ಕೆಲವು ಘಟನೆಗಳು ನಮಗೆ ಸಿಟ್ಟು ತರುತ್ತವೆ. ಆದರೆ, ಅದರಿಂದ ಮುಂದೆ ಅದೆಷ್ಟೋ ಸಲ ಲಾಭ ಕೂಡಾ ಆಗುತ್ತದೆ. ಅದಕ್ಕೆ ಇತ್ತೀಚಿನ ಉದಾಹರಣೆ “ರಾಮಾರ್ಜುನ’. ಅನೀಶ್ ನಿರ್ಮಾಣ, ನಿರ್ದೇಶನ ಹಾಗೂ ನಾಯಕ ನಟರಾಗಿ ನಟಿಸಿರುವ “ರಾಮಾರ್ಜುನ’ ಚಿತ್ರ ಇಂದು ತೆರೆಕಾಣುತ್ತಿದೆ. ಹಾಗೆ ನೋಡಿದರೆ ಈ ಚಿತ್ರವನ್ನು ಅನೀಶ್ ಓಟಿಟಿಯಲ್ಲಿ ರಿಲೀಸ್ ಮಾಡಲು ಮುಂದಾಗಿದ್ದರು. ಅದಕ್ಕೆ ಕಾರಣ ಹಲವು.
ನಿರ್ಮಾಣದ ಹೊರೆಯ ಜೊತೆಗೆ ಬೇರೆ ಬೇರೆ ಒತ್ತಡದಲ್ಲಿದ್ದ ಅನಿಶ್ ಓಟಿಟಿಗೆ ಕೊಡಲು ನಿರ್ಧರಿಸಿದ್ದರು. ಇದೇ ಕಾರ್ಯದಲ್ಲಿ ಅವರು ತೊಡಗಿದ್ದಾಗ ಅವರ ಮನೆಯ ಇಂಟರ್‌ನೆಟ್ ಕೈ ಕೊಡುತ್ತದೆ. ಸ್ನೇಹಿತ ರಕ್ಷಿತ್ ಶೆಟ್ಟಿಗೆ ಕರೆಮಾಡಿ, ಅವರ ಮನೆಯ ಇಂಟರ್‌ನೆಟ್ ಬಳಸಲು ಹೋಗುತ್ತಾರೆ. ಈ ವೇಳೆ 10 ನಿಮಿಷ ಸಿನಿಮಾ ನೋಡಿದ ರಕ್ಷಿತ್ ಖುಷಿಯಾಗಿ, ಇಡೀ ಸಿನಿಮಾ ನೋಡುತ್ತಾರೆ. ಕೊನೆಗೊಂದು ನಿರ್ಧಾರಕ್ಕೆ ಬರುತ್ತಾರೆ. ಅದೇನೆಂದರೆ ಈ ಸಿನಿಮಾವನ್ನು ಹೇಗಾದರು ಮಾಡಿ ಚಿತ್ರಮಂದಿರದಲ್ಲೇ ಬಿಡುಗಡೆ ಮಾಡಬೇಕು, ಈ ಮೂಲಕ ಗೆಳೆಯನ ಬೆನ್ನಿಗೆ ನಿಲ್ಲಬೇಕು ಎಂದು. ಪರಿಣಾಮವಾಗಿ ಚಿತ್ರ ಇಂದು ತೆರೆಕಾಣುತ್ತಿದೆ. ಕೆಆರ್‌ಜಿ ಸ್ಟುಡಿಯೋ ಕಾರ್ತಿಕ್ ವಿತರಣೆ ಮಾಡುತ್ತಿದ್ದಾರೆ. ನಿರ್ಮಾಣದಲ್ಲಿ ಈಗ ರಕ್ಷಿತ್ ಶೆಟ್ಟಿ ಕೂಡಾ ಪಾಲುದಾರರಾಗಿ ಅನೀಶ್ ಹೊರೆಯನ್ನು ಸ್ವಲ್ಪ ಇಳಿಸಿದ್ದಾರೆ.
