Advertisement

ಸಹಕಾರ ಸಂಘಗಳ ಹೊಣೆಗಾರಿಕೆ ವಿವರಿಸಲು ಪ್ರತ್ಯೇಕ ಕಾಯ್ದೆ ಜಾರಿ: ಅಮಿತ್‌ ಶಾ

08:53 PM Dec 30, 2022 | Team Udayavani |

ಬೆಂಗಳೂರು: ದೇಶದ ಸಹಕಾರ ಕ್ಷೇತ್ರದ ಅಭಿವೃದ್ಧಿಗಾಗಿ ನೂತನ ಸಹಕಾರ ನೀತಿ ರೂಪಿಸಲಾಗುತ್ತಿದ್ದು, ಅದಕ್ಕಾಗಿ ಕೇಂದ್ರದ ಮಾಜಿ ಸಚಿವ ಸುರೇಶ್‌ ಪ್ರಭು ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಸಹಕಾರ ಸಂಘಗಳನ್ನು ಕಂಪೆನಿ ಕಾಯ್ದೆ ವ್ಯಾಪ್ತಿಯಿಂದ ಹೊರಗಿಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕೇಂದ್ರ ಸಹಕಾರ ಸಚಿವ ಅಮಿತ್‌ ಶಾ ಹೇಳಿದರು.

Advertisement

ರಾಜ್ಯ ಸಹಕಾರ ಇಲಾಖೆಯಿಂದ ಆಯೋಜಿಸಲಾಗಿದ್ದ ಸಹಕಾರ ಫ‌ಲಾನುಭವಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿ, ದೇಶದಲ್ಲಿ ರೈತ ಕೇಂದ್ರಿತ ಆರ್ಥಿಕ ವ್ಯವಸ್ಥೆ ಜಾರಿಗೆ ತರಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಲವು ಕಾರ್ಯಕ್ರಮಗಳನ್ನು ರೂಪಿಸಿ, ಅನುಷ್ಠಾನಗೊಳಿಸಲಾಗುತ್ತಿದೆ. ಅದಕ್ಕಾಗಿಯೇ ಕೇಂದ್ರದಲ್ಲಿ ಪ್ರತ್ಯೇಕವಾಗಿ ಸಹಕಾರ ಸಚಿವಾಲಯ ರಚಿಸಲಾಗಿದೆ. ವಿಶ್ವದಲ್ಲಿ 30 ಲಕ್ಷ ಸಹಕಾರ ಸಂಸ್ಥೆಗಳಿದ್ದು, ಅದರಲ್ಲಿ ಭಾರತದಲ್ಲೇ 9 ಲಕ್ಷ ಸಂಸ್ಥೆಗಳಿವೆ. ದೇಶದ ಶೇ. 51 ಜನರು ಸಹಕಾರ ಕ್ಷೇತ್ರದ ಪಾಲುದಾರರಾಗಿದ್ದಾರೆ. ದೇಶದಲ್ಲಿ ಕೃಷಿ ಆರ್ಥಿಕತೆ, ರಸಗೊಬ್ಬರ ಉತ್ಪಾದನೆ, ಮಾರಾಟ, ಸಕ್ಕರೆ ಉತ್ಪಾದನೆ, ಗೋಧಿ, ಅಕ್ಕಿ, ಮೀನು, ಡೇರಿ ಉತ್ಪನ್ನಗಳ ಉತ್ಪಾದನೆ, ಮಾರಾಟಗಳಲ್ಲೂ ಸಹಕಾರ ರಂಗ ತೊಡಗಿಕೊಂಡಿದೆ ಎಂದರು.

