Advertisement

ಆಂಡ್ರಾಯ್ಡ್ ನಾಮಕರಣ

10:18 PM Aug 25, 2019 | Lakshmi GovindaRaj |

ಗೂಗಲ್‌ ಏನು ಮಾಡಿದರೂ ಸುದ್ದಿಯೇ! ಅದು ತನ್ನ ಮೊಬೈಲ್‌ ಕಾರ್ಯಾಚರಣಾ ವ್ಯವಸ್ಥೆಯಲ್ಲಿ ಬಳಸುವ ಅಂಡ್ರಾಯ್ಡ್ ಆವೃತ್ತಿಗಳಿಗೆ ಸಿಹಿ ತಿನಿಸುಗಳ ಹೆಸರುಗಳನ್ನು ಇಡುತ್ತಿದ್ದುದು ಸುದ್ದಿಯೇ… ಈಗ ಸಿಹಿ ತಿನಿಸುಗಳ ಹೆಸರಿನ ಸಂಪ್ರದಾಯ ಕೈಬಿಟ್ಟು ಬೇರೆಯ ಹೆಸರನ್ನು ಇಡಲು ನಿರ್ಧರಿಸಿರುವುದೂ ಸುದ್ದಿಯೇ!

Advertisement

ನಾವು ನೀವೆಲ್ಲ ಸಾಮಾನ್ಯವಾಗಿ ಅಂಡ್ರಾಯ್ಡ್ ಕಾರ್ಯಾಚರಣೆ ವ್ಯವಸ್ಥೆ (ಆಪರೇಟಿಂಗ್‌ ಸಿಸ್ಟಂ- ಓಎಸ್‌) ಉಳ್ಳ ಮೊಬೈಲುಗಳನ್ನ ಬಳಸುತ್ತಾ ಇದ್ದೇವೆ. ಹಿಂದೆ ವಿಂಡೋಸ್‌ ಓಎಸ್‌, ಬ್ಲಾಕ್‌ಬೆರ್ರಿ, ನೋಕಿಯಾದ ಸಿಂಬಿಯನ್‌ ಓಎಸ್‌ ಇತ್ಯಾದಿ ಇದ್ದವು. ಅಂಡ್ರಾಯ್ಡ್ನ ಹೊಡೆತದಲ್ಲಿ ಅವೆಲ್ಲ ಈಗ ಮಠ ಸೇರಿವೆ. ಶ್ರೀಮಂತರು ಬಳಸುವ ಐಫೋನ್‌ಗೆ ಅದರದೇ ಆದ ಆಪರೇಟಿಂಗ್‌ ಸಿಸ್ಟಮ್‌ (ಐಓಎಸ್‌) ಇದೆ. ಇರಲಿ, ಈಗ ಮೊಬೈಲ್‌ ಜಗತ್ತಿನಲ್ಲಿ ಸದ್ಯ ಹೆಚ್ಚು ಬಳಕೆಯಲ್ಲಿರೋದು ಅಂಡ್ರಾಯ್ಡ್ ಓಎಸ್‌. ಇದರ ಒಡೆತನ ಅಮೆರಿಕಾದ ಗೂಗಲ್‌ನದ್ದು. ವರ್ಷದಿಂದ ವರ್ಷಕ್ಕೆ ಆಂಡ್ರಾಯ್ಡ್ ಓ.ಎಸ್‌. ಹಲವಾರು ಉತ್ತಮ ಅಂಶಗಳನ್ನು ಅಳವಡಿಸಿಕೊಂಡು ಗ್ರಾಹಕರ ಉಪಯೋಗಕ್ಕೆ ದೊರಕುತ್ತದೆ.

