Advertisement

ದಿ.ಸುರೇಶ್ ಅಂಗಡಿ ನಿವಾಸಕ್ಕೆ ಭೇಟಿ ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ

04:26 PM Jan 17, 2021 | Team Udayavani |

ಬೆಳಗಾವಿ: ಇಲ್ಲಿನ ವಿಶ್ವೇಶ್ವರ ನಗರದ ಸಂಪಿಗೆ ರಸ್ತೆಯಲ್ಲಿರುವ ಕೇಂದ್ರ ರೇಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ದಿ.ಸುರೇಶ್ ಅಂಗಡಿಯವರ ನಿವಾಸ “ಸ್ಫೂರ್ತಿ” ಗೆ ಭಾನುವಾರ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಭೇಟಿ ನೀಡಿದರು.

Advertisement

ದಿ.ಸುರೇಶ ಅಂಗಡಿಯವರ ಭಾವಚಿತ್ರಕ್ಕೆ ನಮನಗಳನ್ನು ಅರ್ಪಿಸಿದ ಅವರು,  ಸುರೇಶ ಅಂಗಡಿಯವರು ಉತ್ತಮ ವ್ಯಕ್ತಿತ್ವ ಹೊಂದಿದ್ದರು. ಅವರು ಕೋವಿಡ್ ನಿಂದ ಬಳಲುತ್ತಿರುವಾಗ ತಾವೂ ಸಹ ಅದೇ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದುದನ್ನು ನೆನಪಿಸಿಕೊಂಡು, ಅವರ ನಿಧನ ದೊಡ್ಡ ನಷ್ಟ ಉಂಟುಮಾಡಿದೆ ಎಂದು ಸಂತಾಪ ವ್ಯಕ್ತಪಡಿಸಿದರು.

ದಿ.ಸುರೇಶ ಅಂಗಡಿಯವರ ಧರ್ಮಪತ್ನಿ ಮಂಗಳಾ ಅಂಗಡಿ, ಪುತ್ರಿಯರಾದ ಸ್ಫೂರ್ತಿ, ಶ್ರದ್ಧಾ, ಅಳಿಯಂದಿರಾದ ಡಾ.ರಾಹುಲ್ ಪಾಟೀಲ, ಸಂಕಲ್ಪ ಶೆಟ್ಟರ್, ಕಿರಿಯ ಸಹೋದರ ಮೋಹನ ಚ.ಅಂಗಡಿಯವರಿಗೆ  ಸಾಂತ್ವನ ಹೇಳಿ, ದುಃಖ ಸಹಿಸಿಕೊಳ್ಳುವ ಶಕ್ತಿ ಬರಲೆಂದು ತೀವ್ರ ಶೋಕ ವ್ಯಕ್ತಪಡಿಸಿದರು. ಅನಾರೋಗ್ಯದ ಹಿನ್ನೆಲೆಯಲ್ಲಿ ದಿ‌.ಸುರೇಶ ಅಂಗಡಿಯವರ ತಾಯಿ ಸೋಮವ್ವ ಚನ್ನಬಸಪ್ಪ ಅಂಗಡಿಯವರು ನಾಗೇರಹಾಳದ (ಕೊಂಡಸಕೊಪ್ಪ) ನಿವಾಸದಲ್ಲಿದ್ದರು‌.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಭಾರತೀಯ ಜನತಾ ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್,ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಬೃಹತ್, ಮಧ್ಯಮ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆ ಸಚಿವ ಜಗದೀಶ ಶೆಟ್ಟರ್ , ಶಾಸಕ ಅನಿಲ ಬೆನಕೆ, ಉಪಸ್ಥಿತರಿದ್ದರು.

ಇದನ್ನೂ ಓದಿ:ರೈತರು- ಜನರ ಅಭಿವೃದ್ದಿಗೆ ಯಡಿಯೂರಪ್ಪ ಯಾವುದೇ ರೀತಿ ಹಿಂದೆ ಬಿದ್ದಿಲ್ಲ: ಅಮಿತ್ ಶಾ

Advertisement

ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರ ಭೇಟಿ ಹಿನ್ನೆಲೆಯಲ್ಲಿ ದಿ.ಸುರೇಶ ಅಂಗಡಿ ಅವರ ನಿವಾಸಕ್ಕೆ ತಲುಪುವ ಎಲ್ಲಾ ಮಾರ್ಗಗಳಲ್ಲಿ ತೀವ್ರ ಬಿಗಿ, ಭದ್ರತೆ ಏರ್ಪಡಿಸಲಾಗಿತ್ತು. ಕೋವಿಡ್ ನಿಯಂತ್ರಣಕ್ಕಾಗಿ ಎಲ್ಲಾ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಆಹಾರ ಸುರಕ್ಷತಾ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಉಪಹಾರ ಸಿದ್ಧಪಡಿಸಲಾಗಿತ್ತು.

ದಿ.ಸುರೇಶ್ ಅಂಗಡಿಯವರ ಆಪ್ತ ಸಿಬ್ಬಂದಿ ವರ್ಗದ ರಾಜು ಜೋಷಿ, ಶ್ರೀಕಾಂತ ಕಡಕೋಳ, ಸಂತೋಷ ತುಬಚಿ, ಶಿವಲಿಂಗಯ್ಯ ಅಲ್ಲಯ್ಯನವರಮಠ ಮತ್ತಿತರ ಕೆಲವೇ ಜನರಿಗೆ ಭೇಟಿ ಸಂದರ್ಭದಲ್ಲಿ ಅವಕಾಶ ಕಲ್ಪಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next