Advertisement

ಅಮಿತ್‌ ಶಾ ಆಗಮನದತ್ತ ರಾಜ್ಯ ಬಿಜೆಪಿ ಚಿತ್ತ

06:00 AM Dec 15, 2017 | Team Udayavani |

ಬೆಂಗಳೂರು: ಗುಜರಾತ್‌ ವಿಧಾನಸಭೆ ಚುನಾವಣೆ ಮುಕ್ತಾಯಗೊಂಡಿದ್ದು, ಇನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ಚಿತ್ತ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿರುವ ಕರ್ನಾಟಕದತ್ತ ಹರಿಯಲಿದೆ. ಸಂಸತ್‌ ಅಧಿವೇಶನ ಮುಕ್ತಾಯಗೊಂಡ ಬಳಿಕ ಅವರು ರಾಜ್ಯವನ್ನು ಕಾರ್ಯಕ್ಷೇತ್ರವಾಗಿ ಮಾಡಿಕೊಳ್ಳಲಿದ್ದಾರೆ.

Advertisement

ಈ ಮಧ್ಯೆ ಹಿಮಾಚಲ ಪ್ರದೇಶ ಮತ್ತು ಗುಜರಾತ್‌ನಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂಬ ಚುನಾವಣೋತ್ತರ ಸಮೀಕ್ಷಾ ವರದಿಗಳು ರಾಜ್ಯ ಬಿಜೆಪಿಯಲ್ಲಿ ಹುಮ್ಮಸ್ಸು ಹೆಚ್ಚಿಸಿದ್ದು, ಪಕ್ಷದ ನಾಯಕರು ಅಮಿತ್‌ ಶಾ ಅವರ ಆಗಮನಕ್ಕಾಗಿ ಕಾದು ಕುಳಿತಿದ್ದಾರೆ.

ಗುಜರಾತ್‌ನಲ್ಲಿ 182 ವಿಧಾನಸಭಾ ಕ್ಷೇತ್ರಗಳಿದ್ದರೂ ಅಲ್ಲಿ ಮಿಷನ್‌ 150 ರೂಪಿಸಿದ್ದ ಅಮಿತ್‌ ಶಾ ಅವರು ಗುರಿ ತಲುಪಲು ಅನೇಕ ತಂತ್ರಗಳನ್ನು ರೂಪಿಸಿದ್ದರು. ಇದರ ಪರಿಣಾಮ 100ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವ ಭರವಸೆ ಚುನಾವಣೋತ್ತರ ಸಮೀಕ್ಷೆಯಿಂದ ಸಿಕ್ಕಿದೆ. ಅದೇ ರೀತಿ ರಾಜ್ಯದಲ್ಲಿ ಮಿಷನ್‌ 150 ಪ್ಲಸ್‌ ರೂಪಿಸಿದ್ದು, ಅದಕ್ಕೆ ತಕ್ಕಂತೆ ತಂತ್ರಗಾರಿಕೆ ರೂಪಿಸುವುದರ ಜತೆಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯೂ ಆಗಬೇಕಿದೆ. ಆದರೆ, ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಇದ್ದರೂ 150ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಯಾರು ಎಂಬ ಸುಳಿವು ಕೂಡ ಸಿಗುತ್ತಿಲ್ಲ. ಹೀಗಾಗಿ ಆಕಾಂಕ್ಷಿಗಳಲ್ಲಿ ಸಾಕಷ್ಟು ತಳಮಳ ಉಂಟಾಗಿದೆ. ಈ ಕಾರಣದಿಂದಾಗಿ ಆದಷ್ಟು ಬೇಗ ರಾಜ್ಯಕ್ಕೆ ಬಂದು ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ನಿರ್ಧಾರಕ್ಕೆ ಬರುವಂತೆ ಶಾ ಅವರನ್ನು ಕೋರಲು ರಾಜ್ಯ ನಾಯಕರು ನಿರ್ಧರಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ವಿಧಾನಸಭೆ ಚುನಾವಣೆ ದೃಷ್ಟಿಯಿಂದ ರಾಜ್ಯ ಬಿಜೆಪಿ ಈಗಾಗಲೇ ನವ ಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆ ಹಮ್ಮಿಕೊಂಡಿದೆ. ಇದರ ಜತೆಗೆ ರಾಜ್ಯಾದ್ಯಂತ ನವಶಕ್ತಿ ಸಮಾವೇಶಗಳನ್ನು ನಡೆಸಲೂ ನಿರ್ಧರಿಸಿದೆ. ಇದಕ್ಕೆ ಪರ್ಯಾಯವಾಗಿ ಕಾಂಗ್ರೆಸ್‌ ಸರ್ಕಾರದ ವತಿಯಿಂದ ಸಾಧನಾ ಸಂಭ್ರಮ ಹಮ್ಮಿಕೊಂಡಿದ್ದರೆ, ಪಕ್ಷದ ಕಡೆಯಿಂದ ಮತ್ತೂಂದು ಯಾತ್ರೆ ಆರಂಭಿಸುತ್ತಿದೆ. ಜೆಡಿಎಸ್‌ ಕೂಡ ಯಾತ್ರೆಗಳ ಮೂಲಕ ಜನರನ್ನು ಸಮೀಪಿಸುತ್ತಿದೆ.

