Advertisement

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

01:21 AM Jan 18, 2021 | Team Udayavani |

ಜೇನು ಗೂಡಿಗೆ ಕಲ್ಲು ಎಸೆದಂತೆ ಎಂದೇ ಬಿಂಬಿತವಾಗಿದ್ದ ರಾಜ್ಯ ಸಂಪುಟ ವಿಸ್ತರಣೆ ಕಂ ಪುನಾರಚನೆ ಅನಂತರದ ವಿದ್ಯಮಾನಗಳು, ಬಸನಗೌಡ ಪಾಟೀಲ್‌ ಯತ್ನಾಳ್‌, ಎಚ್‌. ವಿಶ್ವನಾಥ್‌ ಅಷ್ಟೇ ಅಲ್ಲದೆ ಬಿಜೆಪಿ ನಿಷ್ಠ ಶಾಸಕರ ಅತೃಪ್ತಿ ನ್ಪೋಟ ಆಗಲಿದೆ ಎಂಬುದರ ಮುನ್ಸೂಚನೆ ಎಂಬೆಲ್ಲ ವ್ಯಾಖ್ಯಾನಗಳಿಗೆ ಫುಲ್‌ ಸ್ಟಾಪ್‌ ಎಂಬಂತೆ “ಚಾಣಕ್ಯ’ ಅಮಿತ್‌ ಶಾ ಯಡಿಯೂರಪ್ಪ ನೇತೃತ್ವದ ಸರಕಾರ ಉತ್ತಮ ಕೆಲಸ ಮಾಡುತ್ತಿದೆ, ಕೊರೊನಾ ಸಮರ್ಥವಾಗಿ ನಿಭಾಯಿಸಿದೆ, ಯಡಿಯೂರಪ್ಪ  ಪೂರ್ಣಾವಧಿ ಮುಗಿಸಲಿದ್ದಾರೆ ಎಂದು ರವಾನಿಸಿರುವ ಸಂದೇಶ ಅತೃಪ್ತರ ಪಾಲಿಗೆ ಅನಿರೀಕ್ಷಿತ ಶಾಕ್‌.

Advertisement

ಸಿಡಿ, ಬ್ಲಾಕ್ಮೇಲ್ ‌ ಮೂಲಕ ಸಚಿವ ಸ್ಥಾನ ಪಡೆಯಲಾಗಿದೆ. ಯಡಿಯೂರಪ್ಪ ಒತ್ತಡಕ್ಕೆ ಮಣಿದಿದ್ದಾರೆ, ಭಯ ಬಿದ್ದಿದ್ದಾರೆ ಎಂಬೆಲ್ಲ ಆರೋಪಗಳಿಗೆ ಮರುದಿ ನವೇ ಯಾರು ಬೇಕಾದರೂ ದಿಲ್ಲಿ ವರಿಷ್ಠರಿಗೆ ದೂರು ಕೊಡಬಹುದು. ಏನು ದಾಖಲೆ ಬೇಕಾದರೂ ಕೊಡ ಬಹುದು. ಇಲ್ಲಿ ವಿನಾಕಾರಣ ಗೊಂದಲ ಸೃಷ್ಟಿಸುವುದು ಬೇಡ. ಪಕ್ಷದ ಶಿಸ್ತು ಉಲ್ಲಂ ಸಿದರೆ ಹುಷಾರ್‌ ಎಂದು ತಿರುಗೇಟು ನೀಡಿದಾಗಲೇ ಅತೃಪ್ತರಷ್ಟೇ ಅಲ್ಲ ರಾಜ್ಯದ ಬಿಜೆಪಿ ನಾಯಕರಿಗೂ ಈ ಧೈರ್ಯದ ಹಿಂದಿನ ಮರ್ಮ ಏನಿರಬಹುದು ಎಂದು ಅಚ್ಚರಿಯಾಗಿತ್ತು.

