Advertisement

18ಕ್ಕೆ ಹುಬ್ಬಳಿಗೆ ಅಮಿತ್‌ ಶಾ ಭೇಟಿ

11:01 AM Jan 09, 2020 | Lakshmi GovindaRaj |

ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಬಗ್ಗೆ ಜನಜಾಗೃತಿ ಅಭಿಯಾನ ನಡೆಸುವುದರ ಜತೆಗೆ ಕಾಯ್ದೆಯನ್ನು ಸರಿಯಾಗಿ ಜಾರಿಗೊಳಿಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಾರ್ವಜನಿಕವಾಗಿ ಅಭಿನಂದನೆ ಸಲ್ಲಿಸಲು ಜ.18ರಂದು ಹುಬ್ಬಳ್ಳಿಯಲ್ಲಿ ಬೃಹತ್‌ ಸಮಾರಂಭ ಆಯೋಜಿಸಲಾಗುತ್ತಿದೆ. ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಪಾಲ್ಗೊಳ್ಳಲಿದ್ದಾರೆ.

Advertisement

ಕಾಯ್ದೆ ಬಗ್ಗೆ ಜಾಗೃತಿ ಮೂಡಿಸಲು ಬಿಜೆಪಿ “ಮನೆ ಮನೆ ಸಂಪರ್ಕ’ ಅಭಿಯಾನಕ್ಕೆ ಚಾಲನೆ ನೀಡಿದ್ದು, ಈ ಅವಧಿಯಲ್ಲಿ 4.65 ಲಕ್ಷ ಮನೆಗಳಿಗೆ ಯಶಸ್ವಿಯಾಗಿ ಮಾಹಿತಿಯನ್ನು ತಲುಪಿಸಲಾಗುವುದು. ಜ.11 ಹಾಗೂ 12ರಂದು ಎರಡೂ ದಿನ ಪೂರ್ಣ ಪ್ರಮಾಣದಲ್ಲಿ ಬೂತ್‌ ಮಟ್ಟದಲ್ಲಿ ಮನೆ, ಮನೆ ಸಂಪರ್ಕ ಅಭಿಯಾನ ನಡೆಸಿ, ಎಲ್ಲರಿಗೂ ಮಾಹಿತಿ ತಲುಪಿಸಲು ಬಿಜೆಪಿ ಕರೆ ನೀಡಿದೆ. ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್‌ ಟೆಂಗಿನಕಾಯಿ, ಈ ಬಗ್ಗೆ ಮಾಹಿತಿ ನೀಡಿದರು.

ಅಭಿಯಾನಕ್ಕೆ ಅದ್ಭುತ ಪ್ರತಿಕ್ರಿಯೆ: ಕಾಯ್ದೆ ಕುರಿತು ಜನಜಾಗೃತಿ ಅಭಿಯಾನಕ್ಕೆ ಮುಖ್ಯಮಂತ್ರಿ, ರಾಜ್ಯ ಬಿಜೆಪಿ ಅಧ್ಯಕ್ಷರು ಚಾಲನೆ ನೀಡಿದ್ದು, ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಳ್ಳಾರಿ, ರಾಮನಗರ, ಕೋಲಾರ, ದೊಡ್ಡಬಳ್ಳಾಪುರ, ತುಮಕೂರು, ಕಾರ್ಕಳ, ಮಾಲೂರು, ಚಿಂತಾಮಣಿಗಳಲ್ಲಿ ಯಶಸ್ವಿಯಾಗಿ ರ್ಯಾಲಿಗಳು ನಡೆದಿವೆ ಎಂದು ಹೇಳಿದರು.

ರಾಜ್ಯದಲ್ಲಿ ಬಿಜೆಪಿಯ 36 ಸಂಘಟನಾ ಜಿಲ್ಲೆ, 253 ಮಂಡಲಗಳಲ್ಲಿ 21,000 ಮತಗಟ್ಟೆ ವ್ಯಾಪ್ತಿಯಲ್ಲಿ 4.65 ಲಕ್ಷ ಮನೆಗಳಿಗೆ ಯಶಸ್ವಿಯಾಗಿ ಮಾಹಿತಿ ನೀಡಲಾಗಿದೆ. ಅಭಿಯಾನದಡಿ ಎರಡನೇ ಹಂತದ ಕಾರ್ಯಯೋಜನೆ ರೂಪಿಸಲಾಗಿದೆ. ಕಾಯ್ದೆಯನ್ನು ಸರಿಯಾದ ರೀತಿಯಲ್ಲಿ ಜಾರಿಗೊಳಿಸಿದ ಮೋದಿಯವರಿಗೆ ಅಭಿನಂದಿಸಿ ಪ್ರತಿ ಬೂತ್‌ನಿಂದಲೂ ಪತ್ರ ಬರೆಯಲು ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ. ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಮೋದಿಯವರಿಗೆ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮ ನಡೆಸಲಾಗುವುದು ಎಂದು ಹೇಳಿದರು.

