ಬೆಂಗಳೂರು: “ಜಿಂದಾಲ್‌ಗೆ ಜಮೀನು ಮಾರಾಟ ಮಾಡದಂತೆ ಮತ್ತು ವಿಜಯನಗರ ಜಿಲ್ಲೆಯಾಗಿ ಘೋಷಣೆ ಮಾಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ್ದೇನೆ. ನನ್ನ ಮಾತಿಗೆ ಬೆಲೆ ಸಿಗದ ಹಿನ್ನೆಲೆಯಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ’ ವಿಜಯನಗರ (ಹೊಸಪೇಟೆ) ಶಾಸಕ ಆನಂದ್‌ಸಿಂಗ್ ಹೇಳಿದ್ದಾರೆ.
ಸೋಮವಾರ ಬೆಳಗ್ಗೆ ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ಅವರ ನಿವಾಸಕ್ಕೆ ತೆರಳಿ ರಾಜೀನಾಮೆ ಸಲ್ಲಿಸಿದ್ದರು. ಆದರೆ, ತಮಗೆ ಯಾರೂ ರಾಜೀನಾಮೆ ಸಲ್ಲಿಸಿಲ್ಲ ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದ ಹಿನ್ನೆಲೆಯಲ್ಲಿ ತಾವು ರಾಜೀನಾಮೆ ನೀಡಿರುವುದನ್ನು ರಾಜ್ಯಪಾಲರಿಗೂ ಸಲ್ಲಿಸಿ, ಮುಂದಿನ ಕ್ರಮ ಕೈಗೊಳ್ಳಲು ಸೂಚಿಸುವಂತೆ ಮನವಿ ಮಾಡಿದ್ದಾರೆ.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಿಂದಾಲ್ ಸಂಸ್ಥೆಗೆ ಜಮೀನು ಮಾರಾಟ ಮಾಡದಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದೇನೆ. ಹಿಂದಿನ ಸರ್ಕಾರಗಳು ತಪ್ಪು ಮಾಡಿರಬಹುದು. ಈಗಿನ ಸರ್ಕಾರ ಅದನ್ನು ಸರಿಪಡಿಸಬೇಕೆಂದು ಹೇಳಿದರು.
ನನ್ನ ಕ್ಷೇತ್ರ ಹಾಗೂ ಜಿಲ್ಲೆಯ ಹಿತ ಕಾಯಲು ಆಗದಿದ್ದರೆ, ಜನಪ್ರತಿನಿಧಿಗಳಾಗಿ ಪ್ರಯೋಜನವಿಲ್ಲ. ಜಿಂದಾಲ್ ಸಂಸ್ಥೆಗೆ ಎಷ್ಟೇ ಜಮೀನು ನೀಡಿದರೂ, ಮಾರಾಟ ಮಾಡುವುದಕ್ಕೆ ನನ್ನ ವಿರೋಧವಿದೆ. ಅದರ ವಿರುದ್ಧ ನಾನು ಈಗಾಗಲೇ ಧ್ವನಿ ಎತ್ತಿದ್ದೇನೆ. ನಮ್ಮ ಜಿಲ್ಲೆಯ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಇದರ ವಿರುದ್ಧ ಧ್ವನಿ ಎತ್ತಬೇಕು. ಇದು ಯಾವುದೇ ಆಪರೇಷನ್ ಕಮಲವಲ್ಲ ನಮ್ಮ ಜಿಲ್ಲೆ ಹಾಗೂ ರಾಜ್ಯದ ಒಳಿತಿಗಾಗಿ ರಾಜೀನಾಮೆ ಸಲ್ಲಿಸಿದ್ದೇನೆಂದು ಸ್ಪಷ್ಟಪಡಿಸಿದರು.
ರಾಜೀನಾಮೆ ಸಲ್ಲಿಸುವ ಮೂಲಕ ಸಚಿವ ಸ್ಥಾನಕ್ಕಾಗಿ ಒತ್ತಡ ಹೇರುವ ತಂತ್ರ ಅನುಸರಿಸುತ್ತಿಲ್ಲ. ನಾನು ಯಾವುದೇ ಅಧಿಕಾರಕ್ಕೆ ಅಂಟಿಕೊಂಡಿಲ್ಲ. ಪಕ್ಷದ ವಿರುದ್ಧ ಗುಂಪುಗಾರಿಕೆಯನ್ನೂ ಮಾಡುತ್ತಿಲ್ಲ. ನಾನು ಎಲ್ಲ ಪಕ್ಷದವರೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದೇನೆ. ಆದರೆ, ಬೇರೆ ಪಕ್ಷ ಸೇರುವುದಿಲ್ಲ. ಪಕ್ಷದ ನಾಯಕರ ವಿರುದ್ಧ ಯಾವುದೇ ರೀತಿಯ ಹೇಳಿಕೆ ನೀಡುವುದಿಲ್ಲ ಎಂದು ಹೇಳಿದರು.
ಇದೇ ವೇಳೆ, ತಮ್ಮ ಕ್ಷೇತ್ರ ವಿಜಯನಗರ ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕೆಂಬ ಬೇಡಿಕೆಯೂ ಇದೆ. ವಿಜಯನಗರ ಜಿಲ್ಲೆಯನ್ನಾಗಿ ಘೊಷಣೆ ಮಾಡಿದರೆ, ನನಗೆ ಸಚಿವ ಸ್ಥಾನ ಬೇಡ ಎಂದು ಪಕ್ಷದ ನಾಯಕರಿಗೆ ಸ್ಪಷ್ಟಪಡಿಸಿದ್ದೇನೆ. ಈ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದೇನೆ. ಸರ್ಕಾರ ಯಾವ ತೀರ್ಮಾನ ತೆಗೆದುಕೊಳ್ಳುತ್ತದೆಯೋ ಕಾದು ನೋಡಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆಂದು ಆನಂದ್ ಸಿಂಗ್ ಹೇಳಿದರು.