Advertisement

ಪ್ರಾಣಿ ಪಕ್ಷಿಗಳು ಮನುಷ್ಯನಂತೆ ಯೋಚಿಸುವುದಿಲ್ಲ, ಮಾತು ಬರುವುದಿಲ್ಲ, ತಮ್ಮ ನೋವು ಸಂಕಷ್ಟ ಹೇಳಿಕೊಳ್ಳಲು ಆಗುವುದಿಲ್ಲ. ಗಾಯ, ಅನಾರೋಗ್ಯ ಸಂಭವಿಸಿದರೆ, ಆಹಾರ ಸಿಗದೆ ಅಸಹಾಯಕ ಸ್ಥಿತಿಯಲ್ಲಿದ್ದರೆ ಯಾರೊಂದಿಗೂ ಹೇಳಿಕೊಳ್ಳಲಾಗಿದೇ ತಮ್ಮಲ್ಲೇ ನೋವು ಅನುಭವಿಸುತ್ತಾ ನರಳುತ್ತವೆ. ಇಂತಹ ಸಂತ್ರಸ್ತ ಪ್ರಾಣಿಗಳ ಆರೈಕೆ ಹಾಗೂ ಚಿಕಿತ್ಸೆ ಸೇವೆ ನೀಡುವ ಮಹತ್ಕಾರ್ಯದಲ್ಲಿ ಕೆಲವು ಸಂಘ ಸಂಸ್ಥೆಗಳು ತೊಡಗಿಸಿಕೊಂಡಿವೆ. ಅವುಗಳ ಪರಿಚಯ ಈ ವಾರದ ಸುದ್ದಿ ಸುತ್ತಾಟದಲ್ಲಿ…

Advertisement

ಈ ಭೂಮಿಯಲ್ಲಿ ಪ್ರತಿ ಜೀವಿಗೂ ಆರೋಗ್ಯಕರ ಪರಿಸರದಲ್ಲಿ ಬದುಕುವ ಹಕ್ಕಿದೆ. ಪ್ರಾಣಿ-ಪಕ್ಷಿಯನ್ನು ಆಸ್ತಿಯನ್ನಾಗಿ, ಮನರಂಜನೆಯಾಗಿ, ಮಾನವ ಬಳಸಿಕೊಳ್ಳುವುದು ಸರಿಯಲ್ಲ. ಪ್ರಾಣಿ ಗಳು ನೈಸರ್ಗಿಕ ಸಂಪನ್ಮೂಲಗಳಾಗಿದ್ದು, ಅವುಗಳನ್ನು ಸಂರಕ್ಷಿಸುವ ಜವಾಬ್ದಾರಿ ಎಲ್ಲರ ಕರ್ತವ್ಯ. ರಾಜಧಾನಿ ಬೆಂಗಳೂರಿನಲ್ಲಿ ಜಾಗತೀಕರಣ ಭರಾಟೆಯಲ್ಲಿ ಹಲವು ಪ್ರಾಣಿ ಪಕ್ಷಿಗಳು ಬೀದಿಗೆ ಬಿದ್ದಿವೆ. ಅತಿವೃಷ್ಟಿ, ಅನಾವೃಷ್ಟಿ, ಅಪಘಾತಕ್ಕೀಡಾಗಿ ಗಾಯಗೊಂಡು ಆನಾರೋಗ್ಯಕ್ಕೆ ಒಳಗಾಗಿ ನರಳುತ್ತಿವೆ. ಇಂಥ ಸಂತ್ರಸ್ತ ಪ್ರಾಣಿ ಪಕ್ಷಿಗಳಿಗೆ ಕೆಲವು ಸಂಘ ಸಂಸ್ಥೆ ಗಳು ಉಚಿತ ಆರೈಕೆ, ಚಿಕಿತ್ಸೆ ನೀಡುವ ಕಾರ್ಯದಲ್ಲಿ ತೊಡಗಿವೆ. ಒಂದು ಕರೆ ಮಾಡಿದರೆ ಸ್ಥಳಕ್ಕೆ ಧಾವಿಸಿ ಸಂತ್ರಸ್ತ ಪ್ರಾಣಿ ಪಕ್ಷಿಗಳನ್ನು ಕರೆದೊಯ್ದು ಚಿಕಿತ್ಸೆ ನೀಡಲಾಗುತ್ತಿದೆ. ಜತೆಗೆ ಸಾಕುವ ವ್ಯವಸ್ಥೆಯೂ ಇದೆ. ಸರ್ಕಾರದಿಂದ ಅನುದಾನ, ನೆರವು ಪಡೆ ಯದೇ ಜನರ ದೇಣಿಗೆ ಮೂಲಕವೇ ಸೇವಾ ಕಾರ್ಯ ನಡೆಯುತ್ತಿದೆ. ಪ್ರಾಣಿಗಳಿಗೆ ಅಗತ್ಯವಿದ್ದರೆ ಅತ್ಯಾಧುನಿಕ ಸೌಲಭ್ಯವುಳ್ಳ ಶಸ್ತ್ರಚಿಕಿತ್ಸೆಯನ್ನೂ ಸಂಪೂರ್ಣ ಉಚಿತವಾಗಿ ನೀಡುವಂತಹ ವ್ಯವಸ್ಥೆ ಇದೆ. ನಾಯಿ, ಬೆಕ್ಕು, ಕೋತಿ, ಪರಿವಾಳ, ಕೋಳಿ, ಬಿಡಾಡಿ ರಾಸುಗಳು, ಕುದುರೆ, ಮೊಲ, ಹಾವು, ಅಳಿಲು, ನರಿ, ಜಿಂಕೆ, ಗೂಬೆ, ಪಂಜಲು, ಕಾಡು ಪಾಪ, ಕೊಕ್ಕರೆ, ಗೋಸುಂಬೆ(ಉಸರವಳ್ಳಿ), ಅಮೆ ಸೇರಿ ದಾರಿ ತಪ್ಪಿ ಬಂದ ಪ್ರಾಣಿ ಪಕ್ಷಿಗಳ ಆರೈಕೆ, ಚಿಕಿತ್ಸೆ ನೀಡುವ ಸೇವಾ ಸಂಸ್ಥೆಗಳ ಕುರಿತ ಮಾಹಿತಿ ಇಲ್ಲಿದೆ.