ಅಮಿತ್‌ ಶಾ ಅವರ ಮುಂದೆಯೇ ದೂರು ಹೇಳು ತ್ತೇವೆ ಎಂದು ಹೇಳಿಕೆಗಳ ಮೂಲಕ ಹೆದರಿಸಿದರೂ ಯಡಿಯೂರಪ್ಪ “ಡೋಂಟ್‌ ಕೇರ್‌’ ಎಂದು ಮೌನ ವಹಿಸಿದ್ದರು. ಅಮಿತ್‌ ಶಾ ಭೇಟಿಗೆ ಅತೃಪ್ತರಿಗೆ ಅವಕಾಶ ಸಿಗದಿರುವುದು, ವಿಧಾನಸೌಧ ಬಾಂಕ್ವೆಟ್‌ ಹಾಲ್‌ನಲ್ಲಿ ನಡೆದ ಸಭೆಯಲ್ಲೇ ಬಹಿರಂಗವಾಗಿ ಯಡಿಯೂರಪ್ಪ ಪೂರ್ಣಾವಧಿ ಮುಗಿಸಲಿದ್ದಾರೆ ಎಂದು ಹೇಳುವ ಮೂಲಕ ಎಲ್ಲರ ಬಾಯಿ ಮುಚ್ಚಿಸಿದ್ದಾರೆ. ಈಗ ಯಡಿಯೂರಪ್ಪ ಅವರ ಮಾತು, ತಂತ್ರ,  ಧೈರ್ಯದ ಗುಟ್ಟು, ದಿಲ್ಲಿ ವರಿಷ್ಠರ ಮನದಾಳ ಸದ್ಯದ ಪರಿಸ್ಥಿತಿಯಲ್ಲಿ ಏನು ಎಂಬುದು ಅತೃಪ್ತರಿಗೆ ಅರ್ಥವಾದಂತಿದೆ.

ರಕ್ಷಣ ಸಚಿವ ರಾಜನಾಥ್‌ ಸಿಂಗ್‌, ಬಿಜೆಪಿ ರಾಷ್ಟ್ರೀಯ ಮಾಜಿ ಅಧ್ಯಕ್ಷರೂ ಆದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ರಾಜ್ಯ ಪ್ರವಾಸದ ಬಗ್ಗೆ ಅಷ್ಟೇ ತಲೆಕೆಡಿಸಿಕೊಂಡು ಅವರ ಪ್ರವಾಸ ಕಾರ್ಯಕ್ರಮಗಳ ಯಶಸ್ವಿಗಾಗಿ ಶ್ರಮಿಸಿದ ಯಡಿಯೂರಪ್ಪ ಅವರೂ ನಿಟ್ಟುಸಿರು ಬಿಟ್ಟಿದ್ದಾರೆ. ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಯಡಿಯೂರಪ್ಪ ನಾಯಕತ್ವ ಅಭಾದಿತ, ಅವರ ವಿರುದ್ಧ ಯಾವುದೇ ದೂರು ಬಂದಿಲ್ಲ ಎಂದು ಹೇಳಿದ್ದರೂ ಇದೀಗ ಅಮಿತ್‌ ಶಾ ಹೇಳಿರುವ ತೂಕವೇ ಬೇರೆ. ಇಷ್ಟರ ನಡುವೆಯೂ ನಾಯಕತ್ವ ಬದಲಾವಣೆ ಅಗಲಿದೆ ಎಂಬ ವಿಚಾರ ಹೇಗೆ ಸೃಷ್ಟಿಯಾಯಿತು. ಅದರ ಹಿಂದಿರುವವರು ಯಾರು, ಉದ್ದೇಶವೇನು ಎಂಬುದು, ಇದರಲ್ಲಿ ಎಷ್ಟು ನಿಜ ಇದೆ ಎಂಬುದಕ್ಕೂ ಸುಲಭವಾಗಿ ಉತ್ತರ ಸಿಗುವುದಿಲ್ಲ.

