Advertisement

ನೀರಾಸೆ ನಡುವೆ ನೀರೆಚ್ಚರ ಬೇಕು

03:45 AM Jan 23, 2017 | Harsha Rao |

ಬರದ ಬಾಗಿಲಲ್ಲಿ ನಾಡು ನಿಂತಿದೆ. ನೀರಿನ ಮಿತ ಬಳಕೆಯ ಸೂತ್ರ ಅನುಸರಿಸಬೇಕಿದೆ. “ಇಂದು ನಾವೆಷ್ಟು ನೀರುಳಿಸಬಹುದು?’ ಬೆಳಿಗ್ಗೆ ನಿತ್ಯ ಏಳುವ ಮುನ್ನ ಒಂದು ಪ್ರಶ್ನೆ ಎಲ್ಲರಿಗೂ ಕಾಡಲಿದೆ.  

Advertisement

ರಾಜ್ಯದ ವಿವಿಧ ಪ್ರದೇಶಗಳಲ್ಲಿ ಕೃಷಿ ಪ್ರವಾಸ ನಡೆಸುತ್ತಿರುವ ನನಗೆ ಎಲ್ಲೆಡೆ  ಬರದ ಚಿತ್ರವೇ ಹೆಚ್ಚು ಕಾಣಿಸುತ್ತಿದೆ. ತುಮಕೂರಿನ ಕೃಷಿ ಹಸಿರಿನಲ್ಲಿ ಶೇಕಡಾ 85 ರಷ್ಟು ಪ್ರದೇಶ ಕೊಳವೆ ಬಾವಿ ನೀರು ನಂಬಿದೆ. ವರ್ಷದಿಂದ ವರ್ಷಕ್ಕೆ ಅಂತರ್ಜಲ ಕುಸಿಯುತ್ತಿರುವ ಇಲ್ಲಿ ಬಾವಿಯ ಆಳ ಈಗ 1,600 ಅಡಿ ದಾಟಿದೆ. ಹವಾಮಾನ ವೈಪರಿತ್ಯವಂತೂ ಕೃಷಿ ಬದುಕನ್ನು ಆಟವಾಡಿಸುತ್ತಿದೆ. 70ರ ದಶಕದಲ್ಲಿ ಅಡಿಕೆ ತೋಟದ ಕಾಲುವೆಗಳಲ್ಲಿ ಈಜಾಡಿ ಬೆಳೆದ ಜೆಸಿಪುರದ ಜನಕ್ಕೆ ಈಗ ಕುಡಿಯಲು ನೀರು ಸಿಗುವುದು ಕಷ್ಟವಾಗಿದೆ.  ವಾರ್ಷಿಕ 500-600 ಮಿಲಿ ಮೀಟರ್‌ ಮಳೆ ಕಾಣದ ಕಲಬುರಗಿ ಈ ವರ್ಷ ಭರ್ಜರಿ 2,400 ಮಿಲಿ ಮೀಟರ್‌ ಮಳೆ ಕಂಡಿದೆ! ಆದರೆ ನೀರಿನ ಸಮಸ್ಯೆ ಸಂಪೂರ್ಣ ಪರಿಹಾರವಾಗಿದೆಯೆಂದು ಹೇಳುವಂತಿಲ್ಲ. ಮಳೆ ಬಂದರೆ ಪ್ರವಾಹ, ಬೆಳೆ ನಷ್ಟದ ವರದಿಗಳು ಬರುತ್ತಿವೆ. ಮಳೆ ನೀರನ್ನು ಹಿಡಿದು ಗೆಲ್ಲುವ ದಾರಿಗಳನ್ನು ಅನುಸರಿಸಲು ಮರೆಯುತ್ತಿದ್ದೇವೆ.  ಇನ್ನೊಂದೆಡೆ ಅಧಿಕ ನೀರಾವರಿ ಬೆಳೆಗಳಿಂದ ಅಂತರ್ಜಲ ಕುಸಿಯುತ್ತಿದೆ. ರಾಜ್ಯದ ಕೃಷಿ ಬೆಲೆ ಆಯೋಗದ ವರದಿಯ ಪ್ರಕಾರ ಕ್ರಿ.ಶ 2005-15ರ ದಶಕದ ಸಮಯದಲ್ಲಿ ತೋಟಗಾರಿಕಾ ಬೆಳೆಗಳ ವಿಸ್ತೀರ್ಣ ಶೇ. 16ರಷ್ಟು ಹೆಚ್ಚಾಗಿದೆ. ಅಡಿಕೆ ಶೇಕಡಾ 40, ಮಾವು ಶೇಕಡಾ 51,  ಬಾಳೆ ಶೇಕಡಾ 89, ಟೊಮಾಟೋ ಕ್ಷೇತ್ರ ಶೇಕಡಾ 47ರಷ್ಟು ವಿಸ್ತರಿಸಿದೆ. ಈಗ ವಾಡಿಕೆಯ ಮಳೆ ಸುರಿದರೂ ಯಾವ ಹಳ್ಳಿಯೂ ನೀರಿನ ಸಮಸ್ಯೆಯಿಂದ ದೂರಾಗಲು ಸಾಧ್ಯವಿಲ್ಲ. ಠೇವಣಿ ಇಡದೇ ಬ್ಯಾಂಕಿನಿಂದ ಎಷ್ಟು ದಿನ ಸಾಲ ಪಡೆಯಲು ಸಾಧ್ಯವಿದೆ? ಬಳಸಿ ಬಳಸಿ ಭೂಮಿಯ ಒಡಲು ಖಾಲಿಯಾಗುತ್ತಿದೆ. 