ಪೀಪಲ್‌ ಫಾರ್‌ ಅನಿಮಲ್‌ : ಪೀಪಲ್‌ ಫಾರ್‌ ಅನಿಮಲ್‌ ಸಂಸ್ಥೆಯು 25 ವರ್ಷಗಳಿಂದ ಪ್ರಾಣಿಗಳ ಸಂರಕ್ಷಣೆ ಹಾಗೂ ಅತ್ಯಾಧುನಿಕ ಚಿಕಿತ್ಸೆ ಸೇವೆಯಲ್ಲಿ ತೊಡಗಿಸಿಕೊಂಡಿದೆ. ಇದುವರೆಗೂ 32 ಸಾವಿರ ಪ್ರಾಣಿ ಹಾಗೂ ಪಕ್ಷಿಗಳನ್ನು ಸಂರಕ್ಷಿಸಿದೆ. ಸಂಸ್ಥೆಯು 24/7 ರೀತಿ ಕಾರ್ಯನಿವìಹಿ ಸುತ್ತಿದೆ. ನಗರದಲ್ಲಿ ಯಾವುದೇ ಪ್ರಾಣಿ, ಪಕ್ಷಿಗಳಿಗೆ ಗಾಯ, ಅನಾರೋಗ್ಯ ಸಂಭವಿಸಿದರೆ ಈ ಸಂಸ್ಥೆಯ ಸಹಾಯವಾಣಿಗೆ ಯಾವುದೇ ಸಮಯದಲ್ಲೂ ಕರೆ ಮಾಡಿದರೆ ಆ್ಯಂಬುಲೆನ್ಸ್‌ ಮನೆ ಬಾಗಿಲಿಗೆ ಬರುತ್ತದೆ. ತಕ್ಷಣವೇ ತಮ್ಮ ಸಂಸ್ಥೆಯ ಕ್ಲಿನಿಕ್‌ಗೆ ಕರೆದೊಯ್ದು ಉಚಿತ ಚಿಕಿತ್ಸೆ ನೀಡಲಾಗುತ್ತದೆ. ಪ್ರಾಣಿಗಳಿಗೆ ಎಲ್ಲ ರೀತಿ ಶಸ್ತ್ರ ಚಿಕಿತ್ಸೆ, ಅಡ್ವಾನ್ಸ್‌ಡ್‌ ಚಿಕಿತ್ಸೆ ವ್ಯವಸ್ಥೆ ಇದೆ. ಸಂಪೂ ರ್ಣ ಗುಣವಾದ ಬಳಿಕ ಆ ಪ್ರಾಣಿಯನ್ನು ಮನೆಗೆ ಕರೆದೊಯ್ಯಬಹುದು. ಇದಕ್ಕಾಗಿ ಸಂಸ್ಥೆಯಲ್ಲಿ 3 ಆ್ಯಂಬುಲೆನ್ಸ್‌, 5 ಬೈಕ್‌ ಆ್ಯಂಬುಲೆನ್ಸ್‌ಗಳು ಇವೆ. ನಗರ ವ್ಯಾಪ್ತಿಯಲ್ಲಿ ಮರಗಳನ್ನು ಕತ್ತ ರಿಸುವಾಗ ಪಕ್ಷಿಗಳಿಗೆ ಗಾಯವಾದರೆ, ವಿದ್ಯುತ್‌ ಸ್ಪರ್ಶಿಸಿ ಕೋತಿ ಗಳು ಸ್ವಾಧೀನ ಕಳೆದುಕೊಂಡರೆ, ಬೇರೆ ಯಾವುದೇ ರೀತಿಯ ತೊಂದರೆಯಾದಲ್ಲಿ ಚಿಕಿತ್ಸೆ ನೀಡಲಾಗುತ್ತದೆ.

