Advertisement

ಪ್ಲೀಸ್‌ ಸೇವ್‌ ಮೀ..:ಇದು ಮೂಕಪ್ರಾಣಿಗಳ ಕರುಳ ದನಿ!

12:00 PM Mar 10, 2018 | |

“ಹೇ ಮನುಜ…! ನಿನಗೇಕೆ ಇಷ್ಟೊಂದು ಸಿಟ್ಟು ನಮ್ಮ ಮೇಲೆ?  ಹಗೆತನ ಸಾಧಿಸಲಿಕ್ಕೇ ತಾನೆ ನಾವಿರುವ ಜಾಗಕ್ಕೆ ಬಂದು ಹುಡುಕಿ ಹುಡುಕಿ ಬೆಂಕಿ ಇಟ್ಟು ನಮ್ಮವರನ್ನೆಲ್ಲ ದಿಕ್ಕಾಪಾಲಾಗಿಸಿರೋದು? ಯಾಕೆ ಕಿಂಚಿತ್ತೂ ನಮ್ಮ ಮೇಲೆ ಕನಿಕರ ತೋರಿಸಲಾರೆ? ನೀನೆಷ್ಟು ಸ್ವಾರ್ಥಿ, ಅಬ್ಟಾ… ಕತ್ತಲಾದರೆ ಬೇಟೆಯಾಡಿ ತಿಂದು ತೇಗುವ ನಿನ್ನಷ್ಟು ಕ್ರೂರಿ ನಾವಲ್ಲ. ನಮಗೆ ನಮ್ಮ ಕಷ್ಟ ಹೇಳಿಕೊಳ್ಳಲಾಗದ ಸ್ಥಿತಿ. ಆ ಸೃಷ್ಟಿಕರ್ತ ಅದ್ಯಾಕೆ ನಮ್ಮನ್ನೆಲ್ಲ ಮೂಖರನ್ನಾಗಿಸಿದ್ದಾನೋ ಗೊತ್ತಿಲ್ಲ. ನೀನು ಓಡಿಸುವ ವಾಹನದಡಿ ಸಿಲುಕಿ ಪ್ರಾಣ ಕಳೆದುಕೊಳ್ಳುವಾಗ ಅಲ್ಲಿಯೇ ಇರುವ ಜನ, ಅದೆಷ್ಟೋ ಬಾರಿ ತೊಟ್ಟು ನೀರನ್ನು ಬಾಯಿಗೆ ಬಿಡದೇ ನೋಡುತ್ತ ನಿಂತಿರುತ್ತಾರೆ. ಇದನ್ನೆಲ್ಲ ನೋಡಿ ಬೆಚ್ಚಿಬಿದ್ದಿದ್ದೇವೆ. ನಮ್ಮ ಬದುಕಿಗೆ ಕಾಡೇ ಗತಿ. ನಾಡಿಗೆ ಬರಲು ನೀನೆಲ್ಲಿ ಬಿಟ್ಟೀಯಾ?

Advertisement

 ಪ್ಲೀಸ್‌… ಇಂಥ ಸಾವು ನಮಗೂ ಬೇಡ. ಜೀವವನ್ನು ನೀನೆಷ್ಟು ಪ್ರೊಟೆಕ್ಟ್ ಮಾಡಿಕೊಳ್ಳುತ್ತೀಯೋ, ಹಾಗೇ ನಮ್ಮದೂ ಜೀವ ಅನ್ನೋದನ್ನು ಮರೆಯಬೇಡ. ನಮ್ಮ ಪಾಡಿಗೆ ನಾವಿರಲು  ಬಿಟ್ಟು ಬಿಟ್ಟರೆ ನಿನ್ನಿಂದ ಅದಕ್ಕಿಂತ ಬಲುದೊಡ್ಡ ಉಪಕಾರವನ್ನು ನಾವು ಬಯಸೋದಿಲ್ಲ”

