Advertisement

ಗ್ರಾಚ್ಯುಟಿ ಸೌಲಭ್ಯಕ್ಕೆ ಅಂಗನವಾಡಿ ಕಾರ್ಯಕರ್ತೆಯರು ಅರ್ಹರು: ಸುಪ್ರೀಂ ಕೋರ್ಟ್‌

10:24 PM Apr 26, 2022 | Team Udayavani |

ಬೆಂಗಳೂರು: “ಅಂಗನವಾಡಿ ಕೇಂದ್ರಗಳು 1972ರ ಗ್ರಾಚ್ಯುಟಿ ಕಾಯ್ದೆಗೆ ಒಳಪಡಲಿದ್ದು, ಅಂಗನವಾಡಿ ಕಾಯಕರ್ತೆಯರು ಹಾಗೂ ಅಂಗನವಾಡಿ ಸಹಾಯಕಿಯರು ಗ್ರಾಚ್ಯುಟಿ ಸೌಲಭ್ಯ ಪಡೆದುಕೊಳ್ಳಲು ಅರ್ಹರಿದ್ದಾರೆ ಎಂದು ಸುಪ್ರೀಂಕೋರ್ಟ್‌ ಮಹತ್ವದ ತೀರ್ಪು ನೀಡಿದೆ.

Advertisement

ಈ ಕುರಿತ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಜಯ್‌ ರಸ್ತೋಗಿ ಹಾಗೂ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕ್‌ ಅವರಿದ್ದ ಸುಪ್ರೀಂಕೋರ್ಟ್‌ ವಿಭಾಗೀಯ ನ್ಯಾಯಪೀಠ ಈ ತೀರ್ಪು ನೀಡಿದೆ.

ಅರ್ಜಿಗಳನ್ನು ಮಾನ್ಯಮಾಡಿರುವ ನ್ಯಾಯಪೀಠ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ 2016ರಲ್ಲಿ ಗುಜರಾತ್‌ ಹೈಕೋರ್ಟ್‌ನ ಏಕಸದಸ್ಯ ನ್ಯಾಯಪೀಠದ ತೀರ್ಪು ಮರುಸ್ಥಾಪಿಸಿ, 2017ರಲ್ಲಿ ವಿಭಾಗೀಯ ನ್ಯಾಯಪೀಠ ನೀಡಿದ್ದ ಆದೇಶವನ್ನು ರದ್ದುಗೊಳಿಸಿದೆ.

ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಕಿಯರಿಗೆ ಗ್ರಾಚ್ಯುಟಿ ಸೌಲಭ್ಯವನ್ನು ಶೇ.10ರ ಬಡ್ಡಿ ಸಮೇತ ನೀಡಲು 3 ತಿಂಗಳಲ್ಲಿ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್‌ ನಿರ್ದೇಶನ ನೀಡಿದೆ.
ಅಂಗನವಾಡಿ ಕೇಂದ್ರಗಳು ಶಾಸನಬದ್ಧ ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದು, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಸೆಕ್ಷನ್‌ 11 ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆನ್ವಯವೂ ಅಂಗವಾಡಿ ಕೇಂದ್ರಗಳು ಶಾಸನ ಬದ್ಧ ಕರ್ತವ್ಯ ನಿರ್ವಹಿಸುತ್ತಿವೆ ಎಂದು ಸುಪ್ರೀಂಕೋರ್ಟ್‌ ಅಭಿಪ್ರಾಯಪಟ್ಟಿದೆ.

ಗ್ರಾಚ್ಯುಟಿ ಕಾಯ್ದೆ-197ರ ಸೆಕ್ಷನ್‌ 1(3)ರಡಿ ಶಿಕ್ಷಣ ಸಂಸ್ಥೆಗಳನ್ನು ಅಧಿಸೂಚಿಸಿ ಕೇಂದ್ರ ಸರ್ಕಾರ 1997ರಲ್ಲಿ ಅಧಿಸೂಚನೆ ಹೊರಡಿಸಿದೆ. 3ರಿಂದ 6 ವಯಸ್ಸಿನ ಮಕ್ಕಳ ಅಂಗನವಾಡಿ ಕೇಂದ್ರಗಳಲ್ಲಿ ಶಾಲಾ ಪೂರ್ವ ಚಟುವಟಿಕೆಗಳು ನಡೆಯತ್ತಿದ್ದು, ಇದು ಸಂಪೂರ್ಣ ಶೈಕ್ಷಣಿಕ ಚಟುವಟಿಕೆಯಾಗಿದೆ.

Advertisement

ಹಾಗಾಗಿ, ಅಂಗನವಾಡಿ ಕೇಂದ್ರಗಳು ಗ್ರಾಚ್ಯುಟಿ ಕಾಯ್ದೆ ವ್ಯಾಪ್ತಿಗೆ ಬರಲಿದ್ದು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಗ್ರಾಚ್ಯುಟಿ ಸೌಲಭ್ಯ ಪಡೆದುಕೊಳ್ಳಲು ಅರ್ಹರಿದ್ದಾರೆ ಎಂದು ಸುಪ್ರೀಂಕೋರ್ಟ್‌ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ.

ಫೆಡರೇಷನ್‌ ಸ್ವಾಗತ: ಸುಪ್ರೀಂಕೋರ್ಟ್‌ ತೀರ್ಪನ್ನು ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್‌ ಸ್ವಾಗತಿಸಿದ್ದು, ಇದರಿಂದ ದೇಶದ 27 ಲಕ್ಷ ಅಂಗನವಾಡಿ ಕಾರ್ಯಕರ್ತೆಯರಿಗೆ ಅನುಕೂಲವಾಗಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ತೀರ್ಪನ್ನು ಆದಷ್ಟು ಬೇಗ ಜಾರಿಗೆ ತರಬೇಕು ಎಂದು ಫೆಡರೇಷನ್‌ ಆಗ್ರಹಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next