ಅತ್ಯಾಧುನಿಕ ಚಿಕಿತ್ಸೆ ಸೇವೆ: ಈ ಸಂಸ್ಥೆಯ ಕ್ಲಿನಿಕ್‌ನಲ್ಲಿ ಅತ್ಯಾಧು ನಿಕ ಚಿಕಿತ್ಸೆ ಸೇವೆ ಲಭ್ಯವಿದೆ. ಡಿಜಿಟಲ್‌ ಎಕ್ಸ್‌ರೇ, ಬ್ಲಿಡ್‌ ಸೌಂಡ್ಸ್‌, ಫಿಸಿಯೋಥೆರಪಿ, ಆಕ್ಯುಪಂಚರ್‌, ಫಿಸಿಯೋ ಲೇಸರ್‌, ಟೈಟಾನಿಯಮ್‌ ಪ್ಲೇಟ್‌ ಅಳವಡಿಕೆ ಮತ್ತಿತರ ಸುಧಾರಿತ ಶಸ್ತ್ರಚಿಕಿತ್ಸೆ ಸೇವೆ ಲಭ್ಯವಿದೆ. ಈ ಎಲ್ಲ ಚಿಕಿತ್ಸೆ ಕೂಡ ಸಂಪೂ ರ್ಣ ಉಚಿತವಾಗಿದೆ. ಈ ಸಂಸ್ಥೆಯು 6 ಎಕರೆ ಪ್ರದೇಶದಲ್ಲಿದ್ದು, ಮೂವರು ಪಶುವೈದ್ಯರು ಸೇರಿದಂತೆ ಹಲವು ಸಿಬ್ಬಂದಿಗಳಿದ್ದಾರೆ. ಪ್ರಾಣಿಗಳ ಚಿಕಿತ್ಸೆ ಹಾಗೂ ನಿರ್ವಹಣೆಗೆ ತಿಂಗಳಿಗೆ 10-12 ಲಕ್ಷ ರೂ.ವ್ಯಯಿಸಲಾಗುತ್ತಿದೆ ಎನ್ನುತ್ತಾರೆ ಪೀಪಲ್‌ ಫಾರ್‌ ಅನಿಮಲ್‌ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ, ಮುಖ್ಯ ಪಶುವೈದ್ಯ ಜ. ಡಾ.ನವಾಜ್‌ ಷರೀಫ್.

 ಸಂಸ್ಥೆ ವಿಳಾಸ: ನಂ.67, ಉತ್ತರಹಳ್ಳಿ ಮುಖ್ಯರಸ್ತೆ, ಕೆಂಗೇರಿ, ಸೇವೆ ಸಮಯ: ಸೋಮವಾರದಿಂದ ಶನಿವಾರ (24×7) ಸಹಾಯವಾಣಿ: 08028612767, 9900025370