 ಬಹುಶಃ ಮಾತು ಬರುವುದಾಗಿದ್ದರೆ ವನ್ಯಜೀವಿಗಳು ಹೀಗೆಲ್ಲ ಹೇಳುತ್ತ ಮನುಷ್ಯನ ಜತೆ ಮಾತಿನ ಸಂಘರ್ಷಕ್ಕೆ ಬಿರುಸಾದ ಸಂಘರ್ಷಕ್ಕೆ ಇಳಿದಿರುತ್ತಿದ್ದವೋ. ಹಾಗಂತ ಈಗಲೂ ನಿಂತಿಲ್ಲ, ಬೇರೆ ಬೇರೆ ಕಾರಣಗಳಿಗಾಗಿ ಮನುಷ್ಯ-ಪ್ರಾಣಿಗಳ ಮಧ್ಯೆ ಸಂಘರ್ಷ ಮುಂದುವರಿದಿವೆ.

 ಆಘಾತಕಾರಿ ಅಂಶವೇನೆಂದರೆ ದೇಶದ ವನ್ಯ ಸಂಪತ್ತನ್ನು ಉಳಿಸಿಕೊಳ್ಳುವುದೇ ಬಲುದೊಡ್ಡ ಸವಾಲಾಗಿದೆ. ಸರ್ಕಾರಗಳೂ ಅಷ್ಟೆ, ಅದರಿಂದೇನು ಲಾಭ? ಎಂದು ಉದಾಸೀನ ತೋರಿದ ಪರಿಣಾಮ, ಅರಣ್ಯ ಇಲಾಖೆ ಇಂದಿಗೂ ಲಾಭ ತಂದುಕೊಡದ ಇಲಾಖೆಯಾಗಿಯೇ ಉಳಿದಿವೆ. ಆದರೆ ಪ್ರವಾಸೋದ್ಯಮದ ಹೆಸರಲ್ಲಿ ನೂರಾರು ಕೋಟಿ ರೂ. ಖಜಾನೆ ಸೇರುತ್ತಿವೆ. ಇಷ್ಟಾದರೂ ಉಳಿದ ಇಲಾಖೆಗೆ ಹರಿದುಬರುವ ಅನುದಾನ ಅರಣ್ಯ ಇಲಾಖೆಗಿಲ್ಲ. ಇದು ಸಹಜವಾಗಿಯೇ ಆಂತರಿಕ  ಸಮಸ್ಯೆಗಳಿಗೂ ಕಾರಣವಾಗುತ್ತಿವೆ. ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಕೂಡ ಇದರಿಂದ ಹೊರತಾಗಿಲ್ಲ.
 
 ಜವಾಬ್ದಾರಿ, ಜಾಗೃತಿ ಅಗತ್ಯ
 ಏಷ್ಯಾದ ಅತಿದೊಡ್ಡ ಆನೆ ಕಾರಿಡಾರ್‌ ಎಂದೇ  ಹೆಸರಾಗಿರುವ ನಾಗರಹೊಳೆ-ಬಂಡೀಪುರದಲ್ಲಿ ಹುಲಿಗಳೂ ಸೇರಿ ಬಹುತೇಕ ಪ್ರಾಣಿಗಳ ಸಂರಕ್ಷಣೆ ಗಮನಾರ್ಹವಾದುದು. ಆದರೆ ಅಷ್ಟು ಸುಲಭಸಾಧ್ಯವಾದ ಕೆಲಸ ಇದಲ್ಲ. ಇಲ್ಲಿಯೂ ವನ್ಯಜೀವಿಗಳು-ಸ್ಥಳೀಯರು-ಅರಣ್ಯ ಇಲಾಖೆ ನಡುವೆ ಸಂಘರ್ಷ ಇದ್ದೇ ಇದೆ. ಸಂರಕ್ಷಿ$ತಾರಣ್ಯದಲ್ಲೇ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಅದೆಷ್ಟು ಪ್ರಾಣಿಗಳು ಬಲಿಯಾಗಿವೆಯೋ ಲೆಕ್ಕಲ್ಲ. ವಾಹನ ಸವಾರರು  ತಮ್ಮ ಜವಾಬ್ದಾರಿ ಅರಿತು ವಾಹನ ಚಾಲನೆ ಮಾಡದ ಇನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಪ್ರಾಣಿಗಳ ಓಡಾಟ ಹೆಚ್ಚಿರುವ ರಾತ್ರಿಯ ಸಮಯದಲ್ಲಿ ವಾಹನಕ್ಕೆ ನಿಷೇಧ ಹೇರಿದೆ. ಆದರೆ ನೆರೆಯ ಕೇರಳ ಸರ್ಕಾರ ಈಗಲೂ ರಾಜ್ಯದ ಕ್ರಮದ ವಿರುದ್ಧ ರಾಜಕೀಯವಾಗಿ ಹೋರಾಟ ಮುಂದುವರಿಸಿದೆ.
 
