Advertisement

ಅಂಗನವಾಡಿ ಗ್ರಾ.ಪಂ.ಗೆ;  ಗ್ರಾ.ಪಂ. ಸದಸ್ಯರು-ಅಂಗನವಾಡಿ ಸಿಬಂದಿ ಶೀತಲ ಸಮರ

02:03 AM Feb 16, 2022 | Team Udayavani |

ಬೆಂಗಳೂರು: ಸಮಗ್ರ ಶಿಶು ಅಭಿವೃದ್ಧಿ ಸೇವೆಗಳ ನಿರ್ವಹಣೆ ಹೆಸರಲ್ಲಿ ಅಂಗನವಾಡಿ ಕೇಂದ್ರಗಳನ್ನು ಪರೋಕ್ಷವಾಗಿ ಗ್ರಾಮ ಪಂಚಾಯತ್‌ಗಳ “ಹತೋಟಿ’ಗೆ ನೀಡುವ ಸರಕಾರದ ನಿರ್ಧಾರವು ಅಂಗನವಾಡಿ ನೌಕರರು ಮತ್ತು ಪಂಚಾಯತ್‌ ಸದಸ್ಯರ ನಡುವೆ ಶೀತಲ ಸಮರಕ್ಕೆ ಕಾರಣವಾಗಿದೆ.

Advertisement

ಅಂಗನವಾಡಿ ಕೇಂದ್ರಗಳನ್ನು ಯಾವುದೇ ರೂಪದಲ್ಲಿ ಗ್ರಾಮ ಪಂಚಾಯತ್‌ಗಳಿಗೆ ನೀಡುವುದನ್ನು ಒಪ್ಪುವುದಿಲ್ಲ ಎಂದು ಅಂಗನವಾಡಿ ನೌಕರರು ಹೇಳುತ್ತಿದ್ದರೆ, ಇದರಿಂದ ಯಾವುದೇ ಸಮಸ್ಯೆ ಇಲ್ಲ ಅಂಗನವಾಡಿಗಳ ನಿರ್ವಹಣೆಯನ್ನು ಗ್ರಾ.ಪಂ.ಗಳಿಗೆ ಕೊಟ್ಟರೆ ಅವುಗಳಿಗೆ ಇನ್ನಷ್ಟು ಶಕ್ತಿ – ಸಾಮರ್ಥ್ಯ ಸಿಗಲಿದೆ ಎಂದು ಗಾ.ಪಂ.ಸದಸ್ಯರು ವಾದಿಸುತ್ತಿದ್ದಾರೆ.

ಸಮಗ್ರ ಶಿಶು ಅಭಿವೃದ್ಧಿ ಸೇವೆಗಳು (ಐಸಿಡಿಎಸ್‌) ಯೋಜನೆಯ ಅನುಷ್ಠಾನ, ನಿರ್ವಹಣೆ ಮತ್ತು ಮೇಲ್ವಿಚಾರಣೆಗೆ ಸಂಬಂಧಿಸಿ ಗ್ರಾಮ ಪಂಚಾಯತ್‌ಗಳ ಪಾತ್ರದ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇತ್ತೀಚೆಗೆ ಹೊರಡಿಸಿದ ಜಂಟಿ ಸುತ್ತೋಲೆ ಅಂಗನವಾಡಿ ನೌಕರರು ಮತ್ತು ಪಂಚಾಯತ್‌ ಸದಸ್ಯರ ನಡುವೆ ಪರ-ವಿರೋಧಕ್ಕೆ ಎಡೆ ಮಾಡಿಕೊಟ್ಟಿದೆ.

ಸಮಗ್ರ ಶಿಶು ಅಭಿವೃದ್ಧಿ ಸೇವೆಗಳು (ಐಸಿಡಿಎಸ್‌) ಯೋಜನೆಯು ಆರು ವರ್ಷದೊಳಗಿನ ಮಕ್ಕಳ ಸಮಗ್ರ ಅಭಿವೃದ್ಧಿಯ ಗುರಿ ಹೊಂದಿದೆ. ಗರ್ಭಿಣಿ ಹಾಗೂ ಹಾಲುಣಿಸುವ ತಾಯಂದಿರಿಗೆ ಪೌಷ್ಟಿಕಾಂಶ ಮತ್ತು ಆರೋಗ್ಯ ಸೇವೆ ಒದಗಿಸಲಾಗುತ್ತಿದ್ದು, ಇದನ್ನು ಅಂಗನವಾಡಿ ಕೇಂದ್ರಗಳ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ. ಇದನ್ನು ಅಂಗನವಾಡಿ ನೌಕರರು ವಿರೋಧಿಸುತ್ತಿದ್ದು, ಪಂಚಾಯತ್‌ ನೌಕರರು ಸಮರ್ಥಿಸುತ್ತಿದ್ದಾರೆ.