ಇದರ ಅಭಿವೃದ್ಧಿಯಲ್ಲಿ ಗೂಗಲ್‌ನ ತಂತ್ರಜ್ಞರು ವರ್ಷವಿಡೀ ಶ್ರಮಿಸುತ್ತಲೇ ಇರುತ್ತಾರೆ. ಅದನ್ನೇ ಸ್ಯಾಮ್‌ಸಂಗ್‌, ಶಿಯೋಮಿ, ಹುವಾವೇ, ಒನ್‌ಪ್ಲಸ್‌, ವಿವೋ, ಒಪ್ಪೋ ಸೇರಿದಂತೆ ಎಲ್ಲ ಕಂಪೆನಿಗಳೂ ತಮ್ಮ ಮೊಬೈಲೊಳಗಿಟ್ಟು ನಮಗೆ ಮಾರುತ್ತವೆ. “ಕಿ’ಗಾಗಿ ಕ್ಯೂ ಈ ಆಪರೇಟಿಂಗ್‌ ಸಿಸ್ಟಂ ಅನ್ನು ಅಭಿವೃದ್ಧಿ ಪಡಿಸಿ ಹೊಸ ಆವೃತ್ತಿಗೆ ಒಂದೊಂದು ಸಿಹಿ ತಿನಿಸಿನ ಹೆಸರನ್ನು ಗೂಗಲ್‌ ಇಡುತ್ತಿತ್ತು. ಸಿಹಿ ತಿನಿಸು ಅಂದ ತಕ್ಷಣ ಕಜ್ಜಾಯ, ಲಾಡು, ಮೈಸೂರು ಪಾಕ್‌ ಅಂದುಕೋಬೇಡಿ. ಅಮೆರಿಕಾ ಕಂಪೆನಿ ಆದ್ದರಿಂದ ಅಲ್ಲಿನ ಸಿಹಿತಿನಿಸುಗಳ ಹೆಸರುಗಳನ್ನಿಡುತ್ತಿದ್ದರು.

ಕಿಟ್‌ಕ್ಯಾಟ್‌, ಮಾರ್ಷ್‌ ಮೆಲೋ, ಲಾಲಿಪಾಪ್‌, ನೌಗಟ್‌ ಇತ್ಯಾದಿ… ಆಂಡ್ರಾಯ್ಡ್ನ 9ನೇ ಆವೃತ್ತಿಗೆ “ಪೈ’ ಎಂಬ ಹೆಸರಿಡಲಾಗಿತ್ತು. ಹೀಗೆ ಇಡುವಾಗ ಇಂಗ್ಲಿಷಿನ ವರ್ಣಮಾಲೆಯನ್ನು ಅನುಸರಿಸಲಾಗುತ್ತಿತ್ತು. ಉದಾಹರಣೆಗೆ 8ನೇ ಆವೃತ್ತಿಗೆ ಓ ವರ್ಣಮಾಲೆಯ ಓರಿಯೋ, 9ನೇ ಆವೃತ್ತಿಗೆ ಪಿ ವರ್ಣಮಾಲೆ­ಯಿಂದ ಶುರುವಾಗುವ “ಪೈ’ ಎಂಬ ಸಿಹಿ ತಿನಿಸಿನ ಹೆಸರಿಡಲಾಗಿತ್ತು. 10ನೇ ಆವೃತ್ತಿಗೆ ಕಿ ವರ್ಣಮಾಲೆಯಿಂದ ಆರಂಭವಾಗುವ ಯಾವುದಾದರೂ ವಿದೇಶಿ ತಿನಿಸಿನ ಹೆಸರಿಡಬಹುದು ಎಂದು ಊಹಿಸಲಾಗಿತ್ತು. ಹೀಗಾಗಿಯೇ “ಆಂಡ್ರಾಯ್ಡ್ ಕ್ಯು’ ಎಂದೇ ಇಲ್ಲಿಯವರೆಗೆ ಕರೆಯಲಾಗುತ್ತಿತ್ತು.