ಹಾಗೆಂದು ಏನೂ ಆಗಿಯೇ ಇಲ್ಲ, ಮುಂದೆಯೂ ಏನೂ ಆಗುವುದಿಲ್ಲ ಎಂದು “ಟೇಕನ್‌ ಫಾರ್‌ ಗ್ರಾಂಟೆಡ್‌’ ಅಂತಲೂ ಭಾವಿಸುವಂತಿಲ್ಲ. ಕೋರ್‌ ಕಮಿಟಿ ಸಭೆಯಲ್ಲಿ ಅಮಿತ್‌ ಶಾ, ಮುಖ್ಯಮಂತ್ರಿ ಸಹಿತ ಸಂಪುಟದ ಸಚಿವ ರಿಗೆ ಆಡಳಿತ ನಿರ್ವಹಣೆ, ಜನಪರ ಕಾರ್ಯಕ್ರಮಗಳ ಆಯೋಜನೆ ಮೂಲಕ ಜನರಿಗೆ ಹತ್ತಿರವಾಗಲು ನಿರ್ದೇಶನ ನೀಡಿದ್ದಾರೆ.  ಮುಂದೆ ಎದುರಾಗುವ ತಾಲೂಕು, ಜಿಲ್ಲಾ ಪಂಚಾಯತ್‌ ಚುನಾವಣೆ. ಬೆಳಗಾವಿ ಲೋಕಸಭೆ, ಬಸವಕಲ್ಯಾಣ, ಮಸ್ಕಿ ವಿಧಾನಸಭೆ ಉಪ ಚುನಾವಣೆ ಗೆಲ್ಲುವ ಟಾರ್ಗೆಟ್‌ ನೀಡಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷ  ಸೇರಿ ಪದಾಧಿಕಾರಿಗಳಿಗೆ ಪಕ್ಷ ಸಂಘಟನೆ ಗಟ್ಟಿಗೊಳಿಸಿ ಸರಕಾರ ಮತ್ತು ಪಕ್ಷದ ನಡುವೆ ಸಮನ್ವಯತೆಯ ಪಾಠ ಹೇಳಿದ್ದಾರೆ. ಮುಖ್ಯವಾಗಿ ಯಡಿಯೂರಪ್ಪ ಅವರಿಗೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಉತ್ತಮ ಆಡಳಿತ ಕೊಡಿ ಎಂದು ಕಿವಿಮಾತು ಹೇಳಿದ್ದಾರೆ. ಸೂಕ್ಷ್ಮವಾಗಿ ಅವಲೋಕಿಸಿದರೆ ಇದು ಕಿವಿ ಹಿಂಡಿದ ಕ್ರಮವೇ. ಹೀಗಾಗಿ ಮುಂದಿನ ದಿನಗಳಲ್ಲಿ ಆಡಳಿತ ಯಂತ್ರಕ್ಕೆ ಚುರುಕು ನೀಡಿ ಅಭಿವೃದ್ಧಿಯತ್ತ ಗಮನ ಹರಿಸಬೇಕಿದೆ.

Advertisement

ಯಡಿಯೂರಪ್ಪ  ಅವರಿಗೂ ಕೊಟ್ಟ ಮಾತಿನಂತೆ ಬಿಜೆಪಿ ಸರಕಾರ ರಚನೆಗೆ ಕಾರಣಕರ್ತರಾಗಿರುವವರಿಗೆ ಸ್ಥಾನಮಾನ ಕೊಟ್ಟ ಸಮಾಧಾನ ಇದೆ. ನಾಗೇಶ್‌ ಅವರಿಂದ ರಾಜೀನಾಮೆ ಪಡೆದಿದ್ದರೂ ಅಸಮಾಧಾನಕ್ಕೆ ಅವಕಾಶ ಕೊಡದೆ ನಿಗಮಗಿರಿ ಕೊಟ್ಟು ಸಾಂತ್ವನ ಮಾಡಿದ್ದಾರೆ. ಮುನಿರತ್ನ ಅವರಿಗೂ ಪರಿಸ್ಥಿತಿ ಅರ್ಥ ಮಾಡಿಸಿ “ಥಂಡಾ’ ಮಾಡಿಸಿದ್ದಾರೆ. ಅತೃಪ್ತರು ಅಚ್ಚರಿ ಪಡುವಂತೆ ಮುನಿರತ್ನ ಯಡಿಯೂರಪ್ಪ ಪರ ಬ್ಯಾಟಿಂಗ್‌ ಮಾಡುತ್ತಿದ್ದಾರೆ. ಏಕೆಂದರೆ ಬಿಜೆಪಿಗೆ ಹೋಗುವವರೆಗೂ ಇವರ ಆಟ, ಹೋದ ಅನಂತರ ನಡೆಯುವುದು ಸಂಘ ಪರಿವಾರದ ಆತ ಎಂಬುದನ್ನು ಕಾಂಗ್ರೆಸ್‌-ಜೆಡಿಎಸ್‌ ಬಿಟ್ಟು ಹೋಗಿರುವವರು ಅರ್ಥಮಾಡಿಕೊಂಡಿದ್ದಾರೆ.

ಯಾರ್ಯಾರ ಆಯ್ಕೆ :

