“ಕೋಪದ ಕೈಗೆ ಬುದ್ಧಿ ಕೊಡಬೇಡ. ಬದಲಿಗೆ, ಬುದ್ಧಿಯ ಕೈಗೆ ಕೋಪವನ್ನು ಕೊಡು’ ಎನ್ನುವ ಮಾತಿದೆ. ಈ ಮಾತು ಅಕ್ಷರಶಃ ಸತ್ಯ. ಏಕೆಂದರೆ, ಕೋಪ ಬಂದಾಗ ನಾವು ಯಾವ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಊಹಿಸುವುದೂ ಅಸಾಧ್ಯ. ಅನಿವಾರ್ಯ ಸಮಯ, ಸಂದರ್ಭ, ಸನ್ನಿವೇಶಗಳು ಮನುಷ್ಯನಿಗೆ ಸಿಟ್ಟು ತರಿಸುತ್ತವೆ. ಆಗ, ಎದುರಿಗೆ ಯಾರಿದ್ದಾರೆ ಎಂಬುದನ್ನು ಗಮನಿಸದೆ ಮನುಷ್ಯ ಕೂಗಾಡಿಬಿಡುತ್ತಾನೆ.
ಇದರಿಂದ ಅದೆಷ್ಟೋ ಸಂಬಂಧಗಳು, ಬಾಂಧವ್ಯಗಳು ಕಡಿದು ಹೋಗುತ್ತವೆ. ಹೀಗಾಗಿ, ಸಿಟ್ಟಿಗೆದ್ದ ಸಂದರ್ಭದಲ್ಲಿ ಏನು ಮಾಡಬೇಕು, ಏನು ಮಾಡಬಾರದು ಎಂಬ ವಿವೇಚನೆ ಹೊಂದಿರಬೇಕು. ಕೋಪ ಬಂದಾಗ ಮೆದುಳಿನಲ್ಲಿ ಆಡ್ರಿ ನಲಿನ್ ಹಾಗೂ ನಾನ್ ಆಡ್ರಿನ ಲಿನ್ ಎಂಬ ಹಾರ್ಮೋನ್ ಹೆಚ್ಚಾಗಿ ಸ್ರವಿಸುತ್ತದೆ. ಇದರಿಂದ ಹೃದಯದ ಬಡಿತ ಹಾಗೂ ರಕ್ತದ ಒತ್ತಡವೂ ಅಧಿಕವಾಗುತ್ತದೆ.
ಈ ಹಾರ್ಮೋನ್ ಸ್ರವಿಕೆಯು ಕ್ಷಣಿಕವಾದರೂ, ಆಗಿಂದಾಗ್ಗೆ ಕೋಪ ಮಾಡಿಕೊಳ್ಳು ವುದರಿಂದ ದೈಹಿಕ, ಮಾನಸಿಕ ಸ್ಥಿತಿಗತಿಯ ಮೇಲೆ ಗಾಢ ಪರಿಣಾಮ ಬೀರುತ್ತದೆ. ಕೋಪ ಬಂದಾಗ, ತಕ್ಷಣವೇ ಆ ಸ್ಥಳದಿಂದ ಬೇರೆಡೆಗೆ ಹೋಗಿ, ಕಣ್ಣು ಮುಚ್ಚಿ ಸುಮ್ಮನೆ ಕುಳಿತುಕೊಳ್ಳಿ. ನಿಧಾನಕ್ಕೆ ಉಸಿರಾಡಿ. ಆ ಸಂದರ್ಭದಲ್ಲಿ ಮಾತು ಕಡಿಮೆ ಮಾಡಬೇಕು.
ಯಾವುದೇ ನಿರ್ಧಾರವನ್ನೂ ಕೈಗೊಳ್ಳಬಾರದು. ಕೆಟ್ಟ ಭಾಷೆಯನ್ನು ಯಾವುದೇ ಕಾರಣಕ್ಕೂ ಬಳಸಬಾರದು. ಒಂದೇ ಒಂದು ಕೆಟ್ಟ ಮಾತಿಂದ ಒಂದು ಸಂಬಂಧವೇ ಹಾಳಾಗಬಹುದು. ಆ ಬಾಂಧವ್ಯವನ್ನು ಮತ್ತೆ ಸರಿ ಮಾಡಿಕೊಳ್ಳುವುದು ಬಹಳ ಕಷ್ಟ. ಹಾಗಾಗಿ, ಸಿಟ್ಟು ಬಂದಾಗ ಸುಮ್ಮನೇ ಕೂತುಬಿಡುವುದು ಜಾಣರ ಲಕ್ಷಣ. ಕೋಪ ಶಮನಗೊಂಡ ನಂತರ- ಕೋಪ ಏಕೆ ಬಂತು,
ಆಗ ಏನೇ ನಾಯ್ತು, ಮನಸ್ಸಿನಲ್ಲಿ ಏನೇನು ವಿಚಾರ ಮೂಡಿ ಬಂತು ಎಂಬುದನ್ನೆಲ್ಲಾ ಒಂದು ಡೈರಿಯಲ್ಲಿ ಬರೆದು ಇಡಿ. ಮುಂದೆ ಯಾವತ್ತೋ ಒಮ್ಮೆ ಅದನ್ನು ನೋಡಿದಾಗ, ಹಳೆಯ ದಿನದ ನೆನಪಾಗಿ ಖುಷಿಯಾಗಬಹುದು, ನಗುವೂ ಬರಬಹುದು. ಕೋಪವೆನ್ನುವುದು ಮನುಷ್ಯನ ಬಹುದೊಡ್ಡ ಶತ್ರು. ಅದು ಮನುಷ್ಯನಿಗೆ ಕೆಡುಕನ್ನುಂಟು ಮಾಡುವುದೇ ವಿನಃ ಒಳಿತನ್ನಂತೂ ಮಾಡಲಾರದು.