ಆದರೆ ಎಲ್ಲರ ನಿರೀಕ್ಷೆ ಹುಸಿಗೊಳಿಸಿರುವ ಗೂಗಲ್‌, ತನ್ನ 10ನೇ ಆವೃತ್ತಿಗೆ ಸಿಹಿ ತಿನಿಸಿನ ಹೆಸರನ್ನು ಕೈಬಿಟ್ಟು “ಅಂಡ್ರಾಯ್ಡ್ 10′ ಎಂಬ ಹೆಸರನ್ನು ಅಧಿಕೃತವಾಗಿ ಘೋಷಿಸಿದೆ! ಇನ್ನು ಮುಂದೆ ಸಿಹಿ ತಿನಿಸಿನ ಹೆಸರನ್ನು ಹೊಸ ಆವೃತ್ತಿಗಳಿಗೆ ನೀಡುವುದಿಲ್ಲ. ಸಂಖ್ಯೆಗಳನ್ನೇ ನೀಡಲಾಗುವುದು ಎಂದು ಪ್ರಕಟಿಸಿದೆ. ಬಳಕೆದಾರರಿಗೆ ಆವೃತ್ತಿಗಳ ಹೆಸರು ಗೊಂದಲವಾಗದಿರಲಿ ಎಂದು ಈ ಬದಲಾವಣೆ ಮಾಡಲಾಗಿದೆ ಎಂದೂ ಗೂಗಲ್‌ ತಿಳಿಸಿದೆ. ಜೊತೆಗೆ, ಅಂಡ್ರಾಯ್ಡ್ನ ಲೋಗೋ ವಿನ್ಯಾಸ ಕೂಡ ಕೊಂಚ ಬದಲಾಗಿದೆ. ಅಂಡ್ರಾಯ್ಡ್ ಹೆಸರಿನ ವಿನ್ಯಾಸ ಆಧುನಿಕ ಶೈಲಿಯಲ್ಲಿ ತೆಳುವಾಗಿವೆ.

Advertisement

ಹೊಸ ಆವೃತ್ತಿಯಲ್ಲಿ ಏನೇನಿರಲಿದೆ?: ಮುಖ್ಯವಾದ ಬದಲಾವಣೆ ಎಂದರೆ, 10ನೇ ಆವೃತ್ತಿಯಲ್ಲಿ, ಕಂಪ್ಯೂಟರ್‌ನಲ್ಲಿ ಬ್ಯಾಕ್‌ಸ್ಪೇಸ್‌ ಬಟನ್‌ ರೀತಿ ಕಾರ್ಯಾಚರಿಸುತ್ತಿದ್ದ ಹಿಂಬರುವ ಬಟನ್‌ ಇರುವುದಿಲ್ಲ! ಅಂದರೆ, ನೀವು ಆ್ಯಪ್‌ಗ್ಳನ್ನು ನೋಡುತ್ತಾ ಹಿಂದೆ ಬರಲು ಒಂದು ಬಾಣದ ಗುರುತು ಬಳಸುತ್ತಿದ್ದಿರಿ. ಅದು ಇನ್ನು ಇರುವುದಿಲ್ಲ! ಅದರ ಬದಲು ಗೆಸcರ್‌ ಆಧಾರಿತ ನ್ಯಾವಿಗೇಷನ್‌ ಇರಲಿದೆ. ಅಂದರೆ, ನಿಮ್ಮ ಬೆರಳಿನ ಚಲನೆಗೆ ತಕ್ಕಂತೆ ನಿರ್ದೇಶನಗಳು ನೀಡಲ್ಪಡುತ್ತವೆ.