ಇನ್ನು ಸಂಪುಟ ವಿಸ್ತರಣೆ ವಿಚಾರಕ್ಕೆ ಬಂದರೆ ಉಮೇಶ್‌ ಕತ್ತಿ, ಎಂ.ಟಿ.ಬಿ.ನಾಗರಾಜ್‌, ಆರ್‌. ಶಂಕರ್‌.  ಮುನಿರತ್ನ ಯಡಿಯೂರಪ್ಪ ಚಾಯ್ಸ… ಆಗಿತ್ತು. ಮುನಿರತ್ನ ವಿಚಾರ ದಲ್ಲಿ ನಕಲಿ ವೋಟರ್‌ ಐಡಿ ಪ್ರಕರಣ ಮುಳುವಾಯಿತು.  ಉಳಿದಂತೆ, ಮುರುಗೇಶ್‌ ನಿರಾಣಿ, ಅರವಿಂದ ಲಿಂಬಾವಳಿ, ಅಂಗಾರ ವರಿಷ್ಠರ ಆಯ್ಕೆ. ಅಂಗಾರ ಅವರಿಗೆ ಅವಕಾಶ ಪಕ್ಷ ನಿಷ್ಠರಿಗೆ ಸಂದ ಜಯ ಎಂದೇ ಹೇಳಬಹುದು. ಇದರ ನಡುವೆ, ಯೋಗೇಶ್ವರ್‌ ಅವರನ್ನು ಸಚಿವರಾಗಿಸುವ ಅನಿವಾರ್ಯ ಸೃಷ್ಟಿಯಾದುದು ನಿಗೂಢವೇ ಸರಿ. ಯಡಿಯೂರಪ್ಪ ಆವರಿಗೂ ಯೋಗೇಶ್ವರ್‌ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳುವುದು ಇಷ್ಟವಿರಲಿಲ್ಲ. ಆದರೆ ಕೆಲವೊಮ್ಮೆ ಇಷ್ಟ ಕಷ್ಟ ಯಾರ ಕೈಯಲ್ಲೂ ಇರುವುದಿಲ್ಲ. ಸಂದರ್ಭ ಸಮಯ ಎಲ್ಲವನ್ನೂ ತೀರ್ಮಾನಿಸುತ್ತದೆ.

ಸಂಪುಟಕ್ಕೆ ಯೋಗೇಶ್ವರ್‌ ಸೇರ್ಪಡೆ ರಮೇಶ್‌ ಜಾರಕಿ ಹೊಳಿ ಹೊರತುಪಡಿಸಿ ಯಾರೂ ಸಮರ್ಥಿಸುತ್ತಿಲ್ಲ. ಸಚಿವ ವಂಚಿತರು ಆಕ್ರೋಶ ಹೊರ ಹಾಕುತ್ತಿರುವುದು ಯೋಗೇಶ್ವರ್‌ ವಿರುದ್ಧವೇ. ಎಚ್‌. ವಿಶ್ವನಾಥ್‌, ರೇಣು ಕಾಚಾರ್ಯ, ಅಪ್ಪಚ್ಚು ರಂಜನ್‌ ಖಾರವಾಗಿಯೇ ಮಾತನಾಡುತ್ತಿದ್ದಾರೆ. ಯಡಿಯೂರಪ್ಪ ಅವರು ಯೋಗೇಶ್ವರ್‌ ಸೇರ್ಪಡೆ ಬಲವಾಗಿ ಸಮರ್ಥಿಸಿಕೊಳ್ಳು ತ್ತಿಲ್ಲ. ಯಾಕೆಂದರೆ ಈ ತೀರ್ಮಾನದ ಹಿಂದಿನ ಸತ್ಯ ದಿಲ್ಲಿ ವರಿಷ್ಠರಿಗೂ ಗೊತ್ತಿದೆ. ಯೋಗೇಶ್ವರ್‌ ಪರ ನಿಂತಿದ್ದವರು ಮುನಿರತ್ನ ಪರ ನಿಲ್ಲಲಿಲ್ಲ. ಎಚ್‌. ವಿಶ್ವನಾಥ್‌ಗೆ ಸಚಿವ ಸ್ಥಾನ ತಪ್ಪಿಸಲೆಂದೇ ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ  ಆಯ್ಕೆ ಆಗದಂತೆ ನೋಡಿಕೊಂಡು ನಾಮಕರಣ ಮಾಡಿಸಲಾಯಿತು. ಈ ವಿಚಾರದಲ್ಲಿ ಸಂಸದೀಯ ಪಟು ಹಳ್ಳಿಹಕ್ಕಿ ಸಹ ಯಾಮಾರಿತು. ಮೈತ್ರಿ ಸರಕಾರ ಕೆಡವಲು ರೂಪರೇಖೆ ಹಾಕಿ ಕಾಂಗ್ರೆಸ್‌, ಜೆಡಿಎಸ್‌ ಶಾಸಕರನ್ನು ಒಟ್ಟುಗೂಡಿಸಿ ಬಿಜೆಪಿ ಸರಕಾರ ರಚನೆಯಾಗುವ ಧೈರ್ಯ ನೀಡಿದವರು ವಿಶ್ವನಾಥ್‌. ಆದರೆ ಉಪ ಚುನಾವಣೆಯಲ್ಲಿ ಸ್ಪರ್ಧೆ ಬೇಡ ಎಂಬ ಸಲಹೆ ಧಿಕ್ಕರಿಸಿ ಸ್ಪರ್ಧೆ ಮಾಡಿ ಸೋತಿದ್ದು ಅವರ ರಾಜಕೀಯ ಜೀವನದ ಮೇಲೆಯೇ ಪರಿಣಾಮ ಬೀರುವಂತಾಗಿದೆ. ಎಂ.ಟಿ.ಬಿ. ನಾಗರಾಜ್‌ಗೆ ಅನ್ವಯ ವಾಗಿದ್ದು ವಿಶ್ವನಾಥ್‌ಗೆ ಅನ್ವಯವಾಗಲಿಲ್ಲ. ರಾಜಕಾರಣ ಅಂದರೇನೇ ಹಾಗೆ.

