Advertisement

ಶಾಸಕರು, ಸಂಸದರಿಗೆ ಮೈಚಳಿ ಬಿಡಲು ಅಮಿತ್ ಶಾ ತಾಕೀತು

06:00 AM Jan 10, 2018 | Team Udayavani |

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಯನ್ನು ಅಧಿಕಾರಕ್ಕೆ ತರುವುದು ಎಲ್ಲರ ಜವಾಬ್ದಾರಿ ಯಾಗಬೇಕೇ ಹೊರತು ಅದು  ತಮಗೆ ವಹಿಸಿರುವ ಕೆಲಸ ಎಂದು ಹೇಳಿದಷ್ಟನ್ನು ಮಾಡಿ ಮುಗಿಸುವುದಲ್ಲ. ಅದಕ್ಕಾಗಿ ಮೈಚಳಿ ಬಿಟ್ಟು ಅಖಾಡಕ್ಕಿಳಿಯಿರಿ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಪಕ್ಷದ ವಿಧಾನಸಭಾ ಕ್ಷೇತ್ರ ಉಸ್ತುವಾರಿಗಳು ಮತ್ತು ಜಿಲ್ಲಾ ಸಂಚಾಲಕರಿಗೆ ಖಡಕ್‌ ಸೂಚನೆ ನೀಡಿದ್ದಾರೆ.

Advertisement

ಯಲಹಂಕ ಸಮೀಪದ ಖಾಸಗಿ ಹೊಟೇಲ್‌ನಲ್ಲಿ ಮಂಗಳವಾರ ರಾತ್ರಿ ವಿಧಾನಸಭಾ ಕ್ಷೇತ್ರ ಉಸ್ತುವಾರಿಗಳು (ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರು, ವಿಧಾನಸಭೆ ಮತ್ತು ವಿಧಾನ ಪರಿಷತ್‌ ಸದಸ್ಯರು, ಪ್ರಮುಖ ಪದಾಧಿಕಾರಿಗಳು) ಹಾಗೂ ಜಿಲ್ಲಾ ಸಂಚಾಲಕರೊಂದಿಗೆ ಸುದೀರ್ಘ‌ ಸಮಾಲೋಚನೆ ನಡೆಸಿದ ಶಾ, ತಾವು ಈ ಹಿಂದೆ ವಹಿಸಿದ್ದ ಕ್ಷೇತ್ರ ಉಸ್ತುವಾರಿ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸದ ಕೆಲವು ಸಂಸದರು, ಶಾಸಕರ ವಿರುದ್ಧ ಗರಂ ಆಗಿದ್ದಾರೆ.

ಡಿ. 31ರಂದು ಅಮಿತ್‌ ಶಾ ಆಗಮನ ವಿಳಂಬವಾದ ಹಿನ್ನೆಲೆಯಲ್ಲಿ ಉಸ್ತುವಾರಿಗಳ ಸಭೆ ನಡೆಸಿದ್ದ ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ್‌ ಜಾವಡೇಕರ್‌ ಅವರು ಅಂದಿನ ಸಭೆಯ ವರದಿಯನ್ನು ನೀಡಿದ್ದು, ಅದನ್ನು ಮುಂದಿಟ್ಟು ಕೊಂಡು ಪ್ರತಿಯೊಬ್ಬ ಉಸ್ತುವಾರಿಗಳು ನಿರ್ವಹಿಸಿದ ಮತ್ತು ಬಾಕಿ ಇರುವ ಕೆಲಸಗಳ ಪಟ್ಟಿ ಮಾಡಿದ ಅಮಿತ್‌ ಶಾ, ಚುನಾವಣಾ ಹೋರಾಟಕ್ಕೆ ಇಳಿಯುವಾಗ ತಮ್ಮ ರಾಜಕೀಯ ಎದುರಾಳಿಗಳನ್ನು ಸೋಲಿಸುವ ಗುರಿ ಒಂದು ಮಾತ್ರ ಕಣ್ಣ ಮುಂದಿರಬೇಕು. ಆ ನಿಟ್ಟಿನಲ್ಲಿ ಜಿಲ್ಲಾ ಪ್ರಮುಖರನ್ನು ಸಿದ್ಧಗೊಳಿಸಬೇಕು ಎಂದು ಸೂಚಿಸಿರುವುದಾಗಿ ತಿಳಿದುಬಂದಿದೆ.

