ಹೊಸದಿಲ್ಲಿ: ಎಕ್ಸಿಟ್ ಪೋಲ್ ಚರ್ಚೆಗಳಲ್ಲಿ ಭಾಗವಹಿಸದೇ ಇರಲು ಕಾಂಗ್ರೆಸ್ ನಿರ್ಧರಿಸಿದೆ. ಇದು ಬಿಜೆಪಿಗೆ ಹೊಸ ಅಸ್ತ್ರ ಒದಗಿಸಿದೆ. ಏಳನೇ ಹಂತದ ಮತ್ತು ಅಂತಿಮ ಹಂತದ ಮತದಾನದ ದಿನವಾದ ಇಂದು ಸಂಜೆ ಎಕ್ಸಿಟ್ ಪೋಲ್ ಗಳು ಹೊರ ಬೀಳಲಿದ್ದು, ಇದರ ಚರ್ಚೆಗಳಲ್ಲಿ ಭಾಗವಹಿಸದೇ ಇರಲು ಕಾಂಗ್ರೆಸ್ ನಿರ್ಧಾರ ಮಾಡಿದೆ.
ಹಿರಿಯ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರ ಘೋಷಣೆಯ ನಂತರ, ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಮತ್ತು ಕೇಂದ್ರ ಸಚಿವ ಅಮಿತ್ ಶಾ ಇಬ್ಬರೂ ‘ಪ್ರತಿಪಕ್ಷಗಳು ಸೋಲನ್ನು ಒಪ್ಪಿಕೊಂಡಿರುವುದು ಸ್ಪಷ್ಟವಾಗಿದೆ’ ಎಂದು ಹೇಳಿದರು.
ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅಮಿತ್ ಶಾ ಅವರು, ‘ಕಾಂಗ್ರೆಸ್ ಗೆ ತನ್ನ ಹೀನಾಯ ಸೋಲು ಗೊತ್ತಾಗಿದ್ದು, ಈಗ ಯಾವ ಮುಖ ಇಟ್ಟುಕೊಂಡು ಮಾಧ್ಯಮಗಳು ಮತ್ತು ಸಾರ್ವಜನಿಕರನ್ನು ಎದುರಿಸುವುದು? ಹಾಗಾಗಿ ಕಾಂಗ್ರೆಸ್ ಎಕ್ಸಿಟ್ ಪೋಲ್‌ಗಳಿಂದ ದೂರ ಓಡುತ್ತಿದೆ. ಕಾಂಗ್ರೆಸ್ ಪಕ್ಷಕ್ಕೆ ದೂರ ಓಡಬೇಡಿ, ಸೋಲನ್ನು ಎದುರಿಸಿ ಮತ್ತು ಆತ್ಮಾವಲೋಕನ ಮಾಡಿ ಎಂದು ಹೇಳಲು ಬಯಸುತ್ತೇನೆ ಎಂದು ಅಮಿತ್ ಶಾ ಹೇಳಿದ್ದಾರೆ.
ಭಾರತದ ಅತ್ಯಂತ ಹಳೇಯ ಪಕ್ಷವು ಆಟಿಕೆ ಕಳೆದುಕೊಂಡ ಮಗುವಿನಂತೆ ವರ್ತಿಸುವುದು ಸರಿಯಲ್ಲ, ವಿರೋಧ ಪಕ್ಷದಲ್ಲಿರುವ ದೊಡ್ಡ ರಾಜಕೀಯ ಪಕ್ಷದಿಂದ ಒಂದು ನಿರ್ದಿಷ್ಟ ಮಟ್ಟದ ಪ್ರಬುದ್ಧತೆಯನ್ನು ಒಬ್ಬರು ನಿರೀಕ್ಷಿಸುತ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹೇಳಿದ್ದಾರೆ.
ಎಕ್ಸಿಟ್ ಪೋಲ್‌ಗಳನ್ನು ಬಹಿಷ್ಕರಿಸುವ ಮೂಲಕ, ಅಂಕಿಅಂಶಗಳನ್ನು ಸಂಗ್ರಹಿಸಲು ಹಗಲಿರುಳು ಶ್ರಮಿಸುವ ಹಲವಾರು ವೃತ್ತಿಪರ ಏಜೆನ್ಸಿಗಳು ನಡೆಸಿದ ಕಠಿಣ ಕಸರತ್ತನ್ನು ಕಾಂಗ್ರೆಸ್ ಪ್ರಶ್ನಿಸುತ್ತಿದೆ ಎಂದು ಅವರು ಹೇಳಿದರು.