Advertisement

ಉಭಯ ಜಿಲ್ಲೆಗೆ 53 ಹೊಸ ಅಂಗನವಾಡಿ ಮಂಜೂರು

12:35 AM Jan 04, 2023 | Team Udayavani |

ಉಡುಪಿ: ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಅನುಷ್ಠಾನದ ಭಾಗವಾಗಿ ಅಂಗನವಾಡಿ ಕೇಂದ್ರಗಳ ನಿರ್ವಹಣೆಯನ್ನು ಸರಕಾರಿ ಶಾಲಾ ವ್ಯಾಪ್ತಿಗೆ ಮತ್ತು ಮಕ್ಕಳ ಪೌಷ್ಟಿಕಾಂಶ ನಿರ್ವಹಣೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವ್ಯಾಪ್ತಿಗೆ ನೀಡಬೇಕು ಎಂಬ ಚರ್ಚೆಯ ನಡುವೆ ರಾಜ್ಯ ಸರಕಾರ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ 53 ಅಂಗನವಾಡಿ ಕೇಂದ್ರಗಳನ್ನು ಮಂಜೂರು ಮಾಡಿದೆ.

Advertisement

ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ಸಹಿತ ಕೆಲವು ಸರಕಾರಿ ಶಾಲೆಗಳಲ್ಲಿ ಈಗಾಗಲೇ ಪೂರ್ವ ಪ್ರಾಥಮಿಕ ತರಗತಿಗಳನ್ನು ಆರಂಭಿಸಲಾಗಿದೆ. ಎನ್‌ಇಪಿ ಅನುಷ್ಠಾನವಾಗುತ್ತಿರುವುದರಿಂದ ಹೊಸ ಅಂಗನವಾಡಿಗಳನ್ನು ಸರಕಾರಿ ಶಾಲಾವರಣದಲ್ಲೇ ನಿರ್ಮಿಸಲು ಸರಕಾರ ಮುಂದಾಗಿದೆ.

ಸರಕಾರಿ ಶಾಲೆ ವ್ಯಾಪ್ತಿಗೆ ಅಂಗನವಾಡಿಗಳನ್ನು ತರಬೇಕು ಎಂಬ ಬಗ್ಗೆ ಅನೇಕ ವರ್ಷಗಳಿಂದ ಸರಕಾರದ ಹಂತದಲ್ಲಿ ಚರ್ಚೆ ನಡೆಯುತ್ತಿದೆ. ಆದರೆ ಎರಡು ಇಲಾಖೆಗಳ ನಡುವೆ ಸಮನ್ವಯದ ನಿರ್ಧಾರ ಆಗದೆ ಚರ್ಚಾ ಹಂತದಲ್ಲೇ ಇದೆ. ಅಂಗನವಾಡಿಗಳನ್ನು ಪೂರ್ಣ ಪ್ರಮಾಣದಲ್ಲಿ ಶಾಲೆಯೊಂದಿಗೆ ವಿಲೀನಗೊಳಿಸುವುದಕ್ಕೆ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ವಿರೋಧವಿದೆ. ಕಾರಣ ಉದ್ಯೋಗ ನಷ್ಟದ ಭೀತಿ. ಹೀಗಾಗಿ ಆರೋಗ್ಯ, ಪೌಷ್ಟಿಕಾಂಶ ಆಹಾರ ವಿತರಣೆ ಜವಾಬ್ದಾರಿಯನ್ನು ತಮ್ಮಲ್ಲಿ ಉಳಿಸಿಕೊಂಡು, ಶಿಕ್ಷಣದ ಭಾಗವನ್ನು ಶಾಲೆಗೆ ಒಪ್ಪಿಸಲು ಒಪ್ಪಿಗೆ ಸೂಚಿಸಬಹುದು.