ನದಿ, ಜಲಾಶಯಗಳ ಮೂಲಕ ನಗರಕ್ಕೆ ನೀರು ಒದಗಿಸುವ ಕೇಂದ್ರೀಕೃತ ಯೋಜನೆಗಳು ಎಲ್ಲೆಡೆ ಇವೆ. 20 ವರ್ಷಗಳ ಹಿಂದೆ ಒಂದು ನಗರದಿಂದ 10-12 ಕಿಲೋ ಮೀಟರ್‌ ಸನಿಹದ ನೀರಿನ ಮೂಲದಿಂದ ನಗರಗಳು ನೀರು ಪಡೆಯುತ್ತಿದ್ದವು. ಈಗ 50 ಕಿಲೋ ಮೀಟರ್‌ ದೂರ ಹೋದರೂ ನೀರು ಸಿಗದ ಪರಿಸ್ಥಿತಿ ಇದೆ. ಮಲೆನಾಡಿನ ಗುಡ್ಡಗಳಲ್ಲಿ ಬೆಳೆದ ನಗರೀಕರಣದಿಂದ ಜನಸಂಖ್ಯೆ ಹೆಚ್ಚುತ್ತ ಅರಣ್ಯನಾಶ ನಡೆದಿದೆ. ಮಳೆಯ ನೀರು ಭೂಮಿಗೆ ಇಂಗದೇ  ಗುಡ್ಡದ ರಸ್ತೆ ಕಾಲುವೆಗಳಲ್ಲಿ ಓಡುತ್ತಿದೆ. ಶತಮಾನಗಳ ಹಿಂದಿದ್ದ ಕೆರೆಗಳು ಕಣ್ಮರೆಯಾಗಿವೆ. ಹಳೆಯ ಕೆರೆಯ  ಹೂಳು ತೆಗೆಯುವುದೇ ದೊಡ್ಡ ಸವಾಲಾಗಿದೆ. ಹೊಸ ಕೆರೆಗಳ ನಿರ್ಮಾಣ ಕನಸಿನ ಮಾತಾಗಿದೆ.  ಕೃಷಿಗೆ ನೀರು ನೀಡುವ ಯೋಜನೆಗಳು ನಗರಕ್ಕೆ ಕುಡಿಯುವ ನೀರಿನ ಯೋಜನೆಗಳಾದ ಉದಾಹರಣೆಗಳು ಹೈದ್ರಾಬಾದ್‌ ಕರ್ನಾಟಕದಲ್ಲಿ ಮಾಮೂಲಿ. ಈ ವರ್ಷ ಮೈಸೂರು ಸೀಮೆಗೂ ಈ ಗತಿ ಬಂದಿದೆ. ಕಾವೇರಿಯ ನೀರು ನಗರಕ್ಕೆ ಹೆಚ್ಚು ಓಡುತ್ತಿದೆ.

