ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕನ್ನಡಿಗರ ರಾಜ್ಯಾಭಿಮಾನವನ್ನು ಪ್ರಶ್ನಿಸಿದ್ದು, ಅವರು ರಾಜ್ಯದ ಜನತೆಯ ಕ್ಷಮೆ ಕೋರಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಆಗ್ರಹಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ರಾಜ್ಯೋತ್ಸವ ಆಚರಣೆಗಿಂತ ಟಿಪ್ಪು ಜಯಂತಿ ಆಚರಣೆಗೆ ಹೆಚ್ಚಿನ ಆದ್ಯತೆ ನೀಡಿದೆ ಎಂದು ಹೇಳಿದ್ದಾರೆ. ಯಡಿಯೂರಪ್ಪ ಸೇರಿದಂತೆ ರಾಜ್ಯದ ವಿಷಯ ಬಂದಾಗ ನಾವೆಲ್ಲರೂ ಕನ್ನಡಾಭಿಮಾನಿಗಳಾಗಿದ್ದು, ನಮ್ಮ ಕನ್ನಡಾಭಿಮಾನದ ಬಗ್ಗೆ ಮಾತನಾಡಲು ಅಮಿತ್ ಶಾ ಯಾರು? ಎಂದು ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.
ರಾಜ್ಯದ ಕ್ಷಮೆ ಕೋರಲಿ: ಕೇಂದ್ರದ ಮೋದಿ ಸರ್ಕಾರ ಕರ್ನಾಟಕಕ್ಕೆ ಬಿಡಿಗಾಸು ನೀಡುವುದಿಲ್ಲ ಎಂದು ಹೇಳಲು ಅಮಿತ್ ಶಾ ಯಾರು? ನಮಗೆ ಹಣ ನೀಡುವುದಿಲ್ಲ ಎನ್ನಲು ಇವರಿಗೆ ಅಧಿಕಾರವಿಲ್ಲ. ಹಣ ನೀಡುವುದಿಲ್ಲ ಎಂದು ಕನ್ನಡಿಗರಿಗೆ ಧಮಕಿ ಹಾಕಿದ್ದು, ಅಮಿತ್ ಶಾ ಕನ್ನಡಿಗರ ಕ್ಷಮೆ ಕೋರಬೇಕು. ಕೇಂದ್ರ ಸರ್ಕಾರದ ಮುಂದೆ ಭಿಕ್ಷೆ ಬೇಡಲು ನಾವು ಭಿಕ್ಷುಕರಲ್ಲ.
ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರದಿಂದ ಹಣ ಪಡೆಯುವುದು ನಮ್ಮ ಹಕ್ಕು. ಕೇಂದ್ರ ಸರ್ಕಾರಕ್ಕೆ ನಮ್ಮ ರಾಜ್ಯದಿಂದ ಸಾಕಷ್ಟು ತೆರಿಗೆ ಹೋಗುತ್ತದೆ. ನಾವು ಅದನ್ನು ಕೊಡಲ್ಲ ಎಂದು ಹೇಳಲು ಆಗುತ್ತದೆಯೇ ಎಂದು ಪ್ರಶ್ನಿಸಿದರು. ಬಿಜೆಪಿಯ ಪರಿವರ್ತನಾ ಸಮಾರಂಭ ಫ್ಲಾಪ್ ಶೋ ಆಗಿದೆ.
ಮೊದಲು ಬಿಜೆಪಿ ನಾಯಕರು ಪರಿವರ್ತನೆ ಮಾಡಿಕೊಳ್ಳಬೇಕು. ಪಕ್ಷದ ಕಾರ್ಯಕರ್ತರೇ ನಾಯಕರ ನಡವಳಿಕೆಯಿಂದ ಬೇಸತ್ತಿದ್ದು, ಯಾತ್ರೆಯಿಂದಲೇ ದೂರ ಉಳಿದಿದ್ದಾರೆ. ಬಿಜೆಪಿ ನಾಯಕರು ಇನ್ನಾದರೂ ನಕಾರಾತ್ಮಕ ಧೋರಣೆ ಬಿಟ್ಟು ಸಕಾರಾತ್ಮಕವಾಗಿ ಯೋಚಿಸಲಿ ಎಂದು ಹೇಳಿದರು.