ಇದರ ನಡುವೆ ಎಪ್ರಿಲ್‌ ಅನಂತರ ಸಂಪುಟ ಪುನಾರಚನೆ ಆಗಲಿದೆ ಎಂಬ ಮಾತುಗಳು ಇವೆ. ಆಗ ನಾಯಕತ್ವ ಬದಲಾಗಬಹುದು ಎಂಬ ಆಸೆಯೂ ಹಲವರದ್ದು. ಅದು ಎಷ್ಟರ ಮಟ್ಟಿಗೆ ಸಾಕಾರಗೊಳ್ಳಲಿದೆ ಕಾದು ನೋಡಬೇಕು.

ಸಮಾಧಾನದ ನಡೆ ಸೂಕ್ತ :

ಯಡಿಯೂರಪ್ಪ ಅವರ ಜತೆ ಸಂಘರ್ಷಕ್ಕಿಂತ ಸಮಾಧಾನದ ನಡೆ ಸೂಕ್ತ ಎಂದು ದಿಲ್ಲಿ ವರಿಷ್ಠರು ಭಾವಿಸಿದಂತಿದೆ. ಅವರ ಮನವೊಲಿಸಿಯೇ ಪರ್ಯಾಯ ನಾಯಕತ್ವಕ್ಕೆ ಅಣಿಯಾಗಬೇಕು. ಪಕ್ಷದ ಭವಿಷ್ಯದ ದೃಷ್ಟಿಯಿಂದ ಅದೇ ಸೂಕ್ತ ಎಂದು ಅಳೆದು ತೂಗಿ ಹೆಜ್ಜೆ ಇಡುತ್ತಿದ್ದಾರೆ. ಇವೆಲ್ಲವನ್ನೂ ಗಮನಿಸಿದರೆ ಯಡಿಯೂರಪ್ಪ ಅಥವಾ ಅವರ ಕುಟುಂಬದ ಸದಸ್ಯರ ಸ್ವಯಂಕೃತ ಅಪರಾಧ ಹೊರತುಪಡಿಸಿ ಬೇರೆ ಯಾವ ಕಾರಣಗಳು ಅವರ ಕುರ್ಚಿಗೆ ಸಂಚಕಾರ ತರುವ ಸಾಧ್ಯತೆ ತೀರಾ ಕಡಿಮೆ. ಆದರೆ ಮುಂದಿನ ದಿನಗಳಲ್ಲಿ ಯಡಿಯೂರಪ್ಪ ಅವರ ಹಾದಿ ಸುಗಮವೂ ಅಲ್ಲ. ದಿಲ್ಲಿ ವರಿಷ್ಠರ ಬೆಂಬಲ ಇದ್ದರೂ ಸ್ಥಳೀಯವಾಗಿ ಶತ್ರುಗಳು ಹೆಚ್ಚಾಗಿ ಹುಟ್ಟಿಕೊಂಡಿದ್ದಾರೆ. ಪ್ರತೀ ಹೆಜ್ಜೆ, ಕ್ರಮ, ನಡೆ ,ಯೋಚಿಸಿ ಎಚ್ಚರಿಕೆಯಿಂದ ಇಡಬೇಕು. ಏಕೆಂದರೆ ನಮ್ಮಿಂದ ಯಡಿಯೂರಪ್ಪ ಅವರಿಗೆ ತೊಂದರೆ ಇಲ್ಲ, ಅವರಾಗಿಯೇ ಸಮಸ್ಯೆ ಮಾಡಿಕೊಂಡರೆ ನಾವು ಏನೂ ಮಾಡಲಾಗದು ಎಂದು ಯಡಿಯೂರಪ್ಪ ಆಪ್ತರಿಗೂ ದಿಲ್ಲಿ ವರಿಷ್ಠರು ಸಂದೇಶ ಮುಟ್ಟಿಸಿದ್ದಾರೆ.

 

ಎಸ್‌.ಲಕ್ಷ್ಮೀನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next