 ಪ್ರೇರಣೆಯಿಂದ ಕುಕೃತ್ಯ
 ಮನುಷ್ಯನಲ್ಲಿರುವ ಕ್ರೋಧ, ದ್ವೇಷ, ನಿರ್ಲಕ್ಷ್ಯದಿಂದ ಕಾಡು ಬೆಂಗಾಡಾಗುತ್ತಿದೆ. ಪ್ರಾಣಿಗಳು ಬೆಳೆಗಳನ್ನೆಲ್ಲ ತಿಂದವೆಂದು ಕಾಡಿಗೇ ಬೆಂಕಿ ಇಟ್ಟು ಕೇಕೆ ಹಾಕಿದರೆ ಇನ್ನೊಂದು ರೀತಿಯಿಂದ ನಷ್ಟ ಎದುರಿಸಬೇಕಾಗಿ ಬರುತ್ತದೆ. ಈ ಸತ್ಯದ ಅರಿವು ಇರದೇ ಬಂಡೀಪುರ ಸೇರಿದಂತೆ ಹೆಚ್ಚಿನ ಸಂರಕ್ಷಿ$ತ ಅರಣ್ಯ ಪ್ರದೇಶಗಳಲ್ಲಿ ಇಂಥ ಕೃತ್ಯಗಳು ನಡೆಯುತ್ತಿವೆ. ಪರಿಣಾಮ ಆಹಾರ ಹುಡುಕಿಕೊಂಡು ಬರುವ ಪ್ರಾಣಿಗಳ ನಡುವೆ ಸಂಘರ್ಷ ಉಲ್ಬಣಿಸುತ್ತಿದೆ.
 
ಆದರೆ ಇದನ್ನೆಲ್ಲಾ ನಾಳೆಯೇ ನಿಲ್ಲಿಸಿಬಿಡುತ್ತೇನೆಂದು ಬೊಬ್ಬಿರಿದರೆ ಇದು ನಿಲ್ಲುವ ಸಮಸ್ಯೆಯೂ ಅಲ್ಲ. ಆದರೆ ಸಾರ್ವಜನಿಕರು ಜವಾಬ್ದಾರಿ ಅರಿತು ಹೆಜ್ಜೆ ಇಟ್ಟರೆ ಈ ಸಮಯ ಪರಿಹಾರಕ್ಕೆ ಹೆಚ್ಚು ಸಮಯವೂ ಬೇಕಾಗಿಲ್ಲ. ಪ್ರಾಣಿಗಳನ್ನು ಕೊಂದು ತಿಂದಿದ್ದಕೋR, ಮರಗಳನ್ನು ಕಡಿದು ತಂದಿದ್ದಕ್ಕೋ, ಪ್ರಾಣಿಗಳನ್ನು ಹಿಂಸಿಸಿದ್ದಕ್ಕೋ ಅರಣ್ಯ ಇಲಾಖೆ ಸಿಬ್ಬಂದಿ ಕ್ರಮ ಕೈಗೊಂಡರೆಂದು ಸಿಟ್ಟಾಗಿದ ಜನ, ಕಾಡಿಗೆ ಬೆಂಕಿ ಇಟ್ಟ ಪ್ರಸಂಗಗಳು ಇತ್ತೀಚೆಗೆ ಸಾಕಷ್ಟು ನಡೆದಿವೆ. ಹಾಗೆಯೇ ಧೂಮಪಾನ ಮಾಡುವವರ ನಿರ್ಲಕ್ಷ್ಯದಿಂದಲೂ ಕಾಡು ಕ್ಷಣಾರ್ಧದಲ್ಲಿ ಸುಟ್ಟು ಕರಕಲಾದ, ಪ್ರಾಣಿಗಳು ದಿಕ್ಕಾಪಾಲಾದ, ಸಜೀವ ದಹನವಾದ ಉದಾಹರಣೆಗಳೂ ಇವೆ.