ಐಸಿಡಿಎಸ್‌ ಯೋಜನೆಯ ಪರಿಣಾಮಕಾರಿ ನಿರ್ವಹಣೆ ಹೆಸರಲ್ಲಿ ಅಂಗನವಾಡಿ ಕೇಂದ್ರಗಳನ್ನು ಪಂಚಾಯತ್‌ಗಳಿಗೆ ಒಪ್ಪಿಸಲಾಗುತ್ತಿದೆ. ಇದರಿಂದ ಚುನಾಯಿತ ಪ್ರತಿನಿಧಿಗಳ ಹಸ್ತಕ್ಷೇಪ ಹೆಚ್ಚಾಗುತ್ತದೆ. ಹೀಗಾದರೆ, ಐಸಿಡಿಎಸ್‌ ಯೋಜನೆ ಕುಂಠಿತಗೊಳ್ಳಲು ಸರಕಾರವೇ ಕಾರಣವಾಗುತ್ತದೆ. ಆದ್ದರಿಂದ ಐಸಿಡಿಎಸ್‌ ಯೋಜನೆ ನಿರ್ವಹಣೆಯಲ್ಲಿ ಪಂಚಾಯತ್‌ಗಳ ಪಾತ್ರಕ್ಕೆ ಸಂಬಂಧಿಸಿ 2021ರ ಅ.28ರಂದು ಹೊರಡಿಸಿರುವ ಸುತ್ತೋಲೆಯನ್ನು ಹಿಂಪಡೆದುಕೊಳ್ಳಬೇಕು ಎಂಬುದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಆಗ್ರಹವಾಗಿದೆ.

Advertisement

ಇದನ್ನೂ ಓದಿ:1,242 ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಮಾರ್ಚ್ 12ರಿಂದ ಪರೀಕ್ಷೆ ; ಇಲ್ಲಿದೆ ಹೆಚ್ಚಿನ ಮಾಹಿತಿ

ಸುತ್ತೋಲೆಯಲ್ಲಿ ಏನಿದೆ?
ಗ್ರಾಮ ಪಂಚಾಯತ್‌ಗಳಿಗೆ ಹಂಚಿಕೆಯಾಗಿರುವ ವಿವಿಧ ಇಲಾಖೆಗಳ 29 ವಿಷಯಗಳಿಗೆ ಸಂಬಂಧಿಸಿದ ಯೋಜನೆ, ಅನುಷ್ಠಾನ ಮತ್ತು ಮೇಲ್ವಿಚಾರಣೆಯಲ್ಲಿ ಗ್ರಾ.ಪಂ.ಗಳ ಪಾತ್ರ ಗಣನೀಯವಾಗಿದೆ. ಗ್ರಾಮ ಆರೋಗ್ಯ, ನೈರ್ಮಲ್ಯ ಮತ್ತು ಪೌಷ್ಟಿಕಾಂಶ ಸಮಿತಿಗಳು ಐಸಿಡಿಎಸ್‌ ಕಾರ್ಯಕ್ರಮದ ನಿರ್ವಹಣೆ ಮತ್ತು ಮೇಲ್ವಿಚಾರಣೆಯಲ್ಲಿ ಪಂಚಾಯತ್‌ಗಳು ಸಕ್ರಿಯವಾಗಿ ತೊಡಗಿಸಿಕೊಂಡಿವೆ. ಈ ಹಿನ್ನೆಲೆಯಲ್ಲಿ ಅಂಗನವಾಡಿ ಕೇಂದ್ರಗಳ ಕಾರ್ಯನಿರ್ವಹಣೆಯ ಕ್ರಮಬದ್ಧತೆಯನ್ನು ಪರಿಶೀಲಿಸಬೇಕು. ಈ ನಿಟ್ಟಿನಲ್ಲಿ ಗ್ರಾಮೀಣಾಭಿ ವೃದ್ಧಿ ಮತ್ತು ಪಂಚಾಯತ್‌ ರಾಜ್‌ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಪಂಚಾಯತ್‌ ಗಳ ಚುನಾಯಿತ ಸದಸ್ಯರು ಪರಸ್ಪರ ಸಹಕಾರ, ಸಮನ್ವಯತೆ ಯೊಂದಿಗೆ ಐಸಿಡಿಎಸ್‌ ಸೇವೆಗಳ ಬಗ್ಗೆ ಪಂಚಾಯತ್‌ಗಳು ಕ್ರಮ ಕೈಗೊಳ್ಳಬೇಕು.

