ಬೆಂಗಳೂರು: ಸಂವಿಧಾನ ತಿದ್ದುಪಡಿ ವಿಚಾರದಲ್ಲಿ ಉತ್ತರ ಕನ್ನಡ ಸಂಸದ ಅನಂತ ಕುಮಾರ್ ಹೆಗಡೆ ಹೇಳಿಕೆ ವಿಚಾರದಲ್ಲಿ ಅಂತರ ಕಾಯ್ದುಕೊಳ್ಳಲು ಬಿಜೆಪಿ ಪ್ರಯತ್ನ ನಡೆಸುತ್ತಿರುವುದರ ಮಧ್ಯೆಯೇ ಕಾಂಗ್ರೆಸ್ ವಾಗ್ಧಾಳಿ ತೀವ್ರಗೊಳಿಸಿದೆ.
ಈ ಮಧ್ಯೆ ಬಿಜೆಪಿ ವರಿಷ್ಠರು ಸ್ಪಷ್ಟನೆ ಕೋರಿ ಹೆಗಡೆಗೆ ನೋಟಿಸ್ ನೀಡುವ ಸಾಧ್ಯತೆಯಿದೆ.ಬಿಜೆಪಿ ಮೂಲಗಳ ಪ್ರಕಾರ, ಹೇಳಿಕೆ ಬಗ್ಗೆ ವರಿಷ್ಠರು ಇದುವರೆಗೆ ನೇರವಾಗಿ ಸ್ಪಷ್ಟನೆ ಕೇಳಿಲ್ಲ, ನೋಟಿಸ್ ಕೂಡ ಜಾರಿ ಮಾಡಿಲ್ಲ. ಆದರೆ ಒಟ್ಟಾರೆಯಾಗಿ ಹೆಗಡೆ ನೀಡಿದ ಹೇಳಿಕೆ ಮತ್ತು ಅದರಿಂದ ಸೃಷ್ಟಿಯಾಗಿರುವ ರಾಜಕೀಯ ವಾತಾವರಣದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ರಾಜ್ಯ ಘಟಕದಿಂದಲೂ ಹೆಗಡೆ ಅವರನ್ನು ಸಂಪರ್ಕಿಸುವ ಅಧಿಕೃತ ಪ್ರಯತ್ನ ನಡೆದಿಲ್ಲ.
ಹೆಗಡೆ ಹೇಳಿಕೆ ಸಂಬಂಧ ಬೆಂಗಳೂರಿನಲ್ಲಿ ಹೇಳಿಕೆ ನೀಡಿರುವ ಸಿಎಂ ಸಿದ್ದರಾಮಯ್ಯ, ಸಂವಿಧಾನವನ್ನು ಬದಲಾಯಿಸಿದರೆ ರಕ್ತಪಾತವಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಜತೆಗೆ ವಿಸ್ತೃತವಾದ ಮಾಧ್ಯಮ ಪ್ರಕಟನೆಯನ್ನು ಹೊರಡಿಸಿ ಆಕ್ರೋಶ ಹೊರಹಾಕಿದ್ದಾರೆ. ಸಂಸದ ಅನಂತಕುಮಾರ ಹೆಗಡೆ ಸಂವಿಧಾನಕ್ಕೆ ವಿರುದ್ಧವಾಗಿ ಮಾತನಾಡಿರುವುದು ವೈಯಕ್ತಿಕ ಹೇಳಿಕೆ ಎಂದು ಬಿಜೆಪಿ ತಳ್ಳಿಹಾಕಿರುವುದು ನಾಚಿಕೆಗೇಡಿನ ನಡೆಯ ಪ್ರತೀಕ ಮಾತ್ರವಲ್ಲ ನೆಲದ ಕಾನೂನಿನ ಬಗ್ಗೆ ಅವರಿಗಿರುವ ತಿರಸ್ಕಾರವೂ ಹೌದು. ಈ ಹೇಳಿಕೆಯನ್ನು ಹೆಗಡೆ ತಮ್ಮ ಮನೆಯ ಅಡುಗೆಕೋಣೆಯಲ್ಲಿ ನೀಡಿದ್ದಲ್ಲ, ಸಾರ್ವಜನಿಕ ಸಮಾರಂಭದಲ್ಲಿ ಸಂಸದರಾಗಿ ಮಾತನಾಡಿದ್ದಾರೆ. ಈ ವ್ಯತ್ಯಾಸ ತಿಳಿಯದಷ್ಟು ಬಿಜೆಪಿ ನಾಯಕರು ಮೂರ್ಖರಲ್ಲ, ಅವರಿಗೆ ಆರ್‌ಎಸ್‌ಎಸ್ ಬೆಂಬಲದ ಅನಂತಕುಮಾರ್ ಹೆಗಡೆ ವಿರುದ್ಧ ಕ್ರಮಕೈಗೊಳ್ಳುವ ಧೈರ್ಯ ಇಲ್ಲ ಎಂದು ಕಿಡಿಕಾರಿದ್ದಾರೆ.
ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರ ಮುಂದೆ ಈಗ ಇರುವುದು ಎರಡೇ ಆಯ್ಕೆ. ಒಂದೋ ಹೆಗಡೆಯನ್ನು ತತ್‌ಕ್ಷಣ ಪಕ್ಷದಿಂದ ವಜಾಗೊಳಿಸಬೇಕು ಇಲ್ಲವೇ ಅವರ ಹೇಳಿಕೆಗೆ ತಮ್ಮ ಸಹಮತ ಇದೆ ಎಂದು ಘೋಷಿಸಬೇಕು. ನೋಡೋಣ ಇದೇ ವಿಷಯದ ಮೇಲೆ ಈ ಬಾರಿಯ ಲೋಕಸಭಾ ಚುನಾವಣೆ ನಡೆಯಲಿ ಎಂದು ಸವಾಲು ಹಾಕಿದ್ದಾರೆ.
ಅನಂತಕುಮಾರ್ ಹೆಗಡೆ ಬಿಜೆಪಿಯ ಹಾಲಿ ಸಂಸದರು ಹಾಗೂ ಕೇಂದ್ರದ ಮಾಜಿ ಸಚಿವರು. ಅವರ ಹೇಳಿಕೆ ವೈಯಕ್ತಿಕ ಅಲ್ಲ. ಅದು ಅವರ ಪಕ್ಷದ ಮನಸ್ಸಿನ ಮಾತು. ಸಂಸದ ಡಿ.ಕೆ.ಸುರೇಶ್ ಅವರು ನಮ್ಮ ತೆರಿಗೆ, ನಮ್ಮ ಹಕ್ಕು ಎಂದಾಗ ಪ್ರಧಾನಿ ಮೋದಿಯಿಂದ ಹಿಡಿದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ವರೆಗೆ ಎಲ್ಲರೂ ಪ್ರತಿಕ್ರಿಯಿಸಿದ್ದರು. ಈಗೇಕೆ ಮಾತನಾಡುತ್ತಿಲ್ಲ? ಇದು ಅವರ ಪಕ್ಷದ ಮಾತು ಎಂಬುದರಲ್ಲಿ ಸಂದೇಹವೇ ಇಲ್ಲ.
-ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