 ಇಷ್ಟೇ ಅಲ್ಲ, ಪ್ರಾಣಿಗಳು ಬೆಳೆ ನಾಶ ಮಾಡುತ್ತವೆಂದು ಎಲೆಕ್ಟ್ರಿಕ್‌ ಬೇಲಿ ಹಾಕಿ, ಭಾರಿ ಪ್ರಮಾಣದ ವಿದ್ಯುತ್‌ ಹರಿಸಿ ಅವುಗಳನ್ನು ಸಾಯಿಸಿದ ಉದಾಹರಣೆಗಳೂ ಇವೆ. ಪ್ರಾಣಿಗಳಿಗೆ ವಿಷವುಣಿಸಿ ಸಾಯಿಸಲಾಗಿದೆ ಎನ್ನುವ ಆರೋಪಗಳೂ ಅನೇಕ ಬಾರಿ ಕೇಳಿಬಂದಿವೆ.

Advertisement

 ಕಡಿವಾಣ ಹೇಗೆ?
 ಅರಣ್ಯ ಇಲಾಖೆ ಇದಕ್ಕೊಂದು ಕಡಿವಾಣ ಹಾಕಲು ಶತಪ್ರಯತ್ನ ನಡೆಸಿದೆ. ಈಗಲೂ ನಡೆಸುತ್ತಿದೆ. ಅಧಿಕಾರಿಗಳೇ ಇತ್ತೀಚೆಗೆ ನಡೆಸಿದ ಕಾರ್ಯಾಗಾರವೊಂದರಲ್ಲಿ ತಾವು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದರು. ಅನಿಸಿದ್ದಿಷ್ಟೆ, ಸಂರಕ್ಷಣೆ ಕೇವಲ ಅಧಿಕಾರಿಗಳಿಂದ ಆಗಬೇಕಾಗಿದ್ದಲ್ಲ. ಇಲಾಖೆಯ ಸಿಬ್ಬಂದಿ, ವಿಶೇಷ ಆಸಕ್ತರು, ಸ್ಥಳೀಯರು, ಪ್ರವಾಸಿಗರಲ್ಲಿ ಅವರವರ ಜವಾಬ್ದಾರಿಗಳ ಅರಿವು ಮೂಡಬೇಕಿದೆ ಎಂದು ಅವರೆಲ್ಲ ಪ್ರತಿಪಾದಿಸಿದರು. ಅರಣ್ಯ ಸಂರಕ್ಷಿಸುವಲ್ಲಿ ಮಾಧ್ಯಮಗಳ ಕರ್ತವ್ಯವೂ ಪ್ರಮುಖವಾದುದು ಎನ್ನುವುದರ ವಿವರಣೆ ಅವರ ಮಾತಿನ ಪ್ರಮುಖ ಅಂಶಗಳಲ್ಲಿ ಒಂದಾಗಿತ್ತು.

 ಹೌದು, ನಮ್ಮ ನಾಡಿನ ಸಂಪತ್ತನ್ನು ಉಳಿಸಿಕೊಳ್ಳಬೇಕಾದರೆ ಸಾರ್ವಜನಿಕರೇ ಜವಾಬ್ದಾರಿಯುತರಾಗಿ ಇರಬೇಕಾಗುತ್ತದೆ. ಹೇಗೆ ಎನ್ನುವುದು ಇಲ್ಲಿದೆ.

