Advertisement

ಮಚ್ಚಿನ ಕೋಡ್ಯೇಲು ಕೆರೆ: ಹೂಳೆತ್ತಿದರೆ ಜನೋಪಯೋಗಿ

02:05 PM Jan 06, 2018 | Team Udayavani |

ಬೆಳ್ತಂಗಡಿ: ತಾಲೂಕಿನ ಮಚ್ಚಿನ ಗ್ರಾಮದ ಕೋಡ್ಯೇಲು ಎಂಬಲ್ಲಿ ಒಂದು ಎಕರೆಯಷ್ಟು ವಿಸ್ತೀರ್ಣವಿರುವ ಕೋಡ್ಯೇಲು ಕೆರೆ ಅಭಿವೃದ್ಧಿ ಕಾಣದೆ ಸೊರಗಿದೆ. ಬಳ್ಳಮಂಜದಿಂದ ಸುಮಾರು ಒಂದೂವರೆ ಕಿ.ಮೀ. ದೂರದಲ್ಲಿ ಕಾಡುಗಳ ನಡುವಿರುವ ಈ ಕೆರೆಯಲ್ಲಿ ಯಥೇತ್ಛ ಶುದ್ಧ ನೀರಿದ್ದರೂ ಹೂಳೆತ್ತುವ ಕಾರ್ಯ ನಡೆದಿಲ್ಲ.

Advertisement

50 ವರ್ಷಗಳಿಂದ ಹೂಳೆತ್ತಿಲ್ಲ
ಕೆರೆಯ ಹೂಳೆತ್ತದೆ ಸುಮಾರು 50 ವರ್ಷಗಳೇ ಸಂದಿವೆ. ಮಚ್ಚಿನ ಪೇಟೆಯಿಂದ ದೂರದಲ್ಲಿ ಕಾಡುದಾರಿಯಲ್ಲಿರುವುದರಿಂದ ಕೆರೆಯ ಅಭಿವೃದ್ಧಿ ನೇಪಥ್ಯಕ್ಕೆ ಸರಿದಿದೆ. ನೀರಿನ ಸಮಸ್ಯೆ ಅನೇಕ ಎದುರಾದರೂ ಕೆರೆಯ ದುರಸ್ತಿ ಮಾಡುವ ವಿಚಾರದ ಬಗ್ಗೆ ಯಾರೂ ಮುಂದಾಳತ್ವ ವಹಿಸಿಕೊಂಡಿರಲಿಲ್ಲ. ಹೀಗಾಗಿ, ನೀರಿದ್ದರೂ ಅದು ಬಳಕೆಗೆ ಸಿಗುತ್ತಿಲ್ಲ. ಈ ಬಾರಿ ಕೆರೆಯ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಮಚ್ಚಿನ ಗ್ರಾ.ಪಂ. ಸ್ವಲ್ಪ ಉಮೇದು ತೋರಿಸಿದ್ದು, ಕಾಮಗಾರಿ ಪ್ರಾರಂಭಿಸುವ ಬಗ್ಗೆ ಯೋಜನೆ ರೂಪಿಸುತ್ತಿದೆ.

ಕೋಡ್ಯೇಲು ಕೆರೆಯಲ್ಲಿ ನೀರಿಗೆ ಕೊರತೆ ಇಲ್ಲ. ಆದರೆ ಬೋರ್‌ವೆಲ್‌ಗ‌ಳ ಭರಾಟೆಯ ನಡುವೆ ಕೆರೆಯ ಅಭಿವೃದ್ಧಿ ಮರೀಚಿಕೆಯಾಗಿದೆ. ಕೆರೆಯ ನೀರನ್ನು ಯಾರೊಬ್ಬರೂ ಬಳಕೆ ಮಾಡದಿರುವ ಕಾರಣ ಉಪಯೋಗಿಸಲು ಯೋಗ್ಯವಾದರೂ ಪಾಳುಬಿದ್ದ ಸ್ಥಿತಿಯಲ್ಲಿದೆ. ಹತ್ತಿರದಲ್ಲಿ ಎರಡು – ಮೂರು ಮನೆಗಳಿದ್ದರೂ ಕೊಳವೆ ಬಾವಿಗಳಿರುವುದರಿಂದ ಕೆರೆಯ ನೀರು ನಿರುಪಯೋಗವಾಗಿದೆ.