Advertisement

ಕೃಪಾ ಪ್ರಾಣಿ ಆಸ್ಪತ್ರೆ ಹಾಗೂ ಆಶ್ರಯ ತಾಣ : ಕೃಪಾ ಕೇಂದ್ರ ನಗರ ವ್ಯಾಪ್ತಿ 13 ವರ್ಷಗಳಿಂದ ಸಾಕುಪ್ರಾಣಿ ಹಾಗೂ ಬೀದಿನಾಯಿ, ಬಿಡಾಡಿ ರಾಸುಗಳ ಸಂರಕ್ಷಣೆಯಲ್ಲಿ ತೊಡಗಿದೆ. ಪ್ರಸ್ತುತ 460 ನಾಯಿ, 60 ಬೆಕ್ಕು, 20 ಮೊಲ, 35 ಹಸು ಎಮ್ಮೆಗಳು ಚಿಕಿತ್ಸೆ ಹಾಗೂ ಆರೈಕೆಯಲ್ಲಿವೆ. ನಗರದಲ್ಲಿ ಯಾವುದೇ ಪ್ರಾಣಿ ಗಾಯ ಅಥವಾ ಅನಾರೋಗ್ಯಕ್ಕೆ ಒಳಪಟ್ಟು, ಈ ಕೇಂದ್ರವನ್ನು ಸಂರ್ಕಿಸಿದರೆ ಸ್ವಯಂ ಸೇವಕರ ತಂಡ ಬಂದು ಆ ಪ್ರಾಣಿಯನ್ನು ಕರೆದೊಯ್ದು ಚಿಕಿತ್ಸೆ ನೀಡು ತ್ತದೆ. ಗುಣಮುಖವಾದ ಬಳಿಕ ಆ ಪ್ರಾಣಿಯ ಹೊಣೆಹೊತ್ತು ಸಾಕು ವವರಿಗೆ ನೀಡಲಾಗುವುದು. ಇಲ್ಲದಿದ್ದರೆ ಕೇಂದ್ರವೇ ಆರೈಕೆ ಮಾಡುತ್ತದೆ. ಪ್ರತಿದಿನ ಸರಾಸರಿ ಮೂರ್‍ನಾಲ್ಕು ಪ್ರಾಣಿಗಳನ್ನು ಈ ಕೇಂದ್ರಕ್ಕೆ ತಂದು ಬಿಡಲಾಗುತ್ತಿದೆ. 2 ಎಕರೆ ಪ್ರದೇಶದಲ್ಲಿರುವ ಈ ಸಂಸ್ಥೆಯಲ್ಲಿ ವೈದ್ಯರು ಸೇರಿದಂತೆ 23 ಮಂದಿ ಕಾರ್ಮಿಕರಿದ್ದಾರೆ. ಚಂಪಾಲ್‌ ಪುಥಾಲಿ, ಮಧು ಜೈನ್‌, ರಾಜೀವ್‌ ಜೈನ್‌ ಈ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. ಪ್ರಾಣಿಗಳ ಚಿಕಿತ್ಸೆ ಆರೈಕೆಗಾಗಿ ಮಾಸಿಕ 8-10 ಲಕ್ಷ ರೂ. ವ್ಯಯಿಸಲಾಗುತ್ತಿದೆ. ಪ್ರಾಣಿ ಚಿಕಿತ್ಸಾಲಯ ತೆರೆಯಲು ಉದ್ದೇಶಿಸಿದ್ದು, ಕಾಮಗಾರಿ ನಡೆಯುತ್ತಿದೆ.

ಸಂಸ್ಥೆ ವಿಳಾಸ: 16, 7ನೇ ಮುಖ್ಯ ರಸ್ತೆ, ಸುಭಾಷ್‌ನಗರ, ಕೆಂಗೇರಿ ಸೆಟಲೈಟ್‌ ಟೌನ್‌ ಸೇವೆ ಸಮಯ: ಸೋಮವಾರದಿಂದ ಶನಿವಾರ (ಬೆಳಗ್ಗೆ 11.30ರಿಂದ ಸಂಜೆ 4.00) ಸಹಾಯವಾಣಿ: 0988056390

