Advertisement

ಕೋಸ್ಟಲ್‌ವುಡ್‌ಗೆ ಅನಂತ ಅಪ್ಪುಗೆ !

07:11 AM Feb 21, 2019 | |

ಕೇವಲ ತುಳು ಭಾಷಿಕ ಜನರಿಗೆ ಮಾತ್ರ ಎಂದು ಹಿಂದೊಮ್ಮೆ ನಿಗದಿಯಾಗಿದ್ದ ತುಳು ಸಿನೆಮಾಗಳು ಇಂದು ಆ ಗಡಿಯನ್ನು ಮೀರಿ ನಿಂತಿದೆ. ತುಳುವೇತರರು ಕೂಡ ತುಳು ಸಿನೆಮಾ ನೋಡುವಂತಾಗಬಹುದು ಎಂಬುದು ಸದ್ಯದ ಫಿಲೋಸಫಿ. ಅಷ್ಟರಮಟ್ಟಿಗೆ ತುಳು ಸಿನೆಮಾಗಳು ತುಳುವೇತರ ಭಾಗದಲ್ಲಿಯೂ ಕಮಾಲ್‌ ಮಾಡಿದೆ ಎಂಬುದು ಹೆಮ್ಮೆಯ ಸಂಗತಿ. ಅಂದಹಾಗೆ, ಕೋಸ್ಟಲ್‌ವುಡ್‌ನ‌ ಬಗ್ಗೆ ಸ್ಯಾಂಡಲ್‌ವುಡ್‌ನ‌ ಮಂದಿಗೆ ‘ಇಸ್ಕ್’ ಆಗಿದೆ. ಇಲ್ಲಿ ಏನೋ ಒಂದು ಕಮಾಲ್‌ ಆಗಿದೆ ಎಂಬುದು ಅವರ ಯೋಚನೆ. ಹೀಗಾಗಿ ತುಳು ಸಿನೆಮಾದ ಬಗ್ಗೆ ಗಾಂಧೀನಗರ ಮಾತನಾಡುವಂತಾಗಿದೆ.

Advertisement

ಕೆಲವೇ ದಿನದ ಹಿಂದೆ ಸ್ಯಾಂಡಲ್‌ವುಡ್‌ನ‌ ಖ್ಯಾತ ನಟರು ಮಂಗಳೂರಿಗೆ ಬಂದಿದ್ದಾಗ ತುಳು ಸಿನೆಮಾದ ಬಗ್ಗೆ ಮಾತನಾಡಲು ಅವರು ಮರೆತಿಲ್ಲ. ಕೋಸ್ಟಲ್‌ವುಡ್‌ ಪ್ರಸ್ತುತ ಶೈನಿಂಗ್‌ ಆಗುತ್ತಿದ್ದು, ಇದು ಬಹುದೊಡ್ಡ ಗೆಲುವು ಎಂಬ ರೀತಿಯಲ್ಲಿ ಅವರು ಮಾತನಾಡಿದ್ದಾರೆ.

ವಿಶೇಷವೆಂದರೆ ತುಳು ಸಿನೆಮಾ ‘ಇಂಗ್ಲಿಷ್‌’ನಲ್ಲಿ ಅನಂತ್‌ನಾಗ್‌ ಅಧ್ಯಾಪಕರ ಪಾತ್ರದಲ್ಲಿದ್ದಾರೆ. ಪ್ರಸ್ತುತ ಸಿನೆಮಾದ ಶೂಟಿಂಗ್‌ ಕೂಡ ನಗರದಲ್ಲಿ ನಡೆಯುತ್ತಿವೆ. ಬಹುಭಾಷೆಗಳಲ್ಲಿ ಅಭಿನಯಿಸಿದ ಅನಂತ್‌ ನಾಗ್‌ ಅವರು ಮೊದಲ ಬಾರಿಗೆ ತುಳು ಸಿನೆಮಾದಲ್ಲಿ ಬಣ್ಣ ಹಚ್ಚಿದ್ದಾರೆ. ತುಳುವಿನಲ್ಲಿ ಪ್ರಸ್ತುತ ಹೊಸ ಹೊಸ ಸಿನೆಮಾಗಳು ಬರುತ್ತಿದ್ದು, ಇಂಡಸ್ಟ್ರಿಗೆ ಹೊಸ ಅವಕಾಶಗಳು ಎದುರಾಗುತ್ತಿದೆ. ತುಳು ಸಿನೆಮಾದ ಗುಣಮಟ್ಟ ಕೂಡ ಉತ್ತಮವಾಗಿ ಬರುತ್ತಿರುವ ಕಾರಣದಿಂದ ತುಳು ಸಿನೆಮಾ ಲೋಕಕ್ಕೆ ಇನ್ನಷ್ಟು ಭವಿಷ್ಯವಿದೆ.

ಇಲ್ಲಿ ಹೊಸ ಪ್ರತಿಭೆಗಳು ಮೂಡಿಬರುತ್ತಿರುವುದು ಸಿನೆಮಾ ಲೋಕಕ್ಕೆ ಹೊಸ ಗಿಫ್ಟ್ ಎಂದು ಅವರು ಮಾತನಾಡಿದ್ದಾರೆ. ತುಳುವಿನಲ್ಲಿ ಮುಂದೆ ಬರುವ ಸಿನೆಮಾಗಳಿಗೆ ಅವಕಾಶ ಸಿಕ್ಕರೆ ನಾನಂತು ಅಭಿನಯಿಸಲು ರೆಡಿ ಎಂದು ಅವರು ಈಗಾಗಲೇ ಘೋಷಿಸಿದ್ದಾರೆ.