ಮಚ್ಚಿನ ಗ್ರಾಮಕ್ಕೆ ಸಾಕಾಗುವಷ್ಟು ನೀರಿದೆ
ಪ್ರಸ್ತುತ ಮಚ್ಚಿನ ಗ್ರಾಮಕ್ಕೆ ಬೋರ್‌ವೆಲ್‌ ನೀರೇ ಗತಿ. ಬೇಸಗೆಯಲ್ಲಿ ಬಂಗೇರಕಟ್ಟೆ ಹಾಗೂ ಮಚ್ಚಿನದಲ್ಲಿರುವ ಕೊಳವೆ ಬಾವಿಯ ನೀರನ್ನು ಗ್ರಾ.ಪಂ. ಬಳಸುತ್ತಿದೆಯಾದರೂ ವರುಷದಿಂದ ವರುಷಕ್ಕೆ ಕೆಲ ಕೊಳವೆಬಾವಿಗಳಲ್ಲಿ ನೀರಿನ ಮಟ್ಟ ಕುಸಿದು ನೀರಿನ ಸಮಸ್ಯೆಗೆ ಕಾರಣವಾಗುತ್ತಿದೆ. ಈ ನಿಟ್ಟಿನಲ್ಲಿ ಕೋಡ್ಯೇಲು ಕೆರೆ ಅಭಿವೃದ್ಧಿಪಡಿಸಿದರೆ ಗ್ರಾಮಕ್ಕೆ ಬೇಕಾಗುವಷ್ಟು ನೀರು ದೊರೆಯುತ್ತದೆ.
ಚಂದ್ರಶೇಖರ್‌ ಎಸ್‌. ಅಂತರ

ಬಂಗೇರಕಟ್ಟೆಕೆರೆ ಅಭಿವೃದ್ಧಿ ಪ್ರೇರಣೆ
ಬಂಗೇರಕಟ್ಟೆಯಲ್ಲಿ ಪ್ರಾರಂಭಗೊಂಡಿರುವ ಬಂಗೇರಕಟ್ಟೆ ಕೆರೆ ಉಳಿಸಿ ಅಭಿಯಾನ ಹತ್ತಿರದ ಮಚ್ಚಿನ ಗ್ರಾಮಕ್ಕೂ ಪ್ರೇರಣೆ ನೀಡಿ ಅಲ್ಲಿನ ಕೆರೆಯ ಅಭಿವೃದ್ಧಿಗೆ ಅಡಿಗಲ್ಲು ಹಾಕಿದೆ. ಈಗಾಗಲೇ ಗಡಿ ಗುರುತು ಕಾರ್ಯದ ಬಗ್ಗೆ ತಹಸೀಲ್ದಾರ್‌ ಅವರಿಗೆ ವಿನಂತಿಸಲಾಗಿದೆ. ಬಂಗೇರಕಟ್ಟೆ ಕೆರೆಯ ಜತೆ-ಜತೆಗೂ ಕೋಡ್ಯೇಲು ಕೆರೆಯ ಅಭಿವೃದ್ಧಿ ಆಗಬೇಕೆಂಬುದು ಮಚ್ಚಿನ ಗ್ರಾಮಸ್ಥರ ಒತ್ತಾಸೆ.
ಧರ್ಮಸ್ಥಳ ಯೋಜನೆ ಸಹಕಾರ
ಕೆರೆ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಪ್ರಥಮ ಹಂತದ ಮಾತುಕತೆ ಮಚ್ಚಿನ ಗ್ರಾ.ಪಂ.ನಲ್ಲಿ ಆಗಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಕಾರ ಕೇಳುವ ಬಗ್ಗೆ ನಿರ್ಣಯಿಸಲಾಗಿದೆ. ಶೀಘ್ರದಲ್ಲಿ ಸಮಿತಿ ರಚಿಸಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ, ಡಾ|ಹೆಗ್ಗಡೆ ಅವರಲ್ಲಿ ಕೆರೆ ಅಭಿವೃದ್ಧಿಗೆ ಸಹಕಾರ ನೀಡಲು ಮನವಿ ಸಲ್ಲಿಕೆ ಮಾಡಲಿದೆ.

Advertisement

ಕೋಡ್ಯೇಲು ಕೆರೆ ಅಭಿವೃದ್ಧಿ ವಿಚಾರವಾಗಿ ಗ್ರಾ.ಪಂ. ಸಭೆಯಲ್ಲಿ ಪ್ರಸ್ತಾವಿಸಲಾಗಿದೆ. ಸಮಿತಿ ರಚನೆ ಕಾರ್ಯ ಶೀಘ್ರ ನಡೆಯಲಿದೆ. ಕೆರೆಯ ಹೂಳೆತ್ತ ದಿದ್ದರೂ ಪ್ರಸ್ತುತ ಎಪ್ರಿಲ್‌ ಅಂತ್ಯದವರೆಗೂ ಕೆರೆಯಲ್ಲಿ ನೀರು ಬತ್ತುವುದಿಲ್ಲ. ಹಾಗಾಗಿ ದುರಸ್ತಿಗೊಳಿಸಿದರೆ ಬೇಸಗೆಗೆ ಮಚ್ಚಿನ ಗ್ರಾಮಕ್ಕೆ ಬೇಕಾಗುವಷ್ಟು ನೀರು ಸಿಗಲಿದೆ. ಈ ನಿಟ್ಟಿನಲ್ಲಿ ಗ್ರಾ.ಪಂ. ಕೆರೆ ಅಭಿವೃದ್ಧಿಗೆ ಮುಂದಾಗಿದೆ.
 – ಹರ್ಷಲತಾ
   ಮಚ್ಚಿನ ಗ್ರಾ.ಪಂ. ಅಧ್ಯಕ್ಷೆ 

Advertisement

Udayavani is now on Telegram. Click here to join our channel and stay updated with the latest news.

Next