Advertisement

ರೈಲ್ವೇ ವಾರ್ಡ್‌ಗಳಿಗೆ ಈಗ ಭಾರೀ ಬೇಡಿಕೆ

02:43 AM Jun 16, 2020 | Hari Prasad |

ಹೊಸದಿಲ್ಲಿ: ಆಸ್ಪತ್ರೆಗಳಲ್ಲಿನ ಕೋವಿಡ್ ಸೋಂಕಿತರ ದಟ್ಟಣೆ ಕಡಿಮೆ ಮಾಡಲು ರೈಲ್ವೇ ಇಲಾಖೆ 3 ತಿಂಗಳ ಹಿಂದೆಯೇ ಸಹಸ್ರಾರು ಬೋಗಿಗಳನ್ನು ಐಸೋಲೇಶನ್‌ ವಾರ್ಡ್‌ಗಳನ್ನಾಗಿ ಪರಿವರ್ತಿಸಿತ್ತು.

Advertisement

90 ದಿನಗಳ ಬಳಿಕ ಈ ಯೋಜನೆಯ ಸದ್ವಿನಿಯೋಗವನ್ನು ಒಂದೊಂದೇ ರಾಜ್ಯಗಳು ಪಡೆದುಕೊಳ್ಳುತ್ತಿವೆ.

ರೈಲ್ವೇ ಈಗಾಗಲೇ 5 ಸಾವಿರ ಬೋಗಿಗಳನ್ನು ಕೋವಿಡ್ ವಾರ್ಡ್‌ಗಳನ್ನಾಗಿ ಪರಿವರ್ತಿಸಿದೆ. ಈ ಕೆಲವು ದಿನಗಳಿಂದ ತೀವ್ರ ಸೋಂಕಿಗೆ ತುತ್ತಾಗುತ್ತಿರುವ ದಿಲ್ಲಿಗೆ 54 ಬೋಗಿಗಳನ್ನು ತುರ್ತಾಗಿ ನಿಯೋಜಿಸಲಾಗಿದೆ.

ಶೀಘ್ರವೇ 450 ಹೆಚ್ಚುವರಿ ಬೋಗಿಗಳನ್ನು ರಾಷ್ಟ್ರ ರಾಜಧಾನಿಗೆ ನೀಡಲು ಕೇಂದ್ರ ಸರಕಾರ ನಿರ್ಧರಿಸಿದೆ. ಉತ್ತರಪ್ರದೇಶ 74 ಬೋಗಿ, ತೆಲಂಗಾಣ 60 ಬೋಗಿಗಳ ಪ್ರಯೋಜನ ಪಡೆದುಕೊಂಡಿವೆ.

ವೆಚ್ಚವೆಷ್ಟು?: 5 ಸಾವಿರ ಬೋಗಿಗಳನ್ನು ಕೋವಿಡ್ ವಾರ್ಡ್‌ ಆಗಿ ಪರಿವರ್ತಿಸಲು ರೈಲ್ವೆಗೆ 35 ಕೋಟಿ ರೂ. ಖರ್ಚಾಗಿದೆ. ಪ್ರತಿ ಬೋಗಿಗೆ 67 ಸಾವಿರ ರೂ. ವೆಚ್ಚ ತಗುಲಿದ್ದು, ಆಸ್ಪತ್ರೆ ವಾರ್ಡ್‌ಗಳ ಸೌಲಭ್ಯಗಳನ್ನು ಅಳವಡಿಸಲಾಗಿದೆ ಎಂದು ರೈಲ್ವೇ ಇಲಾಖೆ ಮಾಹಿತಿ ನೀಡಿದೆ.

Advertisement

ಉಷ್ಣ ನಿರೋಧಕ ಛಾವಣಿ: ಹೆಚ್ಚಿನ ತಾಪಮಾನದ ಪ್ರದೇಶಗಳಲ್ಲಿ ಕೋವಿಡ್ ಚಿಕಿತ್ಸಾ ಬೋಗಿಗಳಿಗೆ ಉಷ್ಣನಿರೋಧಕ ಛಾವಣಿ ವ್ಯವಸ್ಥೆ ಕಲ್ಪಿಸಲು ರೈಲ್ವೇ ಇಲಾಖೆ ಮುಂದಾಗಿದೆ. ‘ಈಗಾಗಲೇ ಮೂರ್‍ನಾಲ್ಕು ರಾಜ್ಯಗಳಿಗೆ ಕೋರಿಕೆಯ ಮೇರೆಗೆ ಐಸೊಲೇಶನ್‌ ವಾರ್ಡ್‌ಗಳುಳ್ಳ 204 ಬೋಗಿಗಳನ್ನು ನೀಡಲಾಗಿದೆ.