– ವಾಹನ ಚಲಿಸುವಾಗ ಎದುರಿಗೆ ಪ್ರಾಣಿಗಳು ಕಂಡರೆ ಸಾಧ್ಯವಾದಷ್ಟು ದೂರವೇ ನಿಲ್ಲಿಸಿ, ತಾಳ್ಮೆಯಿಂದ ವರ್ತಿಸಿ.
– ಪ್ರಾಣಿಗಳಿಗೆ ತೊಂದರೆ ಕೊಡದೇ, ಅದರ ಪಾಡಿಗೆ ಅದು ಹೋಗುವಂತೆ ನೋಡಿಕೊಳ್ಳಿ.
– ಪ್ರಾಣಿಗಳು ಓಡಾಡುವ ಪ್ರದೇಶದಲ್ಲಿ ಪ್ಲಾಸ್ಟಿಕ್‌, ಗಾಜು, ಸೀಸಗಳನ್ನು ಎಸೆಯದೇ ಸ್ವತ್ಛತೆ ಕಾಪಾಡಿ.
– ಪ್ರಾಣಿಗಳು ಗೊಂದಲಕ್ಕೆ ಸಿಲುಕಿಕೊಳ್ಳುವಂತೆ ಶಬ್ದಮಾಲಿನ್ಯಕ್ಕೆ ಕಾರಣರಾಗಬೇಡಿ.
– ಯಾವುದೇ ಪ್ರಾಣಿಯನ್ನು ಕಂಡಾಗ, ಅದನ್ನು ಹಿಡಿಯುತ್ತೇನೆಂದು ಹುಂಬ ಧೈರ್ಯ ತೋರಿಸಬೇಡಿ.
– ಆನೆಗಳ ಹಿಂಡೋ, ಹುಲಿರಾಯನ ಗಾಂಭೀರ್ಯದ ನಡಿಗೆಯೋ, ಬೇಟೆಗೆಂದು ಹೊಂಚು ಹಾಕಿ ಕುಳಿತಿರುವ ಚಿರತೆಯ ಕಳ್ಳ ಹೆಜ್ಜೆ, ಜಿಂಕೆ, ಸಾರಂಗದ ಮರಿಗಳ ಜಿಗಿತ, ಓಡಾಟ ಸಂರಕ್ಷಿ$ತಾರಣ್ಯ ಪ್ರದೇಶದಲ್ಲಿ ಸಾಮಾನ್ಯ. ಕಾರಣ ಎಚ್ಚರಿಕೆಯಿಂದಿರಿ.

– ಬೆಂಕಿ ಕಾಣಿಸಿಕೊಂಡಾಗ ಹತ್ತಿರದ ಅಗ್ನಿ ಶಾಮಕ ಇಲಾಖೆ, ಪೊಲೀಸ್‌ ಠಾಣೆ, ಅರಣ್ಯ ಸಂರಕ್ಷಣಾಧಿಕಾರಿಗಳಿಗೆ, ಪರಿಸರ ಸಂರಕ್ಷಕರಿಗೆ ಮಾಹಿತಿ ನೀಡಲು ಮರೆಯಬೇಡಿ.