ಹೀಗಾಗಿ ಜನರ ಮನಗೆಲ್ಲಲು ಬಿಜೆಪಿ ಹೊಸ ಮಾರ್ಗಗಳನ್ನು ಹುಡುಕಬೇಕಾಗಿದ್ದು, ಅಂತಹ ಕಾರ್ಯತಂತ್ರಗಳನ್ನು ರೂಪಿಸಲು ಅಮಿತ್‌ ಶಾ ಅವರ ನೆರವು ಅನಿವಾರ್ಯ ಎನ್ನುವಂತಾಗಿದೆ. ಪಕ್ಷದಲ್ಲಿ ಒಗ್ಗಟ್ಟು ಮೇಲ್ನೋಟಕ್ಕೆ ಕಾಣುತ್ತಿದೆಯಾದರೂ ಕಾರ್ಯತಂತ್ರಗಳನ್ನು ರೂಪಿಸುವ ನಿಟ್ಟಿನಲ್ಲಿ ಎಲ್ಲರೂ ಒಟ್ಟು ಸೇರುತ್ತಿಲ್ಲ. ಈ ಕಾರಣದಿಂದಾಗಿಯೇ ಅಮಿತ್‌ ಶಾ ಅವರ ಆಗಮನಕ್ಕೆ ಎದುರು ನೋಡುತ್ತಿದ್ದಾರೆ.

Advertisement

ಕಾತರದ ಜತೆಗೆ ಆತಂಕ:
ಒಂದೆಡೆ ಅಮಿತ್‌ ಶಾ ಅವರ ಆಗಮನದ ಕಾತರ ಇದ್ದರೆ ಇನ್ನೊಂದೆಡೆ ಆತಂಕವೂ ರಾಜ್ಯ ನಾಯಕರಿಗೆ ಇದೆ. ಕಳೆದ ಆಗಸ್ಟ್‌ನಲ್ಲಿ ರಾಜ್ಯಕ್ಕೆ ಆಗಮಿಸಿ ಪಕ್ಷದ ನಾಯಕರಿಗೆ ಬಿಸಿ ಮುಟ್ಟಿಸಿ ಹೋಗಿದ್ದ ಅಮಿತ್‌ ಶಾ ಅವರು ನಂತರದಲ್ಲಿ ರಾಜ್ಯ ಪ್ರತಿಯೊಂದು ವಿದ್ಯಮಾನಗಳ ಬಗ್ಗೆಯೂ ಮಾಹಿತಿ ಸಂಗ್ರಹಿಸಿಟ್ಟುಕೊಂಡಿದ್ದಾರೆ. ಅಲ್ಲದೆ, ರಾಜ್ಯ ಚುನಾವಣಾ ಉಸ್ತುವಾರಿಗೆ ಇಬ್ಬರು ಕೇಂದ್ರ ಸಚಿವರನ್ನು ನೇಮಿಸುವ ಮೂಲಕ ಅವರ ಮೂಲಕವೂ ರಾಜ್ಯ ಬಿಜೆಪಿಯನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆ. ಹೀಗಾಗಿ ರಾಜ್ಯ ನಾಯಕರು ಶಾ ಅವರ ಆಗಮನಕ್ಕಾಗಿ ಕಾಯುತ್ತಿದ್ದರಾದರೂ ಒಳಗೊಳಗೇ ಅವರಲ್ಲಿ ಆತಂಕ ಹೆಚ್ಚಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next