ಕುಡಿಯುವ ನೀರಿಗೆ ಪ್ರಥಮ ಆದ್ಯತೆ ನೀಡಬೇಕಾಗಿದ್ದು  ಸರಿಯಾಗಿದೆ. ಆದರೆ ನೀರು ನಿರ್ವಹಣೆಯಲ್ಲಿ ಶಿಸ್ತು, ನಿಯಂತ್ರಣ ಕ್ರಮ ಅನುಸರಿಸದೇ ರಾಜ್ಯವನ್ನು ನೀರ ನೆಮ್ಮದಿಯತ್ತ ಒಯ್ಯುವುದು  ಯಾವತ್ತೂ ಸಾಧ್ಯವಿಲ್ಲ. ಇದೀಗ ಹಳ್ಳಿಯ ಕೃಷಿ ಹಾಗೂ  ನಗರದ ನಡುವೆ ಸಂಘರ್ಷ ತಂದಿದೆ. 

ಹೋಟೆಲ್‌ಗ‌ಳಿಗೆ ಗ್ರಾಹಕರು ಬಂದ ತಕ್ಷಣ ಗ್ಲಾಸ್‌ ತುಂಬ ನೀರು ನೀಡುವುದು ಮಾಮೂಲಿ ಕ್ರಮ. ಈ ನೀರಿನಲ್ಲಿ ದೊಡ್ಡ ಪಾಲು ಪೋಲಾಗುತ್ತದೆ.  ಪ್ರತಿ ಟೇಬಲ್‌ನಲ್ಲಿ ಬಾಟಲ್‌/ಪಾತ್ರೆಯಲ್ಲಿ ನೀರಿಟ್ಟು ಖಾಲಿ ಲೋಟ ಇಡುವುದರಿಂದ ಅಗತ್ಯವಿದ್ದವರು ಮಾತ್ರ ನೀರು ಕುಡಿಯುತ್ತಾರೆ. ಕೈತೊಳೆಯುವ ಜಾಗದಲ್ಲಿ ನಲ್ಲಿಯ ಬದಲಾಗಿ ಬಕೆಟ್‌ನಲ್ಲಿ ನೀರಿಡುವುದರಿಂದ ಸಮಸ್ಯೆ ಅರ್ಥವಾಗಿ ಮಿತ ಬಳಕೆ ಶುರುವಾಗುತ್ತದೆ. ನಾವು ಕುಡಿಯಲು, ಕೈತೊಳೆಯಲು ಬಳಸುವ ನೀರು ಭೂಮಿಯ 800 ಅಡಿ ಆಳದಿಂದ ಬಂದಿದ್ದು, ನೀರೆತ್ತುವ ಮೋಟಾರಿಗೆ 200 ಕಿಲೋ ಮೀಟರ್‌ ದೂರದಿಂದ ವಿದ್ಯುತ್‌ ಪೂರೈಕೆಯಾಗಿದೆಯೆಂಬ ಸಾಮಾನ್ಯ ಅರಿವು ಯಾರಿಗೂ ಇರುವುದಿಲ್ಲ. ಮಳೆ ಇಲ್ಲದಿದ್ದರೆ ನೀರಿಲ್ಲ, ವಿದ್ಯುತ್‌ ಇಲ್ಲದಿದ್ದರೆ ನೀರಿಲ್ಲ ಎಂಬ ಪರಿಸ್ಥಿತಿ ನಮ್ಮದಾಗಿದೆ. 