ಆ್ಯಪ್‌ ‘ಹೆಜ್ಜೆ’ ಗುರುತು
ಸಿಬ್ಬಂದಿಯ ಕಾರ್ಯಕ್ಷಮತೆ ಬಗ್ಗೆ, ಅಡವಿಯ ಕೆಲ ವಿಚಾರಗಳನ್ನು ಅದೇ ಸ್ಥಳದಿಂದ ಹಿರಿಯ ಅಧಿಕಾರಿಗಳಿಗೆ ತಿಳಿಸಲು ಇಲಾಖೆ ಹೆಜ್ಜೆ ಆ್ಯಪ್‌ ಬಳಸುತ್ತಿದೆ. ಸಾಮಾನ್ಯವಾಗಿ ಕಾಡಿನ ಒಳಗಿರುವ ಕಾಡುಗಳ್ಳರ ನಿಗ್ರಹ ಕೇಂದ್ರದಿಂದ ಸುತ್ತಲಿನ ನೂರಾರು ಕಿಲೋಮೀಟರ್‌ ವ್ಯಾಪ್ತಿಯಲ್ಲಿರುವ ಕಾಲು ಹಾದಿಯಲ್ಲಿ ಸುತ್ತುವ ವೀಕ್ಷಕ ಸಿಬ್ಬಂದಿ ಈ ಆ್ಯಪ್‌ ಬಳಸುತ್ತಾರೆ. ಇದರ ಮೂಲಕವೇ ಹಿರಿಯ ಅಧಿಕಾರಿಗಳಿಗೆ ಫೋಟೊ ರವಾನಿಸುವ ವ್ಯವಸ್ಥೆಯೂ ಇದರಲ್ಲಿದೆ. ಕಾಡಿನೊಳಗಿನ ಪ್ರತಿಯೊಂದು ಮಾಹಿತಿಯನ್ನೂ ಇದರ ಮೂಲಕವೇ ಪಡೆಯುತ್ತಾರೆ. ಅಧಿಕಾರಿಗಳ ನಿರ್ವಹಣೆಯೂ ಆ್ಯಪ್‌ನ ಮೂಲಕವೇ ಸಾಧ್ಯವಾಗುತ್ತಿದೆ.

ಸಿಸಿಟಿವಿ ಅಳವಡಿಕೆ
ಪ್ರಾಣಿಗಳು ಹೆಚ್ಚೆಚ್ಚು ಓಡಾಡುವ ಪ್ರದೇಶ ಸೇರಿದಂತೆ, ಕಾಡುಗಳ್ಳರು ಒಳನುಸುಳುವ ಸ್ಥಳಗಳಲ್ಲಿ ಸಿಸಿಟಿ ಅಳವಡಿಸಲಾಗುತ್ತದೆ. ಈ ಮೂಲಕ ಅಪರಾಧಕ್ಕೆ ಬ್ರೇಕ್‌ ಹಾಕುವುದು ಇಲಾಖೆಯ ಉದ್ದೇಶವಾಗಿದೆ. ಅಲ್ಲದೆ, ಪ್ರಾಣಿಗಳು ಯಾವ ದಿಕ್ಕಿನಿಂದ ಯಾವ ದಿಕ್ಕಿಗೆ ಸಂಚರಿಸುತ್ತಿವೆ ಎನ್ನುವ ಮಾಹಿತಿಯೂ ಸಿಸಿಟಿವಿಯ ಬಳಕೆಯಿಂದಾಗಿ ಅಧಿಕಾರಿಗಳಿಗೆ ಸಿಗಲಿದೆ. ಸಾಮಾನ್ಯವಾಗಿ ಪ್ರತಿ ಹತ್ತರಿಂದ ಹೈದಿನೈದು ದಿನಗಳಿಗೊಮ್ಮೆ ಸಿಸಿಟಿ ದೃಶ್ಯಾವಳಿಯನ್ನು ಸಂಗ್ರಹಿಸಿಕೊಳ್ಳಲಾಗುತ್ತದೆ.

