Advertisement

ನಗರದಲ್ಲಿ ಅಮಿತ್‌ ಶಾ ಭರ್ಜರಿ ರೋಡ್‌ ಶೋ

12:16 AM Apr 03, 2019 | Team Udayavani |

ಬೆಂಗಳೂರು: ಲೋಕಸಭಾ ಚುನಾವಣೆ ಘೋಷಣೆ ಬಳಿಕ ಪ್ರಥಮ ಬಾರಿಗೆ ಮಂಗಳವಾರ ರಾಜ್ಯಕ್ಕೆ ಭೇಟಿ ನೀಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಬೆಂಗಳೂರು ದಕ್ಷಿಣ ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳ ಪರ ಭರ್ಜರಿ ರೋಡ್‌ ಶೋ ನಡೆಸಿ ಮತ ಯಾಚಿಸಿದರು.

Advertisement

ನಗರದ ಬನಶಂಕರಿಯ ಟಿಟಿಎಂಸಿ ಬಸ್‌ ನಿಲ್ದಾಣದ ಮುಂಭಾಗ ಆರಂಭವಾದ ರೋಡ್‌ ಶೋ ಜೆ.ಪಿ.ನಗರ 6ನೇ ಹಂತ ಬಳಿಯ ಸಿಂಧೂರ ಕಲ್ಯಾಣ ಮಂಟಪ ಸಮೀಪ ಮುಕ್ತಾಯವಾಯಿತು. ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧೆಗೆ ಅವಕಾಶ ಸಿಗದ ಕಾರಣ ಬೇಸರಗೊಂಡಿದ್ದರು ಎನ್ನಲಾಗಿದ್ದ ತೇಜಸ್ವಿನಿ ಅನಂತ ಕುಮಾರ್‌ ಸಹ ರೋಡ್‌ ಶೋದಲ್ಲಿ ಪಾಲ್ಗೊಂಡಿದ್ದರು.

ಸಂಜೆ 6.30ಕ್ಕೆ ಆರಂಭವಾಗಬೇಕಿದ್ದ ರೋಡ್‌ ಶೋ ರಾತ್ರಿ 9 ಗಂಟೆಗೆ ಶುರುವಾಯಿತು. ಬನಶಂಕರಿ ಬಸ್‌ ನಿಲ್ದಾಣ ಮುಂಭಾಗದ ವೃತ್ತಕ್ಕೆ ಆಗಮಿಸಿದ ಅಮಿತ್‌ ಶಾ ಅವರಿಗೆ ಪೂರ್ಣ ಕುಂಭ ಸ್ವಾಗತ ನೀಡಲಾಯಿತು. ವಿಶೇಷವಾಗಿ ಅಲಂಕರಿಸಲಾಗಿದ್ದ ವಾಹನದಲ್ಲಿ ಅಮಿತ್‌ ಶಾ ಅವರು ರೋಡ್‌ ಶೋ ಆರಂಭಿಸುತ್ತಿದ್ದಂತೆ ಕಾರ್ಯಕರ್ತರು ಬೆಂಬಲಿಗರು ಪುಷ್ಪಾರ್ಚನೆ ಮಾಡಿದರು.

ಇದಕ್ಕೆ ಪ್ರತಿಯಾಗಿ ಅಮಿತ್‌ ಶಾ ಕಾರ್ಯಕರ್ತರು, ಸಾರ್ವಜನಿಕರಿಗೆ ಪುಷ್ಪಾರ್ಚನೆ ಮಾಡುತ್ತಾ ಮೆರವಣಿಗೆಯಲ್ಲಿ ಸಾಗಿದರು. ರಸ್ತೆಯ ಎರಡೂ ಬದಿ ಕಿಕ್ಕಿರಿದು ನಿಂತಿದ್ದ ಬೆಂಬಲಿಗರು, ಕಾರ್ಯಕರ್ತರು, ಸಾರ್ವಜನಿಕರತ್ತ ಕೈಬೀಸುತ್ತಾ, ನಮಸ್ಕರಿಸುತ್ತಾ ಅಮಿತ್‌ ಶಾ ಪ್ರಚಾರ ನಡೆಸಿದರು.

