ಕೋಲ್ಕತಾ:ನಾವು ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಬುಡಸಹಿತ ಕಿತ್ತೊಗೆಯುವವರೆಗೂ ವಿರಮಿಸುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವಾಗ್ದಾಳಿ ನಡೆಸಿದ್ದಾರೆ.
ಕೋಲ್ಕತದಲ್ಲಿ ಶನಿವಾರ ನಡೆದ ಬಹಿರಂಗ ಸಮಾವೇಶದಲ್ಲಿ ತೃಣಮೂಲ ಕಾಂಗ್ರೆಸ್ ಹಾಗೂ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಟೀಕಾ ಪ್ರಹಾರ ನಡೆಸಿದರು.
ಮಮತಾ ಬ್ಯಾನರ್ಜಿ ಅವರು ಕೆಲವು ದಿನಗಳ ಹಿಂದೆ ದೆಹಲಿಯಲ್ಲಿ ಎನ್ ಆರ್ ಸಿ(ಅಸ್ಸಾಂ ರಾಷ್ಟ್ರೀಯ ಪೌರತ್ವ ನೋಂದಣಿ) ಬಗ್ಗೆ ಪ್ರತಿಭಟನೆ ನಡೆಸಿದ್ದರು. ಆಕೆ ಭಯಪಟ್ಟುಕೊಂಡಿದ್ದಾದರು ಯಾಕೆ? ಹಾಗಾದ್ರೆ ಎನ್ ಆರ್ ಸಿ ಅಂದರೆ ಏನು ಅಂತ ಹೇಳಿ? ಅಸ್ಸಾಂನಲ್ಲಿ ಕಾನೂನು ಬಾಹಿರವಾಗಿ ವಾಸಿಸುತ್ತಿರುವ ಬಾಂಗ್ಲಾದೇಶಿಗಳು ಹಾಗೂ ನುಸುಳುಕೋರರನ್ನು ಗುರುತಿಸುವುದು ಎನ್ ಆರ್ ಸಿ ಉದ್ದೇಶವಾಗಿದೆ.
ನಮಗೂ ಒಂದು ಅವಕಾಶ ಕೊಡಿ ನಾವು ಪಶ್ಚಿಮ ಬಂಗಾಳದಲ್ಲಿಯೂ ಎನ್ ಆರ್ ಸಿಯನ್ನು ಜಾರಿಗೆ ತರುತ್ತೇವೆ. ದಿಢೀರನೇ ಮಮತಾ ಬ್ಯಾನರ್ಜಿ ತಮ್ಮ ನಿಲುವು ಬದಲಾಯಿಸಿಕೊಂಡರು ಎಂದು ಪ್ರಶ್ನಿಸಿದ ಶಾ, 2005ರಲ್ಲಿ ಮಮತಾ ಬ್ಯಾನರ್ಜಿ ಬಾಂಗ್ಲಾದೇಶಿಗಳ ವಿರುದ್ಧ ಮಾತನಾಡಿ ಸ್ಪೀಕರ್ ಅವರತ್ತ ಪೇಪರ್ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದರು. ಈಗ 2018ರಲ್ಲಿ ಬೆಂಬಲ ನೀಡುತ್ತಿದ್ದೀರಾ. ಬಾಂಗ್ಲಾದೇಶಿಗಳು ನಿಮ್ಮ ವೋಟ್ ಬ್ಯಾಂಕ್ ಎಂದು ತಿರುಗೇಟು ನೀಡಿದರು.
ಎನ್ ಆರ್ ಸಿಯನ್ನು ನಾವು ತಂದಿದ್ದಲ್ಲ. ಇದು ಕಾಂಗ್ರೆಸ್ ಪಕ್ಷದ ಕೂಸು. ಆದರೆ ಈಗ ಕಾಂಗ್ರೆಸ್ ಪಕ್ಷ ಕೂಡಾ ಅದನ್ನು ವಿರೋಧಿಸುತ್ತಿದೆ. ಎನ್ ಆರ್ ಸಿ ಎಂಬುದು ಈಗ ವೋಟ್ ಬ್ಯಾಂಕ್ ರಾಜಕೀಯವಾಗಿದೆ. ಭಾರತೀಯ ಜನತಾ ಪಕ್ಷಕ್ಕೆ ದೇಶ ಮೊದಲು, ವೋಟ್ ಬ್ಯಾಂಕ್ ನಂತರ ಎಂದು ಶಾ ವಾಕ್ ಪ್ರಹಾರ ನಡೆಸಿದರು.