟೋರಿ. ಚಿತ್ರದ ಬಹುತೇಕ ಭಾಗ ಮೂರು ಪ್ರಮುಖ ಪಾತ್ರಗಳ ಸುತ್ತ ನಡೆಯುತ್ತದೆ’ ಎನ್ನುತ್ತಾರೆ. ಇನ್ನು “ಬೆಂಗಳೂರು-69′ ಚಿತ್ರದಲ್ಲಿ ಒಂದು ರೊಮ್ಯಾಂಟಿಕ್‌ ಹಾಡಿದ್ದು, ಆ ಹಾಡಿನಲ್ಲಿ ಅನಿತಾ ಬೋಲ್ಡ್‌ ಆ್ಯಂಗ್‌ ಗ್ಲಾಮರಸ್‌ ಆಗಿ ಕಾಣಿಸಿಕೊಂಡಿದ್ದಾರೆ.

ಅದರ ಬಗ್ಗೆ ಮಾತನಾಡುವ ಅನಿತಾ, “ಒಂದು ಹುಡುಗಿಯನ್ನು ಕಿಡ್ನಾಪ್‌ ಮಾಡಿದಾಗ ಅವಳು ಹೇಗೆ ರಿಯಾಕ್ಟ್ ಮಾಡುತ್ತಾಳೆ ಅನ್ನೋದು ನನ್ನ ಪಾತ್ರ. ಚಿತ್ರದಲ್ಲಿ ಒಂದು ರೊಮ್ಯಾಂಟಿಕ್‌ ಸಾಂಗ್‌ ಇದೆ. ಕಿಡ್ನಾಪ್‌ ಸ್ಟೋರಿಯಲ್ಲಿ ಈ ಥರದ ಸಾಂಗ್‌ ಯಾಕೆ ಅಂತ ಕೇಳಬಹುದು. ಅದು ಹೇಗೆ ಅನ್ನೋದು ಚಿತ್ರದಲ್ಲೇ ನೋಡಬೇಕು. ನನ್ನ ಕಾಸ್ಟ್ಯೂಮ್‌ ಬೋಲ್ಡ್‌ ಆಗಿರುವುದರಿಂದ, ನಾನು ಗ್ಲಾಮರಸ್‌ ಆಗಿ ಕಾಣುತ್ತಿದ್ದೇನೆ ಅಷ್ಟೇ’ ಎನ್ನುತ್ತಾರೆ.

“ಬೆಂಗಳೂರು-69′ ಚಿತ್ರದಲ್ಲಿ ಅನಿತಾ ಭಟ್‌ ಅವರೊಂದಿಗೆ, ಶಫಿ ಮತ್ತು ಪವನ್‌ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು ಬೆಂಗಳೂರು ಮತ್ತು ಕಬಿನಿಯಲ್ಲಿ ಚಿತ್ರೀಕರಿಸಲಾಗಿದೆ. ಚಿತ್ರದ ಬಹುತೇಕ ಭಾಗ ಅಪಾರ್ಟ್‌ಮೆಂಟ್‌ನಲ್ಲಿ ನಡೆಯುತ್ತದೆಯಂತೆ. “ಕಿಡ್ನಾಪ್‌ ಮಾಡಿದ ಹುಡುಗಿಯನ್ನು ಒಂದು ರೂಮಿನಲ್ಲಿ ಕೂಡಿ ಹಾಕುತ್ತಾರೆ. ಅಲ್ಲಿ ಏನೇನು ಘಟನೆಗಳು ನಡೆಯುತ್ತದೆ ಅನ್ನೋದೆ ಚಿತ್ರದ ಹೈಲೈಟ್ಸ್‌. ಚಿತ್ರದಲ್ಲಿ ತುಂಬ ಭಯಪಡುವ ಪಾತ್ರ ನನ್ನದು.

ನನ್ನ ಪಾತ್ರಕ್ಕೆ ಸಾಕಷ್ಟು ಸ್ಕೋಪ್‌ ಇದೆ. ಚಿತ್ರವ ಮತ್ತು ನನ್ನ ಪಾತ್ರ ಎರಡೂ ಚೆನ್ನಾಗಿ ಮೂಡಿಬಂದಿದೆ’ ಎಂದು ವಿವರಣೆ ಕೊಡುತ್ತಾರೆ ಅನಿತಾ ಭಟ್‌. ಸದ್ಯ “ಬೆಂಗಳೂರು-69′ ಚಿತ್ರದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಮುಗಿದಿದ್ದು, ಈ ವರ್ಷದ ಕೊನೆಗೆ ಅಥವಾ ಜನವರಿಗೆ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ. ಇದರ ನಡುವೆ ಅನಿತಾ ಭಟ್‌, “ಕಲಿವೀರ’, “ಸದ್ಗುಣ ಸಂಪನ್ನ ಮಾಧವ’ ಮತ್ತು “ಕನ್ನೇರಿ’ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದು, ಆ ಚಿತ್ರಗಳು ಕೂಡ ತೆರೆಗೆ ಬರಲು ಸಿದ್ಧತೆ ಮಾಡಿಕೊಳ್ಳುತ್ತಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next