ಇದನ್ನೂ ಓದಿ:ಹೊಂಬಾಳೆ ತಂಡ ಸೇರಿದ ಬೋಲ್ಡ್ ಬ್ಯೂಟಿ: ಸಲಾರ್‌ಗೆ ಶ್ರುತಿ ಹಾಸನ್
“ಈ ಸಿನಿಮಾ ನೋಡಿದಾಗ ಇದು ಓಟಿಟಿ ಕಂಟೆಂಟ್ ಅಲ್ಲ ಅನಿಸಿತು. ಸಾಮಾನ್ಯವಾಗಿ ನಾನು ತುಂಬಾ ಕಮರ್ಷಿಯಲ್ ಸಿನಿಮಾಗಳನ್ನು ನೋಡುವುದಿಲ್ಲ. ಆದರೆ, ಅನೀಶ್ ಮಾಡಿದ “ರಾಮಾರ್ಜುನ’ ನೋಡುತ್ತಾ ಹೋದಂತೆ ನನ್ನ ಕುತೂಹಲ ಹೆಚ್ಚಾಯಿತು. ಸಾಕಷ್ಟು ವಿಚಾರಗಳನ್ನು ಹೇಳಿದ್ದಾರೆ. ಇಲ್ಲಿ ಅವರ ಸಿನಿಮಾದ ಹಸಿವು ಎದ್ದು ಕಾಣುತ್ತಿದೆ. ಅವರ ಹನ್ನೆರಡು ವರ್ಷಗಳ ಅನುಭವ, ಬೇಸರ ಹಾಗೂ ಏನೋ ಮಾಡಬೇಕೆಂಬ ಛಲ ಈ ಚಿತ್ರದಲ್ಲಿದೆ. ಕೆಲವೊಮ್ಮೆ ನಾವು ಬಯಸಿದಂತೆ ಯಾವ ನಿರ್ದೇಶಕರು ತೋರಿಸದೇ ಹೋದಾಗ ನಾವೇ ನಮ್ಮನ್ನು ತೋರಿಸಿಕೊಂಡರೆ ಹೇಗೆ ಎಂಬ ಭಾವ ಬರುತ್ತದೆ. ಅದರಂತೆ ಅನಿಶ್ ಚೆನ್ನಾಗಿ ಈ ಸಿನಿಮಾ ಮಾಡಿದ್ದಾರೆ. ಎಲ್ಲರಿಗೂ ಚಿತ್ರ ಖುಷಿ ಕೊಡುತ್ತದೆ ಎಂಬ ವಿಶ್ವಾಸವಿದೆ’ ಎಂದು ಸಿನಿಮಾ ಬಗ್ಗೆ ಹೇಳಿಕೊಂಡರು ರಕ್ಷಿತ್ ಶೆಟ್ಟಿ.
“ರಾಮಾರ್ಜುನ’ ಚಿತ್ರದಲ್ಲಿ ಅನೀಶ್ ಇನ್ಸೂರೆನ್ಸ್ ಏಜೆಂಟ್ ಆಗಿ ಕಾಣಿಸಿಕೊಂಡಿದ್ದಾರೆ. “ಇದು ನಾನು ತುಂಬಾ ಇಷ್ಟಪಟ್ಟು ಮಾಡಿದ ಕಥೆ. ಆದರೆ, ಸಾಕಷ್ಟು ಕಾರಣಗಳಿಂದ ಈ ಚಿತ್ರವನ್ನು ಓಟಿಟಿಯಲ್ಲಿ ರಿಲೀಸ್ ಮಾಡಲು ಮುಂದಾಗಿದ್ದೆ. ಆಗ ನನ್ನ ಕೈ ಹಿಡಿದಿದ್ದು ರಕ್ಷಿತ್. ಸಿನಿಮಾ ನೋಡಿದ ರಕ್ಷಿತ್, ನಿರ್ಮಾಣದಲ್ಲೂ ಪಾಲುದಾರಿಕೆ ಹೊಂದಿ ಈಗ ಚಿತ್ರಮಂದಿದಲ್ಲಿ ತೆರೆಕಾಣುತ್ತಿದೆ. ತುಂಬಾ ಜನರಿಗೆ ಈ ಸಿನಿಮಾ ತೋರಿಸಿದ್ದೇನೆ. ನೋಡಿದವರೆಲ್ಲರೂ ಖುಷಿಯಾಗಿ, ಈ ಬಾರಿ ಗೆಲ್ಲುತ್ತೀಯಾ ಎಂದಿದ್ದಾರೆ. ಈ ಬಾರಿ ನಾನು ಗೆಲುವು ಕಾಣಲೇಬೇಕು. ಚಿತ್ರರಂಗದಲ್ಲಿ 12 ವರ್ಷ ಕಷ್ಟಪಟ್ಟಿದ್ದೇನೆ’ ಎನ್ನುವುದು ಅನೀಶ್ ಮಾತು.
ನಾಯಕಿ ನಿಶ್ವಿಕಾ ನಾಯ್ಡು ಅವರಿಗೆ ತುಂಬಾ ಡೈಲಾಗ್ ಇರುವ ಪಾತ್ರ ಸಿಕ್ಕಿದೆಯಂತೆ. ಚಿತ್ರವನ್ನು ವಿತರಣೆ ಮಾಡುತ್ತಿರುವ ಕಾರ್ತಿಕ್ ಅವರಿಗೆ ಈ ಸಿನಿಮಾ ನೋಡಿ ತುಂಬಾ ಇಷ್ಟವಾಯಿತಂತೆ. ಲಾಕ್‌ಡೌನ್‌ನಲ್ಲಿ ಬರೀ ಕಂಟೆಂಟ್ ಸಿನಿಮಾಗಳನ್ನೇ ನೋಡಿದ್ದ ಅವರು, “ರಾಮಾರ್ಜುನ’ ನೋಡಿ ಖುಷಿಯಾದರಂತೆ. ಚಿತ್ರ 160ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ.
ರವಿಪ್ರಕಾಶ್ ರೈ