ಜ.18ರಂದು ಹುಬ್ಬಳ್ಳಿಯಲ್ಲಿ ಪ್ರಧಾನಿಗೆ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ಅಮಿತ್‌ ಶಾ ಪಾಲ್ಗೊಳ್ಳಲಿದ್ದಾರೆ. ಸಮಾರಂಭದಲ್ಲಿ ಸುಮಾರು ಒಂದು ಲಕ್ಷ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಅದೇ ರೀತಿ ಜ.9, 11, 12, 13ರಂದು ಜಿಲ್ಲಾ ಕೇಂದ್ರಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್‌ ಸಿಂಗ್‌ ಠಾಕೂರ್‌, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ಪಾಲ್ಗೊಳ್ಳಲಿ ದ್ದಾರೆ ಎಂದು ತಿಳಿಸಿದರು.

Advertisement

130 ಕೋಟಿ ಜನರ ಸಮ್ಮತ ಕಾಯ್ದೆ: ಜಾಗೃತಿ ಅಭಿಯಾನದ ರಾಜ್ಯ ಸಂಚಾಲಕ ಎನ್‌.ರವಿಕುಮಾರ್‌ ಮಾತನಾಡಿ, ಸಿಎಎ ಕುರಿತು ಕಾಂಗ್ರೆಸ್‌, ಕಮ್ಯುನಿಸ್ಟರು, ಕೆಲ ಬುದ್ಧಿಜೀವಿಗಳು ಅಪಪ್ರಚಾರ ನಡೆಸಿ, ಅಲ್ಪಸಂಖ್ಯಾ ತರನ್ನು ಬಿಜೆಪಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಎತ್ತಿ ಕಟ್ಟುವ ಕೆಲಸ ಮಾಡಿದರು. ಆದರೆ, ಕಾಂಗ್ರೆಸ್‌ನ ಪಿತೂರಿ, ಕಮ್ಯುನಿಸ್ಟರ ಷಡ್ಯಂತ್ರ, ಬುದ್ಧಿ ಜೀವಿಗಳ ಕುತಂತ್ರವನ್ನು ಬಿಜೆಪಿ ಬಯಲಿಗೆಳೆಯಿತು. ಸಿಎಎ ದೇಶದ 130 ಕೋಟಿ ಜನರ ಸಮ್ಮತ ಕಾಯ್ದೆ ಎಂದು ಮನವೊಲಿಸುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದರು.

ಕಾಯ್ದೆ ಬಗ್ಗೆ ಅರಿವು ಹೆಚ್ಚಾದಂತೆ ಪ್ರತಿಭಟನೆ ನಡೆಸುತ್ತಿದ್ದವರು ಶಾಂತರಾಗುತ್ತಿದ್ದಾರೆ. ಕಾಯ್ದೆಯಲ್ಲಿ ಮುಸ್ಲಿಮರಿಗೆ ತೊಂದರೆಯಾಗುವ ಒಂದು ಅಂಶ ತಿಳಿಸಿ ಎನ್ನುತ್ತಿದ್ದಂತೆ ವಿರೋಧಿಸುತ್ತಿದ್ದವರ ಬಂಡವಾಳ ಬಯಲಾಗಿದೆ. ಒಂದೆರಡು ಕಡೆ ಅಭಿಯಾನಕ್ಕೆ “ಗೋ ಬ್ಯಾಕ್‌’ ಪ್ರತಿರೋಧ ವ್ಯಕ್ತವಾಗಿದ್ದನ್ನು ಹೊರತುಪಡಿಸಿದರೆ ಶೇ.99ರಷ್ಟು ಮಂದಿಗೆ ಮನವರಿಕೆಯಾಗುತ್ತಿದೆ ಎಂದು ತಿಳಿಸಿದರು.

