ಮುಂಬಯಿ: ‘ಪ್ರಾಜೆಕ್ಟ್ ಕೆ’ ಚಿತ್ರದ ಚಿತ್ರೀಕರಣದ ವೇಳೆ ಆದ ಗಾಯದ ನಂತರ ಮೇರು ನಟ ಅಮಿತಾಭ್ ಬಚ್ಚನ್ ಆರೋಗ್ಯ ಮಾಹಿತಿಯನ್ನು ಹಂಚಿಕೊಂಡಿದ್ದು, ‘ಹಿಂತಿರುಗುವ ಭರವಸೆ…’ಎಂದು ಚಿತ್ರವನ್ನು ಸಾಮಾಜಿಕ ತಾಣದಲ್ಲಿ ಸೋಮವಾರ ಹಂಚಿಕೊಂಡಿದ್ದಾರೆ.
ಈ ತಿಂಗಳ ಆರಂಭದಲ್ಲಿ ಪ್ರಾಜೆಕ್ಟ್ ಕೆ ಸೆಟ್‌ನಲ್ಲಿ ಅವರು ಗಾಯಗೊಂಡಿದ್ದರು. ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡ ಪೋಸ್ಟ್ ನಲ್ಲಿ, 80 ರ ಹರೆಯದ ನಟ ಚೇತರಿಸಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ. ಟಿಪ್ಪಣಿಯ ಜೊತೆಗೆ, ಅವರು ಕಪ್ಪು ಮತ್ತು ಬಿಳಿ ಆಕರ್ಷಕ ಧಿರಿಸಿನಲ್ಲಿರುವ ಫ್ಯಾಶನ್ ಶೋನಲ್ಲಿ ರಾಂಪ್ ಮೇಲೆ ನಡೆಯುತ್ತಿರುವ ಥ್ರೋಬ್ಯಾಕ್ ಚಿತ್ರವನ್ನು ಸಹ ಪೋಸ್ಟ್ ಮಾಡಿದ್ದಾರೆ.
“ನನ್ನ ಚೇತರಿಕೆಗಾಗಿ ಎಲ್ಲಾ ಪ್ರಾರ್ಥನೆಗಳು ಮತ್ತು ಶುಭಾಶಯಗಳಿಗೆ ಧನ್ಯವಾದಗಳು. ನಾನು ಚೇತರಿಸಿಕೊಳ್ಳುತ್ತಿದ್ದೇನೆ. ಶೀಘ್ರದಲ್ಲೇ ರ‍್ಯಾಂಪ್‌ಗೆ ಮರಳುವ ಭರವಸೆ ಇದೆ..” ಎಂದು ಪೋಸ್ಟ್ ಮಾಡಿದ್ದಾರೆ.
ನೋವಿನ ಶಮನಕ್ಕಾಗಿ ರಾತ್ರೋರಾತ್ರಿ ವೈದ್ಯರನ್ನು ಕರೆಸಿಕೊಂಡ ವಿಚಾರ ಹಂಚಿಕೊಂಡು, ಮೊದಲು ಪಕ್ಕೆಲುಬಿನ ನೋವು ಮಾತ್ರ ಇತ್ತು. ವಿಶ್ರಾಂತಿಗಾಗಿ ಮನೆಯಲ್ಲಿದ್ದಾಗ ಕೈಕಾಲುಗಳ ನೋವು ಆರಂಭವಾಯಿತು. ಒಂದೆಡೆ ಗಮನ ಹರಿಸಿದರೆ ಮತ್ತೂಂದೆಡೆ ನೋವು, ಈ ನಡುವೆ ಕಾಲಿನಲ್ಲಿ ವಿಚಿತ್ರ ಗಡ್ಡೆಯ ವಿಪರೀತ ನೋವು, ಸಹಿಸಲು ಅಸಾಧ್ಯವೆನಿಸಿದಾಗ ರಾತ್ರೋ ರಾತ್ರಿ ವೈದ್ಯರನ್ನು ಕರೆಸಿದ್ದು,ನಾನು ಮತ್ತೆ ಕೆಲಸಕ್ಕೆ ಮರಳಬೇಕು. ಅದಕ್ಕೆ ಚೈತನ್ಯ ನಿಮ್ಮೆಲ್ಲರ ಹಾರೈಕೆಗಳಿಂದ ಸಿಗಬೇಕು, ಶೀಘ್ರವಾಗಿ ಆ ಹಾರೈಕೆ ಫಲಿಸಲಿದೆ” ಎಂದು ನೋವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಮಾರ್ಚ್ ಮೊದಲ ವಾರದಲ್ಲಿ ಹಂಚಿಕೊಂಡ ಬ್ಲಾಗ್ ಪೋಸ್ಟ್‌ನಲ್ಲಿ, ಆಕ್ಷನ್ ದೃಶ್ಯವನ್ನು ಚಿತ್ರೀಕರಿಸುವಾಗ ಗಾಯಗೊಂಡಿದ್ದೇನೆ ಎಂದು ಬಹಿರಂಗಪಡಿಸಿದ್ದರು. ಹೈದರಾಬಾದ್‌ನಲ್ಲಿ ಪಕ್ಕೆಲುಬಿನ ವೈದ್ಯಕೀಯ ಚಿಕಿತ್ಸೆಗೆ ಒಳಗಾಗಿದ್ದರು. ಈಗ ಮುಂಬೈ ನಿವಾಸ ಜಲ್ಸಾದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.