Advertisement

ಗಾಂಧಿ “ಚತುರ್‌ ಬನಿಯಾ’: ಅಮಿತ್‌ ಹೇಳಿಕೆಗೆ ಆಕ್ರೋಶ

11:06 AM Jun 11, 2017 | |

ಹೊಸದಿಲ್ಲಿ: ಕಾಂಗ್ರೆಸ್‌ ಪಕ್ಷವನ್ನು ತೆಗಳುವ ಭರದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಮಹಾತ್ಮ ಗಾಂಧಿ ಬಗ್ಗೆ ಆಡಿದ ಮಾತುಗಳು ಇದೀಗ ವಿವಾದಕ್ಕೆ ಕಾರಣವಾಗಿವೆ.

Advertisement

“ಕಾಂಗ್ರೆಸ್‌ ಎನ್ನುವುದು ಯಾವುದೇ ಮೂಲ ಸಿದ್ಧಾಂತವಿಲ್ಲದ ಪಕ್ಷ. ಅದನ್ನು ಸ್ವಾತಂತ್ರ್ಯ ಪಡೆಯಲು ಬೇಕಾಗಿದ್ದ ವಿಶೇಷ ಉದ್ದೇಶದ ವಾಹನದಂತೆ ಬಳಸಲು ರಚಿಸಲಾಗಿತ್ತು. ಇದಕ್ಕಾಗಿಯೇ ಮಹಾತ್ಮಾ ಗಾಂಧಿ ಅವರು ಸ್ವಾತಂತ್ರ್ಯ ಸಿಕ್ಕೊಡನೆ ಕಾಂಗ್ರೆಸ್‌ ಅನ್ನು ವಿಸರ್ಜಿಸುವಂತೆ ಹೇಳಿದ್ದು. ಗಾಂಧೀಜಿಯವರು ಅಂತಿಂಥವರಲ್ಲ, ಅವರು “ಬಹಳ ಚತುರ ಬನಿಯಾ'(ಬನಿಯಾ ಎನ್ನುವುದು ವ್ಯಾಪಾರಿ ವರ್ಗಕ್ಕೆ ಸೇರಿದಂಥವರ ಜಾತಿಯ ಹೆಸರು) ಆಗಿದ್ದರು’ ಎಂದು ಅಮಿತ್‌ ಶಾ ಅವರು ಹೇಳಿದ್ದಾರೆ.

ಶಾ ಅವರಿಂದ ಈ ಹೇಳಿಕೆ ಹೊರಬೀಳುತ್ತಿದ್ದಂತೆಯೇ ಕಾಂಗ್ರೆಸ್‌ ಕೆಂಡಾಮಂಡಲವಾಗಿದೆ. ಈ ಹೇಳಿಕೆಯು ರಾಷ್ಟ್ರಪಿತನಿಗೆ ಮಾಡಿದ ಅವಮಾನ ಎಂದು ಬಣ್ಣಿಸಿದೆ. “ಶಾ ಅವರು ಜಾತಿವಾದದ ವಿರುದ್ಧ ಹೋರಾಡುವುದನ್ನು ಬಿಟ್ಟು, ರಾಷ್ಟ್ರಪಿತ ಎಂದು ಕರೆಸಿಕೊಳ್ಳುವ ಮಹಾನ್‌ ವ್ಯಕ್ತಿಯನ್ನು ಅವರ ಜಾತಿಯ ಹೆಸರೆತ್ತಿ ಕರೆದಿದ್ದಾರೆ. ಇದು ಆಡಳಿತಾರೂಢ ಪಕ್ಷದ ಸ್ವಭಾವ ಮತ್ತು ಸಿದ್ಧಾಂತವನ್ನು ತೋರಿಸಿದೆ. ಇಂಥವರು ನಮ್ಮ ದೇಶವನ್ನು ಎಲ್ಲಿಗೆ ಕೊಂಡುಹೋಗುತ್ತಾರೆ’ ಎಂದು ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುಜೇìವಾಲಾ ಪ್ರಶ್ನಿಸಿದ್ದಾರೆ. ಜತೆಗೆ, ಸ್ವಾತಂತ್ರ್ಯ ಚಳವಳಿಯನ್ನು ಅವಮಾನಿಸಿದಂಥ ಅಮಿತ್‌ ಶಾ ಹಾಗೂ ಪ್ರಧಾನಿ ಮೋದಿ ಅವರು ದೇಶದ ಜನತೆಗೆ, ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಗಳ ಹಾಗೂ ಪ್ರತಿಯೊಬ್ಬ ನಾಗರಿಕನ ಕ್ಷಮೆ ಯಾಚಿಸಬೇಕು ಎಂದೂ ಆಗ್ರಹಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಅಮಿತ್‌ ಶಾ, “ನಾನು ಗಾಂಧೀಜಿ ಅವರನ್ನು ಯಾವ ಸಂದರ್ಭದಲ್ಲಿ ಬನಿಯಾ ಎಂದು ಕರೆದೆ ಎಂದು ಅಲ್ಲಿದ್ದ ಎಲ್ಲರಿಗೂ ಗೊತ್ತು. ಮೊದಲು ಸುಜೇìವಾಲಾ ಅವರು ಗಾಂಧೀಜಿಯ ತತ್ವಗಳ ಬಗ್ಗೆ ಅರಿತುಕೊಳ್ಳಲಿ’ ಎಂದಿದ್ದಾರೆ.