ಜ.5ರಿಂದ 15ರವರೆಗೆ ಅಭಿಯಾನ: ರಾಜ್ಯದ 30 ಲಕ್ಷ ಮನೆಗಳಿಗೆ ಕಾಯ್ದೆ ಬಗ್ಗೆ ಮಾಹಿತಿ ತಲುಪಿಸುವ ಅಭಿಯಾನ ಜ.5ರಿಂದ ಆರಂಭವಾಗಿದ್ದು, ಜ.15ರವರೆಗೆ ನಡೆಯಲಿದೆ. ಜ.11 ಹಾಗೂ 12ರಂದು ಪೂರ್ಣ ಪ್ರಮಾಣದಲ್ಲಿ ಮತಗಟ್ಟೆ ವ್ಯಾಪ್ತಿಯಲ್ಲಿ ಮನೆ ಸಂಪರ್ಕ ದಿನಗಳನ್ನಾಗಿ ನಡೆಸಲು ಕರೆ ನೀಡಲಾಗಿದೆ. ಸಂಸದರು, ಶಾಸಕರು, ಪರಾಜಿತ ಅಭ್ಯರ್ಥಿಗಳು, ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ, ಗ್ರಾಮ ಪಂಚಾಯ್ತಿ, ನಗರ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಲಾಗಿದೆ ಎಂದು ಹೇಳಿದರು. ರಾಜ್ಯ ಬಿಜೆಪಿ ಕಾರ್ಯದರ್ಶಿ ಭಾರತಿ ಮುಗªಮ್‌, ರಾಜ್ಯ ಬಿಜೆಪಿ ಮಾಧ್ಯಮ ಸಂಚಾಲಕ ಎ.ಎಚ್‌.ಆನಂದ್‌ ಉಪಸ್ಥಿತರಿದ್ದರು.

ಹಲವು ಚಟುವಟಿಕೆಗಳ ಮೂಲಕ ಜಾಗೃತಿ: ರಾಜ್ಯದ 300 ಮಂಡಲಗಳಲ್ಲಿ ಕರಪತ್ರ ವಿತರಣೆ ಜೊತೆಯಲ್ಲೇ 88662- 88662 ಮೊಬೈಲ್‌ ಸಂಖ್ಯೆಗೆ ಮಿಸ್ಡ್ ಕಾಲ್‌ ನೀಡುವ ಮೂಲಕ ಸಿಎಎ ಬೆಂಬಲಿಸುವ ಅಭಿಯಾನವೂ ನಡೆಯುತ್ತಿದೆ. ಸಹಿ ಸಂಗ್ರಹ ಅಭಿಯಾನ, ಎತ್ತಿನ ಬಂಡಿ ಮೆರವಣಿಗೆ, “ಭಾರತ್‌ ಮಾತಾ ಪೂಜನ್‌’, ಪ್ರಬುದ್ಧರ ಸಭೆ, ಜಿಲ್ಲಾ ಪಂಚಾಯ್ತಿ ಕೇಂದ್ರಗಳಲ್ಲಿ “ಕಟ್ಟೆ ಚರ್ಚೆ’, “ಚಾಯ್‌ ಪೆ ಚರ್ಚೆ’, ಬೈಕ್‌ ರ್ಯಾಲಿ, ಪಂಜಿನ ಮೆರವಣಿಗೆ ಸೇರಿ ಹಲವು ಚಟುವಟಿಕೆಗಳ ಮೂಲಕ ಜಾಗೃತಿ ಮೂಡಿಸಲಾಗುವುದು.

ಪ್ರಧಾನಿಗೆ ಸಾರ್ವಜನಿಕ ಅಭಿನಂದನಾ ಕಾರ್ಯಕಮ ವಿವರ
-ಜ. 9- ಸಿಎಎ ಜಾಗೃತಿ ಅಭಿಯಾನದ ರಾಜ್ಯ ಸಂಚಾಲಕ ಎನ್‌.ರವಿಕುಮಾರ್‌- ಸಿಂಧನೂರು, ಮಸ್ಕಿ.

-ಜ. 11- ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ- ಕಲಬುರಗಿ, ಯಾದಗಿರಿ.

-ಜ. 11- ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್‌ ಸಿಂಗ್‌ ಠಾಕೂರ್‌- ಬೆಳಗಾವಿ, ಚಿಕ್ಕೋಡಿ.

-ಜ. 12- ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ- ರಾಯಚೂರು.

-ಜ. 13- ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ- ದಾವಣಗೆರೆ, ಹಾವೇರಿ.

-ಜ. 18- ಕೇಂದ್ರ ಗೃಹ ಸಚಿವ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ- ಹುಬ್ಬಳ್ಳಿ.

ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರಿಗೂ ಈಗ ವಾಸ್ತವಾಂಶ ಮನವರಿಕೆಯಾಗಿರಬೇಕು. ಕಾಯ್ದೆ ವಿರೋಧಿಸುವುದು ಸರಿಯಲ್ಲ ಎಂದು ಅವರು ಭಾವಿಸಿರಬೇಕು.
-ಎನ್‌.ರವಿಕುಮಾರ್‌, ಜಾಗೃತಿ ಅಭಿಯಾನದ ರಾಜ್ಯ ಸಂಚಾಲಕ

Advertisement

Udayavani is now on Telegram. Click here to join our channel and stay updated with the latest news.

Next