ಎನ್‌ಇಪಿ ತರಬೇತಿ
ತಾಲೂಕು ಶಿಶು ಅಭಿವೃದ್ಧಿ ಅಧಿಕಾರಿ ಹಾಗೂ ಅಂಗನವಾಡಿ ಸುಪರ್‌ವೈಸರ್‌ಗಳಿಗೆ ರುಡ್‌ಸೆಟ್‌ ಸಂಸ್ಥೆಯ ಸಹಕಾರದೊಂದಿಗೆ ಎನ್‌ಇಪಿ ಅಡಿಯಲ್ಲಿ ಮಕ್ಕಳಿಗೆ ಯಾವ ರೀತಿ ಬೋಧನೆ ಮಾಡಬೇಕು ಎಂಬ ತರಬೇತಿ ನೀಡಲಾಗುತ್ತಿದೆ.

ಹೊಸ ಅಂಗನವಾಡಿ
ಉಡುಪಿ ಜಿಲ್ಲೆಯಲ್ಲಿ ಸದ್ಯ 1,191, ದ.ಕ.ದಲ್ಲಿ 2018 ಅಂಗನವಾಡಿ ಕೇಂದ್ರಗಳಿವೆ. ಹೊಸದಾಗಿ ದ.ಕ. ಜಿಲ್ಲಾ ವ್ಯಾಪ್ತಿಯ ಬೆಳ್ತಂಗಡಿಯಲ್ಲಿ 2, ಮೂಡುಬಿದಿರೆಯಲ್ಲಿ 3, ಮಂಗಳೂರು ನಗರ, ಗ್ರಾಮಾಂತರ ಸೇರಿ 9, ಪುತ್ತೂರಿನಲ್ಲಿ 2, ಸುಳ್ಯದಲ್ಲಿ 6 – ಹೀಗೆ ಒಟ್ಟು 22 ಹೊಸ ಕೇಂದ್ರಗಳನ್ನು ಸರಕಾರ ಮಂಜೂರು ಮಾಡಿದೆ. ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ 15, ಕುಂದಾಪುರ ಹಾಗೂ ಉಡುಪಿಯಲ್ಲಿ ತಲಾ 4, ಕಾಪುವಿನಲ್ಲಿ 5 ಹಾಗೂ ಕಾರ್ಕಳದಲ್ಲಿ 3 ಸೇರಿ ಒಟ್ಟು 31 ಹೊಸ ಕೇಂದ್ರಗಳನ್ನು ಹಂಚಿಕೆ ಮಾಡಲಾಗಿದೆ.

Advertisement

ಹುದ್ದೆ ಭರ್ತಿ ಆಗಬೇಕು
ಪ್ರತೀ ಅಂಗನವಾಡಿಯಲ್ಲೂ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಇರಲೇ ಬೇಕು. ಮಕ್ಕಳ ಆರೈಕೆಯ ಜತೆಗೆ ಪೌಷ್ಟಿಕಾಂಶಯುಕ್ತ ಆಹಾರ ನೀಡಬೇಕು. ಅಲ್ಲದೆ ಗರ್ಭಿಣಿ, ಬಾಣಂತಿಯರಿಗೆ ಆಹಾರ ಸಾಮಗ್ರಿ ವಿತರಣೆ ಇರುತ್ತದೆ. ಆಡಳಿತಾತ್ಮಕ ಕಾರ್ಯವೂ ಇದೆ. ಆದರೆ ಒಟ್ಟು102 ಹುದ್ದೆಗಳು ಖಾಲಿಯಿವೆ.

ಸರಕಾರಿ ಶಾಲಾ ವ್ಯಾಪ್ತಿಗೆ ಅಂಗನವಾಡಿ ತರುವ ಬಗ್ಗೆ ಯಾವುದೇ ತೀರ್ಮಾನ ಆಗಿಲ್ಲ. ಈಗಾಗಲೇ ಮಂಜೂರಾಗಿರುವ ಅಂಗನವಾಡಿ ಕೇಂದ್ರಗಳನ್ನು ಸ್ಥಳೀಯವಾಗಿ ಚರ್ಚಿಸಿ ಆರಂಭಿಸಲಿದ್ದೇವೆ.
– ಶಿವಕುಮಾರಯ್ಯ/ ಪಾಪಾ ಭೋವಿ, ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಉಡುಪಿ/ದ.ಕ

– ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next