ಸಾಮಾನ್ಯವಾಗಿ ರಕ್ತಪಾತ, ಕೊಲೆ, ಭಾರೀ ಹೊಡೆದಾಟ, ಅಶ್ಲೀಲ ಪದ ಪ್ರಯೋಗ ಇತ್ಯಾದಿ ಅಂಶಗಳಿದ್ದರೆ, ಸೆನ್ಸಾರ್ ಮಂಡಳಿ ಮುಲಾಜಿಲ್ಲದೆ “ಎ’ ಪ್ರಮಾಣ ಪತ್ರ ಕೊಡೋದು ಪಕ್ಕಾ. ಆದರೆ, ಇಲ್ಲೊಂದು ಚಿತ್ರದಲ್ಲಿ ಇದ್ಯಾವುದೂ ಇಲ್ಲ. ಆದರೂ ಸಿನಿಮಾ ವೀಕ್ಷಿಸಿರುವ ಸೆನ್ಸಾರ್ ಮಂಡಳಿ ಬೆಚ್ಚಿ ಬಿದ್ದು ಚಿತ್ರಕ್ಕೆ “ಎ’ ಪ್ರಮಾಣ ಪತ್ರ ನೀಡಿದೆ! ಹೌದು, ಆ ಚಿತ್ರದ ಹೆಸರು “ಮೂರ್ಕಲ್ ಎಸ್ಟೇಟ್’. ಅಷ್ಟಕ್ಕೂ ಸೆನ್ಸಾರ್ ಮಂಡಳಿ ಬೆಚ್ಚಿ ಬಿದ್ದಿದ್ದು ಯಾಕೆ? ಅದಕ್ಕೆ ನಿರ್ದೇಶಕ ಪ್ರಮೋದ್ ಕುಮಾರ್ ಉತ್ತರಿಸೋದು ಹೀಗೆ.
“ಇಲ್ಲಿ ಕೊಲೆ ಅಂಶವಿಲ್ಲ, ರಕ್ತಪಾತವಿಲ್ಲ, ಅಶ್ಲೀಲತೆ ಮೊದಲೇ ದೂರ. ಆದರೂ ಸಿನಿಮಾಗೆ “ಎ’ಪ್ರಮಾಣ ಪತ್ರ ಸಿಕ್ಕಿದೆ. ಸಹಜವಾಗಿಯೇ ನಮಗೆ ಬೇಸರವಾಗಿದ್ದು ನಿಜ, ನಾವು ಇದನ್ನು ಪ್ರಶ್ನಿಸಿ ರಿವೈಸಿಂಗ್ ಕಮಿಟಿವರೆಗೂ ಹೋಗಿದ್ದೆವು. ಆದರೆ, ಅಲ್ಲೂ ಕೂಡ ಚಿತ್ರಕ್ಕೆ “ಎ’ ಪ್ರಮಾಣ ಪತ್ರವೇ ಸಿಕ್ಕಿದೆ’ ಎಂಬುದು ಅವರ ಮಾತು. ಹಾಗಾದರೆ, ಅದಕ್ಕೆ ಕಾರಣವೇನು? ಸಿನಿಮಾದಲ್ಲಿರುವ ಭರ್ಜರಿ ಎಫೆಕ್ಟ್ಸ್ ಮತ್ತು ಭಯಪಡಿಸುವ ಸೌಂಡ್ ಎನ್ನುತ್ತಾರೆ ಅವರು.
“ಮೂರ್ಕಲ್ ಎಸ್ಟೇಟ್’ ಇದು ಹಾರರ್ ಚಿತ್ರ. ಹಾಗಾಗಿ ಇಲ್ಲಿ ಭಯಬೀಳಿಸುವ ಅಂಶಗಳೇ ಇಲ್ಲವೆಂದರೆ ಹೇಗೆ ಹೇಳಿ? ಹಾಗಂತ ಇಲ್ಲಿ ದೆವ್ವವಿಲ್ಲ, ಭೂತವಿಲ್ಲ, ದ್ವೇಷಿಸುವ ಆತ್ಮವೂ ಇಲ್ಲ, ಕಾಟ ಕೊಡುವ ಪಿಶಾಚಿಯೂ ಇಲ್ಲ. ಇಲ್ಲಿರೋದು ಎನರ್ಜಿ ಅಂಶ. ನೆಗೆಟಿವ್ ಹಾಗು ಪಾಸಿಟಿವ್ ಅಂಶಗಳನ್ನಿಟ್ಟುಕೊಂಡೇ ನಿರ್ದೇಶಕರು ಕಥೆ ಮಾಡಿದ್ದಾರೆ. ಇಲ್ಲಿ ವಿಚಿತ್ರವಾಗಿ ಧ್ವನಿ ಮಾಡುವ ದೆವ್ವದ ಬದಲಾಗಿ, ಸ್ಮೋಕ್‌ನಲ್ಲೊಂದು ಎಫೆಕ್ಟ್ಸ್ ಕೊಟ್ಟು ಬೆಚ್ಚಿಬೀಳಿಸುವ ಪ್ರಯತ್ನ ಮಾಡಲಾಗಿದೆ.
ವಾಟರ್‌ನಲ್ಲೇ ಜೋತಾದ ಸದ್ದು ಮಾಡುವ ಮೂಲಕ ಭಯಪಡಿಸುವ ಮಟ್ಟಕ್ಕೆ ಕೆಲಸ ಮಾಡಲಾಗಿದೆ. ಕೇವಲ ಇದನ್ನಷ್ಟೇ ನೋಡಿ ಸೆನ್ಸಾರ್ ಮಂಡಳಿ ಚಿತ್ರಕ್ಕೆ “ಎ’ ಪ್ರಮಾಣ ಪತ್ರ ಕೊಟ್ಟಿದೆ. ಆದರೂ, ಇಲ್ಲೊಂದು ಸಂದೇಶವಿದೆ. ಅದನ್ನು ಸಿನಿಮಾದಲ್ಲೇ ನೋಡಬೇಕು ಎಂಬುದು ಚಿತ್ರತಂಡದ ಹೇಳಿಕೆ. ಕುಮಾರ್ ಭದ್ರಾವತಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ಲಕ್ಷ್ಮೀನಾರಾಯಣ್ ಹಿನ್ನೆಲೆ ಸಂಗೀತವಿದೆ. ಕೃಷ್ಣ, ಮುನಿಸ್ವಾಮಿ ಅವರು ನಿರ್ಮಾಣದಲ್ಲಿ ಸಾಥ್ ನೀಡಿದ್ದಾರೆ. ಶಂಕರ್ ಎಫೆಕ್ಟ್ಸ್ ಚಿತ್ರಕ್ಕಿದೆ.