ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿನಲ್ಲಿ ತಮ್ಮ ನೇತೃತ್ವದಲ್ಲಿ ಪಕ್ಷದ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯಲ್ಲಿ ನಡೆದ ಬಿಜೆಪಿ ನವ ಕರ್ನಾಟಕ ನಿರ್ಮಾಣ ಪರಿವರ್ತನಾ ಸಮಾವೇಶದಲ್ಲಿ ಪಾಲ್ಗೊಂಡ ಬಳಿಕ ಮತ್ತೂಂದು ಜಿಲ್ಲಾ ಸಮಾವೇಶದಲ್ಲಿ ಭಾಗವಹಿಸಲು ಅಮಿತ್ ಶಾ ನಿರ್ಧರಿಸಿದ್ದು, ಅದಕ್ಕಾಗಿ ಮುಖ್ಯಮಂತ್ರಿಗಳ ತವರು ಜಿಲ್ಲೆಯನ್ನೇ ಆಯ್ಕೆ ಮಾಡಿಕೊಂಡಿದ್ದಾರೆ.
ಜ. 25ರಂದು ಮೈಸೂರಿನ ಮಹಾರಾಜ ಮೈದಾನದಲ್ಲಿ ನಡೆಯಲಿರುವ ಪರಿವರ್ತನಾ ಯಾತ್ರೆ ಸಮಾವೇಶದಲ್ಲಿ ಶಾ ಪಾಲ್ಗೊಳ್ಳಲಿದ್ದಾರೆ. ಮೈಸೂರು ಜಿಲ್ಲೆಯ ಚಾಮುಂಡೇಶ್ವರಿ, ಕೃಷ್ಣರಾಜ, ನರಸಿಂಹರಾಜ ಮತ್ತು ಚಾಮರಾಜ ವಿಧಾನಸಭಾ ಕ್ಷೇತ್ರಗಳ ಕಾರ್ಯಕರ್ತರ ಸಮಾವೇಶ ಇದಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಸೇರಿಸಲು ಬಿಜೆಪಿ ನಿರ್ಧರಿಸಿದೆ.
ನ. 2ರಂದು ಬೆಂಗಳೂರಿನಿಂದ ಹೊರಟ ಪರಿವರ್ತನಾ ಯಾತ್ರೆ ಜ. 25ರಂದು ಮೈಸೂರಿನಲ್ಲಿ ಕೊನೆಗೊಳ್ಳಲಿದೆ. ಬೆಂಗಳೂರಿನಲ್ಲಿ ನಡೆಯಲಿರುವ ಯಾತ್ರೆಯ ಸಮಾರೋಪ ಸಮಾವೇಶಕ್ಕೆ ಮುನ್ನ ನಡೆಯುವ ಕೊನೆಯ ಪರಿವರ್ತನಾ ಸಮಾವೇಶ ಇದಾಗಿದೆ.
ನ. 2ರಂದು ಪರಿವರ್ತನಾ ಯಾತ್ರೆಯ ಉದ್ಘಾಟನೆ ವೇಳೆ ಜನರಿಲ್ಲದೆ ಅಸಮಾಧಾನಗೊಂಡಿದ್ದ ಅಮಿತ್ ಶಾ, ಕಳೆದ ಬುಧವಾರ ಹೊಳಲ್ಕೆರೆಯಲ್ಲಿ ನಡೆದ ಯಾತ್ರೆಯ ಸಮಾವೇಶಕ್ಕೆ ಸೇರಿದ್ದ ಜನರನ್ನು ಕಂಡು ಖುಷಿಯಾಗಿದ್ದರು. ಅಲ್ಲದೆ, ಪರಿವರ್ತನಾ ಯಾತ್ರೆಯ ಉದ್ದಕ್ಕೂ ವ್ಯಕ್ತವಾಗುತ್ತಿರುವ ಜನಬೆಂಬಲಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಮತ್ತೆ ಯಾತ್ರೆಯ ಸಮಾವೇಶಕ್ಕೆ ಬರುವಂತೆ ಬಿ.ಎಸ್.ಯಡಿಯೂರಪ್ಪ ಆಹ್ವಾನಿಸಿದ್ದರು.
ಇದಕ್ಕೆ ಒಪ್ಪಿರುವ ಅಮಿತ್ ಶಾ, ಮೈಸೂರು ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಮೈಸೂರಿನಲ್ಲಿ ಜ. 25ರಂದು ನಡೆಯುತ್ತಿರುವುದು ಯಾತ್ರೆಯ ಸಮಾರೋಪಕ್ಕೆ ಮುನ್ನ ನಡೆಯುವ ಕೊನೆಯ ಸಮಾವೇಶವಾದರೆ, ಅದು ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲೇ ನಡೆಯುತ್ತಿರುವುದು ಕೂಡ ಅಮಿತ್ ಶಾ ಅವರ ಈ ನಿರ್ಧಾರಕ್ಕೆ ಕಾರಣ ಎಂದು ಹೇಳಲಾಗಿದೆ.