ಹೊಸದಿಲ್ಲಿ: ತಿರುಪತಿ ಲಡ್ಡು ವಿವಾದವು ಈಗ ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಮತ್ತು ತಮಿಳುನಾಡಿನ ಆಡಳಿತ ಪಕ್ಷ ಡಿಎಂಕೆ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ. ಇತ್ತೀಚೆಗೆ ತಿರುಪತಿ ದೇಗುಲಕ್ಕೆ ಭೇಟಿ ನೀಡಿದ್ದ ಪವನ್ ಕಲ್ಯಾಣ್, ಲಡ್ಡು ಪ್ರಕರಣ ಸಂಬಂಧ ವೈಎಸ್‌ಆರ್‌ಸಿಪಿ ಮತ್ತು ಮಾಜಿ ಸಿಎಂ ಜಗನ್‌ಮೋಹನ್ ರೆಡ್ಡಿಯನ್ನು ಟೀಕಿಸು ತ್ತಲೇ, ಕಳೆದ ಸೆಪ್ಟಂಬರ್‌ನಲ್ಲಿ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಹಿಂದೂ ಧರ್ಮ ವನ್ನು ಟೀಕಿಸಿದ್ದನ್ನು ಪ್ರಸ್ತಾವಿಸಿದ್ದಾರೆ.
ಸನಾತನ ಧರ್ಮ ವೈರಸ್ ಇದ್ದ ಹಾಗೆ. ನಾಶಪಡಿಸಬೇಕು ಎಂದು ಹೇಳಿದವರಿಗೆ ನಾನು ಹೇಳುವುದು ಏನೆಂದರೆ, ನೀವು ಸನಾತನ ಧರ್ಮ ಅಳಿಸಿ ಹಾಕಲು ಸಾಧ್ಯವಿಲ್ಲ. ಒಂದೊಮ್ಮೆ ಪ್ರಯತ್ನಿಸಿದರೆ ನೀವು ನಾಶವಾಗುತ್ತೀರಿ ಎಂದಿದ್ದಾರೆ.
ಪವನ್ ಹೇಳಿಕೆಗೆ ಪ್ರಯತ್ನಿಸಿರುವ ಡಿಎಂಕೆ ನಾಯಕರೂ ಆಗಿರುವ ತಮಿಳುನಾಡು ಡಿಸಿಎಂ ಉದಯನಿಧಿ ಸ್ಟಾಲಿನ್, ಕಾದು ನೋಡಿ ಎಂದು ತಿರುಗೇಟು ನೀಡಿದ್ದಾರೆ. ಈ ಮಧ್ಯೆ, ಡಿಎಂಕೆ ವಕ್ತಾರ ಡಾ| ಹಫೀಜುಲ್ಲಾ ತಿರುಗೇಟು ಮಾತನಾಡಿ, ಪವನ್ ಕಲ್ಯಾಣ್, ಚಂದ್ರಬಾಬು ನಾಯ್ಡು, ಟಿಡಿಪಿ ಮತ್ತು ಬಿಜೆಪಿಯೇ ಹಿಂದೂಗಳ ನಿಜವಾದ ಶತ್ರುಗಳು. ರಾಜಕೀಯಕ್ಕಾಗಿ ಧರ್ಮವನ್ನು ಬಳಸಿಕೊಳ್ಳುತ್ತಿದ್ದಾ ರೆಂದು ಆರೋಪಿಸಿದ್ದಾರೆ. ಈ ಹಿಂದೆ ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮ ನಾಶಮಾಡಬೇಕು. ಅದೊಂದು ವೈರಸ್ ಎಂದು ಟೀಕೆ ಮಾಡಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು.
“ಸನಾತನ ಧರ್ಮ ರಕ್ಷಣೆಗೆ ಮಂಡಳಿ’
ಸನಾತನ ಧರ್ಮ ರಕ್ಷಣೆಗೆ ಮಂಡಳಿ ಸ್ಥಾಪನೆ ಅಗತ್ಯವಾಗಿದೆ ಎಂದು ಆಂಧ್ರಪ್ರದೇಶ ಡಿಸಿಎಂ ಪವನ್ ಕಲ್ಯಾಣ್ ಹೇಳಿದ್ದಾರೆ. ರಾಜ್ಯಗಳ ಮಟ್ಟದಲ್ಲಿಯೂ ದೇಶದಲ್ಲಿಯೂ ಈ ಬಗ್ಗೆ ತತ್‌ಕ್ಷಣ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಹೇಳಿದ್ದಾರೆ. ಲಡ್ಡು ತಯಾರಿಕೆಗೆ ಕೊಬ್ಬು ಮಿಶ್ರಿತ ತುಪ್ಪ ಬಳಕೆ ವಿವಾದ ಒಂದು ಅಂಶ ಮಾತ್ರ ಆಗಿದೆ ಎಂದು ಅವರು ಹೇಳಿದ್ದಾರೆ.