Advertisement

ವಾಹನ ತೊಳೆಯಲು ನೀರು ಹೆಚ್ಚು ಬಳಕೆಯಾಗುತ್ತದೆ. ಈ ಕಾಯಕದಲ್ಲಿ ಹಲವರು ಉದ್ಯೋಗ ಕಂಡುಕೊಂಡಿದ್ದಾರೆ. ಆದರೆ ಜಲಕ್ಷಾಮದಲ್ಲಿ ಕುಡಿಯುವ ನೀರಿಗೆ ಪ್ರಥಮ ಆದ್ಯತೆಯಿರುವುದರಿಂದ ವಾಹನ ತೊಳೆಯುವ ನೀರು ಉಳಿಸಲು ಕ್ರಮ ಅಗತ್ಯವಿದೆ. ಸ್ವಂತ ಬಾವಿ, ಕೊಳವೆ ಬಾವಿಯಿಂದ ನೀರೆತ್ತಿ ಬಳಸುವಾಗ ಯಾರೂ ಇದನ್ನು ಪ್ರಶ್ನಿಸಲಾಗದೆಂದು ನಾವು ಹೇಳಬಹುದು. ಬಾವಿ ಕೊರೆಸಲು, ಪಂಪ್‌ ಜೋಡಿಸಲು ಹಣ ಹೂಡಿರುವಾಗ ನೀರು ನಮ್ಮದು ಎಂಬ ಪ್ರಶ್ನೆ ಹುಟ್ಟಬಹುದು. ಆದರೆ ಈಗ ವಾದ ಕೇಳುತ್ತ ಕೂಡ್ರುವ ಕಾಲ ಮೀರಿದೆ.  ಜಲಕ್ಷಾಮ ನಾಡಿನ ಜನಜೀವನವನ್ನು ಸಂಕಷ್ಟಕ್ಕೆ ನೂಕಿರುವಾಗ ಎಲ್ಲರ ತುರ್ತು ಗಮನ ಅಂತರ್ಜಲ ಉಳಿಸುವುದಾಗಿದೆ. ನೀರಿನ ಮಿತ ಬಳಕೆಯಾಗಿದೆ.

ಬೇಸಿಗೆಯ ತುರ್ತು ಪರಿಸ್ಥಿತಿಯಲ್ಲಿ ವಾಹನ ತೊಳೆಯುವ ನೀರಿನ ಬಳಕೆ ನಿಲ್ಲಿಸುವ ಕ್ರಮಗಳು ಅನಿವಾರ್ಯವಾಗಬಹುದು. ನಾವು ಕಾರು ತೊಳೆಯಲು ಬಳಸುವ ನೀರು ಕುಟುಂಬದ ದಿನ ಬಳಕೆಗೆ, ಜಾನುವಾರುಗಳ ದಾಹ ತೀರಿಸಲು ನೆರವಾಗುತ್ತದೆಂದು ತಿಳಿದರೆ ಸ್ವತಃ ವಾಹನ ತೊಳೆಯುವವರೇ ಮುಂದಾಗಿ ಬಳಕೆ ನಿಲ್ಲಿಸಬಹುದು.  ಇದರ ಜೊತೆಗೆ ನದಿ, ಕೆರೆಗಳಲ್ಲಿ ವಾಹನ ತೊಳೆಯುವುದನ್ನು ನಿಲ್ಲಿಸಬೇಕು. ಇದರಿಂದ ವನ್ಯಜೀವಿ, ದನಕರುಗಳಿಗೆ ಅನುಕೂಲವಾಗುತ್ತದೆ. 

