ಬಾದಾಮಿ: ಪ್ರಾಚೀನ ಕಾಲದ ಸ್ಮಾರಕಗಳು ನಾಡಿನ ಅಮೂಲ್ಯ ಆಸ್ತಿ. ಇವುಗಳನ್ನು ಮುಂದಿನ ಜನಾಂಗಕ್ಕೆ ತಿಳಿಸಲು, ಉಳಿಸಿ, ಬೆಳೆಸುವ ಉದ್ದೇಶದಿಂದ ಜಗತ್ತಿನಾದ್ಯಂತ 146 ದೇಶಗಳಲ್ಲಿ ಮೇ 18 ರಂದು ಅಂತಾರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನ ಆಚರಿಸಲಾಗುತ್ತಿದೆ ಎಂದು ನಿವೃತ್ತ ಉಪನ್ಯಾಸಕ ಎಸ್.ಎಚ್. ವಾಸನ್ ಹೇಳಿದರು.
ನಗರದ ಪ್ರಾಚ್ಯವಸ್ತು ಸಂಗ್ರಹಾಲಯದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣ ಧಾರವಾಡ ವಲಯದ ವತಿಯಿಂದ ಅಂತಾರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇಂದಿನ ಯುವ ಪೀಳಿಗೆ ಇತಿಹಾಸವನ್ನು ಅರಿಯುವ ಕೆಲಸ ಮಾಡಬೇಕು. ಹಿಂದಿನ ಕಾಲದಲ್ಲಿ ಚಾಲುಕ್ಯರು ಆಳಿದ ಸ್ಮಾರಕಗಳನ್ನು ನೋಡಿದವರಿಗೆ ಹೊಸ ಅನುಭವ ಕೊಡುತ್ತವೆ. ಯುವ ಜನರ ದೃಷ್ಟಿಕೋನ ಬದಲಾಗಬೇಕು ಎಂದರು.
ಸಾವಿರಾರು ವರ್ಷಗಳ ಹಿಂದೆ ಚಾಲುಕ್ಯರು ನಿರ್ಮಿಸಿದ ಗುಹಾಂತರ ದೇವಾಲಯಗಳು ತಮ್ಮದೇ ಆದ ಇತಿಹಾಸ ಹೊಂದಿವೆ. ಅವರ ಸಾಧನೆ, ಕಲೆ, ಸಂಸ್ಕೃತಿ, ಸಾಹಿತ್ಯ, ಇತಿಹಾಸವನ್ನು ಇತರರಿಗೆ ಮತ್ತು ಮುಂದಿನ ಜನಾಂಗಕ್ಕೆ ತಿಳಿಸುವ ಕಾರ್ಯ ಆಗಬೇಕಿದೆ ಎಂದರು.