ಪಂಚಾಯತ್‌ ಸದಸ್ಯರ ಸಮರ್ಥನೆ
ಐಸಿಡಿಎಸ್‌ ಯೋಜನೆಯ ಅನುಷ್ಠಾನದ ಜವಾಬ್ದಾರಿಯನ್ನು ಗ್ರಾಮ ಪಂಚಾಯತ್‌ಗಳಿಗೆ ನೀಡಬೇಕು ಎಂದು ಕರ್ನಾಟಕ ಮಕ್ಕಳ ಹಕ್ಕುಗಳ ರಕ್ಷಣ ಆಯೋಗ ಆಗ್ರಹಿಸಿದೆ. ಐಸಿಡಿಎಸ್‌ ಯೋಜನೆಯ ಪರಿಣಾಮಕಾರಿ ಹಾಗೂ ಗುಣಮಟ್ಟದ ಅನುಷ್ಠಾನಕ್ಕೆ ಅಂಗನವಾಡಿಗಳನ್ನು ಗ್ರಾ.ಪಂ.ಗಳ ವ್ಯಾಪ್ತಿಗೆ ತರಬೇಕು ಎಂದು ಸುಪ್ರೀಂಕೋರ್ಟ್‌ ಸ್ಪಷ್ಟವಾಗಿ ಹೇಳಿದೆ. ಯಾವುದೇ ಕಾರಣಕ್ಕೆ ಸರಕಾರ ಈ ಸಂಬಂಧದ ಸುತ್ತೋಲೆ ಯನ್ನು ಹಿಂಪಡೆಯ ಬಾರದು ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್‌ ಸದಸ್ಯರ ಮಹಾ ಒಕ್ಕೂಟ ಆಗ್ರಹಿಸುತ್ತಿದೆ.

ಗ್ರಾಮ ಪಂಚಾಯತ್‌ಗಳು ಸ್ಥಳೀಯ ಸರಕಾರಗಳು. ಹಾಗಾಗಿ ಅದರ ವ್ಯಾಪ್ತಿಗೆ ಬರುವ ಎಲ್ಲ ವಿಷಯಗಳ ಮೇಲುಸ್ತುವಾರಿ ನಡೆಸುವುದು ಪಂಚಾಯತ್‌ಗಳ ಅಧಿಕಾರವೂ ಜವಾಬ್ದಾರಿಯೂ ಆಗಿದೆ. ಸಂವಿಧಾನ ಮತ್ತು ಪಂಚಾಯತ್‌ರಾಜ್‌ ಕಾಯ್ದೆ ಈ ಅಧಿಕಾರವನ್ನು ಪಂಚಾಯತ್‌ಗಳಿಗೆ ನೀಡಿದೆ. ಇಲಾಖೆ ಅದನ್ನು ಸ್ಪಷ್ಟಪಡಿಸಿ ಸುತ್ತೋಲೆ ಹೊರಡಿಸಿದೆ. ಅಂಗನವಾಡಿ ನೌಕರರು ಅದನ್ನು ವಿರೋಧಿಸುವ ಅಗತ್ಯವಿಲ್ಲ.
– ಕಾಡಹಳ್ಳಿ ಸತೀಶ್‌,
ರಾಜ್ಯ ಸಂಚಾಲಕ,
ರಾಜ್ಯ ಗ್ರಾಮ ಪಂಚಾಯತ್‌ ಸದಸ್ಯರ ಮಹಾ ಒಕ್ಕೂಟ.

ಐಸಿಡಿಎಸ್‌ ಸೇವೆಗಳ ನಿರ್ವಹಣೆಯಲ್ಲಿ ಗ್ರಾಮ ಪಂಚಾಯತ್‌ಗಳ ಪಾತ್ರ ಕುರಿತು ಗ್ರಾಮೀಣಾಭಿ ವೃದ್ಧಿ ಮತ್ತು ಪಂಚಾಯತ್‌ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹೊರಡಿಸಿರುವ ಜಂಟಿ ಸುತ್ತೋಲೆಗೆ ಅಂಗನವಾಡಿ ನೌಕರರ ಸಂಪೂರ್ಣ ವಿರೋಧ ವಿದೆ. ಸರಕಾರದ ಈ ಕ್ರಮದಿಂದ ಅಂಗನವಾಡಿ ಕೇಂದ್ರಗಳು ಹಾಗೂ ನೌಕರರ ಮೇಲೆ ದುಷ್ಪರಿಣಾಮ ಬೀರಲಿದೆ. ತತ್‌ಕ್ಷಣ ಸುತ್ತೋಲೆ ಯನ್ನು ಹಿಂಪಡೆಯಬೇಕು.
– ಎಸ್‌. ವರಲಕ್ಷ್ಮೀ,
ರಾಜ್ಯ ಅಂಗನವಾಡಿ
ನೌಕರರ ಸಂಘದ ಅಧ್ಯಕ್ಷೆ

-ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next