ತಂತ್ರಜ್ಞಾನ ಬಳಕೆ ಕ್ರಾಂತಿಯಾಗಲಿ
– ಅರಣ್ಯ ಅಪರಾಧ ತಡೆಗೆ ಶೀಘ್ರ ಡ್ರೋಣ್‌ ಖರೀದಿ

 ಅರಣ್ಯ ಪ್ರದೇಶವನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳುವ ಹಾದಿಯಲ್ಲಿ ಸವಾಲುಗಳು ನೂರಾರು. ಅದರಲ್ಲೂ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ವ್ಯಾಪ್ತಿ ದೊಡ್ಡದಾಗಿರುವ ಕಾರಣ, ತಂತ್ರಜ್ಞಾನ ಬಳಕೆಗೆ ಇಲಾಖೆ ಪ್ರಾಶಸ್ತ್ಯ ನೀಡಬೇಕಿದೆ. ಸರ್ಕಾರ ಆದ್ಯತೆ ಮೇರೆಗೆ ಅನುದಾನ ನೀಡಿ ಕಾಡು, ವನ್ಯಜೀವಿಗಳ ಉಳಿವಿಗೆ ಮುಂದಾಗಬೇಕಿದೆ.
 ಅರಣ್ಯ ಇಲಾಖೆ ಇದೀಗ ಡ್ರೋಣ್‌ಗಳನ್ನು ಸದ್ಬಳಕೆ ಮಾಡಿಕೊಳ್ಳಲು ಹೊರಟಿದೆ. ಈಗಾಗಲೇ ಖಾಸಗಿಯವರ ನೆರವಿನಿಂದ ಕೆಲ ಸಂದರ್ಭಗಳಲ್ಲಿ ಪರೀûಾರ್ಥವಾಗಿ ಬಳಸಿಕೊಂಡು ಪ್ರಯೋಜನಕಾರಿ ಎನ್ನುವುದನ್ನು ಮನಗಂಡಿದೆ. ಯಾವ ಮಾದರಿಯ ಡ್ರೋಣ್‌ ಖರೀದಿಸಿದರೆ ಒಳ್ಳೆಯದು ಎನ್ನುವ ಹುಡುಕಾಟದಲ್ಲಿರುವ ಅಧಿಕಾರಿಗಳು, ರಾತ್ರಿಯೂ ಸುಲಭವಾಗಿ ಕ್ಯಾಪcರ್‌ ಮಾಡಿಕೊಳ್ಳುವ ಕ್ಯಾಮೆರಾ ಅಳವಡಿಕೆಗೆ ಅನುಕೂಲಕರವಾದ ಡ್ರೋಣ್‌ ಸೂಕ್ತ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ.

ಡ್ರೋನ್‌ ಬಳಕೆ ಎಲ್ಲೆಲ್ಲಿ? ಹೇಗೆ?
ಬೆಂಕಿಯಿಂದ ಕಾಡು ಹಾಗೂ ವನ್ಯಜೀವಿಗಳನ್ನು ರಕ್ಷಿಸಲು 700ಕ್ಕೂ ಹೆಚ್ಚುಮಂದಿ ಕಾಯಲು ಕಾಯುತ್ತಿದ್ದಾರೆ. 300ರಷ್ಟು ಇಲಾಖೆ ಸಿಬ್ಬಂದಿಗಳು, ರಾಜ್ಯದ ನಾನಾ ಭಾಗಗಳ 430ರಷ್ಟು ವಾಚರ್‌ಗಳು ಇಲಾಖೆ ಸಿಬ್ಬಂದಿಗಳೊಂದಿಗೆ ಕೈಜೋಡಿಸುತ್ತಿದ್ದಾರೆ. ಜತೆ ಜೊತೆಗೆ ಡ್ರೋನ್‌ ತಂತ್ರಜ್ಞಾನವನ್ನು ಬಳಸಿಕೊಳ್ಳುವುದರಿಂದ ಅಪರಾಧ ಕೃತ್ಯಗಳ ಮೇಲೆ ಹದ್ದಿನ ಕಣ್ಣಿಡಬಹುದು ಎನ್ನುವುದು ಇಲಾಖೆಯ ಲೆಕ್ಕಾಚಾರ.
– ಕಾಡಿಗೆ ಬೆಂಕಿ ಇಡುವವರ ಮೇಲೆ ಹದ್ದಿನಕಣ್ಣಿಡಲು ಸಾಧ್ಯ. ಬೆಂಕಿ ಹೊತ್ತಿಕೊಂಡಿರುವ ಸ್ಥಳ ಗುರುತಿಸಲು ಸುಲಭ.
– ಶಿಕಾರಿಗೆ ಹಾಗೂ ಕಳ್ಳತನಕ್ಕೆ ಸಂರಕ್ಷಿತ ಅರಣ್ಯ ಪ್ರದೇಶದೊಳಗೆ ನುಸುಳುವವರ ಹುಡುಕಾಟ ಸಾಧ್ಯ.
– ವನ್ಯಜೀವಿಗಳು ಅಥವಾ ಸಿಬ್ಬಂದಿ ಅಗೋಚರ ಸ್ಥಳದಲ್ಲಿ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದರೆ, ಆ ಸಂದರ್ಭಗಳಲ್ಲಿಯೂ ಬಳಸಿಕೊಳ್ಳಲು ಸಾಧ್ಯ.
– ಅರಣ್ಯ ಇಲಾಖೆ ಸಿಬ್ಬಂದಿಯ ಕಣ್ತಪ್ಪಿಸಿ ಅರಣ್ಯದೊಳಗೆ ನುಸುಳುವವರ ಪತ್ತೆ ಸಾಧ್ಯ.

