ಬಜಪೆ: ಲೋಕ ಕಲ್ಯಾಣಾರ್ಥ, ಸಕಲ ಸಂಕಷ್ಟ ಹಾಗೂ ಗ್ರಹಚಾರ ದೋಷ ನಿವಾರಣೆಗೆ ಕೈಗೊಂಡ ಮರವೂರು ಶ್ರೀ ದುರ್ಗಾಪರಮೇಶ್ವರೀ ದೇಗುಲದಿಂದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ 6ನೇ ವರ್ಷದ ಪಾದಯಾತ್ರೆ “ಅಮ್ಮನೆಡೆಗೆ ನಮ್ಮ ನಡೆ’ಗೆ ಭಕ್ತರು ಭಾರೀ ಸಂಖ್ಯೆ ಯಲ್ಲಿ ಆಗಮಿಸುವ ಮೂಲಕ ಅಭೂತಪೂರ್ವ ಯಶಸ್ಸು ಕಂಡಿದೆ.
ಆಶೀರ್ವಚನ ನೀಡಿದ ಶ್ರೀ ಕ್ಷೇತ್ರ ಕಟೀಲಿನ ಪ್ರಧಾನ ಅರ್ಚಕ ಕೆ. ವಾಸುದೇವ ಆಸ್ರಣ್ಣ , ಭಕ್ತಿ, ಶ್ರದ್ಧೆಯಿಂದ ದೇವರ ಅನುಗ್ರಹವಾಗುತ್ತದೆ. ಪಾದ ಯಾತ್ರೆಗೆ ಭಕ್ತ ಸಾಗರವೇ ಹರಿದು ಬರುತ್ತಿರುವುದು ಇದಕ್ಕೆ ಸಾಕ್ಷಿ ಎಂದರು. ನಾವು ನಮಗೆ ಮಾತ್ರ ದೇವರಲ್ಲಿ ಪ್ರಾರ್ಥಿಸದೆ ಎಲ್ಲರಿಗೂ ಒಳ್ಳೆಯದಾಗಲಿ ಎನ್ನಬೇಕು. ಎಲ್ಲರ ಕಷ್ಟಗಳು ದೂರವಾಗಲಿ ಎಂದು ಅನಂತ ಪದ್ಮನಾಭ ಆಸ್ರಣ್ಣ ಹೇಳಿದರು.
ಕಲ್ಲಡ್ಕ ಪ್ರಭಾಕರ ಭಟ್ ಮಾತನಾಡಿ, ಅಮ್ಮ ಸಾಕ್ಷಾತ್ ಭೂಮಿತಾಯಿ ರೂಪ. ಅಮ್ಮನೆಡೆಗೆ ನಡೆ ಸ್ವಾರ್ಥಕ್ಕಾಗಿ ಅಲ್ಲ. ಇಂದು ಭೂಮಿ ತಾಯಿ ಮೇಲೆ ಆಗುವ ಆಕ್ರಮಣಗಳನ್ನು ಎದುರಿಸಲು ಅಮ್ಮನಿಗೆ ಶಕ್ತಿ ಕೊಡಬೇಕು. ಹಿಂದೂ ಸಮಾಜದ ಒಗ್ಗಟ್ಟಿಗೆ, ರಕ್ಷಣೆಗೆ ನಾವು ಬದ್ಧರಾಗಬೇಕು ಎಂದರು.
“ಅಮ್ಮನೆಡೆಗೆ ನಮ್ಮ ನಡೆ’ ಅಧ್ಯಕ್ಷ ಸಂದೀಪ್ ಶೆಟ್ಟಿ ಮರವೂರು ಮಾತನಾಡಿದರು. ಧರ್ಮದರ್ಶಿ ಪ್ರವೀಣ್‌ರಾಜ್, ಮಚ್ಛೇಂದ್ರನಾಥ ಬಾಬಾ, ಕಟೀಲು ದೇಗುಲದ ಅರ್ಚಕ ಅನಂತಪದ್ಮನಾಭ ಆಸ್ರಣ್ಣ, ಮೊಕ್ತೇಸರ ಸುಧೀರ್ ಶೆಟ್ಟಿ, ಸಂಸದ ನಳಿನ್, ಶಾಸಕರಾದ ಉಮಾನಾಥ ಕೋಟ್ಯಾನ್, ಹರೀಶ್ ಪೂಂಜ, ಕದ್ರಿ ಕ್ಷೇತ್ರದ ಮೊಕ್ತೇಸರ ಎ.ಜೆ. ಶೆಟ್ಟಿ, ಹರಿಕೃಷ್ಣ ಬಂಟ್ವಾಳ, ರವೀಂದ್ರ ಅರಸ, ಮೋನಪ್ಪ ಭಂಡಾರಿ, ಜಿತೇಂದ್ರ ಕೊಟ್ಟಾರಿ, ಆಶಾ ಜ್ಯೋತಿ ರೈ, ಉದಯ್ ಶೆಟ್ಟಿ ಪಡುಬಿದಿರೆ, ಜಗದೀಶ ಶೇಣವ, ಶರಣ್ ಪಂಪ್‌ವೆಲ್, ನಿವೇದಿತಾ ಎನ್. ಶೆಟ್ಟಿ ಬೆಳ್ಳಿಪ್ಪಾಡಿ, ಕಿಶೋರ್ ರೈ
ಪುತ್ತೂರು, ಸುಕೇಶ್ ಶೆಟ್ಟಿ ಮುಂಡಾರುಗುತ್ತು ಪಾದಯಾತ್ರೆಯಲ್ಲಿ ಭಾಗವಹಿಸಿದರು.
15 ಕಿ.ಮೀ. ಪಾದಯಾತ್ರೆ
ಮರವೂರು ದೇವಳದಿಂದ ಕಟೀಲು ದೇಗುಲಕ್ಕೆ 15 ಕಿ.ಮೀ. ಪಾದಯಾತ್ರೆಯಲ್ಲಿ ಸುಮಾರು 55 ಸಾವಿರ ಭಕ್ತರು ಪಾಲ್ಗೊಂಡಿದ್ದರು. ಸುಮಾರು 20 ಕಡೆ ಪಾನೀಯದ ವ್ಯವಸ್ಥೆ, ಆ್ಯಂಬುಲೆನ್ಸ್ ಸೇವೆ ಮಾಡಲಾಗಿತ್ತು. 8 ಗಂಟೆ ಕಾಲ ಸಾಗಿದ ಪಾದಯಾತ್ರೆ ಅಪರಾಹ್ನ1 ಗಂಟೆಗೆ ಕಟೀಲಿಗೆ ತಲುಪಿ ಶ್ರೀದೇವಿಯ ದರ್ಶನ ಪಡೆಯುವ ಮೂಲಕ ಸಂಪನ್ನಗೊಂಡಿತು. ದೇವಿಯ ಚಿತ್ರಪಟ ಇರುವ ಪುಷ್ಪಾಲಂಕೃತ ದೇವರ ರಥ, ಬ್ರಹ್ಮ ವಿಷ್ಣು, ಮಹೇಶ್ವರ ಯಕ್ಷಗಾನ ವೇಷಧಾರಿಗಳು, ಭಜನ ಸಂಕೀರ್ತನೆಯೊಂದಿಗೆ ಭಕ್ತರು ಈ ಪಾದಯಾತ್ರೆಯಲ್ಲಿ ಪಾಲ್ಗೊಂಡರು.