ಟ್ಯಾಂಕರ್‌ ಮೂಲಕ ಕುಡಿಯುವ ನೀರು ಒದಗಿಸುವ ತುರ್ತು ಕ್ರಮಗಳು ಎಲ್ಲೆಡೆ ನಡೆಯುತ್ತವೆ. ಪ್ರತಿ ಪಂಚಾಯತ್‌ ಯಾವ ಯಾವ ಗ್ರಾಮದಲ್ಲಿ ಹೀಗೆ ಟ್ಯಾಂಕರ್‌ ಮೂಲಕ ನೀರು ನೀಡಲಾಯಿತೆಂದು ಒಂದು ಪಟ್ಟಿ ತಯಾರಿಸಬೇಕು. ಇಲ್ಲಿನ ನೀರಿನ ಕೊರತೆಗೆ ಮುಖ್ಯ ಕಾರಣ ಅರಿಯಬೇಕು.  ತಜ್ಞರ ಸಲಹೆ ಪಡೆದು ಜಲ ಸಂರಕ್ಷಣೆಗೆ ವಿಶೇಷ ಯೋಜನೆಗಳನ್ನು ಪ್ರದೇಶದಲ್ಲಿ ಜಾರಿಗೊಳಿಸಬಹುದು. ಮಳೆ ನೀರನ್ನು ಭೂಮಿಗೆ ಇಂಗಿಸುವ ಪ್ರಯತ್ನ ನಡೆದರೆ ಸಮಸ್ಯೆಯನ್ನು ಒಂದು ಹಂತದಲ್ಲಿ ನಿವಾರಿಸಬಹುದು. ನೀರಿನ ಸಮಸ್ಯೆ ಇರುವ ಸ್ಥಳ ಗುರುತಿಸಿ ನಕ್ಷೆ ತಯಾರಿಸಿದರೆ ನಾಳಿನ ನಮ್ಮ ನೀರಿನ ಕೆಲಸಗಳಿಗೆ ಅನುಕೂಲವಾಗುತ್ತದೆ. ವಿವಿಧ ಇಲಾಖೆ, ಸಂಸ್ಥೆಗಳ ನೆರನಿಂದ ಮುಂದಿನ  ಎರಡು ಮೂರು  ವರ್ಷದಲ್ಲಿ ನೀರ ನೆಮ್ಮದಿಯ ಬದಲಾವಣೆ ತರಬಹುದು. ಬರ ಪರಿಹಾರದ ಹಣ ಬಂದಾಗ ಸಂತೆಗೆ ಮೂರು ಮೊಣ ನೇಯುವಂತೆ ಏನೇನೋ ಕೆಲಸ ಮಾಡಲಾಗುತ್ತಿದೆ. ಬಾವಿಗೆ ಬಿದ್ದವರಿಗೆ ತಿಂಡಿ ಎಸೆಯುವ ಕ್ರಮಗಳನ್ನಷ್ಟೇ ಮಾಡುವುದರಿಂದ ಪ್ರಯೋಜನವಿಲ್ಲ. ಅವರಿಗೆ ಹಗ್ಗ ನೀಡಿ ಮೇಲೆತ್ತಲು ಪ್ರಯತ್ನಿಸಬೇಕು. ನಮ್ಮ ಗ್ರಾಮಗಳು ಕಳೆದ 40 ವರ್ಷಗಳಲ್ಲಿ ಝರಿ, ನದಿ, ಕೆರೆ, ತೆರೆದಬಾವಿಗಳಿಂದ ನೀರು ಪಡೆಯುತ್ತಿದ್ದವು. ಈಗ ಆಳದ ಕೊಳವೆ ಬಾವಿ ನಂಬಿವೆ. ನೈಸರ್ಗಿಕ ಸಂಪನ್ಮೂಲ ಸಂರಕ್ಷಿಸಲು ಸರಿಯಾದ ಯೋಜನೆಗಳಿಲ್ಲದ ಪರಿಣಾಮ ಇಂಥ ದುಃಸ್ಥಿತಿ ಬಂದಿದೆ. 

ಕೈತೋಟ, ಹುಲ್ಲು ಹಾಸಿಗೆ ನೀರು ಬಳಕೆ ಕಡಿಮೆಗೊಳಿಸಬೇಕು. ಸ್ನಾನದ ಕೋಣೆ ನೀರು ನೇರವಾಗಿ ಕಕ್ಕಸು ಗುಂಡಿಗೆ ಹೋಗುತ್ತಿದೆ. ಇದನ್ನು ತಪ್ಪಿಸುವ ಅಗತ್ಯವಿದೆ. ಈ  ನೀರನ್ನು  ಸಸ್ಯಗಳಿಗೆ ನೀಡಬಹುದು. ಹಾನಿಕಾರಕ ಡಿಟೆರ್ಜಂಟ್‌ ಬಳಕೆ ನಿಲ್ಲಿಸಿದರೆ ನಮ್ಮ ತಾಜ್ಯ ನೀರಿನ ಮರುಬಳಕೆ ಸುಲಭವಾಗುತ್ತದೆ. ಸ್ನಾನದ ನೀರನ್ನು ಶೌಚಾಲಯದಲ್ಲಿ  ಪ್ಲಶ್‌ಗೆ ಬಳಸಬಹುದು. ಐದು ಜನರ ಒಂದು ಕುಟುಂಬ ದಿನಕ್ಕೆ ಒಂದು ಸಾವಿರ ಲೀಟರ್‌ ಬಳಸುತ್ತದೆಂಬುದು ನಮ್ಮ ಅಂದಾಜು. ಇಲ್ಲಿ ಪ್ರತಿ ಕುಟುಂಬ  ಪ್ರತಿ ಹಂತದಲ್ಲಿ ನೀರನ್ನು ಹೇಗೆ ಮಿತವಾಗಿ ಬಳಸಬಹುದೆಂದು ಯೋಚಿಸಿದರೆ ದೈನಂದಿನ ಬಳಕೆಯ ಪ್ರಮಾಣ ತಗ್ಗುತ್ತದೆ. ಆಗ ಐದು ನೂರು ಲೀಟರ್‌ನಲ್ಲಿ ದಿನ ಕಳೆಯಬಹುದು. ಇದರಿಂದ ಜಲಕ್ಷಾಮ ಎದುರಿಸಲು ಮನೆ ಮನೆಯಲ್ಲಿ ಸುಲಭದ ಹೊಸ ಅಸ್ತ್ರ ಸಿಕ್ಕಂತಾಗುತ್ತದೆ. 

