Advertisement

ಪ್ರವಾಹ ಮುಕ್ತ ಅಸ್ಸಾಂ?

01:14 AM Jan 25, 2021 | Team Udayavani |

ಕೊಕ್ರಜಾರ್‌/ಚೆನ್ನೈ: ಇನ್ನು ಕೆಲವೇ ತಿಂಗಳುಗಳಲ್ಲಿ ವಿಧಾನಸಭೆ ಚುನಾವಣೆ ಎದುರಿಸಲಿರುವ ಅಸ್ಸಾಂ, ತಮಿಳುನಾಡು, ಪಶ್ಚಿಮ ಬಂಗಾಲಗಳಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಪಶ್ಚಿಮ ಬಂಗಾಲ ಮತ್ತು ಅಸ್ಸಾಂಗೆ ಪ್ರಧಾನಿ ಮೋದಿ ಭೇಟಿ ಬೆನ್ನಲ್ಲೇ ರವಿವಾರ ಅಸ್ಸಾಂನಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ. ಇನ್ನು, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ತಮಿಳುನಾಡಿನಲ್ಲಿ ತಮ್ಮ ಪ್ರವಾಸದ 2ನೇ ದಿನವೂ ಹಲವೆಡೆ ಪ್ರಚಾರ ಭಾಷಣಗಳನ್ನು ಮಾಡಿದ್ದಾರೆ.

Advertisement

ಅಸ್ಸಾಂನ ಎಲ್ಲ ದೊಡ್ಡ ದೊಡ್ಡ ಸಮಸ್ಯೆಗಳನ್ನು ಪರಿಹರಿಸಿರುವ ಸಾಮರ್ಥ್ಯ ಬಿಜೆಪಿಗಿದ್ದು, ಇನ್ನೂ 5 ವರ್ಷ ಅಧಿಕಾರ ನೀಡಿದರೆ ರಾಜ್ಯವು ನುಸುಳುಕೋರರು ಹಾಗೂ ಪ್ರವಾಹದಿಂದ ಮುಕ್ತವಾಗಲಿದೆ ಎಂಬ ಆಶ್ವಾಸನೆಯನ್ನು ಶಾ ನೀಡಿದ್ದಾರೆ. ಇಲ್ಲಿನ ನಲಾºರಿಯಲ್ಲಿ ಮಾತನಾಡಿದ ಶಾ, “ಈಗಾಗಲೇ ನಮ್ಮ ಸರಕಾರವು ಅಸ್ಸಾಂ ಅನ್ನು ಬುಲೆಟ್‌ ಹಾಗೂ ಪ್ರತಿಭಟನೆಗಳಿಂದ ಮುಕ್ತವಾಗಿಸಿದೆ. ಬೋಡೋಲ್ಯಾಂಡ್‌ ಪ್ರಾದೇಶಿಕ ಒಪ್ಪಂದದಿಂದಾಗಿ ಈಶಾನ್ಯ ರಾಜ್ಯಗಳಲ್ಲಿ ಬಂಡುಕೋರರ ಕಾಟ ಇಲ್ಲವಾಗಿದೆ. ಒಪ್ಪಂದದಲ್ಲಿರುವ ಎಲ್ಲ ಅಂಶಗಳನ್ನೂ ಪ್ರಧಾನಿ ಮೋದಿ ಹಾಗೂ ಬಿಜೆಪಿಯ ಸಮಿತಿ ಪೂರೈಸಲಿದೆ. ಈ ಹಿಂದೆ ವಿವಿಧ ಉಗ್ರ ಸಂಘಟನೆಗಳೊಂದಿಗೆ ಕಾಂಗ್ರೆಸ್‌ ಪಕ್ಷವೂ ಹಲವು ಒಪ್ಪಂದಗಳಿಗೆ ಸಹಿ ಹಾಕಿತ್ತಾದರೂ ತಾನು ನೀಡಿದ ಆಶ್ವಾಸನೆಯನ್ನು ಈಡೇರಿಸಲೇ ಇಲ್ಲ. ಆದರೆ ಬಿಜೆಪಿಯು ಇಲ್ಲಿನ ಎಲ್ಲ ಸಮಸ್ಯೆಗಳಿಗೂ ಪರಿಹಾರ ಒದಗಿಸಿದೆ. ಮುಂದಿನ ದಿನಗಳಲ್ಲಿ ಪ್ರವಾಹದ ಸಮಸ್ಯೆಯನ್ನೂ ಇಲ್ಲವಾಗಿಸಲಿದೆ’ ಎಂದಿದ್ದಾರೆ.

