ಕಲಬುರಗಿ: ಸಮಾಜದಲ್ಲಿಂದು ಅನ್ಯಾಯ, ಶೋಷಣೆ ಹೆಚ್ಚಳವಾಗುತ್ತಿದೆ. ಹೀಗಾಗಿ ಮಕ್ಕಳ ಕೈಯಲ್ಲಿ ಪೆನ್ನು ಕೊಡುವ ಬದಲು ತಲ್ವಾರ್ ಕೊಡಿ ಎಂಬುದಾಗಿ ಪ್ರಚೋದನಾಕಾರಿ ಭಾಷಣ ಮಾಡಿರುವ ಆರೋಪದ ಮೇರೆಗೆ ಜಿಲ್ಲೆಯ ಅಫಜಲಪುರ ತಾಲೂಕಿನ ಮಾಶ್ಯಾಳ ಸ್ವಾಮೀಜಿ ವಿರುದ್ದ ಎಫ್‌ಐಆರ್ ದಾಖಲಾಗಿದೆ.
ಮಾಶ್ಯಾಳದ ಶ್ರೀ ಮರುಳಾರಾಧ್ಯ ಶಿವಾಚಾರ್ಯರ ವಿರುದ್ದ ಎಫ್‌ಐಆರ್ ದಾಖಲಾಗಿದ್ದು, ಪ್ರಚೋದನಕಾರಿ ಭಾಷಣ ಹಿನ್ನೆಲೆ ಅಫಜಲಪುರ ಪೊಲೀಸರಿಂದ ಸ್ವಯಂ ಪ್ರೇರಿತ ದೂರು ದಾಖಲಾಗಿದೆ. ಪ್ರಚೋದನಕಾರಿ ಮಾತು, ಕಾನೂನು ಸುವ್ಯವಸ್ಥೆಗೆ ಭಂಗ ತರುವ ಭಾಷಣ ಹಿನ್ನೆಲೆ ದೂರು ದಾಖಲು ಮಾಡಿಕೊಳ್ಳಲಾಗಿದೆ ಎಂದು ತಿಳಿಸಲಾಗಿದೆ.
ಅಫಜಲಪುರ ಪಟ್ಟಣದಲ್ಲಿ ವಕ್ಫ್ ಹಠಾವೋ ದೇಶ ಬಚಾವೋ ಬೃಹತ್ ಹೋರಾಟದಲ್ಲಿ ಮಾಶಾಳದ ಸ್ವಾಮೀಜಿ ಪಾಲ್ಗೊಂಡು, ವಕ್ಫ್ ಹೆಸರಿನಲ್ಲಿ ಮಠ- ಮಂದಿರಗಳ ಆಸ್ತಿ ಕಬಳಿಕೆ ಹುನ್ನಾರ ನಡೆದಿದೆ. ಹೀಗೆ ನಡೆದರೆ ನಮ್ಮನ್ನು ನಾವು ರಕ್ಷಿಸಬೇಕಾದರೆ ಮಕ್ಕಳ ಕೈಯಲ್ಲಿ ಪೆನ್ನು ಬದಲು ತಲ್ವಾರ್ ನೀಡಿ ಎಂದು ಪ್ರಚೋದನಕಾರಿಯಾಗಿ ಭಾಷಣ ಮಾಡಿದ್ದರು
ಭಾಷಣ ಮಾಡುವ ಸಂದರ್ಭದಲ್ಲಿ, ನಮ್ಮವರ ಮೇಲೆ ಹೀಗೆ ಆದರೆ ನಮ್ಮ ದೇಶಕ್ಕೆ ಉಳಿಗಾಲ ಇಲ್ಲ. ಇನ್ಮುಂದೆ ಮಕ್ಕಳ ಕೈಯಲ್ಲಿ ಪೆನ್ನು ಕೊಡುವ ಬದಲು ತಲ್ವಾರ್ ಕೊಡಿ ಎಂದು ಸ್ವಾಮೀಜಿ ಕರೆ ನೀಡಿದ್ದರು.
ಶಿವಮೊಗ್ಗ ಸೇರಿ ಇತರೆಡೆ ಅನೇಕರು ತಲ್ವಾರ ಹಿಡಿದು ರಾಜಾರೋಷ ಮೆರೆದವರಿಗೆ ಏನು ಮಾಡಿಲ್ಲ. ಆದರೆ ನಮ್ಮವರ ಮೇಲೆ ಹೀಗೆ ನಡೆದರೆ ನಾವು ಸುಮ್ಮನೇ ಕೂಡುವುದು ಸಮಂಜಸವಲ್ಲ ಎಂದು ಶ್ರೀಗಳು ಭಾಷಣ ಮಾಡಿದ್ದಾರೆ. ಅವರಿಗೆ ಏನಾದರೂ ಮಾಡಿದರೆ ತಾವು ಸುಮ್ಮನೆ ಕೂಡುವುದಿಲ್ಲ ಎಂದು ಭಕ್ತರು ಎಚ್ಚರಿಕೆ ನೀಡಿದ್ದಾರೆ.