ಮೋದಿ ಗುಣಗಾನ: ರೋಡ್‌ ಶೋ ಸಾಗಿದ ಮಾರ್ಗದುದ್ದಕ್ಕೂ ಮೋದಿ ಮೋದಿ ಎಂದು ಕೂಗುತ್ತಿದ್ದ ಕಾರ್ಯಕರ್ತರು ಬಿಜೆಪಿ ಬಾವುಟ ಹಾರಿಸುತ್ತಾ ಮೆರವಣಿಗೆಯುದ್ದಕ್ಕೂ ಸಾಗಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌, ಮಾಜಿ ಸಚಿವ ವಿ.ಸೋಮಣ್ಣ, ಶಾಸಕರಾದ ಎಂ.ಸತೀಶ್‌ರೆಡ್ಡಿ, ಎಲ್‌.ಎ. ರವಿಸುಬ್ರಹ್ಮಣ್ಯ, ಉದಯ್‌ ಗರುಡಾಚಾರ್‌, ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ತೇಜಸ್ವಿ ಸೂರ್ಯ, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿ ಅಶ್ವತ್ಥ ನಾರಾಯಣ, ಹಲವು ಪಾಲಿಕೆ ಸದಸ್ಯರು ಪಾಲ್ಗೊಂಡಿದ್ದರು.

Advertisement

ಆ ತುದಿ- ಈ ತುದಿ: ಅಮಿತ್‌ ಶಾ ಅವರ ಬಲ ಭಾಗದಲ್ಲಿ ಯಡಿಯೂರಪ್ಪ ಅವರ ಪಕ್ಕದಲ್ಲಿ ತೇಜಸ್ವಿನಿ ಅನಂತ ಕುಮಾರ್‌ ಇದ್ದರು. ಅಮಿತ್‌ ಶಾ ಅವರ ಎಡ ಭಾಗದಲ್ಲಿ ಆರ್‌.ಅಶೋಕ್‌, ಅವರ ಪಕ್ಕದಲ್ಲಿ ತೇಜಸ್ವಿ ಸೂರ್ಯ ಕಾಣಿಸಿಕೊಂಡರು. ರೋಡ್‌ ಶೋ ವೇಳೆಯೂ ತೇಜಸ್ವಿನಿ ಅನಂತ ಕುಮಾರ್‌ ಅಂತರ ಕಾಯ್ದುಕೊಂಡರು ಎಂಬ ಮಾತುಗಳು ಕೇಳಿಬಂತು.

45 ನಿಮಿಷ ರೋಡ್‌ ಶೋ: ರಾತ್ರಿ 10 ಗಂಟೆಯೊಳಗೆ ಬಹಿರಂಗ ಪ್ರಚಾರ ಮುಕ್ತಾಯಗೊಳಿಸಬೇಕಾದ ಹಿನ್ನೆಲೆಯಲ್ಲಿ 9.30ರ ನಂತರ ರೋಡ್‌ ಶೋಗೆ ತುಸು ವೇಗ ನೀಡಲಾಯಿತು. ಕಾರ್ಯಕರ್ತರು, ಬೆಂಬಲಿಗರು ಜೋರಾಗಿ ಹೆಜ್ಜೆ ಹಾಕಿ, ಓಡುತ್ತಲೇ ಮೆರೆವಣಿಗೆಯಲ್ಲಿ ಸಾಗಿದರು. ಬನಶಂಕರಿ ಬಸ್‌ ನಿಲ್ದಾಣದಿಂದ 9 ಗಂಟೆಗೆ ಆರಂಭವಾದ ರೋಡ್‌ ಶೋ ಕನಕಪುರ ರಸ್ತೆಯಲ್ಲೇ ಸಾಗಿ ಸಾರಕ್ಕಿ ಮಾರ್ಗವಾಗಿ ಜೆ.ಪಿ.ನಗರ 6ನೇ ಹಂತ ತಲುಪುವ ಹೊತ್ತಿಗೆ ಸಮಯ ರಾತ್ರಿ 9.45 ದಾಟಿತ್ತು.

