Advertisement

BJP; ಒಂದಾಗಿದ್ದರಷ್ಟೇ ಸುರಕ್ಷೆ: ಯೋಗಿ ಬಳಿಕ ಮೋದಿ ಹೊಸ ಸ್ಲೋಗನ್‌!

01:01 AM Nov 09, 2024 | Team Udayavani |

ನಾಸಿಕ್‌/ಧುಲೆ: “ಏಕ್‌ ಹೇ ತೋ ಸೇಫ್ ಹೇ’ (ನಾವೆಲ್ಲರೂ ಒಂದಾಗಿದ್ದರೆ ಸುರಕ್ಷಿತವಾಗಿರುತ್ತೇವೆ). ಇದು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ಅವರ ಹೊಸ ಉದ್ಘೋಷ. ಇತ್ತೀಚೆಗಷ್ಟೇ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಅವರ, “ವಿಭಜನೆಗೊಂಡರೆ ಛಿದ್ರವಾಗುತ್ತೇವೆ’ (ಬಟೇಂಗೆ ತೊ ಕಟೇಂಗೆ) ಎಂಬ ಘೋಷಣೆ ಭಾರೀ ಚರ್ಚೆಗೆ ಗ್ರಾಸವಾಗಿತ್ತಲ್ಲದೇ, ಅನೇಕ ಬಿಜೆಪಿ ನಾಯಕರು ಈ ಉದ್ಘೋಷವನ್ನು ತಮ್ಮ ಭಾಷಣಗಳಲ್ಲಿ ಬಳಸಲಾರಂಭಿಸಿದ್ದರು. ಇದೀಗ ಇದೇ ಅರ್ಥ ಕೊಡುವ ಹೊಸ ಸ್ಲೋಗನ್‌ ಅನ್ನು ಪ್ರಧಾನಿ ಮೋದಿಯವರು ಮಹಾರಾಷ್ಟ್ರದಲ್ಲಿ ಮೊಳಗಿಸಿದ್ದಾರೆ.

Advertisement

ಮೊದಲ ಬಾರಿಗೆ ಶುಕ್ರವಾರ ರಾಜ್ಯದಲ್ಲಿ ಪ್ರಚಾರ ನಡೆಸಿದ ಪ್ರಧಾನಿ ಮೋದಿ, ದೇಶದ ಜನರು ಜಾತಿಯ ಆಧಾರದಲ್ಲಿ ಹೊಡೆದಾಡಿಕೊಳ್ಳಬೇಕು ಎಂದು ಕಾಂಗ್ರೆಸ್‌ ಬಯಸುತ್ತದೆ. ಮೊದಲ ಪ್ರಧಾನಿ ನೆಹರೂ ಅವರು ಎಸ್‌ಸಿ, ಎಸ್‌ಟಿ, ಒಬಿಸಿಗಳಿಗೆ ಮೀಸಲು ನೀಡುವುದನ್ನು ವಿರೋಧಿಸಿದ್ದರು. ಆ ಸಮುದಾಯದ ಅಭಿವೃದ್ಧಿ ಕಾಂಗ್ರೆಸ್‌ಗೆ ಬೇಕಿಲ್ಲ. ಹೀಗಾಗಿ ನಾವೆಲ್ಲರೂ ಒಂದಾಗಿದ್ದರೆ ಸುರಕ್ಷಿತವಾಗಿರುತ್ತೇವೆ ಎಂದರು.

‘ಅಘಾಡಿ’ಯ ಗಾಡಿಗೆ ಚಕ್ರವೂ ಇಲ್ಲ, ಬ್ರೇಕೂ ಇಲ್ಲ: ಪ್ರಧಾನಿ
ಕಾಂಗ್ರೆಸ್‌, ಉದ್ಧವ್‌ ಶಿವಸೇನೆ ಬಣ, ಶರದ್‌ ಪವಾರ್‌ ಬಣಗಳನ್ನು ಒಳಗೊಂಡಿರುವ ಮಹಾ ವಿಕಾಸ ಅಘಾಡಿಯ ಗಾಡಿಗೆ ಚಕ್ರಗಳೂ ಇಲ್ಲ, ಬ್ರೇಕೂ ಇಲ್ಲ. ಹೀಗಿದ್ದರೂ ಚಾಲಕ (ಸಿಎಂ) ಸ್ಥಾನದಲ್ಲಿ ಕುಳಿತುಕೊಳ್ಳಲು ಅದರ ನಾಯಕರು ಹೋರಾಟ ನಡೆಸುತ್ತಿದ್ದಾರೆ ಎಂದು ಮೋದಿ ವ್ಯಂಗ್ಯವಾಡಿದ್ದಾರೆ. 2 ವರ್ಷ ಹಿಂದೆ ಅವರ ಸರಕಾರ‌ ವೈಖರಿಯನ್ನು ರಾಜ್ಯದ ಜನರು ನೋಡಿದ್ದಾರೆ ಎಂದೂ ಹೇಳಿದರು.

ಒಂದು ವಾರದಲ್ಲಿ ಮೋದಿ 9 ರ‍್ಯಾಲಿ
ಮಹಾರಾಷ್ಟ್ರ ಚುನಾವಣೆಗಾಗಿ ಪ್ರಧಾನಿ ಮೋದಿ ಶುಕ್ರವಾರದಿಂದ 1 ವಾರ ಕಾಲ 9 ರ‍್ಯಾಲಿ ನಡೆಸಲಿದ್ದಾರೆ. ಈ ಪೈಕಿ 2 ಶುಕ್ರವಾರ ಮುಕ್ತಾಯವಾಗಿದೆ. ನ.9ರಂದು ಅಕೋಲ, ನಾಂದೇಡ್‌ನ‌ಲ್ಲಿ, ನ.12ರಂದು ಚಂದ್ರಾಪುರ ಜಿಲ್ಲೆಯ ಚಿಮೂರ್‌, ಸೋಲಾಪುರದಲ್ಲಿ ಪ್ರಚಾರ ನಡೆಸಲಿದ್ದಾರೆ. ಅದೇ ದಿನ ಪುಣೆಯಲ್ಲಿ ರೋಡ್‌ ಶೋ ನಡೆಸಲಿದ್ದಾರೆ. ನ.14ರಂದು ಛತ್ರಪತಿ ಸಂಭಾಜಿನಗರ್‌, ರಾಯ್‌ಗಢ, ಮುಂಬಯಿಯಲ್ಲಿ ಪ್ರಚಾರ ನಡೆಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next