ನೀರಿಲ್ಲದಿದ್ದರೆ ಹಣ ನೀಡಿ ಟ್ಯಾಂಕರ್‌ ನೀರು ಖರೀದಿಸಬಹುದೆಂದು ಸರಳವಾಗಿ ಮಾತಾಡುವವರು ಸಿಗುತ್ತಾರೆ. ಹಾಲು, ತರಕಾರಿ ಖರೀದಿಸಿದಂತೆ ನಿತ್ಯ ನೀರು ಖರೀದಿಸುವುದು ಸುಲಭವಲ್ಲ. ಪರಿಸ್ಥಿತಿ ಅರಿಯಲು ಕೋಲಾರ ನಗರಕ್ಕೆ ಹೋಗಬಹುದು.  ಬಳಕೆ ಯೋಗ್ಯ ಉತ್ತಮ ನೀರು ಎಲ್ಲರಿಗೂ ಎಲ್ಲಿ ಸಿಗುತ್ತದೆ? ಯೋಚಿಸಬೇಕು.  ಒಮ್ಮೆ ಇಂಥ ಖರೀದಿ ಚಕ್ರದಲ್ಲಿ ಸಿಲುಕಿದರೆ ಜಲಸಂರಕ್ಷಣೆಯ ಕುರಿತ ಮನಸ್ಥಿತಿ ಬದಲಾಗಿ ಹಣವಿದ್ದರೆ ನೀರು ಪಡೆಯಬಹುದೆಂಬ ಸಾಧ್ಯತೆ ಹೆಚ್ಚು ಕಾಣಿಸುತ್ತದೆ.  ಹೊತ್ತಿನ ತುತ್ತಿಗೆ ತತ್ತರಿಸುವ ಬಡವರು ಆಗ ಬಿಂದಿಗೆ ನೀರು ಬೇಡುವ ಪರಿಸ್ಥಿತಿ ಬರುತ್ತದೆ. ಸಮುದಾಯ ಜಾಗೃತಿಯ ಮೂಲಕ ನೀರಿನ ಸಂರಕ್ಷಣೆ, ಮಿತ ಬಳಕೆಯ ಆಂದೋಲನ ಇಂದಿನ ಅಗತ್ಯವಾಗಿದೆ. ಜಲಸಾಕ್ಷರತೆ ಮೂಲಕ ಈ ಕಾರ್ಯವನ್ನು  ನಾವು ಮಾಡಬೇಕಾಗಿದೆ. ನಗರದ ನೀರಿನ ವಿಚಾರದಲ್ಲಿ ಹೆಚ್ಚು ಚರ್ಚೆಗಳು ಇಂದು ನಡೆಯುತ್ತಿವೆ. ಸಮಸ್ಯೆ ಹಳ್ಳಿಗಳಲ್ಲಿಯೂ ಅಷ್ಟೇ ಇದೆ. 