ಎಎಲ್‌ಎಐನಿಂದ ಶ್ವಾನಗಳ ರಕ್ಷಣೆ : 5 ವರ್ಷಗಳ ಹಿಂದೆ ಒಂದು ನಾಯಿ ಸಂರಕ್ಷಣೆಯಿಂದ ಆರಂಭವಾದ ಈ ಎಎಲ್‌ಎಐ ಸಂಸ್ಥೆಯು ಸದ್ಯ 350 ನಾಯಿಗಳು, ಹಸುಗಳು, ಕುದುರೆ, ಮೇಕೆ ಬಾತುಕೋಳಿಗಳನ್ನು ಆರೈಕೆ ಮಾಡುತ್ತಿದೆ. 2 ಆ್ಯಂಬುಲೆನ್ಸ್‌ ಹೊಂದಿದ್ದು, ತುರ್ತು ಪರಿಸ್ಥಿತಿಯಲ್ಲಿ ಸಂತ್ರಸ್ತ ಪ್ರಾಣಿಯನ್ನು ಸಂಸ್ಥೆಗೆ ಕರೆತಂದು ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಸ್ಥೆ 2 ಕೇಂದ್ರಗಳನ್ನು ಹೊಂದಿದೆ. 2 ಎಕರೆ ಪ್ರದೇಶದಲ್ಲಿರುವ ಒಂದು ಕೇಂದ್ರ ದಲ್ಲಿ ವಯಸ್ಸಾದ ಪ್ರಾಣಿಗಳನ್ನು ಜೀವಿತಾವಧಿ ತನಕ ನೋಡಿಕೊಳ್ಳಲಾಗುತ್ತಿದೆ. ಕಾಲು ಎಕರೆ ಜಾಗದಲ್ಲಿರುವ ಮತ್ತೂಂದು ಕೇಂದ್ರದಲ್ಲಿ ಅನಾರೋಗ್ಯಕ್ಕೆ ಒಳಗಾದ ಸಾಕು ಪ್ರಾಣಿಗಳ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರು ಸೇರಿ 26 ಮಂದಿ ಇದ್ದಾರೆ. ನಿರ್ವಹಣೆಗೆ ಪ್ರತಿ ತಿಂಗಳು 7-8 ಲಕ್ಷ ರೂ. ವ್ಯಯಿಸಲಾಗುತ್ತಿದೆ. ಸರ್ಕಾರದಿಂದ ಯಾವುದೇ ನೆರವಿಲ್ಲ. ದೇಣಿಯಿಂದ ನಿರ್ವಹಣೆಯಾಗುತ್ತಿದೆ ಎನ್ನುತ್ತಾರೆ ಸಂಸ್ಥೆಯ ಸಜೇಶ್‌.

ಸಂಸ್ಥೆ ವಿಳಾಸ: ಮಿಟಿಗಾನಹಳ್ಳಿ, ಕಾಡುಸೊನ್ನಪ್ಪನಹಳ್ಳಿ ಸೇವೆ ಸಮಯ: ಸೋಮವಾರದಿಂದ- ಶನಿವಾರ ಸಹಾಯವಾಣಿ: 09739288282

ಕರುಣ ಪ್ರಾಣಿ ಆಶ್ರಯ ಧಾಮ : ಹೆಬ್ಬಾಳದಲ್ಲಿ 1916ರಲ್ಲಿ ಬೆಂಗಳೂರು ಸೊಸೈಟಿ ಫಾರ್‌ ದಿ ಪ್ರಿವೆನÒನ್‌ ಆಫ್ ಕ್ರೂಯಲ್ಟಿ ಟು ಅನಿಮಲ್‌ (ಬಿಎಸ್‌ಪಿಸಿಎ) ಕೇಂದ್ರವನ್ನು ಸ್ಥಾಪಿಸಲಾಯಿತು. ಬಳಿಕ 1979ರಲ್ಲಿ ಪ್ರಾಣಿ ಆಶ್ರಯ ತಾಣ ತೆರೆಯಲಾಯಿತು. ಇದು 2001ರಲ್ಲಿ ಕರುಣ ಪ್ರಾಣಿ ಆಶ್ರಯ ಧಾಮವಾಗಿ ಕಾರ್ಯನಿರ್ವಹಿಸುತ್ತಿದೆ. ಪ್ರಸ್ತುತ ಇಲ್ಲಿ ನಾಯಿ, ಬೆಕ್ಕು, ಅಳಿಲು, ಮೊಲ, ಎತ್ತು, ಹಸು, ಕುರಿ, ಟರ್ಕಿ ಕೋಳಿ, ಪಾರಿವಾಳ ಸೇರಿದಂತೆ 490 ಪ್ರಾಣಿಗಳು ಆರೈಕೆ ಯಲ್ಲಿವೆ. ನಗರ ವ್ಯಾಪ್ತಿಯಲ್ಲಿ ಸಾಕು ಪ್ರಾಣಿಗಳು, ಪಕ್ಷಿಗಳ ಅನಾರೋಗ್ಯ, ಗಾಯಗಳಾಗಿ ಕರೆದು ತಂದರೆ ಉಚಿತ ಚಿಕಿತ್ಸೆ ನೀಡಲಾಗುವುದು. ಪೊಲೀಸ್‌ ಇಲಾಖೆಯ ನಿವೃತ್ತ ಶ್ವಾನಗಳನ್ನು ಇಲ್ಲಿಗೆ ತಂದು ಬಿಡಲಾಗುತ್ತಿದೆ. ಜೊತೆಗೆ ಕೋಳಿ ಕಾಳಗ, ಜೂಜಾಟಕ್ಕೆ ಪಣಕ್ಕಿಟ್ಟ ಪ್ರಾಣಿಗಳನ್ನು ವಶಕ್ಕೆ ಪಡೆದ ಬಳಿಕ ಈ ಕೇಂದ್ರದಲ್ಲಿ ಸಾಕಲಾಗುವುದು. ಆಗಾಗ ಪ್ರಾಣಿಗಳ ತಪಾಸಣೆ ಶಿಬಿರ ಆಯೋಜಿಸಿ ರೋಗ ನಿರೋಧಕ ಚುಚ್ಚು ಮದ್ದು ನೀಡಲಾಗುವುದು. ಸಾರ್ವಜನಿಕ ದೇಣಿಗೆಯಿಂದ ಪ್ರಾಣಿಗಳ ಚಿಕಿತ್ಸೆ, ಆರೈಕೆ ನಡೆಯುತ್ತಿದೆ.