ಕೆಲವು ಶಾಸಕರು ಮತ್ತು ಸಂಸದರು ತಮಗೆ ವಹಿಸಿದ್ದ ಕ್ಷೇತ್ರಗಳಿಗೆ ಭೇಟಿ ನೀಡದ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ ಶಾ, ಈ ರೀತಿಯ ನಿರ್ಲಕ್ಷ್ಯ ಸಹಿಸಲು ಸಾಧ್ಯವಿಲ್ಲ. ಕಳೆದ ಆಗಸ್ಟ್‌ ತಿಂಗಳಲ್ಲಿ ಹೇಳಿದ ಕೆಲಸ ಮಾಡದಿದ್ದರೆ ಹೇಗೆ? ಕ್ಷೇತ್ರ ಜವಾಬ್ದಾರಿ ನಿಮ್ಮಿಂದ ಸಾಧ್ಯವಾಗದಿದ್ದರೆ ಹೇಳಿ, ಬೇರೆಯವರನ್ನು ನೇಮಕ ಮಾಡುತ್ತೇವೆ. ಅದನ್ನು ಬಿಟ್ಟು ರಾಜ್ಯದಲ್ಲಿ ಗೆಲ್ಲುವ ಅವಕಾಶವನ್ನು ಕೈಚೆಲ್ಲಿ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು ಖಡಕ್‌ ಎಚ್ಚರಿಕೆ  ನೀಡಿದ್ದಾರೆ ಎನ್ನಲಾಗಿದೆ.

ಉಸ್ತುವಾರಿಗಳಿಗೆ ಹೊಸ ಜವಾಬ್ದಾರಿ: ಉಸ್ತುವಾರಿ ಹೊಂದಿದ್ದವರಿಗೆ ಮತ್ತೂಂದು ಹೊಸ ಜವಾಬ್ದಾರಿ ಹಂಚಿಕೆ ಮಾಡಿದ ಅಮಿತ್‌ಶಾ, ಡಿ. 31ರಂದು ಹೇಳಿದ್ದ ಪೇಜ್‌ಪ್ರಮುಖ್‌ (ಪ್ರತಿ ಬೂತ್‌ನಲ್ಲಿ ಮತದಾರರ ಪಟ್ಟಿಯ ಒಂದು ಪುಟಕ್ಕೆ ಒಬ್ಬರಂತೆ ಪ್ರಮುಖರನ್ನು ನೇಮಿಸಿ ಅವರ ಮೂಲಕ ಜನರೊಂದಿಗೆ ನಿರಂತರ ಸಂಪರ್ಕ ಹೊಂದುವುದು) ಆಯಾ ಕ್ಷೇತ್ರಗಳಲ್ಲಿ ಕೆಲಸ ಆರಂಭಿಸಿದ್ದಾರೆಯೇ? ಹೊಸ ಮತದಾರರನ್ನು ಸೇರಿಸುವ ಕೆಲಸದಲ್ಲಿ ತೊಡಗಿದ್ದಾರೆಯೇ ಎಂಬುದನ್ನು ಪರಿಶೀಲಿಸಿ ವರದಿ ಸಲ್ಲಿಸುವಂತೆ ತಿಳಿಸಿದ್ದಾರೆ.

Advertisement

ಆಯಾ ಕ್ಷೇತ್ರಗಳಲ್ಲಿ ಗೆಲ್ಲುವ ಸಾಧ್ಯತೆ ಇರುವ ಅಭ್ಯರ್ಥಿಗಳ ಪಟ್ಟಿ ಮಾಡಿ ಒದಗಿಸಬೇಕು. ಈ ಪಟ್ಟಿಯೊಂದಿಗೆ ತಾವು ತರಿಸಿಕೊಂಡಿರುವ ಪಟ್ಟಿಯನ್ನು ತುಲನೆ ಮಾಡಿ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲಾಗುವುದು. ಈ ಸಂದರ್ಭದಲ್ಲಿ ಟಿಕೆಟ್‌ ವಂಚಿತರಾದವರು ಅನ್ಯ ಪಕ್ಷಗಳತ್ತ ವಲಸೆ ಹೋಗುತ್ತಾರೆಯೇ ಎಂಬುದನ್ನು ತಿಳಿದುಕೊಂಡು ಮಾಹಿತಿ ನೀಡಬೇಕು. ಪಕ್ಷಾಂತರ ಸಮಸ್ಯೆಯಿಂದ ಹಾನಿಯಾಗದಂತೆ ಎಚ್ಚರ ವಹಿಸಬೇಕು ಎಂದು ಅವರು ಸೂಚಿಸಿದ್ದಾರೆ ಎನ್ನಲಾಗಿದೆ.