ಡ್ರೋನ್‌ ವಿಶೇಷವಾಗಿ ಮುಂದಿನ ದಿನಗಳಲ್ಲಿ ಬೆಂಕಿಯಿಂದ ಕಾಡನ್ನು ರಕ್ಷಿ$ಸಲು ಉಪಯೋಗಿ. ಹೀಗಾಗಿ ರಿಯ ಅಧಿಕಾರಿಗಳ ಗಮನಕ್ಕೂ ತಂದಿದ್ದೇವೆ. ಕೆಲವೇ ದಿನದಲ್ಲಿ ಡ್ರೋಣ್‌ ಖರೀದಿ ಮತ್ತು ಬಳಕೆಯ ಕುರಿತು ನಿರ್ಧರಿಸುತ್ತೇವೆ.
– ಅಂಬಾಡಿ ಮಾಧವ್‌, ಅರಣ್ಯ ಸಂರಕ್ಷಣಾಧಿಕಾರಿ, ಕ್ಷೇತ್ರ ನಿರ್ದೇಶಕರು, ಬಂಡೀಪುರ

ಐಟಿ-ಬಿಟಿ ಒಲವು ಜಾಸ್ತಿ
ಗಮನಾರ್ಹ ಬೆಳವಣಿಗೆ ಏನೆಂದರೆ ರಾಜ್ಯದಲ್ಲಿ ಅರಣ್ಯ ಸಂರಕ್ಷಣೆ ಕಾರ್ಯದಲ್ಲಿ ಸಾರಾರು ಯುವಕ-ಯುವತಿಯರು ಯಾವುದೇ ಫ‌ಲಾಪೇಕ್ಷೆಗಳಿಲ್ಲದೇ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ಇದರಲ್ಲಿ ಬೆಂಗಳೂರು, ಮೈಸೂರು ಸೇರಿದಂತೆ ಬೇರೆ ಬೇರ ಭಾಗಗಳಲ್ಲಿ ಇರುವ ಐಟಿ-ಬಿಟಿ ಕ್ಷೇತ್ರದವರೇ ಜಾಸ್ತಿ ಇದ್ದು, ಇಲಾಖೆ ಸಿಬ್ಬಂದಿಗೆ ಅಗತ್ಯ ನೆರವು ಒದಗಿಸುತ್ತಿದ್ದಾರೆ. ಜೊತೆಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವ ಎನ್‌ಜಿಒಗಳೂ ಇವೆ. ಆದರೆ ಇದನ್ನೇ ದುರುಪಯೋಗ ಮಾಡಿಕೊಂಡು ವಾಣಿಜ್ಯೋದ್ಯಮಕ್ಕೆ ಮುಂದಾಗುವವರಿಗೂ ಕಡಿವಾಣ ಬೀಳಬೇಕಿದೆ.

ಗಣಪತಿ ಅಗ್ನಿಹೋತ್ರಿ

Advertisement

Udayavani is now on Telegram. Click here to join our channel and stay updated with the latest news.

Next