ಸಂಸ್ಥೆ ವಿಳಾಸ: ಪಶುವೈದ್ಯ ಶಿಕ್ಷಣ ಕಾಲೇಜು ಕ್ಯಾಂಪಸ್‌, ಹೆಬ್ಬಾಳ ಸೇವೆ ಸಮಯ: ಸೋಮವಾರದಿಂದ ಶನಿವಾರ (ಬೆಳಗ್ಗೆ 9.30ರಿಂದ ಸಂಜೆ 4.30) ಸಹಾಯವಾಣಿ: 08023411181

ಚಾರ್ಲಿಸ್‌ ಅನಿಮಲ್‌ ಸೆಂಟರ್‌ : ಬೆಂಗಳೂರು ನಗರದಲ್ಲಿ ಸಾಕು ಪ್ರಾಣಿಗಳ ಚಿಕಿತ್ಸೆ ಹಾಗೂ ಆರೈಕೆಯ ಧ್ಯೇಯ ದೊಂದಿಗೆ ಚಾರ್ಲಿಸ್‌ ಅನಿಮಲ್‌ ಸೆಂಟರ್‌ ತೆರೆಯಲಾಗಿದೆ. ಸುಸಜ್ಜಿತ 3 ಆ್ಯಂಬು ಲೆನ್ಸ್‌, ಶಸ್ತ್ರತಜ್ಞ ವೈದ್ಯರ ತಂಡವನ್ನು ಹೊಂದಿದೆ. ನಗರ ವ್ಯಾಪ್ತಿಯಲ್ಲಿ ನಾಯಿ, ಬೆಕ್ಕು ಕುರಿ ಕೋಳಿ ಸೇರಿದಂತೆ ಯಾವುದೇ ಸಾಕುಪ್ರಾಣಿಗಳು ಅನಾರೋಗ್ಯಕ್ಕೆ ಒಳಗಾಗಿದ್ದರೆ ಈ ಕೇಂದ್ರಕ್ಕೆ ಕರೆ ಮಾಡಿದರೆ ತಕ್ಷಣವೇ ಆ್ಯಂಬುಲೆನ್ಸ್‌ ಬರಲಿದೆ. ಚಿಕಿತ್ಸೆ ಬಳಿಕ ಆ ಪ್ರಾಣಿಯನ್ನು ಮನೆಗೆ ಕರೆದೊಯ್ಯ ಬಹುದು. ಸದ್ಯ ಈ ಸಂಸ್ಥೆಯ ಕ್ಲಿನಿಕ್‌ನಲ್ಲಿ 180ರಿಂದ 200 ನಾಯಿಗಳು ಚಿಕಿತ್ಸೆ ಪಡೆಯುತ್ತಿವೆ. ಕೋಳಿ, ಬಾತುಕೋಳಿ, ಪಾರಿವಾಳ, ಕುರಿ ಮೇಕೆಗಳೂ ಆರೈಕೆಯಲ್ಲಿವೆ. ಗುತ್ತಿಗೆ ಪಡೆದಿರುವ ಅರ್ಧ ಎಕರೆ ಪ್ರದೇಶದಲ್ಲಿ ಈ ಕೇಂದ್ರವನ್ನು ಸುಧಾ ನಾರಾಯಣ್‌ 2013ರಲ್ಲಿ ಸ್ಥಾಪಿಸಿದ್ದರು. ಇವರು ಸದ್ಯ ಇದರ ಹೊಣೆ ಹೊತ್ತಿದ್ದಾರೆ. ಪ್ರತಿ ತಿಂಗಳು 20-30 ಲಕ್ಷ ರೂ. ನಿರ್ವಹಣೆ ವೆಚ್ಚ ಭರಿಸುತ್ತಿದ್ದು, ದೇಣಿಗೆ ಹಣದಿಂದಲೇ ಸೆಂಟರ್‌ ನಡೆಯುತ್ತಿದೆ.