ದೇವಾಲಯಗಳನ್ನು ನಿರ್ಮಿಸಿದ ಕಲಾಕಾರರ ಕಲಾ ಪ್ರೌಢಿಮೆ, ಕಲಾಪ್ರತಿಭೆ ವಿಶಿಷ್ಟವಾದುದು. ದೂರದೃಷ್ಟಿ ಮರೆಯಲು ಸಾಧ್ಯವಿಲ್ಲ. ಆದಕಾರಣ ಇತಿಹಾಸಕಾರರಿಗೆ ನಮನಗಳನ್ನು ಸಲ್ಲಿಸುತ್ತೇನೆ ಎಂದರು. 1977 ರಿಂದ ಪ್ರತಿ ವರ್ಷ ಮೇ 18 ರಂದು ಅಂತಾರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಗೌರವ ಅತಿಥಿಗಳಾಗಿ ಭಾಗವಹಿಸಿದ್ದ ವಿಶ್ರಾಂತ ಪ್ರಾಧ್ಯಾಪಕ ಡಾ.ಶಿಲಾಕಾಂತ ಪತ್ತಾರ ಮಾತನಾಡಿ, ಮಕ್ಕಳಿಗೆ ವಸ್ತು ಸಂಗ್ರಹಾಲಯ ಬಗ್ಗೆ ಹಲವು ಪ್ರಶ್ನೆ ಕೇಳಿದರು. ವಿದೇಶಿಗರು ಭಾರತಕ್ಕೆ ಬರುವ ಮುನ್ನ ಗೂಗಲ್‌ನಲ್ಲಿ ಹುಡುಕಿ ಮ್ಯೂಜಿಯಂ ಮೊದಲು ಆಯ್ಕೆ ಮಾಡಿಕೊಂಡು ಬಾದಾಮಿಗೆ ಬಂದು ಇಲ್ಲಿನ ಐತಿಹಾಸಿಕ ಸ್ಥಳಗಳನ್ನು ವೀಕ್ಷಣೆ ಮಾಡುತ್ತಾರೆ ಎಂದು ಹೇಳಿದರು. ಇಲ್ಲಿಯ ಗುಹಾಂತರ ದೇವಾಲಯ, ಕಪ್ಪೆ ಅರಭಟ್ಟನ ಶಾಸನ, ಮ್ಯೂಜಿಯಂ ಇವೆಲ್ಲವೂ ಚಾಲುಕ್ಯರ ಕಾಲದ ಇತಿಹಾಸ ಸಾರುತ್ತಿವೆ ಎಂದರು. ಎಸ್.ಎಂ. ಹಿರೇಮಠ ಮಾತನಾಡಿ, ಸ್ಮಾರಕಗಳನ್ನು ಎಲ್ಲರೂ ಸಂರಕ್ಷಣೆ ಮಾಡಬೇಕು. ಪ್ರತಿಯೊಬ್ಬರು ವಸ್ತು ಸಂಗ್ರಹಾಲಯದ ಬಗ್ಗೆ ತಿಳಿದು ಕೊಳ್ಳಬೇಕು ಎಂದು ಸಲಹೆ ನೀಡಿದರು.
ವಸ್ತು ಸಂಗ್ರಹಾಲಯದ ಅಧಿಕಾರಿ ಪ್ರಶಾಂತ ಕುಲಕರ್ಣಿ ಇದ್ದರು. ಮಂಜು ಜಾಲವಾದಿ, ಹರ್ಷ ದೇಶಪಾಂಡೆ, ಡಾ.ಶೀಲಾಕಾಂತ ಪತ್ತಾರ, ಎಸ್.ಎಚ್.ವಾಸನ್, ಎಸ್.ಎಂ. ಹಿರೇಮಠ ಅವರನ್ನು ಸನ್ಮಾನಿಸಲಾಯಿತು. ವಸ್ತು ಸಂಗ್ರಹಾಲಯದ ಆವರಣದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಪ್ರಬಂಧ ಲೇಖನ ಹಾಗೂ ಚಿತ್ರಕಲೆ ಸ್ಪರ್ಧೆಗಳಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಿತರಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಮ್ಯೂಜಿಯಂ ಅಧಿಕಾರಿ ಸುಭಾಶ ಬೊಂಬ್ಲೆ ಸ್ವಾಗತಿಸಿದರು. ವಾದಿರಾಜ ಹುಯಿಲಗೋಳ ನಿರೂಪಿಸಿದರು. ಲಕ್ಷ್ಮಿ ಹಿರೇಮಠ ಪ್ರಾರ್ಥನಾ ಗೀತೆ ಹಾಡಿದರು. ಜಯಶ್ರೀ ಕಲ್ಮಠ, ಆರ್.ಬಿ. ಬಾವಿಮನಿ, ರೇಶ್ಮಾ, ಶಿವಾಣಿ, ಶಂಕ್ರಮ, ಹಿರಿಯರಾದ ಜಗದಾಳೆ ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳು, ಯುವಕರು ಭಾಗವಹಿಸಿದ್ದರು.