ಇನ್ನು, ಪುನೀತ್‌ ರಾಜ್‌ ಕುಮಾರ್‌ ‘ನಟ ಸಾರ್ವಭೌಮ’ ಸಿನೆಮಾದ ಪ್ರಚಾರಕ್ಕಾಗಿ ಮಂಗಳೂರಿಗೆ ಬಂದಾಗ ‘ನಟ ಸಾರ್ವಭೌಮ’ನಗಿಂತಲೂ ಜಾಸ್ತಿ ತುಳು ಸಿನೆಮಾ ಇಂಡಸ್ಟ್ರಿ ಬಗ್ಗೆ ಮಾತನಾಡಿದ್ದಾರೆ ಎಂಬುದು ವಿಶೇಷ. ಮತ್ತೊಂದು ವಿಶೇಷವೆಂದರೆ ತುಳುವಿನಲ್ಲಿ ಅವರು ಅಭಿಮಾನಿಗಳ ಜತೆಗೆ
ಮಾತನಾಡಿದ್ದಾರೆ. ಕನ್ನಡ ಸಿನೆಮಾವನ್ನು ಗೆಲ್ಲಿಸುವ ಜತೆಗೆ ತುಳು ಸಿನೆಮಾವನ್ನು ಗೆಲ್ಲಿಸಬೇಕು. ಈಗಾಗಲೇ ‘ಉಮಿಲ್‌’ ಎಂಬ ಸಿನೆಮಾದಲ್ಲಿ ಹಾಡೊಂದನ್ನು ಹಾಡಿದ್ದೇನೆ. ವಿಭಿನ್ನ ರೀತಿಯಲ್ಲಿ ತುಳು ಸಿನೆಮಾಗಳು ಬರುತ್ತಿದ್ದು, ಇದು ಇನ್ನಷ್ಟು ವಿಸ್ತಾರ ಕಾಣಬೇಕಿದೆ. ತುಳುವೇತರ ಭಾಗದಲ್ಲಿಯೂ ತುಳು ಸಿನೆಮಾ ಗೆಲ್ಲಬೇಕಿದೆ ಎಂದು ಶುಭಕೋರಿದ್ದರು.

Advertisement

ಮುಂದುವರಿದ ಭಾಗವೆಂಬಂತೆ ಈ ಹಿಂದೆ, ಚಿತ್ರನಟರಾದ ಶಿವರಾಜ್‌ ಕುಮಾರ್‌, ದರ್ಶನ್‌, ಸುದೀಪ್‌ ಈಗಾಗಲೇ ತುಳು ಸಿನೆಮಾವನ್ನು ಕೊಂಡಾಡಿದ್ದಾರೆ. ತುಳುವಿನ ಮೂರು ಸಿನೆಮಾದ ಆಡಿಯೋ ರಿಲೀಸ್‌ ಮಾಡುವ ಮೂಲಕ ಸ್ಯಾಂಡಲ್‌ವುಡ್‌ ನಟರು ತುಳು ಸಿನೆಮಾವನ್ನು ಮೆಚ್ಚಿದ್ದಾರೆ. ಇದು ತುಳು ಸಿನೆಮಾದ ಐಡೆಂಟಿಟಿಯನ್ನು ಹೆಚ್ಚು ಮಾಡಿದೆ ಎಂದು ಹೇಳುವುದು ಅತಿಶಯೋಕ್ತಿಯಲ್ಲ. ಚಿತ್ರನಟ ದರ್ಶನ್‌ ಅವರೇ ಅಮ್ಮೆರ್‌ ಪೊಲೀಸಾ ಚಿತ್ರದ ಆಡಿಯೋ ರಿಲೀಸ್‌ ಮಾಡಿದ್ದಾರೆ. ‘ಕಟಪಾಡಿ ಕಟ್ಟಪ್ಪೆ’ ಸಿನೆಮಾದ ಆಡಿಯೋ ರಿಲೀಸ್‌ ಅನ್ನು ಕಿಚ್ಚ ಸುದೀಪ್‌ ಮಂಗಳೂರಿನಲ್ಲಿ ನಡೆಸಿದ್ದರು.

‘ದಗಲ್‌ಬಾಜಿಲು’ ಸಿನೆಮಾದ ಆಡಿಯೋವನ್ನು ಶಿವರಾಜ್‌ ಕುಮಾರ್‌ ಬೆಂಗಳೂರಿನಲ್ಲಿ ನಡೆಸಿದ್ದರು. ಈ ಮಧ್ಯೆ ನಿರ್ದೇಶಕ ಯೋಗರಾಜ್‌ ಭಟ್‌ ಮಂಗಳೂರಿಗೆ ಬಂದಿದ್ದಾಗ ತುಳು ಸಿನೆಮಾದ ಬಗ್ಗೆ ಮೆಚ್ಚುಗೆ ಮಾತನಾಡಿದ್ದಾರೆ. ತಮಿಳು-ತೆಲುಗು ಸಿನೆಮಾದಲ್ಲಿ ಬಹಳಷ್ಟು ಫೇಮಸ್‌ ಆಗಿರುವ ಮೂಲತಃ ಕನ್ನಡಿಗ ಸುಮನ್‌ ಅವರು ಕೂಡ ತುಳು ಸಿನೆಮಾದಲ್ಲಿ ಅಭಿನಯಿಸುವ ಆಸಕ್ತಿ ತೋರಿದ್ದಾರೆ. ತುಳು ಸಿನೆಮಾದಲ್ಲಿ ಅವಕಾಶ ಸಿಕ್ಕರೆ ನಾನು ಅಭಿನಯಿಸಲು ರೆಡಿ ಎಂದು ಇತ್ತೀಚೆಗೆ ನೆಹರೂ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಿಳಿಸಿದ್ದರು. 

 ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next