ಸಂಚಾರ ದಟ್ಟಣೆ: ರೋಡ್‌ ಶೋ ಹಿನ್ನೆಲೆಯಲ್ಲಿ ಬನಶಂಕರಿ ಬಸ್‌ನಿಲ್ದಾಣದಿಂದ ಸಾರಕ್ಕಿ ಜಂಕ್ಷನ್‌ವರೆಗಿನ ಕನಕಪುರ ರಸ್ತೆಯಲ್ಲಿ ಎರಡೂ ಬದಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಹಾಗೆಯೇ ಸಾರಕ್ಕಿ ಜಂಕ್ಷನ್‌ನಿಂದ ಸಿಂಧೂರ ಕಲ್ಯಾಣ ಮಂಟಪದವರೆಗೆ ವರ್ತುಲ ರಸ್ತೆಯಲ್ಲಿ ಒಂದು ಬದಿ ಸಂಚಾರವನ್ನಷ್ಟೇ ಸ್ಥಗಿತಗೊಳಿಸಲಾಗಿತ್ತು. ಇದರಿಂದ ಸುತ್ತಮುತ್ತಲ ರಸ್ತೆಗಳು, ವರ್ತುಲ ರಸ್ತೆಯಲ್ಲಿ ಕೆಲಕಾಲ ಸಂಚಾರ ದಟ್ಟಣೆ ಉಂಟಾಗಿತ್ತು.

ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರಿನಲ್ಲಿ ಯುವಕನಿಗೆ ಅವಕಾಶ ನೀಡುವ ಮೂಲಕ ಹೊಸ ಸಂದೇಶ ನೀಡಿದ್ದಾರೆ. ರಾಜಕೀಯದಲ್ಲಿ ಯುವಕರು ಹೇಗಿರಬೇಕು ಎಂಬುದನ್ನು ತೋರಿಸೋಣ. ಬೆಂಗಳೂರಿನ ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಲಿದ್ದು, ಹೊಸ ಬೆಂಗಳೂರಿಗೆ ಅಣಿಯಾಗುತ್ತಿದ್ದೇವೆ.
-ತೇಜಸ್ವಿ ಸೂರ್ಯ, ಬೆಂಗಳೂರು ದಕ್ಷಿಣ ಅಭ್ಯರ್ಥಿ

ಬೆಂಗಳೂರಿನ ನಾಲ್ಕು ಕ್ಷೇತ್ರಗಳ ಜತೆಗೆ ಕೋಲಾರ, ಚಿಕ್ಕಬಳ್ಳಾಪುರ ಕ್ಷೇತ್ರವು ಬಿಜೆಪಿಗೆ ತೆಕ್ಕೆಗೆ ಬರಲಿದೆ. ವಯನಾಡ್‌ನ‌ಲ್ಲಿ ಸ್ಪರ್ಧಿಸಿರುವ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿಯವರು ಇಟಲಿಗೆ ವಾಪಸ್ಸಾಗುತ್ತಾರೆ. ಮಹಾಘಟಬಂಧನ್‌ ಇಂದು ಛಿದ್ರವಾಗಿದೆ.
-ಅಶ್ವತ್ಥ ನಾರಾಯಣ, ಬೆಂಗಳೂರು ಗ್ರಾಮಾಂತರ ಅಭ್ಯರ್ಥಿ

Advertisement

Udayavani is now on Telegram. Click here to join our channel and stay updated with the latest news.

Next