ಮಮತಾ ಟೀಕೆ: ಇನ್ನೊಂದೆಡೆ, ತೃಣಮೂಲ ಕಾಂಗ್ರೆಸ್‌ ನಾಯಕಿ ಮಮತಾ ಬ್ಯಾನರ್ಜಿ ಅವರೂ ಶಾ ವಿರುದ್ಧ ಕಿಡಿಕಾರಿದ್ದು, “ಕೂಡಲೇ ಶಾ ಅವರು ತಮ್ಮ ಹೇಳಿಕೆ ವಾಪಸ್‌ ಪಡೆದು, ಕ್ಷಮೆ ಯಾಚಿಸಬೇಕು’ ಎಂದು ಒತ್ತಾಯಿಸಿದ್ದಾರೆ. ಇದೇ ವೇಳೆ, ಶಾ ಹೇಳಿಕೆಗೆ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಬದಲಾಗಿ ಅವರು ಗಾಂಧೀಜಿ ಆಡಿದ್ದ ಮಾತುಗಳನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಅಪ್‌ಲೋಡ್‌ ಮಾಡುವ ಮೂಲಕ ತಿರುಗೇಟು ನೀಡಿದ್ದಾರೆ. 

Advertisement

ಅಮಿತ್‌ ಶಾ ಹೇಳಿದ್ದೇನು?
ಕಾಂಗ್ರೆಸ್‌ ಪಕ್ಷಕ್ಕೆ ಯಾವುದೇ ಮೂಲ ಸಿದ್ಧಾಂತವಿಲ್ಲ. ಸ್ವಾತಂತ್ರ್ಯ ಪಡೆಯಲು ವಿಶೇಷ ಉದ್ದೇಶದ ವಾಹನವನ್ನಾಗಿ ಆ ಪಕ್ಷವನ್ನು ಬಳಸಿಕೊಳ್ಳಲಾಯಿತು

ಅದಕ್ಕಾಗಿಯೇ ಗಾಂಧೀಜಿ ಸ್ವಾತಂತ್ರ್ಯ ಸಿಕ್ಕ ಮೇಲೆ ಕಾಂಗ್ರೆಸ್‌ ವಿಸರ್ಜನೆಗೆ ಕರೆ ನೀಡಿದ್ದರು. ಗಾಂಧೀಜಿ ಒಬ್ಬ ಚತುರ ಬನಿಯಾ.

