ಬೆಂಗಳೂರು: ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೈತಪ್ಪಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಪಾಲಿಕೆ ಮಾಜಿ ಸದಸ್ಯ ಎನ್.ಆರ್.ರಮೇಶ್ ತಮಗೆ ಟಿಕೆಟ್ ಕೈತಪ್ಪಿರುವುದಕ್ಕೆ ಕೇಂದ್ರ ಸಚಿವ ಅನಂತಕುಮಾರ್ ಅವರೇ ಕಾರಣ ಎಂದು ನೇರ ಆರೋಪ ಮಾಡಿದ್ದಾರೆ.
ಯಡಿಯೂರಿನ ತಮ್ಮ ನಿವಾಸದಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ಕೇಂದ್ರ ಸಚಿವ ಅನಂತಕುಮಾರ್ ಅವರಿಗೆ ಚಿಕ್ಕಪೇಟೆಯಿಂದ ಸ್ಪರ್ಧಿಸಲು ರಬ್ಬರ್ ಸ್ಟಾಂಪ್ ವ್ಯಕ್ತಿ ಬೇಕೆ ಹೊರತು ಹೋರಾಟಗಾರರಲ್ಲ. ಅವರು ಭ್ರಷ್ಟಾಚಾರ ಆರೋಪ ಹೊತ್ತ ಉದ್ಯಮಿಗೆ ಟಿಕೆಟ್ ಕೊಡಿಸುವ ಮೂಲಕ ಪಕ್ಷಕ್ಕಾಗಿ ದುಡಿದವರನ್ನು ಕಡೆಗಣಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ, ಮುಖಂಡರ 64 ಹಗರಣಗಳನ್ನು ಬಯಲಿಗೆಳೆದಿದ್ದು, ಪಕ್ಷದ ಬೇರೆ ಯಾವ ನಾಯಕರು ಇಷ್ಟು ಹಗರಣಗಳನ್ನು ಬೆಳಕಿಗೆ ತಂದಿಲ್ಲ. 17 ಬಾರಿ ನನ್ನ ಹತ್ಯೆಗೆ ಸಂಚು ನಡೆದರೂ ಎದೆಗುಂದದೆ ಭ್ರಷ್ಟಾಚಾರದ ವಿರುದ್ಧ ಹೋರಾಟ ಮುಂದುವರಿಸಿದ್ದೇನೆ. ಟಿಕೆಟ್ ಕೈತಪ್ಪಿರುವು ಆಘಾತ ತಂದಿದೆ ಎಂದು ಹೇಳಿದರು.
ಚಿಕ್ಕಪೇಟೆ ಶಾಸಕರ ವಿರುದ್ಧ ನಾಲ್ಕು ಹಗರಣ ಬಯಲಿಗೆಳೆದಿದ್ದು, ಎರಡು ಪ್ರಕರಣದಲ್ಲಿ ಶಾಸಕರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಈ ಹೋರಾಟದಲ್ಲಿ ಉದಯ್ ಗರುಡಾಚಾರ್ ಎಂದಿಗೂ ಕೈಜೋಡಿಸಿಲ್ಲ. 2013ರ ಚುನಾವಣೆಯಲ್ಲಿ ಪರಾಭವಗೊಂಡ ಬಳಿಕ ಎಂದೂ ಚಿಕ್ಕಪೇಟೆಯತ್ತ ಸುಳಿಯದ ಉದಯ್ ಗರುಡಾಚಾರ್ ಮೂರು ತಿಂಗಳ ಹಿಂದೆ ಪ್ರತ್ಯಕ್ಷರಾಗಿದ್ದಾರೆ. ಸಚಿವ ಕೆ.ಜೆ.ಜಾರ್ಜ್, ಆರ್.ವಿ.ದೇವರಾಜ್ ವಿರುದ್ಧ ನಾನು ಹೋರಾಟ ನಡೆಸುತ್ತಿದ್ದು, ಅವರೊಂದಿಗೆ ವ್ಯವಹಾರ ಪಾಲುದಾರರಾಗಿರುವ ವ್ಯಕ್ತಿಗೆ ಟಿಕೆಟ್ ನೀಡಿರುವುದು ಶೋಚನೀಯ ಎಂದರು.
ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲಿ ಸರಿಪಡಿಸಿ ಅವಕಾಶ ಕಲ್ಪಿಸುವುದಾಗಿ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಭರವಸೆ ನೀಡಿದ್ದು, ದುಡುಕಿನ ನಿರ್ಧಾರ ಕೈಗೊಳ್ಳದಂತೆ ಸೂಚಿಸಿದ್ದಾರೆ. ಹಾಗಾಗಿ ಪಕ್ಷದಲ್ಲೇ ಉಳಿದಿದ್ದೇನೆ. ಸ್ಪಂದನೆ ದೊರೆಯದಿದ್ದರೆ ಬುಧವಾರ ಮುಂದಿನ ನಿರ್ಧಾರ ಪ್ರಕಟಿಸುತ್ತೇನೆ ಎಂದು ಹೇಳಿದರು.
ಎನ್.ಆರ್.ರಮೇಶ್ ಮನೆ ಬಳಿ ಜಮಾಯಿಸಿದ್ದ ಬೆಂಬಲಿಗರು, ಕಾರ್ಯಕರ್ತರು ಅನಂತಕುಮಾರ್, ಆರ್.ಅಶೋಕ್ ವಿರುದ್ಧ ಘೋಷಣೆ ಕೂಗಿದರು. ರಾಜೇಂದ್ರ ನಾಯ್ದು ಎಂಬುವರು ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆಯಿತು. ತಕ್ಷಣವೇ ಸ್ಥಳದಲ್ಲಿದ್ದವರು ಸಮಾಧಾನಪಡಿಸಿದರು. ಪೊಲೀಸರು ಭದ್ರತೆ ಒಗದಿದ್ದರು.
ಕಿಕ್‌ಬ್ಯಾಕ್ ಶಂಕೆ: ಚಿಕ್ಕಪೇಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಉದಯ್ ಗರುಡಾಚಾರ್ ಅವರಿಗೆ ಟಿಕೆಟ್ ಸಿಕ್ಕಿದ್ದು, 2 ಕೋಟಿ ರೂ. ಹಣ ನೀಡಲಾಗಿದೆ. ಹಾಗಾಗಿ ಶಾಸಕರ (ಆರ್.ವಿ.ದೇವರಾಜ್) ಗೆಲುವು ಸುಲಭ ಎಂಬರ್ಥದ ಸಂದೇಶವನ್ನು ದೇವರಾಜ್ ಅಭಿಮಾನಿಯೊಬ್ಬರು ಮಾ.30ರಂದೇ ಫೇಸ್‌ಬುಕ್‌ನಲ್ಲಿ ಹಾಕಿದ್ದರು. 2 ಕೋಟಿ ರೂ. ಕಿಕ್‌ಬ್ಯಾಕ್ ಪಡೆದಿರುವ ಆರೋಪಕ್ಕೆ ಯಾರೊಬ್ಬರೂ ಸ್ಪಷ್ಟನೆ ನೀಡದ ಕಾರಣ ಕಿಕ್‌ಬ್ಯಾಕ್ ಪಡೆದಿರಬಹುದು ಎಂಬ ಅನುಮಾನ ಮೂಡುವುದು ಸಹಜ ಎಂದು ಮಾರ್ಮಿಕವಾಗಿ ಹೇಳಿದರು.