ಅಡುಗೆ ಅನಿಲ, ಪಡಿತರ, ಮೀನು, ರಸಗೊಬ್ಬರ, ಕೃಷಿ ಪರಿಕರಗಳು ಸೇರಿ ಹಲವು ಬಗೆಯ ವಸ್ತುಗಳು ಒಂದೇ ಕಡೆ ಸಿಗುವ ಹಾಗೂ ಮಾರಾಟ ಮಾಡುವ ಸಂಸ್ಥೆಗಳ ಸ್ಥಾಪನೆಗೆ ನಿರ್ಧರಿಸಲಾಗಿದೆ. ಮುಂದಿನ 3 ವರ್ಷಗಳಲ್ಲಿ ಅಂತಹ 2 ಲಕ್ಷ ಸಹಕಾರ ಸಂಸ್ಥೆಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ. ಜತೆಗೆ ವಿವಿಧ ರಾಜ್ಯಗಳಲ್ಲಿ ಡೇರಿ, ಸಾವಯವ ಉತ್ಪನ್ನಗಳ ಮಾರಾಟಕ್ಕಾಗಿ ಬಹುರಾಜ್ಯ ಸಹಕಾರ ಸಂಘಗಳನ್ನು ಸ್ಥಾಪಿಸಲಾಗುತ್ತಿದೆ. ವಿದೇಶಗಳಿಗೆ ಸಹಕಾರ ಸಂಘಗಳ ಉತ್ಪನ್ನಗಳ ಮಾರಾಟಕ್ಕಾಗಿ ರಫ್ತು ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಸಹಕಾರ ತತ್ವ, ಉದ್ದೇಶ ಸೇರಿ ಇನ್ನಿತರ ವಿಷಯಗಳ ಕುರಿತು ಶಿಕ್ಷಣ ನೀಡಲು ಸಹಕಾರ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ಅಮಿತ್‌ ಶಾ ವಿವರಿಸಿದರು.

ಸಹಕಾರ ನೀತಿ ಜಾರಿ: ದೇಶದ ಸಹಕಾರ ಕ್ಷೇತ್ರದ ಅಭಿವೃದ್ಧಿಗಾಗಿ ಹಾಗೂ ಸಹಕಾರ ರಂಗದ ಆದಾಯ 3 ಪಟ್ಟು ಹೆಚ್ಚಿಸಲು ಹಲವು ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರಮುಖವಾಗಿ ಸಹಕಾರ ನೀತಿ ರಚಿಸಲಾಗುತ್ತಿದ್ದು, ಅದಕ್ಕಾಗಿ ಸುರೇಶ್‌ ಪ್ರಭು ಅಧ್ಯಕ್ಷತೆಯ ಸಮಿತಿ ರಚಿಸಲಾಗಿದೆ. ಜತೆಗೆ ಸಹಕಾರ ಸಂಘಗಳ ಚುನಾವಣೆಯಲ್ಲಿ ಪಾರದರ್ಶಕತೆ ತರಲು, ಸಹಕಾರ ಸಂಘಗಳ ಹೊಣೆಗಾರಿಕೆಯನ್ನು ವಿವರಿಸಲು ಪ್ರತ್ಯೇಕ ಕಾಯ್ದೆ ಜಾರಿಗೊಳಿಸಲಾಗುವುದು. ಈ ಎಲ್ಲ ಪ್ರಕ್ರಿಯೆಗಳಿಗಾಗಿ ದೇಶದ ಎಲ್ಲ ಸಹಕಾರ ಸಂಘಗಳ ಡೇಟಾ ಸಂಗ್ರಹಕ್ಕೆ ಚಾಲನೆ ನೀಡಲಾಗಿದೆ. ಈವರೆಗೆ ಸಹಕಾರ ಸಂಘಗಳಿಂದ ಕಂಪೆನಿ ಕಾಯ್ದೆಗಳ ಅಡಿಯಲ್ಲಿ ತೆರಿಗೆ ವಸೂಲಿ ಮಾಡಲಾಗುತ್ತಿದೆ. ಅದನ್ನು ರದ್ದು ಮಾಡಿ, ಸಹಕಾರ ಸಂಘಗಳ ತೆರಿಗೆ ಪ್ರಮಾಣ ಇಳಿಕೆ ಮಾಡಲಾಗುವುದು ಎಂದು ಅಮಿತ್‌ ಶಾ ಹೇಳಿದರು.