ಕೊಹ್ಲಿ ಭೇಟಿ: ಭಾರತದ ಕ್ರಿಕೆಟ್‌ ತಾರೆ ವಿರಾಟ್‌ ಕೊಹ್ಲಿ ಬೆಂಗಳೂರಿಗೆ ಆಗಮಿಸಿದ್ದಾಗ ಚಾರ್ಲಿಸ್‌ ಅನಿಮಲ್‌ ಸೆಂಟರ್‌ಗೆ ಭೇಟಿ ನೀಡಿ, 15 ನಾಯಿ ದತ್ತು ಸ್ವೀಕರಿಸಿದ್ದರು.

ಸಂಸ್ಥೆ ವಿಳಾಸ: ಸರ್ವೆ ನಂ. 124/1, ಮಿಟಿಗಾನಹಳ್ಳಿ ಕ್ರಾಸ್‌, ಕೋಗಿಲು, ರೇವಾ ಕಾಲೇಜು ಸಮೀಪ, ಯಲಹಂಕ ಸೇವೆ ಸಮಯ: ಸೋಮ-ಶನಿವಾರ (ಬೆಳಗ್ಗೆ 11-ಸಂಜೆ 4), ಭಾನುವಾರ (ಬೆಳಗ್ಗೆ 11- ಮಧ್ಯಾಹ್ನ 3)- ಸಹಾಯವಾಣಿ: 9035999372

ಪಾರಿವಾಳ ಆಸ್ಪತ್ರೆ, ಆರೈಕೆ ಕೇಂದ್ರ : 30 ವರ್ಷಗಳಿಂದ ಶ್ರೀ ಶಂಕೇಶ್ವರ ಪಾರ್ಶ್ವನಾಥ ಜೈನ್‌ ಕಬೂತರ್‌ ದಾನ ಸೇವಾ ಸಮಿತಿ ಮೂಲಕ ಪಾರಿವಾಳನ್ನು ಸಂರಕ್ಷಿಸಲಾಗುತ್ತಿದೆ. ರಾಜಾಜಿನಗರದಲ್ಲಿ 4 ವರ್ಷ ಹಿಂದೆ ಪಾರಿವಾಳ ಆಸ್ಪತ್ರೆ ಸ್ಥಾಪಿಸಲಾಗಿದ್ದು, ನಿತ್ಯ 30-40 ಕಾಯಿಲೆ ಇರುವ ಪಾರಿವಾಳಗಳಿಗೆ ಚಿಕಿತ್ಸೆ ನೀಡಲಾಗು ತ್ತಿದೆ. ಗುಣಮುಖವಾದ ಬಳಿಕ ಹಾರಿ ಬಡಲಾಗುತ್ತಿದೆ. ಸದ್ಯ ಈ ಕ್ಲಿನಿಕ್‌ನಲ್ಲಿ 800 ಪಾರಿವಾಳಗಳು ಇವೆ. ನಗರ ವ್ಯಾಪ್ತಿಯಲ್ಲಿ ಪರಿವಾಳಗಳಿಗೆ ಗಾಯವಾಗಿ ದ್ದರೆ, ಹಾರಲು ಸಾಧ್ಯವಾಗದಿ ದ್ದರೆ ಈ ಕೇಂದ್ರಕ್ಕೆ ಅಂತಹ ಪಕ್ಷಿಗಳನ್ನು ತಂದು ಬಿಟ್ಟರೆ ಉಚಿತ ಚಿಕಿತ್ಸೆ ನೀಡಲಾಗುವುದು.

