ಕೆಂಗೇರಿ: “ಮಹದಾಯಿ ಹಾಗೂ ಕಾವೇರಿ ನೀರು ಹಂಚಿಕೆ ವಿಚಾರವಾಗಿ ಕೇಂದ್ರ ಸರ್ಕಾರದ ಜತೆ ಚರ್ಚಿಸದೆ ಮೌನವಾಗಿರುವ ರಾಜ್ಯ ಬಿಜೆಪಿ ಮುಖಂಡರು, ರಾಜ್ಯದ ರೈತರಿಗೆ ದ್ರೋಹವೆಸಗಿದ್ದಾರೆ’ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಆರೋಪಿಸಿದರು.
ಮಾಗಡಿ ಮುಖ್ಯ ರಸ್ತೆಯ ಕೊಡಿಗೇಹಳ್ಳಿಯಲ್ಲಿ ಯಶವಂತಪುರ ವಿಧಾನಸಭೆ ಕ್ಷೇತ್ರ ಕಾಂಗ್ರೆಸ್ ಘಟಕದಿಂದ ಹಮ್ಮಿಕೊಂಡಿದ್ದ ಮನೆ ಮನೆಗೆ ಕಾಂಗ್ರೆಸ್, ನೂತನ ಸಚಿವರಿಗೆ ಅಭಿನಂದನೆ ಸಮಾರಂಭ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, “ಕೇಂದ್ರ ಸರ್ಕಾರ, ರಾಜ್ಯ ಸರ್ಕಾರದ ಬಗ್ಗೆ ತಾರತಮ್ಯ ಧೋರಣೆ ಅನುಸರಿಸುತ್ತಿದ್ದು, ಬರ ಪರಿಹಾರ ನೀಡುವ ವಿಚಾರದಲ್ಲೂ ರಾಜಕೀಯ ಮಾಡುತ್ತಿದೆ ಎಂದು ದೂರಿದರು.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವೈಪಲ್ಯಗಳನ್ನು ಜನತೆಗೆ ತಲುಸಪಿಸುವ ಕೆಲಸವನ್ನು ಕಾಂಗ್ರೆಸ್ ಕಾರ್ಯಕರ್ತರು ಮಾಡಬೇಕು. ಚುನಾವಣೆಗೆ ಮುನ್ನ ಬಿಜೆಪಿ ನೀಡಿದ ಭರವಸೆಗಳು ಈಡೇರಿಲ್ಲ ಎಂಬುದನ್ನು ಜನರಿಗೆ ತಿಳಿಸಬೇಕು. ಜತೆಗೆ ಕಾಂಗ್ರೆಸ್ ಸರ್ಕಾರದ ಸಾಧನೆಗಳ ಬಗ್ಗೆ ಮಾಹಿತಿ ನೀಡಿ, ರಾಜ್ಯದಲ್ಲಿ ಪಕ್ಷ ಮತ್ತೂಮ್ಮೆ ಅಧಿಕಾರ ಹಿಡಿಯುವಲ್ಲಿ ಕಾರ್ಯಕರ್ತರು ಪ್ರಮುಖ ಪಾತ್ರ ವಹಿಸಬೇಕು ಎಂದು ಸಚಿವರು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಸ್.ಟಿ.ಸೋಮಶೇಖರ್ ಮಾತನಾಡಿ, “ತ್ಯಾಜ್ಯ ಸಂಶ್ಕರಣೆ ಘಟಕ ಸ್ಥಾಪನೆಯಲ್ಲಿ ಶಾಸಕರ ಕೈವಾಡವಿದೆ ಎಂದು ಬಿಜೆಪಿಯವರು ಆರೋಪಿಸುತ್ತಿದ್ದಾರೆ. ಆದರೆ ಘಟಕ ಸ್ಥಾಪನೆಗೆ ಜಮೀನು ಮಂಜೂರಾಜಿರುವುದು ಮಾಜಿ ಡಿಸಿಎಂ ಆರ್.ಅಶೋಕ ಅವರ ಅವಧಿಯಲ್ಲಿ. ಈ ಕುರಿತು ಬಹಿರಂಗ ಚರ್ಚೆಗೆ ನಾನು ಸಿದ್ಧನಿದ್ದೇನೆ,’ ಎಂದು ಸವಾಲು ಹಾಕಿದರು.
ವಿಧಾನ ಪರಿಷತ್ ಸದಸ್ಯ ಎಂ.ನಾರಾಯಣ ಸ್ವಾಮಿ, ಬೆಂಗಳೂರು ನಗರ ಜಿಲ್ಲಾ ಕಿಸಾನ್ ಖೇತ್ ಕಾಂಗ್ರೆಸ್ ಅಧ್ಯಕ್ಷ ಎನ್.ನಂಜುಂಡೇಶ್, ನೆಲಮಂಗಲ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಿ.ಎಂ.ಪ್ರಕಾಶ್, ಬೆಂಗಳೂರು ನಗರ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪಾಲನೇತ್ರಯ್ಯ, ಕೊಡಿಗೇಹಳ್ಳಿ ಗ್ರಾ.ಪಂ ಅಧ್ಯಕ್ಷೆ ಲೋಕಾದೇವಿ ನಾಗರಾಜ್, ಹೇರೋಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಕುಮಾರ್, ಗ್ರಾ.ಪಂ ಸದಸ್ಯರಾದ ಸಿದ್ದಲಿಂಗಸ್ವಾಮಿ, ಗಾಳಪ್ಪ, ಜಯಶೀಲ ಮತ್ತಿತರರು ಉಪಸ್ಥಿತರಿದ್ದರು.