ತಡರಾತ್ರಿವರೆಗೂ ಮುಂದುವರಿದ ಸಭೆ: ಸಂಜೆ 5.30ರಿಂದ 8 ಗಂಟೆಯವರೆಗೆ ಉತ್ತರ ಕರ್ನಾಟಕ ಭಾಗದ ವಿಧಾನಸಭಾ ಕ್ಷೇತ್ರಗಳ ಉಸ್ತುವಾರಿಗಳು ಮತ್ತು ಜಿಲ್ಲಾ ಸಂಚಾಲಕರು ಹಾಗೂ ರಾತ್ರಿ 8ರಿಂದ 10.30ರವರೆಗೆ ದಕ್ಷಿಣ ಕರ್ನಾಟಕ ಭಾಗದ ಉಸ್ತುವಾರಿಗಳು ಮತ್ತು ಜಿಲ್ಲಾ ಸಂಚಾಲಕರ ಸಭೆ ನಿಗದಿಯಾಗಿತ್ತಾದರೂ ಸಭೆ ಆರಂಭವಾಗುವುದು ವಿಳಂಬವಾಗಿದ್ದರಿಂದ  ಶಾ ಎರಡೂ ಸಭೆಗಳನ್ನು ಒಟ್ಟಾಗಿ ನಡೆಸಿದ್ದಾರೆ. ತಡರಾತ್ರಿವರೆಗೂ ಸಭೆ ಮುಂದುವರಿದಿತ್ತು.

ಕಾರ್ಯತಂತ್ರ ರೂಪಿಸುತ್ತೇವೆ, ಅನುಷ್ಠಾನಕ್ಕೆ ತನ್ನಿ
ರಾಜ್ಯದ ರಾಜಕೀಯ ಪರಿಸ್ಥಿತಿಗೆ ಅನುಗುಣವಾಗು ವಂತೆ ಚುನಾವಣಾ ಕಾರ್ಯತಂತ್ರ ರೂಪಿಸುತ್ತೇವೆ. ಅದನ್ನು ಕಟ್ಟುನಿಟ್ಟಾಗಿ ಜಾರಿಗೆ ತನ್ನಿ ಎಂದು ಅಮಿತ್‌ ಶಾ ಸೂಚನೆ ನೀಡಿದ್ದಾರೆ. ಪ್ರಮುಖರೊಂದಿಗಿನ ಮಾತುಕತೆ ವೇಳೆ ಗುಜರಾತ್‌ ಚುನಾವಣೆ ವಿಚಾರವನ್ನೂ ಪ್ರಸ್ತಾವಿಸಿದ ಅಮಿತ್‌ ಶಾ, ಅಲ್ಲಿ ಪಕ್ಷದ ಕಾರ್ಯತಂತ್ರಗಳನ್ನು ಸಮರ್ಪಕವಾಗಿ ಅಳವಡಿಸಿಕೊಂಡ ಎಲ್ಲರೂ ಗೆದ್ದುಬಂದಿದ್ದಾರೆ. ನಿರ್ಲಕ್ಷ್ಯ ಮಾಡಿದವರು ಸೋತಿದ್ದಾರೆ. ಇಲ್ಲಿ ಅಧಿಕಾರಕ್ಕೆ ಬರುವ ಸಾಧ್ಯತೆಗಳು ದಟ್ಟವಾಗಿರುವು ದರಿಂದ ತಂತ್ರಗಾರಿಕೆಗಳನ್ನು ಜಾರಿಗೆ ತರುವ ವೇಳೆ ಸ್ಥಳೀಯ ಮುಖಂಡರು ಎಡವದಂತೆ ನೋಡಿಕೊಳ್ಳಿ ಎಂದು ತಾಕೀತು ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next