ದೀದಿ ವಿರುದ್ಧ ವಿಎಚ್‌ಪಿ ಕಿಡಿ: ಶನಿವಾರ ನಡೆದ ಪರಾಕ್ರಮ್‌ ದಿವಸ್‌ ಕಾರ್ಯಕ್ರಮದಲ್ಲಿ “ಜೈ ಶ್ರೀ ರಾಂ’ ಘೋ ಷಣೆ ಕೂಗಿದ್ದಕ್ಕಾಗಿ ಭಾಷಣವನ್ನು ಮೊಟಕುಗೊಳಿಸಿದ ಪ.ಬಂಗಾಲ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ

ವಿ.ಹಿಂ.ಪ. ಆಕ್ರೋಶ ವ್ಯಕ್ತಪಡಿಸಿದೆ. ಮಮತಾರ ಈ ನಡೆಯು ಅವರ ಹಿಂದೂ ವಿರೋಧಿ ಮನಃಸ್ಥಿತಿಯನ್ನು ಹಾಗೂ ನಿರ್ದಿಷ್ಟ ಸಮುದಾಯದ ಓಲೈಕೆಯನ್ನು ಪ್ರತಿಬಿಂಬಿಸಿದೆ ಎಂದು ಹೇಳಿದೆ. ಈ ನಡುವೆ ಪಶ್ಚಿಮ ಬಂಗಾಲದಲ್ಲಿ ನಟಿಯರಾದ ಕೌಶಾನಿ ಮುಖರ್ಜಿ ಮತ್ತು ಪಿಯಾ ದಾಸ್‌ ರವಿವಾರ ಟಿಎಂಸಿಗೆ ಸೇರ್ಪಡೆಯಾಗಿದ್ದಾರೆ.

ಮನ್‌ ಕಿ ಬಾತ್‌ಗಲ್ಲ, ನಿಮ್ಮ ಸಮಸ್ಯೆ ಆಲಿಸಲು ಬಂದಿರುವೆ :

Advertisement

“ನಾನು ನನ್ನ ಮನ್‌ ಕಿ ಬಾತ್‌(ಮನದ ಮಾತು) ಹೇಳಲೆಂದು ತಮಿಳುನಾಡಿಗೆ ಬಂದಿಲ್ಲ. ಬದಲಾಗಿ ನಿಮ್ಮ ಸಮಸ್ಯೆಗಳನ್ನು ಆಲಿಸಲು, ಅದನ್ನು ಅರ್ಥಮಾಡಿಕೊಳ್ಳಲು ಹಾಗೂ ಅವುಗಳ ಪರಿಹಾರಕ್ಕೆ ಯತ್ನಿಸಲು ಬಂದಿದ್ದೇನೆ’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ. ಇರೋಡ್‌ನಲ್ಲಿ ಮಾತನಾಡಿದ ಅವರು, “ಭಾರತದ ನೈಜ ಶಕ್ತಿಯು ಇಲ್ಲಿನ ಅನ್ನದಾತರು, ಕಾರ್ಮಿಕರು, ನೇಕಾರರಲ್ಲಿ ಅಡಗಿದೆ. ಈ ಸಮೂಹವನ್ನು ನೀವು ಬಲಪಡಿಸಿದ್ದೇ ಆದಲ್ಲಿ, ನಮ್ಮ ಸೈನಿಕರು ಚೀನದಿಂದ ದೇಶವನ್ನು ರಕ್ಷಿಸಲು ಗಡಿಯಲ್ಲಿ ನಿಲ್ಲಲೇಬೇಕಾಗಿಲ್ಲ. ಭಾರತದ ಕಾರ್ಮಿಕರು, ರೈತರು, ನೇಕಾರರು ಬಲಿಷ್ಠಗೊಂಡರೆ, ಅವರಿಗೆ ಸಾಕಷ್ಟು ಅವಕಾಶವನ್ನು ಕಲ್ಪಿಸಿದರೆ, ಚೀನವು ಭಾರತದೊಳಕ್ಕೆ ಕಾಲಿಡುವ ಧೈರ್ಯವನ್ನು ಕೂಡ ಮಾಡಲಾರದು’ ಎಂದಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next