Advertisement

ಅಮಿತ್‌  ಶಾ V/s ರಾಹುಲ್‌ ಗಾಂಧಿ

07:50 AM Oct 11, 2017 | Harsha Rao |

ಅಮೇಠಿ/ವಡೋದರಾ: ಕುತೂಹಲದ ಬೆಳವಣಿಗೆಯೊಂದರಲ್ಲಿ ರಾಜಕೀಯ ವೈರಿಗಳಾದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ 
ಶಾ ಹಾಗೂ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಪರಸ್ಪರ ಆರೋಪ, ಪ್ರತ್ಯಾರೋಪಗಳನ್ನು ಮಾಡಿದ್ದು, ಇವರಿಬ್ಬರ ಬೆಂಬಲಿಗರ ನಡುವೆ ಹೊಸ ಕೆಸರೆರಚಾಟದ ಸಾಧ್ಯತೆಗಳನ್ನು ತಂದೊಡ್ಡಿದೆ.  ಸೋಮವಾರ, ರಾಹುಲ್‌ ರ ಸಂಸತ್‌ ಕ್ಷೇತ್ರವಾದ ಅಮೇಠಿಯಲ್ಲಿ ಅಮಿತ್‌ ಶಾ, ರಾಹುಲ್‌ ಮೇಲೆ ಟೀಕಾಸ್ತ್ರ ಪ್ರಯೋಗಿಸಿದ್ದರೆ, ಇತ್ತ ಗುಜರಾತ್‌ನಲ್ಲಿ ರಾಹುಲ್‌ ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.  

Advertisement

ನಮ್ಮವರು ಮಾತನಾಡುವ ಪ್ರಧಾನಿ
ರಾಹುಲ್‌ ಕ್ಷೇತ್ರದಲ್ಲಿ ಮಾತನಾಡಿದ ಅಮಿತ್‌ ಶಾ ಅವರು ಕೇಂದ್ರ ಸಚಿವೆ ಸ್ಮತಿ ಇರಾನಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಸಮ್ಮುಖದಲ್ಲಿ ಕಾಂಗ್ರೆಸ್‌ ಉಪಾಧ್ಯಕ್ಷರ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದರು. ರಾಹುಲ್‌ ಅವರನ್ನು ಕೆಲವೊಮ್ಮೆ “ಯುವರಾಜ’ ಎಂದೂ ಮತ್ತೂಮ್ಮೆ “ಬಾಬಾ’ ಎಂದು ಸಂಬೋಧಿಸಿದ ಅವರು, “”ಕಳೆದ ಮೂರು ವರ್ಷಗಳಲ್ಲಿ ಆಡಳಿತಾರೂಢ ಬಿಜೆಪಿಯು ಮಾಡಿರುವ ಅಭಿವೃದ್ಧಿಗಳ ಬಗ್ಗೆ ಪ್ರಶ್ನೆ ಮಾಡುತ್ತೀರಿ. ಆದರೆ, ಅಮೇಠಿಯನ್ನು ಮೂರು ತಲೆಮಾರುಗಳಿಂದ ಪ್ರತಿನಿಧಿಸಿರುವ ನಿಮ್ಮ ಕುಟುಂಬ ಈ ಕ್ಷೇತ್ರದಲ್ಲಿ ಯಾವ ಅಭಿವೃದ್ಧಿ ಕಾರ್ಯ ಮಾಡಿದೆ?” ಎಂದು ಪ್ರಶ್ನಿಸಿದರು.  

“”ಈಗ, ನೀವು (ರಾಹುಲ್‌) ಈ ಕ್ಷೇತ್ರದ ಸಂಸದರು. ನೀವು ಸಂಸದರಾಗಿರುವುದರಿಂದ ಆಗಿರುವ ಪ್ರಯೋಜನವೇನು? ಈ  ಜಿಲ್ಲೆಗೊಂದು ಜಿಲ್ಲಾಧಿಕಾರಿ ಕಚೇರಿಯಿಲ್ಲ. ಒಂದು ಕ್ಷಯ ಆಸ್ಪತ್ರೆಯಿಲ್ಲ. ಜನರಿಗಾಗಿ ಒಂದು ಎಫ್.ಎಂ. ರೇಡಿಯೋ ಕೇಂದ್ರವೂ ಇಲ್ಲ. ಗೋಮತಿ ನದಿಯಿಂದ ಆಗುತ್ತಿರುವ ಭೂ ಸವಕಳಿಯನ್ನು ನಿಲ್ಲಿಸಲು ನಿಮ್ಮಿಂದ ಸಾಧ್ಯವಾಗಿಲ್ಲ” ಎಂದು ಛೇಡಿಸಿದರು. ಅಲ್ಲದೆ, “”ನನ್ನ (ಅಮಿತ್‌) 35-40 ವರ್ಷಗಳ ರಾಜಕೀಯ ಜೀವನದಲ್ಲಿ ಇದೇ ಮೊದಲ ಬಾರಿಗೆ ಒಂದು ಸಂಸತ್‌ ಕ್ಷೇತ್ರದಿಂದ ಸಂಸದನೊಬ್ಬ ವರ್ಷಾನುಗಟ್ಟಲೆ ನಾಪತ್ತೆಯಾಗಿರುವುದನ್ನು ನೋಡುತ್ತಿದ್ದೇನೆ” ಎಂದು ಚುಚ್ಚಿದರು. 