ಬ್ರಿಟಿಷ್‌ ವ್ಯಕ್ತಿಯೊಬ್ಬ ಕಾಂಗ್ರೆಸನ್ನು ಕ್ಲಬ್‌ನಂತೆ ರಚಿಸಿದ. ಅನಂತರ ಅದು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ಒಂದು ಸಂಸ್ಥೆಯಾಗಿ ಬದಲಾಯಿತು

ಕಾಂಗ್ರೆಸ್‌ಗೆ ಅದರದ್ದೇ ಆದ ಸಿದ್ಧಾಂತ, ತತ್ವಗಳಿಲ್ಲ. ಅದರಲ್ಲಿ ಮೌಲಾನಾ ಆಜಾದ್‌, ಪಂಡಿತ್‌ ಮದನ್‌ ಮೋಹನ್‌ ಮಾಳವೀಯ ಮತ್ತಿತರ ಎಡ ಮತ್ತು ಬಲ ಎರಡೂ ಸಿದ್ಧಾಂತವಿರುವ ವ್ಯಕ್ತಿಗಳಿದ್ದಾರೆ.

ಗಾಂಧೀಜಿ ರಾಷ್ಟ್ರಪಿತ ಮಾತ್ರವಲ್ಲ, ಜಗತ್ತಿನ ಐಕಾನ್‌. ಸಾರ್ವಜನಿಕ ಬದುಕಿನಲ್ಲಿರುವ ನಾವು ಇಂಥ ಮಹಾನ್‌ ವ್ಯಕ್ತಿಗಳ ಬಗ್ಗೆ ಮಾತಾಡುವಾಗ ಗೌರವ ಮತ್ತು ಸಂವೇದನೆ ಇಟ್ಟುಕೊಳ್ಳಬೇಕು. ಅಧಿಕಾರದಲ್ಲಿ ಇದ್ದೇವೆ ಎಂದಾಕ್ಷಣ ಏನು ಬೇಕಾದರೂ ಮಾತನಾಡಬಹುದು ಎಂದು ಯಾರೂ ಭಾವಿಸಬಾರದು.
–  ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಲ ಸಿಎಂ

ಸತ್ಯ ಏನೆಂದರೆ, ಸ್ವಾತಂತ್ರ್ಯಕ್ಕೂ ಮುಂಚೆ ದೇಶದ ವಿಭಜನೆಗಾಗಿ ಬ್ರಿಟಿಷರು ಹಿಂದೂ ಮಹಾಸಭಾ ಮತ್ತು ಸಂಘವನ್ನು ತಮ್ಮ ವಿಶೇಷ ಉದ್ದೇಶದ ವಾಹನವಾಗಿ ಬಳಸಿಕೊಂಡರು. ಸ್ವಾತಂತ್ರಾéನಂತರ ಅಂದರೆ ಈಗ ಬಿಜೆಪಿ ಅದೇ ಕೆಲಸ ಮಾಡುತ್ತಿದೆ. ಕೆಲವೇ ಕೆಲ ಶ್ರೀಮಂತರ ವಿಶೇಷ ವಾಹನವಾಗಿ ಬಿಜೆಪಿ ಬಳಕೆಯಾಗುತ್ತಿದೆ.
– ರಣದೀಪ್‌ ಸುಜೇìವಾಲಾ, ಕಾಂಗ್ರೆಸ್‌ ವಕ್ತಾರ

ಗಾಂಧೀಜಿ ತಮ್ಮ ವ್ಯಂಗ್ಯಚಿತ್ರಗಳನ್ನೇ ನೋಡಿ ನಕ್ಕವರು. ಶಾ ಅವರ “ಚತುರ್‌ ಬನಿಯಾ’ ಹೇಳಿಕೆ ಕೇಳಿದರೂ ಅವರು ನಗುತ್ತಿದ್ದರೋ ಏನೋ? ಆದರೆ, ಅಮಿತ್‌ ಶಾ ಹೇಳಿಕೆಯಲ್ಲಿ ಸದಭಿರುಚಿ ಇಲ್ಲ. ಅದರೊಳಗೆ ರಹಸ್ಯವಾದ ಕುಹಕವಿತ್ತು ಎನ್ನುವುದು ಸ್ಪಷ್ಟ.
– ಗೋಪಾಲಕೃಷ್ಣ ಗಾಂಧಿ, ಮಹಾತ್ಮನ ಮೊಮ್ಮಗ

Advertisement

Udayavani is now on Telegram. Click here to join our channel and stay updated with the latest news.

Next