ನಂದಿನಿ ಎಂಬುದೇ ಬ್ರ್ಯಾಂಡ್‌: ರಾಜ್ಯದಲ್ಲಿ ಹಾಲು ಒಕ್ಕೂಟಗಳಿವೆ. ಆದರೆ, ಆ ಒಕ್ಕೂಟಗಳಿಗಿಂತ ನಂದಿನಿ ಬ್ರ್ಯಾಂಡ್‌ ಎಲ್ಲದಕ್ಕಿಂತ ದೊಡ್ಡದು. ಆ ಉತ್ಪನ್ನವು ದೇಶ, ವಿದೇಶ ಮಟ್ಟಕ್ಕೆ ರಾಜ್ಯದ ಡೇರಿ ಉತ್ಪನ್ನಗಳು ಹೆಸರುವಾಸಿಯಾಗುವಂತೆ ಮಾಡಿದೆ ಎಂದು ಅಮಿತ್‌ ಶಾ ಅಭಿಪ್ರಾಯಪಟ್ಟರು.

Advertisement

ಕಾರ್ಯಕ್ರಮದಲ್ಲಿ ಯಶಸ್ವಿನಿ ಫ‌ಲಾನುಭವಿಗಳಿಗೆ ಕಾರ್ಡ್‌ಗಳನ್ನು ವಿತರಿಸಲಾಯಿತು. ಜತೆಗೆ ಸ್ವಸಹಾಯ ಗುಂಪುಗಳ ಫ‌ಲಾನುಭವಿಗಳು, ರೈತರಿಗೆ ಸಾಲ ವಿತರಣಾ ಪ್ರಮಾಣಪತ್ರ ನೀಡಲಾಯಿತು. ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ಸಚಿವರಾದ ಆರಗ ಜ್ಞಾನೇಂದ್ರ, ಡಾ. ಸಿ.ಎನ್‌. ಅಶ್ವತ್ಥನಾರಾಯಣ, ಆರ್‌. ಅಶೋಕ್‌, ಸಂಸದರಾದ ಡಿ.ವಿ. ಸದಾನಂದಗೌಡ, ಪಿ.ಸಿ. ಮೋಹನ್‌, ಶಾಸಕರಾದ ಎಂ. ಕೃಷ್ಣಪ್ಪ, ಎಸ್‌.ಆರ್‌. ವಿಶ್ವನಾಥ್‌, ಅ. ದೇವೇಗೌಡ ಇತರರಿದ್ದರು.

