Advertisement

ರಮಣ-ರಮಣಿ ಜೊತೆಗೆ ವೆಸ್ಲೆ ಚಿತ್ರ

08:15 AM Mar 16, 2018 | |

ಒಂದು ಕಾಲಕ್ಕೆ ಒಂದೇ ಚಿತ್ರಕ್ಕೆ ಹಲವು ಜವಾಬ್ದಾರಿಗಳನ್ನು ಹೊರುತ್ತಿದ್ದ ವೆಸ್ಲೆ ಬ್ರೌನ್‌, ಸದ್ದಿಲ್ಲದೆ ಒಂದು ಹೊಸ ಚಿತ್ರವನ್ನು
ಪ್ರಾರಂಭಿಸಿದ್ದಾರೆ. ವಿಶೇಷವೆಂದರೆ, ಅವರ ಹೊಸ ಚಿತ್ರ “ರಮಣ-ರಮಣಿ’ಗೆ ಅವರು ಹೆಚ್ಚು ಜವಾಬ್ದಾರಿ ಬೇಡ ಅಂತ 
ತೀರ್ಮಾನಿಸಿಬಿಟ್ಟಿದ್ದಾರೆ. ಕಥೆ, ಚಿತ್ರಕಥೆ, ಛಾಯಾಗ್ರಹಣ ಮತ್ತು ನಿರ್ದೇಶನ ಮಾತ್ರ ತಮ್ಮ ಬಳಿ ಇಟ್ಟುಕೊಂಡು, ಮಿಕ್ಕಿದ್ದೆಲ್ಲವನ್ನೂ ಬೇರೆಯವರಿಗೆ ಹಂಚಿದ್ದಾರೆ. ಅಂದಹಾಗೆ, “ರಮಣ-ರಮಣಿ’ ಬಗ್ಗೆ ಮಾತನಾಡುವುದಕ್ಕೆ ಅವರು ತಮ್ಮ ತಂಡದ ಜೊತೆಗೆ
ಇತ್ತೀಚೆಗೆ ಬಂದಿದ್ದರು. ಈ ಚಿತ್ರದಲ್ಲಿ ಎಮೋಷನ್‌ಗೆ ಸಾಕಷ್ಟು ಒತ್ತು ನೀಡಿದ್ದಾರಂತೆ. “ಕಳೆದ ಒಂದೂವರೆ ವರ್ಷಗಳ ಕಾಲು ಕೂತು ಕಥೆ ಮಾಡಿದ್ದೇನೆ. ಚಿತ್ರದಲ್ಲಿ ಎಮೋಷನ್‌ಗಳಿಗೆ ಸಾಕಷ್ಟು ಒತ್ತು ಕೊಟ್ಟಿದ್ದೇನೆ. ಚಿತ್ರ ನೋಡಿದವರಿಗೆ ನಿಜವಾದ ಬದುಕು ಅರ್ಥವಾಗುತ್ತದೆ. ಈಗಾಗಲೇ ಶಿವಮೊಗ್ಗ ಮುಂತಾದ ಕಡೆ 20 ಪರ್ಸೆಂಟ್‌ ಚಿತ್ರೀಕರಣ ಮುಗಿದಿದೆ’ ಎಂದು ಹೇಳುತ್ತಾರೆ
ಅವರು.

Advertisement

ಇನ್ನು ಈ ಚಿತ್ರವನ್ನು ಜಯರಾಜ್‌ ಎನ್ನುವವರು ನಿರ್ಮಿಸುತ್ತಿದ್ದಾರೆ. ಸಾಕಷ್ಟು ಸಿನಿಮಾಗಳನ್ನು ನೋಡಿರುವ ಅವರಿಗೆ ಒಂದು ಚಿತ್ರ ನಿರ್ಮಿಸಬೇಕು ಎಂಬ ಆಸೆ ಇತ್ತಂತೆ. ಅದು ಈ ಚಿತ್ರದ ಮೂಲಕ ಈಡೇರಿದೆ. ನಿರ್ಮಾಪಕರ ಸಿನಿಮಾ ಪ್ರೀತಿ
ಎಷ್ಟಿದೆ ಎಂದು ವಿವರಿಸಿದ ವೆಸ್ಲೆ, “ಒಮ್ಮೆ ನಾವು ಮಾಲ್‌ವೊಂದರಲ್ಲಿ “ಊರ್ವಿ’ ಸಿನಿಮಾ ನೋಡೋಕೆ ಹೋಗಿದ್ದೆವು. ಆದರೆ, ಜನ ಕಡಿಮೆ ಇದ್ದುದರಿಂದ ಪ್ರದರ್ಶನ ಕ್ಯಾನ್ಸೆಲ್‌ ಮಾಡುವುದಕ್ಕೆ ಚಿತ್ರಮಂದಿರದವರು ಯೋಚಿಸಿದ್ದರು. ಆದರೆ, ಚಿತ್ರ
ನೋಡಲೇಬೇಕೆಂದು ನಿರ್ಮಾಪಕರು, ಅಷ್ಟೂ ಟಿಕೆಟುಗಳನ್ನು ಕೊಂಡು ಚಿತ್ರ ತೋರಿಸಿದರು. ಇದು ಅವರ ಸಿನಿಮಾ ಪ್ರೀತಿ. ಆ ಪ್ರೀತಿ ಇರುವುದರಿಂದಲೇ, ಚಿತ್ರಕ್ಕೆ ಯಾವ ಸಮಸ್ಯೆಯೂ ಆಗಿಲ್ಲ’ ಎಂದು ವೆಸ್ಲೆ ಹೇಳಿದರು. ಈ ಚಿತ್ರದ ನಿರ್ಮಾಣದಲ್ಲಿ ದಯಾನಂದ ಮಠಪತಿ, ಎಚ್‌. ರವಿಕುಮಾರ್‌ ಮತ್ತು ಮುನಿರಾಜ್‌ ಸಹ ತೊಡಗಿಸಿಕೊಂಡಿದ್ದಾರೆ.

ಈ ಚಿತ್ರದಲ್ಲಿ ಅಭಿರಾಮ್‌ ಮತ್ತು ರಜತ್‌ ಲಕ್ಷ್ಮೀ ನಾಯಕ-ನಾಯಕಿಯಾಗಿ ನಟಿಸಿದ್ದಾರೆ. ಅಭಿರಾಮ್‌ ಈ ಹಿಂದೆ ವೆಸ್ಲೆ ಅವರ “ಮೊದಲ ಮಿಂಚು’ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದರು. ಈಗ ಮತ್ತೆ ವೆಸ್ಲೆ ಚಿತ್ರದಲ್ಲಿ ನಟಿಸುತ್ತಿರುವುದಕ್ಕೆ ಖುಷಿಯಾಗಿದೆ ಎನ್ನುತ್ತಾರೆ ಅಭಿರಾಮ್‌. ಮಾಡಲಿಂಗ್‌ ಕ್ಷೇತ್ರದಲ್ಲಿದ್ದ ರಜತ್‌ ಲಕ್ಷ್ಮೀ ಈ ಚಿತ್ರದ ಮೂಲಕ ಮೊದಲ ಬಾರಿಗೆ ನಾಯಕಿಯಾಗಿ ಚಿತ್ರರಂಗಕ್ಕೆ ಬಂದಿದ್ದಾರೆ. ಇನ್ನು ಅಭಿಲಾಶ್‌ ಮತ್ತು ಜೋಯೆಲ್‌ ಸಂಗೀತ ಸಂಯೋಜಿಸಿದರೆ, ಸುರೇಶ್‌ ಅರಸ್‌ ಅವರು ಸಂಕಲನ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next