“”3 ವರ್ಷಗಳಲ್ಲಿ ಬಿಜೆಪಿ ಕನಿಷ್ಠ ಪಕ್ಷ ಮಾತನಾಡುವ ಪ್ರಧಾನಿಯನ್ನು ನೀಡಿದೆ. 60 ವರ್ಷಗಳ ಕಾಲ ಕಾಂಗ್ರೆಸ್‌ ಬೆಂಬಲಿಸಿ ತಮ್ಮ ಕ್ಷೇತ್ರದಲ್ಲಿ ತಾವೇ ಪರದೇಶಿಗಳಾಗಿರುವ ನೀವು ಇನ್ನಾದರೂ ಬಿಜೆಪಿಯನ್ನು ಬೆಂಬಲಿಸಿ. ಆಗ, ನಿಮ್ಮ ಕ್ಷೇತ್ರ ಯಾವ ರೀತಿ ಬದಲಾವಣೆಯಾಗುತ್ತೆ ಎಂಬುದನ್ನು ನೋಡಿ” ಎಂದು ಅಮೇಠಿ ನಾಗರಿಕರನ್ನು ಉದ್ದೇಶಿಸಿ ಹೇಳಿದರು. 

ಮಾತುಗಳೆಲ್ಲವೂ ಟೊಳ್ಳು ಅಲ್ಲವೇ?
ವಡೋದರಾದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ರಾಹುಲ್‌ ಗಾಂಧಿ, ಇತ್ತೀಚೆಗೆ, ಅಮಿತ್‌ ಶಾ ಅವರ ಪುತ್ರ ಜಯ್‌ ಶಾ ವಿರುದ್ಧ ಕೇಳಿಬಂದಿರುವ ಆರೋಪಗಳ ಬಗ್ಗೆ ಪ್ರಸ್ತಾಪಿಸಿ ಟೀಕೆಗಳನ್ನು ಮಾಡಿದರು. ಈ ವರದಿಗಳನ್ನು ಉಲ್ಲೇಖೀಸಿ ಬಿಜೆಪಿ ಬಗ್ಗೆ ವ್ಯಂಗ್ಯ ಮಾಡಿದ ಅವರು, “”ಈವರೆಗೆ ಬೇಟಿ ಬಚಾವೋ ಎಂಬ ಧ್ಯೇಯವಾಕ್ಯ ಹೇಳುತ್ತಿದ್ದ ಬಿಜೆಪಿಯು ಈಗ ಬೇಟಾ ಬಚಾವೋ ಎಂಬ ಧ್ಯೇಯವಾಕ್ಯದಡಿ ಆಡಳಿತ ನಡೆಸುತ್ತಿದೆ” ಎಂದರು. ಅಲ್ಲದೆ, ಪದೇ ಪದೆ ತಮ್ಮನ್ನು ರಾಜಕುಮಾರ ಎಂದು ಸಂಬೋಧಿಸುವ ಅಮಿತ್‌ ಶಾ ಅವರಿಗೆ ತಿರುಗೇಟು ನೀಡಿದ ಅವರು, “”ನಾನು ನಿಜವಾದ ರಾಜಕುಮಾರನಲ್ಲ. ಶಾ ಅವರ ಪುತ್ರನೇ ನೈಜ ರಾಜಕುಮಾರ” ಎಂದರು. ಜಯ್‌ ಶಾ ಪ್ರಕರಣದಲ್ಲಿ ಪ್ರಧಾನಿಯವರೂ ಭಾಗಿಯಾಗಿರುವ ಸಾಧ್ಯತೆಗಳಿವೆ ಎಂದು ಆರೋಪಿಸಿದರು. ಅಲ್ಲದೆ, ಪ್ರಧಾನಿ ಮೋದಿ ಆಡುವ ಮಾತುಗಳೆಲ್ಲವೂ ಟೊಳ್ಳು. ಒಂದು ಆಶ್ವಾಸನೆಯೂ ಈಡೇರಿಲ್ಲ ಎಂದರು.

Advertisement

ರಾಹುಲ್‌ ವಿವಾದಾತ್ಮಕ ಹೇಳಿಕೆ: ಬಿಜೆಪಿಯಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯವಿಲ್ಲ ಎಂದು ಟೀಕಿಸಿರುವ ರಾಹುಲ್‌, ಆರೆಸ್ಸೆಸ್‌ನ ಶಾಖೆಗಳಲ್ಲಿ ಮಹಿಳಾ ಸದಸ್ಯರನ್ನು ಯಾರಾದರೂ ನೋಡಿದ್ದೀರಾ ಎಂದು ಪ್ರಶ್ನೆ ಮಾಡಿದರು. ಹಾಗೊಂದು ವೇಳೆ, ಆರೆಸ್ಸೆಸ್‌ನಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯವಿದ್ದರೂ, ಅವರು ಆಧುನಿಕ ಉಡುಗೆ(ಶಾರ್ಟ್ಸ್) ಧರಿಸಿ ಬರಲು ಅವರಿಗೆ ಅವಕಾಶವಿದೆಯೇ ಎಂದು ಪ್ರಶ್ನಿಸಿದರು. ಇದೇ ವೇಳೆ, ಮತ್ತೂಂದು ಹೇಳಿಕೆ ನೀಡಿದ ಅವರು, “ಬಿಜೆಪಿಯು ಮಹಿಳೆಯರು ಶಾಂತ ಸ್ವಭಾವದವರು, ಅವರು ಹಾಗೇ ಇರಬೇಕೆಂದು ಇಚ್ಛಿಸುತ್ತದೆ. ವ್ಯವಸ್ಥೆಯ ವಿರುದ್ಧ ಸಿಡಿದೇಳುವ ಮಹಿಳೆಯರ ಬಾಯಿ ಮುಚ್ಚಿಸುತ್ತದೆ’ ಎಂದೂ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next