ಬೆಂಗಳೂರು: ಸುಪ್ರೀಂ ಕೋರ್ಟ್‌ನಲ್ಲಿರುವ ಪ್ರಕರಣ ಸಂಬಂಧ ಚರ್ಚೆ ನಡೆಸಲು ದೆಹಲಿಗೆ ಭೇಟಿ ನೀಡಿರುವುದಾಗಿ ಅನರ್ಹಗೊಂಡಿರುವ ಕೆಲ ಶಾಸಕರು ತಿಳಿಸಿದ್ದಾರೆ. ಶುಕ್ರವಾರ ದೆಹಲಿಯಲ್ಲಿ ಪ್ರತಿಕ್ರಿಯಿಸಿದ ಅನರ್ಹಗೊಂಡಿರುವ ಶಾಸಕ ಮಹೇಶ್ ಕುಮಟಳ್ಳಿ, ನೆರೆ ಹಾನಿ ಹಿನ್ನೆಲೆಯಲ್ಲಿ ನಾವು ಕ್ಷೇತ್ರದಲ್ಲಿದ್ದೇವು. ಇದೀಗ ನಮ್ಮ ವಕೀಲರನ್ನು ಭೇಟಿಯಾಗಿ ಚರ್ಚಿಸಿದ್ದೇವೆ. ಶನಿವಾರ ವಾಪಸ್ ತೆರಳುತ್ತೇವೆ.
ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಕೇಂದ್ರ ಗೃಹ ಸಚಿವರಾದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿಯಾಗುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು. “ರಮೇಶ್ ಜಾರಕಿಹೊಳಿ ಅವರಿಂದ ನನಗೆ ದ್ರೋಹವಾಗಿದೆ ಎಂಬುದಾಗಿ ಕೆಲವೆಡೆ ಹೇಳಲಾಗುತ್ತಿದ್ದು, ನನ್ನ ವಿರುದ್ಧ ಅಪಪ್ರಚಾರ ನಡೆಯುತ್ತಿದೆ. ರಮೇಶ್ ಜಾರಕಿಹೊಳಿ ಅವರಿಂದ ನನಗೆ ಯಾವುದೇ ದ್ರೋಹವಾಗಿಲ್ಲ.
ಮಾಜಿ ಶಾಸಕ ಲಕ್ಷ್ಮಣ ಸವದಿ ಅವರಿಗೆ ಸಚಿವ ಸ್ಥಾನ ನೀಡಿರುವುದು ನನಗೆ ಸಂಬಂಧಪಟ್ಟ ವಿಚಾರವಲ್ಲ. ಲಕ್ಷ್ಮಣ ಸವದಿ ಅವರನ್ನು ಸಚಿವರನ್ನಾಗಿ ಮಾಡುವುದು ಬಿಜೆಪಿಗೆ ಬಿಟ್ಟ ವಿಚಾರ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಲು ದೆಹಲಿಗೆ ಬಂದಿಲ್ಲ’ ಎಂದು ಹೇಳಿದರು. ಮತ್ತೂಬ್ಬ ಅನರ್ಹಗೊಂಡ ಶಾಸಕ ಪ್ರತಾಪಗೌಡ ಪಾಟೀಲ್, ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆ ಕೈಗೆತ್ತಿಕೊಳ್ಳುತ್ತಿರುವುದು ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಆತಂಕವಾಗಿದ್ದು, ಎಲ್ಲ ಶಾಸಕರು ದೆಹಲಿಗೆ ಬಂದಿದ್ದೇವೆ.
ಎಲ್ಲರೂ ಒಟ್ಟಿಗೆ ಸೇರಿ ಕಾರಣ ಹುಡುಕುವ ಪ್ರಯತ್ನ ಮಾಡಿದ್ದೇವೆ. ಸೋಮವಾರ ಪ್ರಕರಣ ವಿಚಾರಣೆಗೆ ಬರಲಿದೆ ಎಂದು ವಕೀಲರು ಹೇಳಿದ್ದಾರೆ. ನಾವಿನ್ನೂ ಬಿಜೆಪಿ ಸೇರಿಲ್ಲ. ಹಾಗಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿಯಾಗುವ ಪ್ರಶ್ನೆ ಇಲ್ಲ. ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥವಾದ ನಂತರ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ದೆಹಲಿಯಲ್ಲಿ ನಾವು ಯಡಿಯೂರಪ್ಪ ಅವರನ್ನು ಭೇಟಿಯಾಗಿಲ್ಲ ಎಂದು ತಿಳಿಸಿದರು.