Advertisement

ನುಸುಳುಕೋರರ ಮೇಲೇಕೆ ಕಾಳಜಿ :ದೀದಿ ವಿರುದ್ಧ ಶಾ ಕಿಡಿ

09:56 AM Mar 03, 2020 | Hari Prasad |

ಕೋಲ್ಕತಾ/ಹೊಸದಿಲ್ಲಿ: ‘ಮಮತಾ ದೀದಿಗೆ ನುಸುಳುಕೋರರ ಬಗ್ಗೆ ಮಾತ್ರವೇ ಕಾಳಜಿಯಿದೆ. ವಲಸಿಗರ ಹಿತಾಸಕ್ತಿ ಅವರಿಗೆ ಬೇಕಿಲ್ಲ. ನೆರೆದೇಶಗಳಲ್ಲಿ ಅತ್ಯಾಚಾರಕ್ಕೊಳ ಗಾಗಿ, ದೌರ್ಜನ್ಯಗಳನ್ನು ಎದುರಿಸಿ, ಭಯಭೀತರಾಗಿ ಭಾರತಕ್ಕೆ ಆಗಮಿಸಿರುವ ವಲಸಿಗರಿಗೆ ಪೌರತ್ವ ಕೊಡುವುದು ತಪ್ಪೇ’? ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಇಂಥದ್ದೊಂದು ಪ್ರಶ್ನೆ ಹಾಕಿರುವುದು ಕೇಂದ್ರ ಗೃಹ ಸಚಿವ ಅಮಿತ್‌ ಶಾ.

Advertisement

ರವಿವಾರ ಕೋಲ್ಕತಾದಲ್ಲಿ ಬಿಜೆಪಿಯ ‘ಆರ್‌ ನಾಯ್‌ ಅನ್ಯಾಯ್‌’ (ಅನ್ಯಾಯ ಆಗಿದ್ದು ಸಾಕು) ಎಂಬ ಹೆಸರಿನ ಅಭಿಯಾನ ಹಾಗೂ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪೌರತ್ವ ಕಾಯ್ದೆಯ ವಿರುದ್ಧ ಮಾತನಾಡುತ್ತಿರುವ ದೀದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಅಲ್ಲದೆ, ಮಮತಾ ಅವರೇ ಗಲಭೆಗೆ ಪ್ರಚೋದನೆ ನೀಡುತ್ತಿದ್ದಾರೆ ಮತ್ತು ರೈಲುಗಳಿಗೆ ಬೆಂಕಿ ಹಚ್ಚಿಸುತ್ತಿದ್ದಾರೆ ಎಂದೂ ಶಾ ಆರೋಪಿಸಿದ್ದಾರೆ. ಜತೆಗೆ, ಬಂಗಾಳದಲ್ಲಿ ಸಿಎಎ ಜಾರಿಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ರಾಜ್ಯದಲ್ಲಿ ಮಮತಾ ಬ್ಯಾನರ್ಜಿ ಸರಕಾರ ಅಸ್ತಿತ್ವದಲ್ಲಿ ಇರುವವರೆಗೂ ‘ಸ್ವರ್ಣ ಬಂಗಾಲ’ ಸೃಷ್ಟಿಯಾಗಲು ಸಾಧ್ಯವಿಲ್ಲ.

ನೀವು ಬಿಜೆಪಿಗೆ 5 ವರ್ಷ ಅಧಿಕಾರ ಕೊಟ್ಟು ನೋಡಿ, ಬಂಗಾಲವನ್ನು ಚಿನ್ನವಾಗಿಸುತ್ತೇವೆ ಎಂದ ಶಾ, 2021ರ ಅಸೆಂಬ್ಲಿ ಚುನಾವಣೆಯಲ್ಲಿ ಸ್ಪಷ್ಟ ಬಹುಮತದಿಂದ ಪ.ಬಂಗಾಲದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದೂ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮತ್ತೆ ಘೋಷಣೆ: ಇದಕ್ಕೂ ಮುನ್ನ ಶಾ ರ್ಯಾಲಿಗೆಂದು ಆಗಮಿಸುತ್ತಿದ್ದ ಬಿಜೆಪಿ ಕಾರ್ಯಕರ್ತರು ಕೂಡ “ಗೋಲಿ ಮಾರೋ’ (ಗುಂಡಿಕ್ಕಿ) ಘೋಷಣೆಗಳನ್ನು ಕೂಗಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಪೊಲೀಸರು, ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವವರ ವಿರುದ್ಧ ಕಠಿನ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