ಪಾರಿವಳ ದಾಸೋಹ: ಸಂಸ್ಥೆಯಿಂದ ಪರಿವಾಳಗಳಿಗೆ ದಾಸೋಹ ಸೇವೆ ಮಾಡಲಾಗುತ್ತಿದ್ದು, ನಿತ್ಯ 12-13 ಮೂಟೆ ಜೋಳವನ್ನು ಪಕ್ಷಿಗಳಿಗೆ ಆಹಾರವಾಗಿ ನೀಡಲಾಗುತ್ತಿದೆ. ನೇತಾಜಿ ಪಾರ್ಕ್‌, ಮಂಜುನಾಥ್‌ ನಗರ ಪಾರ್ಕ್‌, ಕಬ್ಬನ್‌ ಪಾರ್ಕ್‌, ಫ್ರೀಡಂ ಪಾರ್ಕ್‌ ಸೇರಿದಂತೆ ಪರಿವಾಳು ಹೆಚ್ಚು ಇರುವ ಸ್ಥಳಗಳಲ್ಲಿ ಜೋಳವನ್ನು ಹಾಕಲಾಗುತ್ತಿದೆ ಎನ್ನುತ್ತಾರೆ ಖಜಾಂಚಿ ವಸಂತ ರಾಜ್‌ ರಾಂಕ.

ಆಸ್ಪತ್ರೆ ವಿಳಾಸ: 355, 57ನೇ ಡಿ.ಕ್ರಾಸ್‌ ರಸ್ತೆ, 3ನೇ ಬ್ಲಾಕ್‌, ರಾಜಾಜಿನಗರ ಸೇವಾ ಸಮಯ: ಪ್ರತಿದಿನ ಲಭ್ಯ (ಬೆಳಗ್ಗೆ 6ರಿಂದ ಸಂಜೆ 5ರ ತನಕ) ಸಹಾಯವಾಣಿ: 9845221309

ಸೇವ್‌ ಅನಿಮಲ್‌ ಇಂಡಿಯಾ : ಸಾಕು ಪ್ರಾಣಿಗಳ ಬಗ್ಗೆ ಕಾಳಜಿ ಹೊಂದಿರುವ ಈ ಸಂಸ್ಥೆಯಲ್ಲಿ ಸುಮಾರು 180 ನಾಯಿ, ಬೆಕ್ಕು, ಹಸು, ಕರುಗಳನ್ನು ಆರೈಕೆ ಮಾಡಲಾಗುತ್ತಿದೆ. ರೈತರು ಕಡಿಮೆ ಹಣಕ್ಕೆ ಮಾರುವ ಹಸುಗಳ ಗಂಡು ಕರು ಗಳನ್ನು ಜೀವಿತಾವಧಿ ತನಕ ಸಾಕಲಾಗುತ್ತಿದೆ. ವೃದ್ಧ ರಾಸುಗಳನ್ನೂ ಸಾಕಲಾಗುತ್ತಿದೆ. ಹೆಸರುಘಟ್ಟ ಬಳಿ ಒಂದು ಕಾಲು ಎಕರೆಯಲ್ಲಿ ಒಂದು ಶೆಡ್‌ ನಿರ್ಮಿಸಲಾಗಿದೆ. ಉಳಿದ ಜಾಗದಲ್ಲಿ ಮೇವು, ತರಕಾರಿ ಬೆಳೆ ಬೆಳೆಯಲಾಗುತ್ತಿದೆ. ಸಾಕುಪ್ರಾಣಿಗಳನ್ನ ದತ್ತು ಪಡೆಯಲಾಗುತ್ತಿದೆ. ಸೂರ್ಯ ಪ್ರತಾಪ್‌ ಸಿಂಗ್‌ ಹಾಗೂ ಅಂಜೂ ಸಿಂಗ್‌ ದಂಪತಿ ಈ ಸಂಸ್ಥೆ ನಿರ್ವಹಣೆ ಮಾಡುತ್ತಿದ್ದು, ಮಾಸಿಕ 1.5- 2 ಲಕ್ಷ ರೂ. ಸ್ವಂತ ಹಣದಿಂದ ವ್ಯಯಿಸಿ ಸಂಸ್ಥೆ ನಿರ್ವಹಣೆ ಮಾಡಲಾಗುತ್ತಿದೆ.

ಸಂಸ್ಥೆ ವಿಳಾಸ: ಹುನಸಾಮರನಹಳ್ಳಿಕೆರೆ ಸಮೀಪ, ಯಲಹಂಕ ಸೇವಾ ಸಮಯ: ಸೋಮವಾರ- ಶನಿವಾರ (ಬೆಳಗ್ಗೆ 8- ಸಂಜೆ 6ರ ತನಕ) ಸಹಾಯವಾಣಿ: 09886535565

 

 – ಎಂ.ಆರ್‌.ನಿರಂಜನ್‌

Advertisement

Udayavani is now on Telegram. Click here to join our channel and stay updated with the latest news.

Next