Advertisement

ನಿರಾಣಿ ಸಕ್ಕರೆ ಕಾರ್ಖಾನೆ ಉದ್ಘಾಟನೆಗೆ ಅಮಿತ್‌ ಶಾ

04:12 PM Jan 16, 2021 | Team Udayavani |

ಬಾಗಲಕೋಟೆ: ಕಳೆದ 10 ವರ್ಷಗಳಿಂದ ಸ್ಥಗಿತಗೊಂಡಿದ್ದ ಬಾದಾಮಿ ತಾಲೂಕಿನ ಕೆರಕಲಮಟ್ಟಿಯ ಕೇದಾರನಾಥ ಶುಗರ್ ಅನ್ನು ಸಚಿವ ಮುರುಗೇಶ ನಿರಾಣಿ ಒಡೆತನದ ಉದ್ಯಮ ಸಮೂಹದಿಂದ ಖರೀದಿಸಲಾಗಿದ್ದು, ಪುನಶ್ಚೇತನಗೊಂಡ ಕಾರ್ಖಾನೆ ಉದ್ಘಾಟನೆಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ, ಸಿಎಂ ಯಡಿಯೂರಪ್ಪ ಸಹಿತ ಹಲವು ಗಣ್ಯರು ಜ.17ರಂದು ಜಿಲ್ಲೆಗೆ ಆಗಮಿಸಲಿದ್ದಾರೆ.

Advertisement

ಆರ್ಥಿಕ ಮುಗ್ಗಟ್ಟಿನಿಂದ ಸ್ಥಗಿತಗೊಂಡ ಕೇದಾರನಾಥ ಶುಗರ್ ಅನ್ನು ದುರಸ್ತಿಗೊಳಿಸಿ ಪುನಃ ಆರಂಭಿಸಲಾಗಿದೆ. ನಿತ್ಯ 3500 ಟನ್‌ ಕಬ್ಬು ನುರಿಸುವ ಸಾಮರ್ಥಯವನ್ನು 6500 ಟನ್‌ಗೆ ವಿಸ್ತರಿಸುವ ಘಟಕಕ್ಕೂ ಕೇಂದ್ರ ಸಚಿವ ಅಮಿತ್‌ ಶಾ ಚಾಲನೆ ನೀಡಲಿದ್ದಾರೆ. ಇದರ ಜತೆಗೆ 38 ಮೆಗಾ ವ್ಯಾಟ್‌ ವಿದ್ಯುತ್‌ ಉತ್ಪಾದನೆ, 100 ಟಿಪಿಡಿ ಡಿಸ್ಟಲರಿ ಘಟಕ ಉದ್ಘಾಟನೆಗೊಳ್ಳಲಿದೆ. ಅಲ್ಲದೇ ಕುಳಗೇರಿ ಕ್ರಾಸ್‌ನ ಎಂಆರ್‌ಎನ್‌ ಕೇನ್‌ ಪಾವರ್‌ ಲಿ. ಕಾರ್ಖಾನೆ ಸದ್ಯ 6 ಸಾವಿರ ಟನ್‌ ಕಬ್ಬು ನುರಿಸುತ್ತಿದ್ದು, ಅದನ್ನು 10 ಸಾವಿರ ಟನ್‌ಗೆ ವಿಸ್ತರಣೆ, 45 ಮೆ. ವ್ಯಾಟ್‌ ವಿದ್ಯುತ್‌ ಉತ್ಪಾದನೆ, 200 ಕಲಪಿಡಿ ಡಿಸ್ಟಲರಿ ಘಟಕ, 100 ಟಿಪಿಡಿ ಡಿಸ್ಟಲರಿ ಘಟಕದ ಭೂಮಿಪೂಜೆ ನೆರವೇರಲಿದೆ.

ಇದನ್ನೂ ಓದಿ:ಪ್ರತಿಯೊಬ್ಬ ದೇಶಭಕ್ತನ ದೇಣಿಗೆ ಸಲ್ಲಲಿ: ಮಲ್ಲಿಕಾರ್ಜುನ ಹಿಪ್ಪರಗಿ

ಕಳೆದ 15 ವರ್ಷಗಳಿಂದ ಸ್ಥಗಿತಗೊಂಡಿದ್ದ ಬಾದಾಮಿ ಶುಗರ್ ಕೂಡ ನಿರಾಣಿ ಉದ್ಯಮ ಸಮೂಹ ತನ್ನ ತೆಕ್ಕೆಗೆ ತಗೆದುಕೊಂಡಿದ್ದು, ಇಲ್ಲಿಯೂ 3 ಸಾವಿರ ಟನ್‌ ನಿತ್ಯ ಕಬ್ಬು ನುರಿಸುವ ಸಾಮರ್ಥ್ಯವನ್ನು 5 ಸಾವಿರ ಟನ್‌ ಗೆ ವಿಸ್ತರಣೆ, 20 ಮೆ.ವ್ಯಾಟ್‌ ವಿದ್ಯುತ್‌ ಉತ್ಪಾದನೆ, 200 ಟಿಸಿಡಿ ಡಿಸ್ಟಲರಿ ಘಟಕ ನಿರ್ಮಾಣದ ಭೂಮಿಪೂಜೆ ನೆರವೇರಲಿದೆ. ಕೆರಕಲಮಟ್ಟಿಯ ಸಾಯಿಪ್ರಿಯಾ ಶುಗರ್ (ಕೇದಾರನಾಥ ) ಯೂನಿಟ್‌-3ರ ಆವರಣದಲ್ಲಿ ಈ ಕಾರ್ಯಕ್ರಮಗಳು ನಡೆಯಲಿದ್ದು, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಕೇಂದ್ರ ಸಚಿವರಾದ ಧಮೇಂದ್ರ ಪ್ರಧಾನ, ಪ್ರಹ್ಲಾದ ಜೋಶಿ, ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌, ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ವಿಜಯಪುರ ಸಂಸದ ರಮೇಶ ಜಿಗಜಿಣಗಿ, ಬಾಗಲಕೋಟೆ ಸಂಸದ ಪಿ.ಸಿ. ಗದ್ದಿಗೌಡರ ಸೇರಿದಂತೆ ಎರಡೂ ಜಿಲ್ಲೆಗಳ ಶಾಸಕರು, ವಿಧಾನ ಪರಿಷತ್‌ ಸದಸ್ಯರು, ಬಿಜೆಪಿ ಪ್ರಮುಖರು ಭಾಗವಹಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next