Advertisement

ಶ್ರೀಲಂಕಾ ತಂಡದೆದುರು ಪಾಕಿಸ್ಥಾನಕ್ಕೆ ಇನ್ನಿಂಗ್ಸ್‌  ಗೆಲುವು; 2-0 ಸರಣಿ

11:26 PM Jul 27, 2023 | Team Udayavani |

ಕೊಲಂಬೊ: ಪ್ರವಾಸಿ ಪಾಕಿಸ್ಥಾನ ತಂಡವು ಶ್ರೀಲಂಕಾ ತಂಡದೆದುರಿನ ಎರಡು ಪಂದ್ಯ ಗಳ ಟೆಸ್ಟ್‌ ಸರಣಿಯನ್ನು ಕ್ಲೀನ್‌ಸ್ವೀಪ್ ಮೂಲಕ ಗೆದ್ದುಕೊಂಡಿದೆ. ಗುರುವಾರ ಅಂತ್ಯಗೊಂಡ ದ್ವಿತೀಯ ಪಂದ್ಯವನ್ನು ಪಾಕಿಸ್ಥಾನ ಇನ್ನಿಂಗ್ಸ್‌ ಮತ್ತು 222 ರನ್ನುಗಳ ಬೃಹತ್‌ ಅಂತರದಿಂದ ಜಯಿಸಿದೆ. ಪಾಕಿಸ್ಥಾನವು ಮೊದಲ ಪಂದ್ಯವನ್ನು ನಾಲ್ಕು ವಿಕೆಟ್‌ಗಳಿಂದ ಗೆದ್ದಿತ್ತು.

Advertisement

ದ್ವಿತೀಯ ಟೆಸ್ಟ್‌ನಲ್ಲಿ ಪಾಕಿಸ್ಥಾನ ತಂಡವು ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಗಮನಾರ್ಹ ನಿರ್ವಹಣೆ ನೀಡಿ ಗಮನ ಸೆಳೆದಿದೆ. ಶ್ರೀಲಂಕಾ ತಂಡವನ್ನು ದ್ವಿತೀಯ ಇನ್ನಿಂಗ್ಸ್‌ನಲ್ಲಿ ಕೇವಲ 188 ರನ್ನಿಗೆ ಆಲೌಟ್‌ ಮಾಡಿಸಿದ ಪಾಕಿಸ್ಥಾನ ಭಾರೀ ಅಂತರದಲ್ಲಿ ಗೆದ್ದು ಸಂಭ್ರಮ ಆಚರಿಸಿತು.

ಈ ಮೊದಲು ಪಾಕಿಸ್ಥಾನ 5 ವಿಕೆಟಿಗೆ 563 ರನ್ನುಗಳಿಂದ ದಿನದಾಟ ಆರಂಭಿಸಿ ಕೇವಲ 10 ನಿಮಿಷ ಆಡಿ 576 ರನ್ನಿಗೆ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿತು. ಸರ್ಫರಾಜ್‌ ಅಹ್ಮದ್‌ ಬದಲಿಗೆ ಆಯ್ಕೆಯಾಗಿದ್ದ ಮೊಹಮ್ಮದ್‌ ರಿಜ್ವಾನ್‌ ಅರ್ಧಶತಕ ಪೂರ್ತಿಗೊಳಿಸುತ್ತಲೇ ನಾಯಕ ಬಾಬರ್‌ ಅಜಂ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡರು. ಇದು ಟೆಸ್ಟ್‌ನಲ್ಲಿ ರಿಜ್ವಾನ್‌ ಅವರ ಎಂಟನೇ ಅರ್ಧಶತಕ ಆಗಿದೆ. ಈ ಮೊದಲು ಆರಂಭಿಕ ಆಟಗಾರ ಅಬ್ದುಲ್ಲ ಶಫೀಕ್‌ ಅವರ ದ್ವಿಶತಕ (201) ಮತ್ತು ಆಘಾ ಸಲ್ಮಾನ್‌ (ಅಜೇಯ 132) ಅವರ ಜೀವನಶ್ರೇಷ್ಠ ನಿರ್ವಹಣೆಯಿಂದಾಗಿ ಪಾಕಿಸ್ಥಾನ ಬೃಹತ್‌ ಮೊತ್ತ ಪೇರಿಸುವಂತಾಯಿತು.

ದ್ವಿಶತಕವೀರ ಅಬ್ದುಲ್ಲ ಶಫೀಕ್‌ ಪಂದ್ಯಶ್ರೇಷ್ಠ ಹಾಗೂ ಒಟ್ಟಾರೆ 221 ರನ್‌ ಮತ್ತು 3 ವಿಕೆಟ್‌ ಪಡೆದಿರುವ ಆಘಾ ಸಲ್ಮಾನ್‌ ಸರಣಿಶ್ರೇಷ್ಠ ಪ್ರಶಸ್ತಿ ಪಡೆದರು.

ಸಂಕ್ಷಿಪ್ತ ಸ್ಕೋರು: ಶ್ರೀಲಂಕಾ 166 ಮತ್ತು 188 (ನಿಶಾನ್‌ ಮದುಷ್ಕಾ 33, ದಿಮುತ್‌ ಕರುಣರತ್ನ 41, ಮ್ಯಾಥ್ಯೂಸ್‌ 63 ಔಟಾಗದೆ, ನೋಮನ್‌ ಆಲಿ 70ಕ್ಕೆ 7); ಪಾಕಿಸ್ಥಾನ 5 ವಿಕೆಟಿಗೆ 576 ಡಿಕ್ಲೇರ್ಡ್ (ಅಬ್ದುಲ್ಲ ಶಫೀಕ್‌ 201, ಶಾನ್‌ ಮಸೂದ್‌ 51, ಸೌದ್‌ ಶಕೀಲ್‌ 57, ಆಘಾ ಸಲ್ಮಾನ್‌ 132 ಔಟಾಗದೆ, ರಿಜ್ವಾನ್‌ 50 ಔಟಾಗದೆ, ಆಸಿತಾ ಫೆರ್ನಾಂಡೊ 133ಕ್ಕೆ 3).

Advertisement
Advertisement

Udayavani is now on Telegram. Click here to join our channel and stay updated with the latest news.

Next