ಹನೂರು: ನೀವು ಬಿಜೆಪಿಗೆ ಹಾಕುವ ಮತ ಕರ್ನಾಟಕ ರಾಜ್ಯದ ಸುರಕ್ಷತೆ, ಸುವರ್ಣ ಕರ್ನಾಟಕದ ಭವಿಷ್ಯ ಮತ್ತು ರೈತರ ಕಲ್ಯಾಣಕ್ಕಾಗಿ ಚಲಾಯಿಸುವ ಮತವಾಗಿದ್ದು, ಕಾಂಗ್ರೆಸ್‍ಗೆ ಹಾಕುವ ಮತ ದೆಹಲಿಯವರಿಗೆ ಎಟಿಎಂ ಮಾಡಿಕೊಡುವ ಮತವಾಗಲಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರಿ ಸಚಿವ ಅಮಿತ್ ಶಾ ತಿಳಿಸಿದರು.
ಸಭೆಯಲ್ಲಿ ಮಾತನಾಡಿದ ಅಮಿತ್ ಶಾ ರಾಜ್ಯದಲ್ಲಿ ಈ ಬಾರಿ ನಡೆಯುತ್ತಿರುವ ಚುನಾವಣೆ ಅಭಿವೃದ್ಧಿ ಮತ್ತು ರಿವರ್ಸ್ ಗೇರಿನ ನಡುವೆ ನಡೆಯುತ್ತಿರುವ ಚುನಾವಣೆಯಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಕರ್ನಾಟಕ ರಾಜ್ಯದ ವಿಕಾಸವಾಗಲಿದ್ದು ಮೋದಿ ಅವರ ನೇತೃತ್ವದಲ್ಲಿ ದಕ್ಷಿಣ ಭಾರತದಲ್ಲಿಯೇ ನಂ.1 ರಾಜ್ಯವಾಗಲಿದೆ. ಈ ಬಾರಿ ಬಿಜೆಪಿಗೆ ನೀಡುವ ಮತ ಸುವರ್ಣ ಕರ್ನಾಟಕದ ರಾಜ್ಯದ ಭವಿಷ್ಯಕ್ಕೆ, ರಾಜ್ಯದ ಸುರಕ್ಷತೆಗೆ ಮತ್ತು ರೈತರ ಕಲ್ಯಾಣಕ್ಕೆ ನೀಡುವ ಮತವಾಗಲಿದ್ದು, ಕಾಂಗ್ರೆಸ್‍ಗೆ ನೀಡುವ ಮತ ದೆಹಲಿಯವರಿಗೆ ಕರ್ನಾಟಕವನ್ನು ಎಟಿಎಂ ಮಾಡಿಕೊಟ್ಟಂತಾಗುತ್ತದೆ ಎಂದು ತಿಳಿಸಿದರು.
4% ಮುಸ್ಲೀಂ ಮೀಸಲಾತಿ ಮರುಜಾರಿ ಮಾಡುತ್ತಾರಂತೆ: ರಾಜ್ಯದಲ್ಲಿ ಮುಸಲ್ಮಾನರಿಗಿದ್ದ 4% ಮೀಸಲಾತಿಯನ್ನು ರದ್ದುಮಾಡಿ ಒಕ್ಕಲಿಗ, ಲಿಂಗಾಯತ, ಎಸ್.ಸಿ ಮತ್ತು ಎಸ್.ಟಿ ಮೀಸಲಾತಿಯನ್ನು ಹೆಚ್ಚಳ ಮಾಡಲಾಗಿತ್ತು. ಆದರೆ ಕಾಂಗ್ರೆಸ್‍ನ ಅಧ್ಯಕ್ಷರು ಹೇಳುತ್ತಾರೆ ನಾವು ಅಧಿಕಾರಕ್ಕೆ ಬಂದರೆ ಮುಸಲ್ಮಾನ ಮೀಸಲಾತಯನ್ನು ಮರು ಜಾರಿ ಮಾಡುತ್ತೇವೆ ಎಂದು. ಈ ರೀತಿ ಮುಸಲ್ಮಾನ ಮೀಸಲಾತಿ ಮರು ಜಾರಿಯಾಗಬೇಕೇ? ಒಕ್ಕಲಿಗರು, ಲಿಂಗಾಯತರು ಮತ್ತು ಎಸ್.ಸಿ ಮತ್ತು ಎಸ್.ಟಿ ಗಳಿಗೆ ಹೆಚ್ಚಳ ಮಾಡಿರುವ ಮೀಸಲಾತಿ ರದ್ದಾಗಬೇಕೇ? ಎಂದು ಕಾರ್ಯಕರ್ತರನ್ನು ಪ್ರಶ್ನಿಸಿದರು.
ಮೋದಿಯನ್ನು ವಿಷಸರ್ಪಕ್ಕೆ ಹೋಲಿಸುತ್ತಾರೆ: ಕಾಂಗ್ರೆಸ್‍ನ ಅಧ್ಯಕ್ಷ ಖರ್ಗೆಯವರು ಮೋದಿ ಅವರನ್ನು ವಿಷ ಸರ್ಪಕ್ಕೆ ಹೋಲಿಸುತ್ತಾರೆ. ಮೋದಿ ಅವರನ್ನು ಕಾಂಗ್ರೆಸ್‍ನವರು ಬೈದಷ್ಟು ಕಮಲದ ಹಾಗೇ ಅರಳುತ್ತಾರೆ. ಮತ್ತೊಮ್ಮೆ 2024ಕ್ಕೆ ಪ್ರಧಾನಿಯಾಗುತ್ತಾರೆ. ಮೋದಿಯವರು ಮನೆಯಿಲ್ಲದವರೆಗೆ ಮನೆ ನಿರ್ಮಾಣ ಮಾಡಿಕೊಟ್ಟು, ಕುಡಿಯಲು ಶುದ್ಧ ಜಲ ನೀಡಿ, ಶೌಚಾಲಯ ನೀಡಿ, ಕಳೆದ 2.5 ವರ್ಷದಲ್ಲಿ ಪ್ರತಿ ವ್ಯಕ್ತಿಗೆ 5 ಕೆ.ಜಿ ಅಕ್ಕಿ ನೀಡುತ್ತಿದ್ದಾರೆ. ಮೋದಿ ಅವರ ನೇತೃತ್ವದಲ್ಲಿ ದೇಶದ ಸುರಕ್ಷತೆ ಮಾಡಲಾಗುತ್ತಿದ್ದು, ಆರ್ಟಿಕಲ್ 370 ರದ್ದು ಮಾಡುವ ಮೂಲಕ ಕಾಶ್ಮೀರವನ್ನು ಭಾರತದ ಅವಿಭಾಜ್ಯ ಅಂಗವಾಗಿ ಮಾಡಿದ್ದಾರೆ, ಇಂತಹ ವ್ಯಕ್ತಿಯನ್ನು ವಿಷ ಸರ್ಪಕ್ಕೆ ಹೋಲಿಕೆ ಮಾಡುವುದು ಸರಿಯೇ ಎಂದು ಕಿಡಿಕಾರಿದರು.
ಇದನ್ನೂ ಓದಿ: Modi ಉಪನಾಮ ಹೇಳಿಕೆ: ರಾಹುಲ್ ಗಾಂಧಿ ಮೇಲ್ಮನವಿಯನ್ನು ವಜಾಗೊಳಿಸಿದ ಗುಜರಾತ್ ಹೈಕೋರ್ಟ್