Advertisement

ದಿಲ್ಲಿಯನ್ನು ನೋಡಿಕೊಳ್ಳಿ: ಕಾನೂನು ಸುವ್ಯವಸ್ಥೆ ಕುರಿತು ಪ.ಬಂಗಾಲ ಸರಕಾರ‌ವನ್ನು ಟೀಕಿಸಿದ ಅಮಿತ್‌ ಶಾಗೆ ತಿರುಗೇಟು ನೀಡಿರುವ ತೃಣಮೂಲ ಕಾಂಗ್ರೆಸ್‌, “ನಮಗೆ ಬಂದು ಬುದ್ಧಿವಾದ ಹೇಳುವ ಮೊದಲು, ನಿಮ್ಮ ಮೂಗಿನಡಿಯಲ್ಲೇ (ದಿಲ್ಲಿ) ಅಮಾಯಕರ ಜೀವಗಳನ್ನು ಉಳಿಸಲು ವಿಫ‌ಲವಾಗಿದ್ದಕ್ಕೆ ನೀವು ದೇಶದ ಕ್ಷಮೆ ಯಾಚಿಸಿ’ ಎಂದು ಹೇಳಿದೆ.

ದಿಲ್ಲಿ ಶಾಂತ: ವ್ಯಾಪಕ ಹಿಂಸಾಚಾರ ಕಂಡ ದಿಲ್ಲಿ ಈಗ ಶಾಂತವಾಗಿದೆ. ಜನಜೀವನ ಸಹಜ ಸ್ಥಿತಿಗೆ ಮರಳಿದೆ. ಗಲಭೆ ಪೀಡಿತ ಪ್ರದೇಶಗಳಿಗೆ ರವಿವಾರ ಭೇಟಿ ನೀಡಿದ ಆರ್ಟ್‌ ಆಫ್ ಲಿವಿಂಗ್‌ ಸಂಸ್ಥಾಪಕ, ಅಧ್ಯಾತ್ಮ ಗುರು ಶ್ರೀ ಶ್ರೀ ರವಿ ಶಂಕರ್‌ ಅವರು, ಜನರಿಗೆ ಸಾಂತ್ವನ ಹೇಳಿ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ. ಇದೇ ವೇಳೆ, ಹಿಂಸಾಚಾರಕ್ಕೆ ಸಂಬಂಧಿಸಿ ಈವರೆಗೆ 254 ಎಫ್ಐಆರ್‌ ದಾಖಲಿಸಲಾಗಿದ್ದು, 903 ಮಂದಿ ಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಿಂಸಾಚಾರದ ವೇಳೆ ಮನೆ ಕಳೆದುಕೊಂಡ ಬಿಎಸ್‌ಎಫ್ ಯೋಧ ಅನೀಸ್‌ಗೆ ಒಡಿಶಾ ಸಿಎಂ ನವೀನ್‌ ಪಟ್ನಾಯಕ್‌ 10 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಇದೇ ವೇಳೆ, ಮಾ.1ರೊಳಗೆ ಶಹೀನ್‌ಬಾಘ್ ನ ರಸ್ತೆ ತೆರವುಗೊಳಿಸಬೇಕು ಎಂದು ಹಿಂದೂ ಮಹಾಸಭಾ ಎಚ್ಚರಿಕೆ ನೀಡಿದ್ದ ಹಿನ್ನೆಲೆಯಲ್ಲಿ, ರವಿವಾರ ಪೌರತ್ವ ವಿರೋಧಿ ಪ್ರತಿಭಟನೆ ನಡೆಯುತ್ತಿರುವ ಶಹೀನ್‌ಬಾಘ್ ನಲ್ಲಿ ಬಿಗಿಭದ್ರತೆ ಕೈಗೊಳ್ಳಲಾಗಿತ್ತು.