ಮಳೆ ನೀರು ಶೇಖರಿಸಲು, ಇಂಗಿಸಲು ನಗರದ ಜಾಗೃತಿ ಏನೇನೂ ಸಾಲದು. ಬರದಲ್ಲಿಯೂ ಒಂದೊಂದು ಮನೆಯವರು ಕೈತೋಟ, ಹುಲ್ಲು ಹಾಸಿಗೆ ಬಳಸುವ ನೀರು ನಮ್ಮ ಕೃಷಿಕರ ಎಕರೆ ಭೂಮಿಯಲ್ಲಿ ಬಂಗಾರದ ಬೆಳೆ ಬೆಳೆಯಲು ಸಾಕು. ಹಳ್ಳಿಯ ಕೃಷಿ ಬಳಕೆಯ ನೀರನ್ನು ಬಳಸುವವರು ಮಿತ ಬಳಕೆಗೆ ಗಮನಹರಿಸಬೇಕು. ಜಲಕ್ಷಾಮದಿಂದ ರಾಜ್ಯದಲ್ಲಿ ಎಂಥ ಪರಿಸ್ಥಿತಿಯಾಗಿದೆಯೆಂದು ಚಿತ್ರಗಳನ್ನು  ಪ್ರತಿ ಮನೆಯ ಸ್ನಾನದ ಕೋಣೆಯಲ್ಲಿ, ಕೈ ತೊಳೆಯುವ ನಲ್ಲಿಗಳೆದುರು ಪ್ರದರ್ಶಿಸಬೇಕು.  10-12 ಲೀಟರ್‌ ನೀರಿನಲ್ಲಿ ಹೇಗೆ ಸ್ನಾನ ಮಾಡಬಹುದೆಂದು ವಿವರಿಸುವ ಅಗತ್ಯವೂ ಇದೆ. ನೀರಿನ ಬಳಕೆಯ ಶಿಕ್ಷಣವನ್ನು ಪ್ರತಿ ಹಂತದಲ್ಲಿ ಪ್ರತಿಯೊಬ್ಬರಿಗೆ ಪರಿಣಾಮಕಾರಿಯಾಗಿ ತಲುಪಿಸಲು ಯೋಚಿಸಬೇಕು. ಪ್ರತಿಯೊಬ್ಬರ ಮನಸ್ಥಿತಿ, ಶಿಕ್ಷಣ, ತಿಳುವಳಿಕೆ ಸಾಮರ್ಥ್ಯ ಭಿನ್ನವಾಗಿರುತ್ತದೆ, ಜಾಗೃತಿ ಸವಾಲಾಗಿದೆ. ಹೋಟೆಲ್‌ ರೂಮ್‌ಗಳಲ್ಲಿ ಬಿಸಿ ನೀರು ನಲ್ಲಿಗೆ ಕಡ್ಡಾಯವಾಗಿ ಫ‌ಲಕ ಇರಬೇಕು. ಬಾಗಿಲು ಹಾಕಿಕೊಂಡು ಸ್ನಾನದ ಕೋಣೆಯಲ್ಲಿರುವ ನಾವು ಎಷ್ಟು ನೀರು ಖರ್ಚುಮಾಡಿದೆವೆಂದು ಹೊರಗಿದ್ದವರಿಗೆ ತಿಳಿಯುವುದಿಲ್ಲ. ಆದರೆ ನಮ್ಮ ಆತ್ಮಸಾಕ್ಷಿ$ ಆತಂಕದ ಚಿತ್ರ ನೋಡಿಯಾದರೂ ಸ್ವಯಂ ನಿಯಂತ್ರಣಕ್ಕೆ ಪ್ರೇರೇಪಿಸಬಹುದು. ಒಮ್ಮೆ ನಾವು ತಣ್ಣೀರು ಸ್ನಾನ ಅಭ್ಯಾಸ ಮಾಡಿಕೊಂಡರೆ ಬಿಸಿ ನೀರು ಪಡೆಯಲು ಎರಡು ಮೂರು ಬಕೆಟ್‌ ತಣ್ಣೀರು ವ್ಯರ್ಥಮಾಡುವುದನ್ನು ನಿಲ್ಲಿಸಬಹುದು. ಬಟ್ಟೆ, ಪಾತ್ರೆ ತೊಳೆಯುವಾಗ ಎಂಥ ನೀರೆಚ್ಚರ ಬೇಕೆಂದು ಮನೆ ಮನೆಯೂ  ತಿಳಿಯಬೇಕು.

– ಶಿವಾನಂದ ಕಳವೆ

Advertisement

Udayavani is now on Telegram. Click here to join our channel and stay updated with the latest news.

Next