ಕೆಲವೆಡೆ ತಾಪಮಾನ ಅಧಿಕವಿದೆ. ಬೋಗಿಯೊಳಗೆ ಚಿಕಿತ್ಸೆ ಪಡೆ ಯುವ ರೋಗಿಗಳಿಗೆ, ಆರೈಕೆ ಮಾಡುವ ವೈದ್ಯಕೀಯ ಸಿಬಂದಿಗೆ ನೆರವಾಗಲು ಉಷ್ಣ ನಿರೋಧಕ ಛಾವಣಿ ಅಳವಡಿಸಲಾಗುತ್ತಿದೆ’ ಎಂದು ರೈಲ್ವೇ ಮಂಡಳಿ ಅಧ್ಯಕ್ಷ ವಿ.ಕೆ. ಯಾದವ್‌ ತಿಳಿಸಿದ್ದಾರೆ. ಎ.ಸಿ. ಇಲ್ಲದ ಪ್ಯಾಸೆಂಜರ್‌ ರೈಲುಗಳನ್ನೇ ಅಧಿಕವಾಗಿ ಚಿಕಿತ್ಸಾ ಕೇಂದ್ರಗಳನ್ನಾಗಿ ಪರಿವರ್ತಿಸಿರುವ ಕಾರಣ ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ.

‘ರಾಜ್ಯಗಳಲ್ಲಿ ವೈದ್ಯಕೀಯ ಮೂಲ ಸೌಕರ್ಯ ಕೊರತೆಯಾದಾಗ ಮಾತ್ರವೇ ಬೋಗಿ ಆರೈಕೆ ಕೇಂದ್ರಗಳನ್ನು ನೀಡಲಾಗುವುದು. ಸೋಂಕಿತರು ಹಾಗೂ ಶಂಕಿತರನ್ನು ಪ್ರತ್ಯೇಕವಾಗಿ ಇಡುವ ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.

ಮುಂಬಯಿನಲ್ಲಿ ಲೋಕಲ್‌ ಟ್ರೈನುಗಳ ಸಂಚಾರ ಆರಂಭ
ಮುಂಬಯಿಯಲ್ಲಿ ಸೋಮವಾರದಿಂದ ಲೋಕಲ್‌ ಟ್ರೈನುಗಳ ಸಂಚಾರ ಆರಂಭಗೊಂಡಿವೆ. ಈ ರೈಲುಗಳು ಸರಕಾರ ನಿಗದಿಪಡಿಸಿದ ಅಗತ್ಯ ಸಿಬಂದಿಗೆ ಮಾತ್ರವೇ ಮೀಸಲಾಗಿದ್ದು, ಸಾರ್ವಜನಿಕರಿಗೆ ಪ್ರಯಾಣಿಸಲು ಇನ್ನೂ ಅನುಮತಿ ದೊರೆತಿಲ್ಲ.

ವೆಸ್ಟರ್ನ್ ರೈಲ್ವೇ 60 ಹಾಗೂ ಸೆಂಟ್ರಲ್‌ ರೈಲ್ವೇ 65 ಜೋಡಿ ರೈಲುಗಳನ್ನು ಹಳಿಗೆ ಬಿಟ್ಟಿವೆ. ಬೆಳಗ್ಗೆ 5.30 ರಿಂದ ರಾತ್ರಿ 11.30ರವರೆಗೆ, ಪ್ರತಿ 15 ನಿಮಿಷಗಳಿಗೊಮ್ಮೆ ಲೋಕಲ್‌ ರೈಲುಗಳು ಓಡಾಡಲಿವೆ. ಪ್ರಯಾಣದ ವೇಳೆ ಸಾಮಾಜಿಕ ಅಂತರ ಪಾಲನೆ ಅಲ್ಲದೆ ಕೆಲವು ಆರೋಗ್ಯ ಮಾರ್ಗಸೂಚಿಗಳನ್ನು ಕಡ್ಡಾಯಗೊಳಿಸಲಾಗಿದೆ. ವೆಸ್ಟರ್ನ್ ರೈಲ್ವೇ ನಿಗದಿತ ಉಪನಗರಗಳಿಗೆ, ಸೆಂಟ್ರಲ್‌ ರೈಲ್ವೇ ಮುಖ್ಯ ಮಾರ್ಗ ಮತ್ತು ಹಾರ್ಬರ್‌ ಮಾರ್ಗಗಳ ನಡುವೆ ಸಂಚರಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next