ಬಂಡವಾಶಾಹಿಗಳು ಸಹಕಾರ ಕ್ಷೇತ್ರಕ್ಕೆ ಬರಬಾರದು
ರಾಜ್ಯದ ಸಹಕಾರ ಕ್ಷೇತ್ರ ದೇಶಕ್ಕೇ ಮಾದರಿಯಾಗಿದೆ. ಆದರೆ, ಇಲ್ಲಿನ ಸಹಕಾರ ಕ್ಷೇತ್ರದಿಂದ ಸಾಹುಕಾರರಾದವರು ಸಾಕಷ್ಟು ಜನರಿದ್ದಾರೆ. ಬಂಡವಾಳ ವೃದ್ಧಿಗಾಗಿಯೇ ಸಹಕಾರ ಕ್ಷೇತ್ರದಲ್ಲಿ ತೊಡಗಿಕೊಳ್ಳುವವರೂ ಇದ್ದಾರೆ. ಸಹಕಾರ ಕ್ಷೇತ್ರವು ಸರ್ಕಾರವನ್ನು ರಚಿಸಬೇಕು. ಆದರೆ ಈಗ, ಸರ್ಕಾರವೇ ಸಹಕಾರ ರಂಗವನ್ನು ಆಳುವ ಸ್ಥಿತಿಯಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಸಹಕಾರ ಕ್ಷೇತ್ರದಿಂದ ದುಡಿಯುವ ವರ್ಗದ ಆರ್ಥಿಕತೆ ಬೆಳೆಸಲು ಸಾಧ್ಯವಿದೆ. ಸಹಕಾರ ರಂಗದಲ್ಲಿ ವಿಶ್ವಾಸಾರ್ಹತೆ ಉಳಿಸಿಕೊಳ್ಳುವುದು ಅಗತ್ಯ. ಎಲ್ಲ ಸದಸ್ಯರು ಅದಕ್ಕಾಗಿ ಶ್ರಮಿಸಬೇಕು. ಆದರೆ, ಇತ್ತೀಚಿನ ದಿನಗಳಲ್ಲಿ ಕೆಲಸ ಸಹಕಾರ ಸಂಘ, ಬ್ಯಾಂಕ್‌ಗಳು ಜನರ ವಿಶ್ವಾಸ ಕಳೆದುಕೊಳ್ಳುತ್ತಿವೆ. ರಾಜ್ಯದಲ್ಲಿ ಇನ್ನೂ ಸಹಕಾರ ಕ್ಷೇತ್ರದ ಸಾಮರ್ಥ್ಯ ಪೂರ್ಣಪ್ರಮಾದಲ್ಲಿ ಬಳಕೆಯಾಗುತ್ತಿಲ್ಲ. ಸಹಕಾರ ಕ್ಷೇತ್ರದಿಂದ ಗ್ರಾಮೀಣ ಪ್ರದೇಶದ ಆರ್ಥಿಕತೆ ಹೆಚ್ಚುತ್ತದೆ. ಹೀಗಾಗಿ ಎಲ್ಲರೂ ಸಹಕಾರ ಕ್ಷೇತ್ರದಲ್ಲಿ ತೊಡಗಿಕೊಳ್ಳಬೇಕು ಎಂದರು.

ಪ್ಯಾಕ್ಸ್‌ಗಳ ಗಣಕೀರಣ
ರಾಜ್ಯದ 6,040 ಕೃಷಿ ಪತ್ತಿನ ಸಹಕಾರ ಸಂಘಗಳ ಗಣಕೀಕರಣಕ್ಕೆ ಚಾಲನೆ ನೀಡಲಾಗಿದೆ. ಕೇಂದ್ರ ಸರ್ಕಾರದ ನೆರವಿನೊಂದಿಗೆ 235.56 ಕೋಟಿ ರೂ. ವೆಚ್ಚದಲ್ಲಿ ಎಲ್ಲ ಕೃಷಿ ಪತ್ತಿನ ಸಹಕಾರ ಸಂಘಗಳ ದಾಖಲೆ, ವ್ಯವಹಾರವನ್ನು ಗಣಕೀಕರಣ ಮಾಡಲಾಗುತ್ತಿದೆ. ಜತೆಗೆ ಆತ್ಮನಿರ್ಭರ ಭಾರತ ಯೋಜನೆ ಅಡಿ ಸಹಕಾರ ಸಂಘಗಳನ್ನು ಬಹುಪಯೋಗಿ ಸೇವಾ ಕೇಂದ್ರಗಳನ್ನಾಗಿ ಪರಿವರ್ತಿಸಲು 158 ಕೋಟಿ ರೂ. ಸಾಲ ವಿತರಿಸಲಾಗಿದೆ ಎಂದು ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ಹೇಳಿದರು. 2022-23ನೇ ಸಾಲಿನಲ್ಲಿ 33 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ 24 ಸಾವಿರ ಕೋಟಿ ರೂ. ಬೆಳೆ ಸಾಲ ವಿತರಿಸುವ ಗುರಿ ಹೊಂದಲಾಗಿದ್ದು, ಈವರೆಗೆ 18.11 ಲಕ್ಷ ರೈತರಿಗೆ 13,480 ಕೋಟಿ ರೂ. ಸಾಲ ವಿತರಿಸಲಾಗಿದೆ. 3 ಲಕ್ಷ ಹೊಸ ರೈತರಿಗೆ ಬೆಳೆ ಸಾಲ ವಿತರಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next