Advertisement

ರಾಜಕೀಯ ವ್ಯವಹಾರಗಳ ಸಮಿತಿ ಬಗ್ಗೆ ಅಮಿತ್‌ ಅತೃಪ್ತಿ

09:15 AM Aug 14, 2017 | Team Udayavani |

ಬೆಂಗಳೂರು: ಭಾನುವಾರ ಬಿಜೆಪಿ ರಾಜಕೀಯ ವ್ಯವಹಾರಗಳ ಸಮಿತಿ ಸದಸ್ಯರ ಜತೆ ಸಭೆ ನಡೆಸಿದ ಅಮಿತ್‌ ಶಾ, ಕಳೆದ ವಿಧಾನಸಭೆಯಲ್ಲಿ ಪಕ್ಷ ಸೋಲಲು ಕಾರಣಗಳು ಮತ್ತು ಮುಂದಿನ ಚುನಾವಣೆಯಲ್ಲಿ ಗೆಲ್ಲುವ ಸಾಧ್ಯತೆಗಳ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ. ಅಲ್ಲದೆ, ಸಮಿತಿಯ ಕಾರ್ಯವೈಖರಿ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ.

Advertisement

ಈ ಹಿಂದಿನ 3 ವಿಧಾನಸಭಾ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳು ಪಡೆದ ಮತಗಳ ಪ್ರಮಾಣ, ಅದು ಏರುಪೇರಾಗಲು ಕಾರಣಗಳೇನು? 2008ರ ಚುನಾವಣೆಯಲ್ಲಿ 110 ಸ್ಥಾನಗಳನ್ನು ಗೆದ್ದು ನಂತರ ಸುಮಾರು ಹತ್ತು ಸ್ಥಾನಗಳನ್ನು ಪಡೆದುಕೊಂಡಿದ್ದ ಪಕ್ಷ 2013ರ ವಿಧಾನಸಭೆ ಚುನಾವಣೆಯಲ್ಲಿ 40 ಸ್ಥಾನಗಳಿಗೆ ಇಳಿಯಲು ಕಾರಣವೇನು ಎಂಬಿತ್ಯಾದಿ ಮಾಹಿತಿಗಳನ್ನು ಸಮಿತಿ ಸದಸ್ಯರಿಂದ ಪಡೆದಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಸಮಿತಿ ಸದಸ್ಯರು ಸೋಲಿನ ಕಾರಣಗಳನ್ನು ವಿವರಿಸಲು ಮುಂದಾದಾಗ ಮಧ್ಯಪ್ರವೇಶಿಸಿದ ಶಾ, ರಾಜಕೀಯ ವ್ಯವಹಾರಗಳನ್ನು ನೋಡಿಕೊಳ್ಳಲೆಂದೇ ಸಮಿತಿ ಇದೆ. ಚುನಾವಣೆಗೆ ಮೊದಲೇ ಸಮಸ್ಯೆಗಳನ್ನು ಬಗೆಹರಿಸಿ ಗೆಲ್ಲಲು ವೇದಿಕೆ ಸೃಷ್ಟಿ ಮಾಡುವುದು ಸಮಿತಿಯ ಜವಾಬ್ದಾರಿ. ನೀವು ಸರಿಯಾಗಿ ಕೆಲಸ ಮಾಡಿದ್ದರೆ ಪಕ್ಷ ಅಷ್ಟೊಂದು ಹೀನಾಯ ಮಟ್ಟಕ್ಕೆ ಇಳಿಯುತ್ತಿರಲಿಲ್ಲ ಎಂದು ಕಿಡಿಕಾರಿದರು ಎಂದು ಹೇಳಲಾಗಿದೆ. ಸಮಿತಿ ಮುಂಬರುವ ವಿಧಾನಸಭಾ ಚುನಾವಣೆಗೆ ಕೈಗೊಂಡಿರುವ ಸಿದ್ಧತೆಗಳ ಬಗ್ಗೆಯೂ ಅತೃಪ್ತಿ ವ್ಯಕ್ತಪಡಿಸಿದ ಶಾ, ತಕ್ಷಣದಿಂದ ಸಕ್ರಿಯವಾಗಿ ಕೆಲಸ ಮಾಡಬೇಕು. ಇಲ್ಲದೇ ಇದ್ದರೆ ಸಮಿತಿಯಲ್ಲಿ ಬದಲಾವಣೆ ಮಾಡಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಿದರು ಎಂದು ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next