ಪರದೆಯ ಮೇಲೆ, ಮೇಲಕ್ಕೆ ಉಜ್ಜಿದರೆ ಹೋಂ ಪರದೆ, ಎಡದಿಂದ ಬಲಕ್ಕೆ ಉಜ್ಜಿದರೆ ಹಿಂದಕ್ಕೆ ಹೋಗುತ್ತದೆ. ಹೊಸ ಆವೃತ್ತಿ ಬಂದಾಗಲಷ್ಟೇ ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲಿದೆ. ಈ ಹೊಸ ಆವೃತ್ತಿಯ ಇನ್ನೊಂದು ಹೊಸ ಬದಲಾವಣೆ ಎಂದರೆ ಮೊಬೈಲ್‌ನ ಥೀಮ್‌ ಗಾಢ ಬಣ್ಣದಲ್ಲಿರುತ್ತದೆ. ಅಂಡ್ರಾಯ್ಡ್ 10ನ ನೂತನ ಆವೃತ್ತಿಗಳು ಮೊದಲಿಗೆ ಗೂಗಲ್‌ನ ಪಿಕ್ಸೆಲ್‌ ಫೋನ್‌ಗಳಿಗೆ ದೊರಕಲಿವೆ. ಬಳಿಕ ಇನ್ನಿತರ ಬ್ರಾಂಡ್‌ನ‌ ಫೋನ್‌ಗಳಿಗೆ ಲಭ್ಯವಾಗಲಿವೆ.

ಸಿಹಿ ತಿನಿಸುಗಳ ಆಂಡ್ರಾಯ್ಡ್ ವರ್ಷನ್‌ಗಳು: ಅಂಡ್ರಾಯ್ಡ್ 2008ರಲ್ಲಿ ಬಿಡುಗಡೆ ಮಾಡಿದ ಮೊದಲ ವರ್ಷನ್‌ಗೆ “1.0′ ಎಂಬ ಹೆಸರು ನೀಡಲಾಗಿತ್ತು. ಹೀಗೆ ಕೇವಲ ಅಂಕಿಗಳನ್ನು ನೀಡಿದರೆ ಗ್ರಾಹಕರಿಗೆ ಗೊಂದಲವಾಗಬಹುದು ಎಂದು ಸಿಹಿ ತಿನಿಸುಗಳ ಹೆಸರನ್ನು ಹೊಸ ಆವೃತ್ತಿಗಳಿಗೆ ಇಡಲು ಆಲೋಚಿಸಲಾಯಿತು. 2009ರಲ್ಲಿ ಬಂದ ಎರಡನೆಯದಾದ 1.6 ವರ್ಷನ್‌ಗೆ “ಡೋನಟ್‌’ ಎಂದು ಹೆಸರಿಸಲಾಯಿತು.

ನಂತರ ಇಂಗ್ಲಿಷ್‌ ವರ್ಣಮಾಲೆಯ ಪ್ರಕಾರ ಪ್ರತಿ ಹೊಸ ವರ್ಷನ್‌ಗೆ ಸಿಹಿ ತಿಂಡಿಗಳ ಹೆಸರು ಇಡಲಾಗುತ್ತಿದೆ. 2.1ರ ಆವೃತ್ತಿಗೆ “ಎಕ್ಲೇರ್’, 2.2 ಗೆ “ಫ್ರೋಯೋ’, 2.3ಗೆ “ಜಿಂಜರ್‌ಬ್ರೆಡ್‌’, 3.0 ಗೆ “ಹನಿಕೋಂಬ್‌’, 4.0ಗೆ “ಐಸ್‌ಕ್ರೀಂ ಸ್ಯಾಂಡ್‌ವಿಚ್‌’, 4.1ಗೆ “ಜೆಲ್ಲಿಬೀನ್‌’, 4.4ಗೆ “ಕಿಟ್‌ಕ್ಯಾಟ್‌’, 5.0 ಆವೃತ್ತಿಗೆ “ಲಾಲಿಪಾಪ್‌’, 6.0 ಕ್ಕೆ “ಮಾರ್ಷ್‌ಮೆಲೋ’, 7.0ಗೆ “ನೌಗಟ್‌’, 8.0ಗೆ “ಓರಿಯೋ’ ಮತ್ತು 9.0 ಆವೃತ್ತಿಗೆ “ಪೈ’ ಎಂಬ ಹೆಸರು ನೀಡಲಾಗಿತ್ತು.

* ಕೆ.ಎಸ್‌. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next