ಬೆಂಗಳೂರು: ಪಕ್ಷ ಸಂಘಟನೆ ದೃಷ್ಟಿಯಿಂದ ಮೂರು ದಿನಗಳ ರಾಜ್ಯ ಪ್ರವಾಸ ಕೈಗೊಂಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ
ಅಮಿತ್ ಶಾ ಅವರಿಗೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಶನಿವಾರ ಅದ್ಧೂರಿ ಸ್ವಾಗತ ಕೋರಿದರು.
ಬೆಳಗ್ಗೆ 10.30ರ ಸುಮಾರಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅಮಿತ್ ಶಾ ಅವರನ್ನು ಬಿಜೆಪಿ
ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ರಾಜ್ಯ ಉಸ್ತುವಾರಿ ಮುರಳೀಧರರಾವ್, ಕೇಂದ್ರ ಸಚಿವರಾದ ಅನಂತ ಕುಮಾರ್,
ಡಿ.ವಿ.ಸದಾನಂದ ಗೌಡ, ರಾಜ್ಯ ಪದಾಧಿಕಾರಿಗಳಾದ ಕೆ.ಎಸ್.ಈಶ್ವರಪ್ಪ, ಸಿ.ಟಿ.ರವಿ, ಆರ್.ಅಶೋಕ್, ಅರವಿಂದ ಲಿಂಬಾವಳಿ ಮೊದಲಾದವರು ಆತ್ಮೀಯವಾಗಿ ಬರಮಾಡಿಕೊಂಡರು.
ವಿಮಾನ ನಿಲ್ದಾಣದ ಸಮೀಪವೇ ರಾಜ್ಯ ನಾಯಕರೊಂದಿಗೆ ಸುಮಾರು 10 ನಿಮಿಷಗಳ ಕಾಲ ಚರ್ಚೆ ನಡೆಸಿ, ಕಾಫಿ ಸವಿದ ಶಾ, ನೇರವಾಗಿ ದೇವನಹಳ್ಳಿ ಟೋಲ್‌ಗೇಟ್ ಸಮೀಪ ಹಮ್ಮಿಕೊಂಡಿದ್ದ ಸ್ವಾಗತ ಸಮಾರಂಭದ ವೇದಿಕೆಗೆ ಆಗಮಿಸಿದರು. ಅಲ್ಲಿ ರಾಜ್ಯ ಬಿಜೆಪಿಯಿಂದ ಮೈಸೂರು ಪೇಟಾ ಹಾಕಿ, ಶಾಲು ಹೊದಿಸಿ, ಹೂವಿನ ಹಾರದೊಂದಿಗೆ ಸ್ವಾಗತಿಸಲಾಯಿತು.
ಸ್ವಾಗತಕ್ಕೆ ಬಂದಿತ್ತು ಜನಸಾಗರ: ಶಾಸಕರಾದ ಎಸ್.ಆರ್.ವಿಶ್ವನಾಥ್, ಮುನಿರಾಜು, ಎಸ್.ರಘು, ಮಾಜಿ ಸಚಿವ ಬಚ್ಚೇಗೌಡ, ಮಾಜಿ ಶಾಸಕ ನಂದೀಶ್ ರೆಡ್ಡಿ, ಯಲಹಂಕ, ದಾಸರಹಳ್ಳಿ, ಕೆ.ಆರ್.ಪುರ, ಬ್ಯಾಟರಾಯನಪುರ, ಸಿ.ವಿ.ರಾಮನ್‌ನಗರ ಸುತ್ತಮುತ್ತಲಿನ ಬಿಜೆಪಿಯ 3 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಅಮಿತ್ ಶಾಗೆ ಸ್ವಾಗತ ಕೋರಲು ಸೇರಿದ್ದರು. ಪೊಲೀಸ್ ಬಿಗಿ ಭದ್ರತೆಯೊಂದಿಗೆ ಸ್ವಾಗತ ಸಮಾರಂಭ ನಡೆಯಿತು. ಕೇವಲ ಐದೇ ನಿಮಿಷದಲ್ಲಿ ಕಾರ್ಯಕ್ರಮ ಮುಗಿಯಿತು.