ದೇಶದಲ್ಲೀಗ ಪೂರ್ವಭಾವಿ ರಕ್ಷಣಾ ನೀತಿಯಿದೆ
ಭಯೋತ್ಪಾದನೆ ವಿಚಾರದಲ್ಲಿ ದೇಶವು ಶೂನ್ಯ ಸಹಿಷ್ಣುವಾಗಿದ್ದು, ಪ್ರಧಾನಿ ಮೋದಿ ನೇತೃತ್ವದಲ್ಲಿ ದೇಶವೀಗ ಪೂರ್ವಭಾವಿ ರಕ್ಷಣಾ ನೀತಿಯನ್ನು ಅಳವಡಿಸಿಕೊಂಡಿದೆ ಎಂದೂ ಸಚಿವ ಅಮಿತ್‌ ಶಾ ಹೇಳಿದ್ದಾರೆ. ಕೋಲ್ಕತಾದ ರಾಜರ್ಹಾತ್‌ನಲ್ಲಿ ರಾಷ್ಟ್ರೀಯ ಭದ್ರತಾ ಪಡೆಯ (ಎನ್‌ಎಸ್‌ಜಿ) 29 ಸ್ಪೆಷಲ್‌ ಕಾಂಪೋಸಿಟ್‌ ಗ್ರೂಪ್‌ ಕಾಂಪ್ಲೆಕ್ಸ್‌ ಉದ್ಘಾಟಿಸಿದ ಬಳಿಕ ಅವರು ಮಾತನಾಡಿದರು.

ಸರ್ಜಿಕಲ್‌ ದಾಳಿ ನಡೆಸುವ ಸಾಮರ್ಥ್ಯವಿರುವಂಥ ಅಮೆರಿಕ ಹಾಗೂ ಇಸ್ರೇಲ್‌ನಂಥ ದೇಶಗಳ ಲೀಗ್‌ಗೆ ಈಗ ಭಾರತವೂ ಸೇರ್ಪಡೆಯಾಗಿದೆ. ಎನ್‌ಎಸ್‌ಜಿ ಎನ್ನುವುದು ಜಾಗತಿಕವಾಗಿ ಗುರುತಿಸಲ್ಪಟ್ಟ ಉಗ್ರ ನಿಗ್ರಹ ಪಡೆಯಾಗಿ ಬದಲಾಗಿದೆ. 10 ಸಾವಿರ ವರ್ಷಗಳ ಇತಿಹಾಸದಲ್ಲಿ ಭಾರತ ಯಾವುದೇ ದೇಶದ ಮೇಲೆ ದಾಳಿ ನಡೆಸಿಲ್ಲ. ಆದರೆ, ಯಾರಾ ದರೂ ನಮ್ಮ ನೆಲಕ್ಕೆ ಕಾಲಿಡುವ ದುಸ್ಸಾಹಸ ಮಾಡಿದರೆ, ಅಂಥವರನ್ನು ಸುಮ್ಮನೆ ಬಿಟ್ಟಿಲ್ಲ ಎಂದೂ ಶಾ ಹೇಳಿದ್ದಾರೆ. ಇದೇ ವೇಳೆ, ಶಾಂತಿಗೆ ಭಂಗ ತರುವವರು ಮತ್ತು ದೇಶ ವಿಭಜಿಸುವವರು ಮಾತ್ರ ಎನ್‌ಎಸ್‌ಜಿಗೆ ಹೆದರುತ್ತಾರೆ ಎಂದೂ ಶಾ ನುಡಿದಿದ್ದಾರೆ.

ಸಾವಿನ ಸಂಖ್ಯೆ 3ಕ್ಕೇರಿಕೆ
ಪೌರತ್ವ ಕಾಯ್ದೆಗೆ ಸಂಬಂಧಿಸಿ ಬುಡಕಟ್ಟು ಹಾಗೂ ಬುಡಕಟ್ಟೇತರ ಗುಂಪುಗಳ ನಡುವೆ ಮೇಘಾಲಯದಲ್ಲಿ ಆರಂಭವಾದ ಘರ್ಷಣೆಗೆ ರವಿವಾರ 3ನೇ ಬಲಿಯಾಗಿದೆ. 37 ವರ್ಷದ ವ್ಯಕ್ತಿಯನ್ನು ಅಪರಿಚಿತರ ಗುಂಪೊಂದು ಆತನ ಮನೆಗೇ ನುಗ್ಗಿ ಹತ್ಯೆಗೈದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶನಿವಾರ ನಡೆದ ಗಲಭೆಯಲ್ಲಿ ಇಬ್ಬರು ಸಾವಿಗೀಡಾಗಿದ್ದರು. 6 ಜಿಲ್ಲೆಗಳಲ್ಲಿ ಮೊಬೈಲ್‌ ಇಂಟರ್ನೆಟ್‌, ಎಸ್ಸೆಮ್ಮೆಸ್‌ ಸೇವೆ ಸ್ಥಗಿತ ಮುಂದುವರಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next